ಬೋಳಾದ- ಹೊಳೆಯುತ್ತಿರುವ ತಲೆ, ತುಟಿಯ ಕೆಳಗೊಂದು ನಗು, ಗಡ್ಡ- ಮೀಸೆಗಳಿಲ್ಲದ ಆ ವ್ಯಕ್ತಿಗೆ ಅದೆಷ್ಟು ವರ್ಷಗಳಿಂದ ವಯಸ್ಸೇ ಆಗಿಲ್ಲವೋ ಗೊತ್ತಿಲ್ಲ! ತಾನೇ ಸ್ಥಾಪಿಸಿದ ಕಂಪೆನಿಯ ಸಿಇಒ ಹುದ್ದೆಯಿಂದ ಕೆಳಗೆ ಇಳಿಯುತ್ತಾರೆ ಅಂದಾಗ, ಓಹ್ 57 ವರ್ಷ ಆಗಿಹೋಯಿತೇ ಎಂಬ ಉದ್ಗಾರ ತೆಗೆಯುವಂತಾಯಿತು. ಆತನ ಹೆಸರು ಜೆಫ್ ಬೆಜೋಸ್. ಆತ ಕಟ್ಟಿದ ಸಾಮ್ರಾಜ್ಯದ ಹೆಸರು ಅಮೆಜಾನ್. ಜುಲೈ 5ರಂದು ಸಿಇಒ ಹುದ್ದೆಯನ್ನು ಬಿಟ್ಟುಕೊಡುತ್ತಾರೆ ಬೆಜೋಸ್. ಇನ್ನು ಮೇಲೆ ಆ ಮಹತ್ತರ ಜವಾಬ್ದಾರಿ ಆ್ಯಂಡಿ ಜಸ್ಸಿಯ ಹೆಗಲೇರುತ್ತದೆ. ಅಂದಹಾಗೆ ಜೆಫ್ ಬೆಜೋಸ್ ಇವತ್ತಿಗೆ ವಿಶ್ವದ ಅತಿ ಶ್ರೀಮಂತ. ಆಸ್ತಿ ಮೌಲ್ಯ 19,900 ಕೋಟಿ ಅಮೆರಿಕನ್ ಡಾಲರ್, ಅಂದರೆ ಭಾರತದ ರೂಪಾಯಿ ಲೆಕ್ಕದಲ್ಲಿ 14.82 ಲಕ್ಷ ಕೋಟಿ ರೂಪಾಯಿ. ಕರ್ನಾಟಕ ರಾಜ್ಯಕ್ಕೆ ಒಂದೇ ಒಂದು ರೂಪಾಯಿ ಆದಾಯ ಇಲ್ಲದೆಯೂ ಸತತ ಏಳು ವರ್ಷ ಹಣಕಾಸು ಅಗತ್ಯ ಪೂರೈಸಿ ಬಿಡಬಲ್ಲಷ್ಟು ಮೊತ್ತ ಇದು. ಇಂಥ ಜೆಫ್ ಬೆಜೋಸ್ ಭವಿಷ್ಯದ ಕನಸಲ್ಲಿ ಬಾಹ್ಯಾಕಾಶ ಇದೆ. ಸೆಟ್ ಏರದ ಅದೆಷ್ಟೋ ಸಿನಿಮಾಗಳಿವೆ. ದಾನ- ಧರ್ಮದ ಉದ್ದೇಶ ಇದೆ. ಒಟ್ಟಾರೆ ಜೆಫ್ ಬೆಜೋಸ್ ಅಂದರೆ ಸಾವಿರಾರು ಕನಸುಗಳನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡು ಆಗಸದ ಕಡೆಗೆ ಕಣ್ಣು ನೆಟ್ಟು, ಭೂಮಿ ಮೇಲೆ ನಿಂತ ಸಾಹುಕಾರ.
