Economy: ಮಾರ್ಚ್ವರೆಗೂ ಆರ್ಥಿಕತೆ ಇದೇ ವೇಗದಲ್ಲಿ ಸಾಗಲಿದೆ: ಆರ್ಬಿಐನ ಮಾಸಿಕ ವರದಿಯಲ್ಲಿ ಅಂದಾಜು
RBI Monthly Bulletin: 2023-24ರ ಮೊದಲ ಎರಡು ಕ್ವಾರ್ಟರ್ಗಳಲ್ಲಿ ಉತ್ತಮ ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ ಕೊನೆಯ ಎರಡು ಕ್ವಾರ್ಟರ್ನಲ್ಲೂ ಅದೇ ವೇಗ ಕಾಯ್ದುಕೊಳ್ಳಬಹುದು ಎಂದು ಆರ್ಬಿಐನ ಮಾಸಿಕ ಬುಲೆಟಿನ್ನಲ್ಲಿ ಹೇಳಲಾಗಿದೆ. ಇದೇ ಫೆಬ್ರುವರಿ 29ರಂದು ಸಾಂಖ್ಯಿಕ ಸಚಿವಾಲಯವು ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ ಅವಧಿಯ ಜಿಡಿಪಿ ದರ ಎಷ್ಟೆಂದು ಅಂಕಿ ಅಂಶ ಪ್ರಕಟಿಸಲಿದೆ.
ನವದೆಹಲಿ, ಫೆಬ್ರುವರಿ 20: ಪ್ರಸಕ್ತ ಆರ್ಥಿಕ ವರ್ಷದ ಮೊದಲಾರ್ಧ ಅನಿರೀಕ್ಷಿತವಾಗಿ ಹೆಚ್ಚು ಬೆಳವಣಿಗೆ ಕಂಡಿರುವ ಭಾರತದ ಆರ್ಥಿಕತೆ, ದ್ವಿತೀಯಾರ್ಧದಲ್ಲೂ ಅದೇ ವೇಗ ಕಾಯ್ದುಕೊಳ್ಳುವ ಸಾಧ್ಯತೆ ಇದೆ ಎಂದು ಆರ್ಬಿಐನ ಮಾಸಿಕ ವರದಿಯಲ್ಲಿ (RBI monthly bulletin) ಅಂದಾಜು ಮಾಡಲಾಗಿದೆ. 2023-24ರ ಮೊದಲೆರಡು ಕ್ವಾರ್ಟರ್ಗಳಲ್ಲಿ ಭಾರತದ ಜಿಡಿಪಿ ಕ್ರಮವಾಗಿ ಶೇ. 7.8 ಮತ್ತು ಶೇ. 7.6ರಷ್ಟು ಬೆಳೆದಿತ್ತು. ಅಂದರೆ 2023ರ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಶೇ. 7.8, ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಶೇ. 7.6ರಷ್ಟು ಬೆಳೆದಿತ್ತು. ಒಟ್ಟಾರೆ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ಆಗಿರುವ ಜಿಡಿಪಿ ಬೆಳವಣಿಗೆ ಶೇ. 7.7 ಇದೆ. ಈಗ ಅಕ್ಟೋಬರ್ನಿಂದ ಮಾರ್ಚ್ವರೆಗಿನ ಆರು ತಿಂಗಳ ಅವಧಿಯಲ್ಲೂ ಇದೇ ಬೆಳವಣಿಗೆ ಮಟ್ಟ ಕಾಯ್ದುಕೊಳ್ಳಬಹುದು ಎಂದು ಆರ್ಬಿಐ ನಿರೀಕ್ಷಿಸಿದೆ.
