Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ

| Updated By: Srinivas Mata

Updated on: Jul 05, 2021 | 12:35 PM

ಅಮೆಜಾನ್ ಕಂಪೆನಿಯ ಸಿಇಒ ಹುದ್ದೆಯಿಂದ ಕೆಳಗೆ ಇಳಿದಿದ್ದಾರೆ ಜೆಫ್​ ಬೆಜೋಸ್. ಅವರ ಮುಂದಿನ ಹಾದಿ ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಇದೆ. ಆ ಬಗೆಗಿನ ವಿವರ ಇಲ್ಲಿದೆ.

Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ
ಜೆಫ್ ಬಿಜೊಸ್ (ಸಂಗ್ರಹ ಚಿತ್ರ)
Follow us on

ಅಮೆರಿಕದ ಸೀಟಲ್​ನಲ್ಲಿ ಒಂದು ಗ್ಯಾರೇಜಿನಲ್ಲಿ ಆರಂಭವಾದ ಆನ್​ಲೈನ್ ಬುಕ್​ಸ್ಟೋರ್​ ಅನ್ನು 1.2 ಲಕ್ಷ ಕೋಟಿ ಡಾಲರ್​ ಮೌಲ್ಯದ ಜಾಗತಿಕ ಕಂಪೆನಿಯಾಗಿ ಬೆಳೆಸಿದ ಶ್ರೇಯ ಅಮೆಜಾನ್​ನ ಸ್ಥಾಪಕ ಜೆಫ್​ ಬೆಜೋಸ್​ಗೆ ಸಲ್ಲುತ್ತದೆ. 27 ವರ್ಷದ ಈ ಪಯಣದಲ್ಲಿ ಬೆಜೋಸ್ ಸವೆಸಿರುವ ಹಾದಿ ಬಹಳ ದೀರ್ಘವಾದದ್ದು. ಇದೀಗ ಜೆಫ್ ಹೊರಳು ದಾರಿಯಲ್ಲಿ ನಿಂತಿದ್ದಾರೆ. ಇನ್ನು ಮುಂದೆ ಸಿನಿಮಾ, ಬಾಹ್ಯಾಕಾಶ ಮತ್ತು ದಾನ- ದತ್ತಿ ಇತ್ಯಾದಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಅಮೆಜಾನ್ ಕಂಪೆನಿಯ ಸಿಇಒ ಆಗಿ ಜೆಫ್​ ಬೆಜೋಸ್​ಗೆ ಜುಲೈ 5ನೇ ತಾರೀಕು ಕೊನೆ ದಿನ. 57 ವರ್ಷದ ಬೆಜೋಸ್​ಗೆ ಉತ್ತರಾಧಿಕಾರಿಯಾಗಿ ಆ್ಯಂಡಿ ಜಸ್ಸಿ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಅಮೆಜಾನ್​ ಶುರುವಾದಾಗಿನಿಂದ- ಕಳೆದ ಇಪ್ಪತ್ತು ವರ್ಷದಿಮದ ಆ್ಯಂಡಿ ಜಸ್ಸಿ ಇಲ್ಲೇ ಇದ್ದಾರೆ. ಸದ್ಯಕ್ಕೆ ಅಮೆಜಾನ್ ವೆಬ್​ ಸರ್ವೀಸಸ್ (AWS) ಸಿಇಒ ಆಗಿದ್ದಾರೆ. ಅಂದಹಾಗೆ ಅಮೆಜಾನ್​ ಕಂಪೆನಿಯ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಬೆಜೋಸ್ ಮುಂದುವರಿಯಲಿದ್ದಾರೆ. ಇನ್ನು ಕಂಪೆನಿಯ ಅತಿ ಹೆಚ್ಚು ಪ್ರಮಾಣದ ಷೇರುಗಳು ಇರುವುದು ಕೂಡ ಅವರ ಬಳಿಯಲ್ಲೇ. ಇನ್ನು ಮುಂದೆ ಹೊಸ ಉತ್ಪನ್ನಗಳು, ಆರಂಭದ ಹಂತದಲ್ಲಿ ಇರುವ ಅಭಿಯಾನಗಳ ಕಡೆಗೆ ಗಮನ ನೀಡುತ್ತೇನೆ ಎಂದು ಅಮೆಜಾನ್​ನ 13 ಲಕ್ಷ ಸಿಬ್ಬಂದಿಗೆ ತಿಳಿಸಿದ್ದಾರೆ.

