India-Taiwan: ತೈವಾನ್​ನಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ; ಭಾರತದ ಜೊತೆ ತೈವಾನ್ ಒಡಂಬಡಿಕೆ

|

Updated on: Feb 21, 2024 | 10:46 AM

Job Opportunities in Taiwan: ಭಾರತೀಯ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳಲು ಭಾರತದ ಜೊತೆ ತೈವಾನ್ ದೇಶ ಕಳೆದ ವಾರ ಒಡಂಬಡಿಕೆಗೆ ಸಹಿ ಹಾಕಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ದೈತ್ಯ ಎನಿಸಿರುವ ತೈವಾನ್​ನಲ್ಲಿ ವೃದ್ಧಾಪ್ಯರ ಜನಸಂಖ್ಯೆ ಹೆಚ್ಚುತ್ತಿದ್ದ ಕೆಲಸ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಕಾರ್ಮಿಕರ ಕೊರತೆ ನೀಗಿಸಲು ಭಾರತದಿಂದ ಜನರನ್ನು ಕರೆದುಕೊಂಡು ಹೋಗಲು ತೈವಾನ್ ನಿರ್ಧರಿಸಿದೆ.

India-Taiwan: ತೈವಾನ್​ನಲ್ಲಿ ಭಾರತೀಯರಿಗೆ ಉದ್ಯೋಗಾವಕಾಶ; ಭಾರತದ ಜೊತೆ ತೈವಾನ್ ಒಡಂಬಡಿಕೆ
ಭಾರತ ಮತ್ತು ತೈವಾನ್​ನ ಸಾಂದರ್ಭಿಕ ಚಿತ್ರ
Follow us on

ನವದೆಹಲಿ, ಫೆಬ್ರುವರಿ 21: ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ (electronics manufacturing) ಮುಂಚೂಣಿಯಲ್ಲಿರುವ ತೈವಾನ್ ದೇಶದಲ್ಲಿ ಈಗ ಉದ್ಯೋಗಿಗಳ ಕೊರತೆ (workers shortage) ಸೃಷ್ಟಿಯಾಗಿದೆ. ಅದನ್ನು ನೀಗಿಸಲು ಈಗ ಭಾರತದ ಸಹಾಯ ಯಾಚಿಸಿದೆ. ಭಾರತೀಯರನ್ನು ತಮ್ಮ ದೇಶದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳಲು ತೈವಾನ್ ಒಪ್ಪಂದ ಮಾಡಿಕೊಂಡಿದೆ. ವರದಿ ಪ್ರಕಾರ ಕಳೆದ ವಾರಾಂತ್ಯದಲ್ಲಿ (ಫೆ. 16) ಭಾರತ ಮತ್ತು ತೈವಾನ್ ನಡುವೆ ಒಡಂಬಡಿಕೆ (MoU- Memorandum of Understanding) ಆಗಿದೆ. ತೈವಾನ್​ನ ವಿದೇಶಾಂಗ ಸಚಿವಾಲಯದ ಅಧಿಕೃತ ಎಕ್ಸ್ ಖಾತೆಯಿಂದ ಈ ಮಾಹಿತಿ ಬಂದಿದೆ.

‘ತೈವಾನ್ ಮತ್ತು ಭಾರತದ ಸಂಬಂಧ ಹೊಸ ಎತ್ತರಕ್ಕೆ ಹೋಗಿದೆ. ಭಾರತೀಯ ಕೆಲಸಗಾರರಿಗೆ ಉದ್ಯೋಗ ಒದಗಿಸಲು ಎಂಒಯುಗೆ ಸಹಿ ಹಾಕಲಾಗಿದೆ,’ ಎಂದು ಅಲ್ಲಿನ ಸರ್ಕಾರ ಪೋಸ್ಟ್ ಮಾಡಿದೆ.

ಈ ಒಪ್ಪಂದದಿಂದ ಎರಡೂ ದೇಶಗಳ ಜನರಿಗೆ ಲಾಭವಾಗುತ್ತದೆ. ಸಂಬಂಧ ಇನ್ನಷ್ಟು ಗಟ್ಟಿಯಾಗಲು ಸಹಾಯಕವಾಗುತ್ತದೆ ಎಂದು ತೈವಾನ್ ಸರ್ಕಾರ ಹೇಳಿಕೊಂಡಿದೆ.

ಇದನ್ನೂ ಓದಿ: ಮಾರ್ಚ್​ವರೆಗೂ ಆರ್ಥಿಕತೆ ಇದೇ ವೇಗದಲ್ಲಿ ಸಾಗಲಿದೆ: ಆರ್​ಬಿಐನ ಮಾಸಿಕ ವರದಿಯಲ್ಲಿ ಅಂದಾಜು

