Income Tax Calculator; ಆದಾಯ ತೆರಿಗೆ ವೆಬ್​ಸೈಟ್​ನಲ್ಲಿ ಟ್ಯಾಕ್ಸ್ ಲೆಕ್ಕಾಚಾರಕ್ಕೆ ಹೊಸ ಟೂಲ್

|

Updated on: Feb 22, 2023 | 12:49 PM

New Tax Regime vs Old Tax Regime: ಹೊಸ ತೆರಿಗೆ ವ್ಯವಸ್ಥೆಯೋ ಹಳೆಯ ತೆರಿಗೆ ವ್ಯವಸ್ಥೆಯೋ ಎಂಬ ಗೊಂದಲ ನಿವಾರಣೆಗೆ ಐಟಿ ಪೋರ್ಟಲ್​ನಲ್ಲಿ ಇನ್ಕಮ್ ಟ್ಯಾಕ್ಸ್ ಕ್ಯಾಲ್ಕುಲೇಟರ್ ಎಂಬ ಹೊಸ ಟೂಲ್ ಸೇರಿಸಲಾಗಿದೆ. ನಿಮ್ಮ ವಾರ್ಷಿಕ ಆದಾಯ ಮತ್ತು ಡಿಡಕ್ಷನ್ ಮೊತ್ತವನ್ನು ನಮೂದಿಸಿ ಲೆಕ್ಕ ಹಾಕಿಸಬಹುದು.

Income Tax Calculator; ಆದಾಯ ತೆರಿಗೆ ವೆಬ್​ಸೈಟ್​ನಲ್ಲಿ ಟ್ಯಾಕ್ಸ್ ಲೆಕ್ಕಾಚಾರಕ್ಕೆ ಹೊಸ ಟೂಲ್
ಸಾಂದರ್ಭಿಕ ಚಿತ್ರ
Image Credit source: PTI
Follow us on

ನವದೆಹಲಿ: ಈ ಬಾರಿಯ ಬಜೆಟ್​ನಲ್ಲಿ ಆದಾಯ ತೆರಿಗೆ ವಿಚಾರದಲ್ಲಿ ಸರ್ಕಾರ ಕೆಲವೊಂದಿಷ್ಟು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಹಳೆಯ ತೆರಿಗೆ ಪದ್ಧತಿ (Old tax regime) ಉಳಿಸಿಕೊಂಡು, ಹೊಸ ತೆರಿಗೆ ಪದ್ಧತಿಯಲ್ಲಿ (New tax regime) ಕೆಲ ಬದಲಾವಣೆ ಮಾಡಿದೆ. ಅಧಿಕ ಸಂಬಳದ ಜನರಿಗೆ ಒಂದಷ್ಟು ಅನುಕೂಲತೆಗಳು ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇದೆ. ಆದಾಯ ತೆರಿಗೆ ಪಾವತಿದಾರರು ಹಳೆಯ ವ್ಯವಸ್ಥೆಯಲ್ಲೇ ಮುಂದುವರಿಯಬಹುದು, ಅಥವಾ ಹೊಸ ತೆರಿಗೆ ವ್ಯವಸ್ಥೆ ಪ್ರಕಾರ ಫೈಲಿಂಗ್ ಮಾಡಬಹುದು. ಆದರೆ ಯಾವುದು ಸೂಕ್ತ, ಯಾವುದರಿಂದ ಹೆಚ್ಚು ತೆರಿಗೆ ಉಳಿಸಬಹುದು ಎಂಬ ಗೊಂದಲ ಮಾತ್ರ ಬಹಳ ಮಂದಿಯಲ್ಲಿ ಇದೆ.

ಈ ಗೊಂದಲ ನಿವಾರಣೆಗೆ ಸಹಾಯಕವಾಗಿ ಆದಾಯ ತೆರಿಗೆ ಇಲಾಖೆಯೇ ಸ್ವತಃ ಕ್ಯಾಲ್ಕುಲೇಟರ್ ಅಪ್ಲಿಕೇಶನ್ (Income tax calculator) ಬಿಡುಗಡೆ ಮಾಡಿದೆ. ಇದು ಆದಾಯ ತೆರಿಗೆ ಇಲಾಖೆಯ ವೆಬ್​ಸೈಟ್​ನ ಮುಖ್ಯಪುಟದಲ್ಲೇ ಕಾಣಬಹುದು. ಈ ಸಾಧನವನ್ನು ಬಳಸಿ ಹಳೆಯ ತೆರಿಗೆ ವ್ಯವಸ್ಥೆ ಬೇಕೋ ಹೊಸ ತೆರಿಗೆ ವ್ಯವಸ್ಥೆ ಅಪ್ಪಿಕೊಳ್ಳುವುದೋ ಎಂಬುದನ್ನು ನಿರ್ಧರಿಸಬಹುದು.