ಅದು ಬ್ಲ್ಯೂ ಆರಿಜಿನ್
ಈಗ ವಿಶ್ವದಾದ್ಯಂತ ಬಾಹ್ಕಾಕಾಶದ ಕಡೆಗೆ ಕಣ್ಣು ನೆಟ್ಟಿರುವವರೇ ಹೆಚ್ಚು. ಆದರೆ ಅದರಲ್ಲಿ ತಮ್ಮನ್ನು ತೊಡಗಿಸಿಕೊಂಡ ಉದ್ಯಮಿಗಳ ಬೆರಳೆಣಿಕೆಯಷ್ಟು ಮಂದಿ ಮಾತ್ರ. ಅದರಲ್ಲಿ ಜೆಫ್​ ಬೆಜೋಸ್ ಕೂಡ ಒಬ್ಬರು. ಬಾಹ್ಯಾಕಾಶದಲ್ಲಿ ಟೂರಿಸಂ ಮತ್ತು ಮೂಲಸೌಕರ್ಯ ಉತ್ತೇಜನಕ್ಕಾಗಿ ಬ್ಲ್ಯೂ ಆರಿಜಿನ್​ನಲ್ಲಿ ನೂರಾರು ಕೋಟಿ ಅಮೆರಿಕನ್ ಡಾಲರ್ ಹಣವನ್ನು ಸುರಿದಿದ್ದಾರೆ. ಜುಲೈ 20ನೇ ತಾರೀಕು ಈ ಕಂಪೆನಿಯ ಮೊದಲ ಬಾಹ್ಯಾಕಾಶ ಪಯಣ ದಾಖಲಾಗಿದೆ. ರಿಚರ್ಡ್ ಬ್ರಾನ್ಸನ್​ರ ವರ್ಜಿನ್ ಗ್ಯಾಲಕ್ಟಿಕ್ ಈ ಸಾಧನೆ ಮಾಡಲಿದೆ. ಆ ಮೂಲಕ ಅದು ಬಾಹ್ಯಾಕಾಶ ಟೂರಿಸಂ ನಡೆಸಿದ ಮೊದಲ ಕಂಪೆನಿ ಎಂಬ ಅಗ್ಗಳಿಕೆಗೆ ಪಾತ್ರವಾಗಲಿದೆ ಎಂಬುದು ಸದ್ಯದ ಮಟ್ಟಿಗೆ ಇರುವ ನಿರೀಕ್ಷೆ. ಆದರೆ ಬಾಹ್ಯಾಕಾಶ ಪಯಣ ಯೋಜನೆ ಬಗ್ಗೆ ಮೊದಲಿಗೆ ಘೋಷಣೆ ಮಾಡಿದ್ದು ಜೆಫ್ ಬೆಜೋಸ್. ತಮ್ಮ ಸೋದರ ಹಾಗೂ ಆಪ್ತ ಸ್ನೇಹಿತ ಮಾರ್ಕ್ ಜತೆಗೆ ಸೇರಿ ಬಾಹ್ಯಾಕಾಶಕ್ಕೆ ತೆರಳುವ ಬಗ್ಗೆ ತಿಳಿಸಿದ್ದಾರೆ. ನನಗೆ ಐದು ವರ್ಷ ಇದ್ದಾಗಿನಿಂದ ಬಾಹ್ಯಾಕಾಶಕ್ಕೆ ತೆರಳುವ ಕನಸು. ಈ ಪ್ರಯಾಣಕ್ಕೆ ನನ್ನ ಸೋದರನನ್ನು ಕರೆದೊಯ್ಯಲಿದ್ದೇನೆ. ನನ್ನ ಆಪ್ತ ಸ್ನೇಹಿತನ ಜತೆಗೆ ಇದು ಅತಿ ದೊಡ್ಡ ಸಾಹಸ ಆಗಲಿದೆ ಎಂದು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಅಮೆಜಾನ್ ಸ್ಟುಡಿಯೋಸ್
ಈಚೆಗೆ ಡ್ವೇನ್ “ದ ರಾಕ್” ಜತೆಗಿನ ತಮ್ಮ ಸೆಲ್ಫಿಯೊಂದನ್ನು ಜೆಫ್ ಬೆಜೋಸ್ ರೀಪೋಸ್ಟ್ ಮಾಡಿದ್ದರು. ಅಂದಹಾಗೆ ಅಮೆಜಾನ್ ಸ್ಟುಡಿಯೋಸ್ ಜತೆಗೆ ಡ್ವೇನ್ ಪ್ರೊಡಕ್ಷನ್ ಜತೆಗೂಡಿ ಸಿನಿಮಾ ಮಾಡುವ ಆಲೋಚನೆಯಿದೆ. ಅಮೆಜಾನ್ ಸಿಇಒ ಆಗಿದ್ದಾಗಲೇ ವಾರ್ಷಿಕ ಸಭೆಗಳಲ್ಲಿ ತಮ್ಮ ಸಿನಿಮಾ ರಂಗದ ಕನಸುಗಳನ್ನು ಅವರು ಹಂಚಿಕೊಂಡಿದ್ದಾರೆ.