ಅಮೆಜಾನ್ ಕಂಪೆನಿ ಇಷ್ಟೆಲ್ಲ ಯಶಸ್ಸು ಕಾಣುವುದಕ್ಕೆ ಕಾರಣ ಏನು ಅಂತ ನೋಡಿದರೆ, ಪ್ರಯೋಗಗಳು, ಅನ್ವೇಷಣೆ, ಹೊಸತನ, ಕ್ರಿಯೇಟಿವಿಟಿ ಹಾಗೂ ಗ್ರಾಹಕರ ತೃಪ್ತಿ ಇವೆಲ್ಲವೂ ಕಣ್ಣೆದುರು ಬಂದು ನಿಲ್ಲುತ್ತವೆ. ಯಶಸ್ಸು ಅನ್ನೋದು ಹಾಗೇ. ಕಾಮನಬಿಲ್ಲು ಕಾಣಬೇಕು ಅಂದಾಗ ಮಳೆಯೂ ಬರಬೇಕು, ಬಿಸಿಲು ಇರಬೇಕು. ಈ ಲೇಖನದಲ್ಲಿ ಜೆಫ್ ಬೆಜೋಸ್ ಪಾಲಿನ ಕಾಮನಬಿಲ್ಲು (ಯಶಸ್ಸು) ಹೇಗೆ ಕಾಣಿಸಿಕೊಂಡಿತು, ಆ ಪಯಣ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಲಾಗುತ್ತಿದೆ. ಇದು ಯಾರಿಗಾದರೂ ಪ್ರೇರಣೆ ಆದೀತು. ಹಾಂ, ಜೆಫ್ ಬೆಜೋಸ್ ಅಂದಾಕ್ಷಣ ಅಮೆಜಾನ್ ಮಾತ್ರ ಅಂದುಕೊಳ್ಳಬೇಡಿ. ಬ್ಲ್ಯೂ ಆರಿಜಿನ್ ಎಂಬ ರಾಕೆಟ್ ಕಂಪೆನಿ ಹಾಗೂ ವಾಷಿಂಗ್ಟನ್ ಪೋಸ್ಟ್ ವೃತ್ತಪತ್ರಿಕೆ ಯಜಮಾನ ಕೂಡ ಅವರೇ.
ಜೆಪ್ ಬೆಜೋಸ್ ಆರಂಭದ ದಿನಗಳು
ಜೆಫ್ ಹುಟ್ಟಿದ್ದು ಮೆಕ್ಸಿಕೊದಲ್ಲಿ. ಹದಿಹರೆಯದ ತಾಯಿ ಜಾಕ್ಲಿನ್ ಮತ್ತು ತಂದೆ ಟೆಡ್ ಜೋರ್ಗೆನ್ಸ್ ದಾಂಪತ್ಯದ ಬದುಕು ಒಂದೂ ಚಿಲ್ಲರೆ ವರ್ಷ ಮಾತ್ರ ಇತ್ತು. ಆಕೆ 1968ರಲ್ಲಿ ಮಿಗುಯೆಲ್ ಬೆಜೋಸ್ ಜತೆ ಮರುಮದುವೆಯಾದರು. ಆಗ ಜೆಫ್‌ಗೆ 4 ವರ್ಷ. ಜೆಫ್ ಬೆಳೆದಂತೆ ಕಂಪ್ಯೂಟರ್ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಂಡರು. ಪದವಿ ಮುಗಿಸಿದ ನಂತರ, ಇಂಟೆಲ್ ಮತ್ತು ಬೆಲ್ ಲ್ಯಾಬ್‌ಗಳಿಂದ ಆಫರ್‌ಗಳನ್ನು ಪಡೆದರು. ಆದರೆ ಜೆಫ್ ಅವೆಲ್ಲವನ್ನೂ ನಿರಾಕರಿಸಿದರು. ಅವರು ಸ್ಟಾರ್ಟ್ಅಪ್- ಫಿಟೆಲ್ಗೆ ಸೇರಿದರು. ಆದರೆ ನಂತರ ಬ್ಯಾಂಕರ್ಸ್ ಟ್ರಸ್ಟ್ ಸೇರಲು ನಿರ್ಧರಿಸಿದರು. 30ನೇ ವಯಸ್ಸಿಗೆ ಜೆಫ್ ಬೆಜೋಸ್ ಆರು ಅಂಕಿಗಳ ಸಂಬಳ ಪಡೆಯುತ್ತಿದ್ದರು. ಅನೇಕರು ಅವರನ್ನು ಯಶಸ್ವಿ ವ್ಯಕ್ತಿ ಎಂದು ಕರೆಯುತ್ತಿದ್ದರು. ಆದರೆ ಅವರಿಗೆ ಇತರ ಯೋಜನೆಗಳು ಇದ್ದವು. ಅದೊಮ್ಮೆ ಇಂಟರ್ನೆಟ್ ಮೂಲಕ ಸರ್ಫಿಂಗ್ ಮಾಡುವಾಗ, ವೆಬ್ ಜಗತ್ತು ಶೇ 2300ರಷ್ಟು ವೇಗವಾಗಿ ಬೆಳೆಯುತ್ತಿದೆ ಎಂದು ಕಂಡುಕೊಂಡರು. ಆ ಸಮಯದಲ್ಲೇ ತಮ್ಮ ಕಂಫರ್ಟ್ ಝೋನ್ನಿಂದ ಹೊರಬಂದ ಅವರು, ಡಿಇ ಶಾ ಮತ್ತು ಕಂಪೆನಿಯಲ್ಲಿ ಇದ್ದ ಅದ್ಭುತವಾದ ಸಂಬಳದ ಕೆಲಸವನ್ನು ಬಿಟ್ಟು, ತಮ್ಮದೇ ಕಂಪೆನಿ ಪ್ರಾರಂಭಿಸಿದರು.