ಈ ಸಾಧನದಲ್ಲಿ ನಿಮ್ಮ ವಾರ್ಷಿಕ ಆದಾಯ ಎಷ್ಟಿದೆ, ತೆರಿಗೆ ರಿಯಾಯಿತಿ ಇರುವ ವೆಚ್ಚಗಳು ಎಷ್ಟು ಎಂಬುದನ್ನು ನಮೂದಿಸಬೇಕು. ಹಳೆ ತೆರಿಗೆ ವ್ಯವಸ್ಥೆಯಲ್ಲಿ ಎಷ್ಟು ಮೊತ್ತದ ತೆರಿಗೆ ಬೀಳುತ್ತದೆ, ಹೊಸ ವ್ಯವಸ್ಥೆಯಲ್ಲಿ ಎಷ್ಟು ತೆರಿಗೆ ಬರುತ್ತದೆ ಎಂದು ಈ ಕ್ಯಾಲ್ಕುಲೇಟರ್ ಲೆಕ್ಕ ಮಾಡಿ ಹೇಳುತ್ತದೆ. ಇದು ನಿಖರವಾದ ಲೆಕ್ಕಾಚಾರವಲ್ಲ. ಆದರೆ ನಮಗೊಂದು ಸ್ಥೂಲ ನೋಟ ಸಿಗುತ್ತದೆ. ನಿಮಗೆ ಇದು ಸಂಕೀರ್ಣ ಎನಿಸಿದಲ್ಲಿ ಆಡಿಟರ್ ಜೊತೆ ಸಮಾಲೋಚನೆ ನಡೆಸುವುದು ಉತ್ತಮ.

ಬಜೆಟ್​ನಲ್ಲಿ ಘೋಷಣೆ ಮಾಡಿರುವ ಪ್ರಕಾರ ಹೊಸ ತೆರಿಗೆ ಪದ್ಧತಿಯಲ್ಲಿ ವರ್ಷಕ್ಕೆ 7 ಲಕ್ಷ ರೂಗಿಂತ ಕಡಿಮೆ ಸಂಬಳ ಪಡೆಯುವ ಜನರಿಗೆ ಟ್ಯಾಕ್ಸ್ ರಿಬೇಟ್ ಅವಕಾಶ ಇರುತ್ತದೆ. 3 ಲಕ್ಷ ರೂವರೆಗೂ ಆದಾಯಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. 50 ಸಾವಿರ ರೂನಷ್ಟು ತೆರಿಗೆ ರಿಯಾಯಿತಿ ಪಡೆಯಬಹುದು.

ಹಳೆಯ ತೆರಿಗೆ ಪದ್ಧತಿಯಲ್ಲಿ ತೆರಿಗೆ ವಿನಾಯಿತಿ ಮಿತಿ 2.5 ಲಕ್ಷ ರೂ ಇರುತ್ತದೆ. ಇದರ ಜೊತೆ ತೆರಿಗೆ ರಿಯಾಯಿತಿಯೂ ಮುಂದುವರಿಯುತ್ತದೆ.

ಇದನ್ನೂ ಓದಿ: Wipro Salary Cut: ಅರ್ಧ ಸಂಬಳದ ಆಫರ್; ತಲೆಕೆಟ್ಟ ವಿಪ್ರೋ ನವೋದ್ಯೋಗಿಗಳು; ಉದ್ಯೋಗಿಗಳ ಒಕ್ಕೂಟ ಗರಂ

ಹೊಸ ತೆರಿಗೆ ವ್ಯವಸ್ಥೆಯಲ್ಲಿ 3 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ಇರುವುದಿಲ್ಲ. 3ರಿಂದ 6 ಲಕ್ಷ ರೂ ಆದಾಯಕ್ಕೆ ಶೇ. 5 ತೆರಿಗೆ ಬರುತ್ತದೆ. 6ರಿಂದ 9 ಲಕ್ಷ ರೂ ಮೊತ್ತಕ್ಕೆ ಶೇ. 10; 9ರಿಂದ 12 ಲಕ್ಷ ರೂ ಮೊತ್ತಕ್ಕೆ ಶೇ. 15; 12ರಿಂದ 15 ಲಕ್ಷ ರೂ ಮೊತ್ತಕ್ಕೆ ಶೇ. 20; ಹಾಗೂ 15 ಲಕ್ಷಕ್ಕಿಂತ ಹೆಚ್ಚು ಮೊತ್ತಕ್ಕೆ ಶೇ. 30ರಷ್ಟು ತೆರಿಗೆ ಬೀಳುತ್ತದೆ.

ಹೊಸ ತೆರಿಗೆ ವ್ಯವಸ್ಥೆಯಲ್ಲಿ ಟ್ಯಾಕ್ಸ್ ರಿಬೇಟ್ ಮಿತಿಯನ್ನು 5 ಲಕ್ಷದಿಂದ 7 ಲಕ್ಷ ರೂಗೆ ಏರಿಸಲಾಗಿದೆ. ಇದರ ಜೊತೆಗೆ 50 ಸಾವಿರ ರೂನಷ್ಟು ಸ್ಟ್ಯಾಂಡರ್ಡ್ ಡಿಡಕ್ಷನ್ ಕೂಡ ಇರುತ್ತದೆ. ಇಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಎಂಬುದು ತೆರಿಗೆ ಪಾವತಿದಾರರು ತೆರಿಗೆ ವಿನಾಯಿತಿ ಇರುವ ಆದಾಯ ತೋರಿಸಲು ಯಾವುದೇ ದಾಖಲೆ ಕೊಡುವ ಅಗತ್ಯ ಇರುವುದಿಲ್ಲ. 50 ಸಾವಿರ ರೂಗಿಂತ ಹೆಚ್ಚು ಡಿಡಕ್ಷನ್ ಇದ್ದರೆ ದಾಖಲೆಗಳನ್ನು ತೋರಿಸಬೇಕಾಗಬಹುದು.

ಮನೆ ಬಾಡಿಗೆ, ಗೃಹ ಸಾಲ, ಇನ್ಷೂರೆನ್ಸ್, ಉಳಿತಾಯ ಯೋಜನೆಗಳು ಇತ್ಯಾದಿ ಹಲವು ಮಾರ್ಗಗಳ ಮೂಲಕ ತೆರಿಗೆ ಉಳಿಸಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Wed, 22 February 23