ಇತರ ಆಸಕ್ತಿಗಳು
ನಿಮಗೆ ಗೊತ್ತಿರಲಿ, 2013ನೇ ಇಸವಿಯಲ್ಲಿ 25 ಕೋಟಿ ಅಮೆರಿಕನ್ ಡಾಲರ್​ಗೆ ವಾಷಿಂಗ್ಟನ್​ ಪೋಸ್ಟ್ ಪತ್ರಿಕೆಯನ್ನು ಖರೀದಿ ಮಾಡಿದ್ದಾರೆ. ಅದನ್ನು ಡಿಜಿಟಲ್​ ಮಾಧ್ಯಮವಾಗಿ ಬೆಳೆಸಿದ ಹಿರಿಮೆ ಜೆಪ್​ ಬೆಜೋಸ್​ಗೆ ಸಲ್ಲುತ್ತದೆ. ಅಂದಾಜಿನ ಪ್ರಕಾರ, ಬೆಜೋಸ್ ಆಸ್ತಿ ಮೌಲ್ಯ 19,900 ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 14,82,261.45 (14.82 ಲಕ್ಷ ಕೋಟಿ ರೂಪಾಯಿ). ಈ ಲೇಖನ ಬರೆಯುವ ಹೊತ್ತಿಗೆ ಭಾರತದ ಟಾಪ್ ವ್ಯಾಲ್ಯೂ ಕಂಪೆನಿ ರಿಲಯನ್ಸ್​ ಇಂಡಸ್ಟ್ರೀಸ್ ಮಾರುಕಟ್ಟೆ ಮೌಲ್ಯ 13,85,503 ಕೋಟಿ ರೂ. ಇದೆ. ಇದನ್ನು ಯಾಕೆ ಹೇಳಬೇಕಾಯಿತು ಅಂದರೆ, ಭಾರತದ ಟಾಪ್ ಕಂಪೆನಿಯ ಮಾರುಕಟ್ಟೆ ಮೌಲ್ಯಕ್ಕಿಂತ ಜೆಫ್​ಬೆಜೋಸ್ ಆಸ್ತಿ ಹತ್ತಿರ ಹತ್ತಿರ 1 ಲಕ್ಷ ಕೋಟಿಗೂ ಹೆಚ್ಚಿಗೆ ಇದೆ.

ಈಗಾಗಲೇ ಪ್ರಗತಿಪರ ಕಾರ್ಯಗಳಿಗಾಗಿ ಜೆಪ್​ ಬೆಜೋಸ್ ತಮ್ಮ ಹಣವನ್ನು ವಿನಿಯೋಗಿಸುತ್ತಿದ್ದಾರೆ. ಕಳೆದ ವರ್ಷ 1000 ಕೋಟಿ ಅಮೆರಿಕನ್ ಡಾಲರ್ ಅರ್ಥ್ ಫಂಡ್ ಇಟ್ಟಿದ್ದು, ಶೇ 100ರಷ್ಟು ಸ್ವಚ್ಛ ಎನರ್ಜಿ, ಎಲ್ಲರಿಗೂ ಆರೋಗ್ಯಕರವಾದ ಗಾಳಿ, ನೀರು, ಭೂಮಿ ದೊರೆಯುವುದಕ್ಕೆ ಪ್ರಯತ್ನಿಸಲಾಗುತ್ತದೆ.

ಇದನ್ನೂ ಓದಿ: Jeff Bezos: ಬಾಹ್ಯಾಕಾಶಕ್ಕೆ ಸೈಟ್​ ಸೀಯಿಂಗ್​ಗೆ ಹೊರಟಿದ್ದಾರೆ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್, ನೀವೂ ಜತೆಯಾಗಬಹುದು!

(Jeff Bezos last day in Amazon in CEO. What next for world’s richest person on card? Here is the details)