‘ಈಗ ಕಂಡುಬಂದಿರುವ ಆರ್ಥಿಕ ಸೂಚಕಗಳನ್ನು ಗಮನಿಸಿದರೆ, 2023-24ರ ಮೊದಲಾರ್ಧದಲ್ಲಿ ಸಾಧಿಸಲಾದ ಬೆಳವಣಿಗೆ ಮುಂದುವರಿಯಬಹುದು. ಮುಂದಿನ ಭಾಗದ ಬೆಳವಣಿಗೆಗೆ ಕಾರ್ಪೊರೇಟ್ ಸೆಕ್ಟರ್ನಿಂದ ಆಗಬಹುದಾದ ಹೊಸ ಬಂಡವಾಳ ವೆಚ್ಚ ಸಹಾಯಕವಾಗಬಹುದು,’ ಎಂದು ಇಂದು ಮಂಗಳವಾರ ಬಿಡುಗಡೆ ಮಾಡಿದ ಮಾಸಿಕ ಬುಲೆಟಿನ್ನಲ್ಲಿ ಆರ್ಬಿಐ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಪರಮಾಣ ವಿದ್ಯುತ್ ಉತ್ಪಾದನೆ; ಹೂಡಿಕೆ ಮಾಡುವಂತೆ ಅದಾನಿ, ರಿಲಾಯನ್ಸ್, ಟಾಟಾ ಕಂಪನಿಗಳಿಗೆ ಸರ್ಕಾರದ ಮಾತುಕತೆ
ಆದರೆ, ಆರ್ಬಿಐ ಪ್ರಕಟಿಸುವ ಈ ಮಾಸಿಕ ವರದಿಯಲ್ಲಿನ ಅಂಶಗಳು ಅದರ ಅಧಿಕೃತ ನಿಲುವಲ್ಲ. ಆರ್ಬಿಐನ ಎಂಪಿಸಿ ಸದಸ್ಯ ಮೈಕೇಲ್ ಪಾತ್ರ ಮೊದಲಾದ ಕೆಲವರು ಸೇರಿ ಈ ವರದಿ ಸಿದ್ಧಪಡಿಸುತ್ತಾರೆ. ಅದರಲ್ಲಿರುವ ಅಭಿಪ್ರಾಯಗಳು ಬಹುತೇಕ ಅವರ ವೈಯಕ್ತಿಕವಾದವುಗಳಾಗಿರುತ್ತವೆ. ಹೀಗಾಗಿ, ಎಂಪಿಸಿ ಸಭೆಯಲ್ಲಿ ಆರ್ಬಿಐ ಮಾಡುವ ಅಂದಾಜಿಗಿಂತ ಈ ಮಾಸಿಕ ವರದಿಯಲ್ಲಿನ ಅಂಶಗಳು ಕೆಲವೊಮ್ಮೆ ವ್ಯತ್ಯಯವಾಗಬಹುದು.
ಇದೇ ಫೆಬ್ರುವರಿ 29ರಂದು ಕೇಂದ್ರ ಸಾಂಖ್ಯಿಕ ಇಲಾಖೆಯಿಂದ ಜಿಡಿಪಿ ದರದ ಅಧಿಕೃತ ಮಾಹಿತಿ ಪ್ರಕಟವಾಲಿದೆ. 2023ರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ಕ್ವಾರ್ಟರ್ನ ಜಿಡಿಪಿ ಬೆಳವಣಿಗೆ ಎಷ್ಟೆಂಬುದು ಈ ತಿಂಗಳ ಅಂತ್ಯದಲ್ಲಿ ಗೊತ್ತಾಗಲಿದೆ.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಕೆಟ್ಟುಹೋದ ವಸ್ತುಗಳ ದುರಸ್ತಿ ಜವಾಬ್ದಾರಿ ಯಾರದ್ದು? ಈ ಕಾನೂನು ತಿಳಿದಿರಿ
ಆರ್ಬಿಐ ಈ ಹಿಂದೆ ಮಾಡಿದ ಅಧಿಕೃತ ಅಂದಾಜು ಪ್ರಕಾರ ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ಶೇ. 6.5ರಷ್ಟು ಮಾತ್ರವೇ ಹೆಚ್ಚಾಗಬಹುದು ಎಂದಿದೆ. ಆದರೆ, ಆರ್ಬಿಐನ ಮಾಸಿಕ ಬುಲೆಟಿನ್ನಲ್ಲಿ ಮಾಡಲಾಗಿರುವ ಅಂದಾಜು ಹೆಚ್ಚು ಆಶಾದಾಯಕವಾಗಿದೆ.
ಸರ್ಕಾರ ಈ ವರ್ಷ (2023-24) ಒಟ್ಟಾರೆ ಶೇ. 7.3ರಷ್ಟು ಜಿಡಿಪಿ ಬೆಳೆಯಬಹುದು ಎಂದು ನಿರೀಕ್ಷಿಸಿದೆ. ಹೆಚ್ಚಿನ ಆರ್ಥಿಕ ತಜ್ಞರು ಮತ್ತು ಬ್ರೋಕರೇಜ್ ಸಂಸ್ಥೆಗಳು ಭಾರತದ ಜಿಡಿಪಿ ಬೆಳವಣಿಗೆ ಶೇ. 7ಕ್ಕೆ ಸೀಮಿತಗೊಳ್ಳಬಹುದು ಎಂದಿವೆ. ಯಾವ ನಿರೀಕ್ಷೆಗಳು ವಾಸ್ತವಕ್ಕೆ ಹತ್ತಿರವಾಗಿವೆ ಎಂಬುದು ಫೆಬ್ರುವರಿ 29ರಂದು ಬಿಡುಗಡೆ ಆಗಲಿರುವ ದತ್ತಾಂಶದಿಂದ ಸುಳಿವು ಸಿಗಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