ಚೀನಾ, ಜಪಾನ್ ಇತ್ಯಾದಿ ದೇಶಗಳಲ್ಲಿಯಂತೆ ತೈವಾನ್​ನಲ್ಲಿಯೂ ಯುವಕರ ಕೊರತೆ ಕಾಡುತ್ತಿದೆ. ಜನಸಂಖ್ಯೆಯಲ್ಲಿ ಹೆಚ್ಚಿನವರು ಕೆಲಸದ ಹಂತ ಮೀರಿ ವೃದ್ಧಾಪ್ಯ ಹಂತಕ್ಕೆ ಕಾಲಿಟ್ಟಿದ್ದಾರೆ. ಸೆಮಿಕಂಡಕ್ಟರ್ ಸೇರಿದಂತೆ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ತೈವಾನ್ ಬಹಳ ಮುಂದಿದೆ. ತನ್ನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ವಿದೇಶೀ ಕಾರ್ಮಿಕರನ್ನು ನೆಚ್ಚಿಕೊಳ್ಳಬೇಕಿದೆ. ಸದ್ಯ ಅಲ್ಲಿ 7 ಲಕ್ಷ ವಲಸಿಗ ಕಾರ್ಮಿಕರಿದ್ದಾರೆ. ಅವರಲ್ಲಿ ಹೆಚ್ಚಿನವರು ಇಂಡೋನೇಷ್ಯ, ವಿಯೆಟ್ನಾ, ಫಿಲಿಪ್ಪೈನ್ಸ್, ಥಾಯ್ಲೆಂಡ್ ಇತ್ಯಾದಿ ಆಗ್ನೇಯ ಏಷ್ಯನ್ ದೇಶಗಳಿಂದ ಹೋದವರೇ ಆಗಿದ್ದಾರೆ.

ಈಗ ತನ್ನ ವಿದೇಶೀ ಕಾರ್ಮಿಕರ ಬಳಗಕ್ಕೆ ಭಾರತವನ್ನೂ ಸೇರಿಸಿಕೊಳ್ಳಲು ತೈವಾನ್ ಹೊರಟಿದೆ. ಭಾರತ ಮತ್ತು ತೈವಾನ್ ನಡುವೆ ವ್ಯಾವಹಾರಿಕ ಸಂಬಂಧ ಗಟ್ಟಿಯಾಗಿದ್ದರೂ ತೈವಾನ್​ನಲ್ಲಿ ಕೆಲಸ ಮಾಡುವ ಭಾರತೀಯರು ಇರಲಿಲ್ಲ. ಚೀನಾ, ಜಪಾನ್, ಸಿಂಗಾಪುರ, ಹಾಂಕಾಂಗ್, ಮಲೇಷ್ಯಾ, ಇಂಡೋನೇಷ್ಯಾ ಮೊದಲಾದ ದೇಶಗಳಲ್ಲಿ ಕೆಲಸ ಮಾಡುವ ಭಾರತೀಯರು ಇದ್ದಾರೆ. ಈಗ ತೈವಾನ್ ಭಾರತೀಯರಿಗೆ ಮಣೆ ಹಾಕಲು ಸಿದ್ಧವಾಗಿದೆ.

ಇದನ್ನೂ ಓದಿ: ಊಟಕ್ಕೆ ದುಡ್ಡಿಲ್ಲದೆ ಹಸಿವಿನಿಂದ ಇದ್ದ ಆ ದಿನಗಳು; ಹಳೆಯ ಕಷ್ಟಗಳನ್ನು ನೆನೆವ ಶ್ರೀಮಂತ ಯುವಕ ಅನುಪಮ್ ಮಿತ್ತಲ್

ಆದರೆ, ಪ್ರಸಕ್ತ ಎರಡು ದೇಶಗಳ ಮಧ್ಯೆ ಸಹಿಹಾಕಲಾಗಿರುವ ಎಂಒಯುನಲ್ಲಿ ಯಾವ ಕ್ಷೇತ್ರಕ್ಕೆ ಭಾರತೀಯರನ್ನು ನೇಮಕಾತಿ ಮಾಡಲಾಗುತ್ತದೆ ಎಂಬುದು ನಿರ್ದಿಷ್ಟಪಡಿಸಲಾಗಿಲ್ಲ. ಅಲ್ಲಿ ಉತ್ಪಾದನಾ ಕ್ಷೇತ್ರದಲ್ಲಿಯಷ್ಟೇ ಅಲ್ಲ ಕಟ್ಟಡ ನಿರ್ಮಾಣ, ಕೃಷಿ ಇತ್ಯಾದಿ ಪ್ರಮುಖ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಇದೆ. ಹಾಗೆಯೇ, ಅಲ್ಲಿನ ವಯೋವೃದ್ಧರ ಪಾಲನೆ ಮಾಡುವ ಮಂದಿಯ ಅವಶ್ಯಕತೆಯೂ ಇದೆ.

ಇತ್ತ, ಇಸ್ರೇಲ್ ದೇಶ ತನ್ನ ಉದ್ಯಮಗಳಲ್ಲಿ ಕಾರ್ಮಿಕರ ಕೊರತೆ ಎದುರಾದ ಹಿನ್ನೆಲೆಯಲ್ಲಿ ಭಾರತದಿಂದ ಬಹಳಷ್ಟು ಜನರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ. ಪ್ಯಾಲಸ್ಟೀನೀ ಕಾರ್ಮಿಕರ ಜಾಗಕ್ಕೆ ಭಾರತೀಯರನ್ನು ಸೇರಿಸಿಕೊಳ್ಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