ಅಮೆಜಾನ್ ಏಕೆ ಯಶಸ್ವಿಯಾಗಿದೆ?
ಈ ಕನಸನ್ನು ಈಡೇರಿಸುವ ದೃಢ ಸಂಕಲ್ಪ ಮಾಡಿದ ಬೆಜೋಸ್, ಪ್ರತಿ ಕ್ಷಣ ಆ ಕಡೆಗೆ ಧೇನಿಸ ತೊಡಗಿದರು. ಮೊದಲಿಗೆ ಅಮೆರಿಕದ ಸೀಟಲ್ನ ಗ್ಯಾರೇಜ್ವೊಂದರಲ್ಲಿ ಆನ್ಲೈನ್ ಬುಕ್ ಸ್ಟೋರ್ ಆರಂಭ ಮಾಡಿದರು. ಗುಣಮಟ್ಟದ ಸಂಸ್ಥೆಯನ್ನು ಕಟ್ಟುವ ನಿರಂತರ ಮತ್ತು ಎಡೆಬಿಡದ ಅನ್ವೇಷಣೆಯ ಫಲದಿಂದ ಅಮೆಜಾನ್ ಅಸ್ತಿತ್ವಕ್ಕೆ ಬಂದಿತು. ಅಮೆಜಾನ್ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಅಂಥದ್ದೊಂದು ಅಂತಃಶಕ್ತಿ ರೂಪಿಸಲಾಗುತ್ತಿತ್ತು. ಗಮನ ಕೇಂದ್ರೀಕರಿಸುವುದು, ಗ್ರಾಹಕರಿಗೆ ಅದ್ಭುತವಾದ ಅನುಭವ ಒದಗಿಸುವುದು ಈ ಕಡೆಗೆ ಹೆಚ್ಚಿನ ನಿಗಾ ಮಾಡುವಂತೆ ಪ್ರೇರಣೆ ದೊರೆಯುತ್ತಿತ್ತು. ಅವುಗಳನ್ನೇ ಆಧಾರ ಸ್ಥಂಭವಾಗಿ ಮಾಡಿಕೊಂಡು ಕಂಪೆನಿ ಕಟ್ಟಲಾಯಿತು.
ಇಂಟರ್ನೆಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಇಡೀ ಜಗತ್ತು ಆಶ್ಚರ್ಯ ಪಡುತ್ತಿರುವ ಹೊತ್ತಿನಲ್ಲಿ ಅದಾಗಲೇ ಜೆಫ್ ಬೆಜೋಸ್ ವೆಬ್ ರಿಟೇಲ್ ವ್ಯಾಪಾರ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾದರು. ಅಮೆಜಾನ್‌ನ ಪ್ರಮುಖ ಗಮನವು ಎಂದಿಗೂ ಸ್ಪರ್ಧಿಗಳನ್ನು ಸೋಲಿಸುವುದಾಗಿರಲಿಲ್ಲ. ಬದಲಿಗೆ ಇದು ಗ್ರಾಹಕರಿಗೆ ಸಹಾಯ ಮಾಡುವುದು ಮತ್ತು ಅವರಿಗೆ ಉತ್ತಮ ಮೌಲ್ಯವನ್ನು ದೊರಕಿಸಿ ಕೊಡುವುದಾಗಿತ್ತು.
ಜೆಫ್ ಬೆಜೋಸ್ ವೈಫಲ್ಯಗಳು ಯಾವುವು?
ಜೆಫ್ ಪ್ರಯೋಗಿಸಿದ ಮತ್ತು ಪ್ರಾರಂಭಿಸಿದ ಅನೇಕ ಉದ್ಯಮಗಳು ತುಂಬ ಕೆಟ್ಟದಾಗಿ ವಿಫಲವಾಗಿವೆ. ಆದರೆ ಅದು ಬೆಳವಣಿಗೆಯ ಹಂತದಲ್ಲಿ ತುಂಬ ಸಹಜವಾಗಿ ನಡೆಯುವಂಥದ್ದು. ನೀವು ಒಂದು ವೇಳೆ ವೈಫಲ್ಯವೇ ಕಾಣದಿದ್ದರೆ ಮತ್ತು ತಪ್ಪುಗಳನ್ನು ಮಾಡದಿದ್ದರೆ ಯಾವುದೇ ಪ್ರಮುಖ ಕಾರ್ಯವನ್ನು ಮಾಡುತ್ತಿಲ್ಲ ಅಂತಲೇ ಅರ್ಥ.
ಬೆಜೋಸ್‌ನ ಪ್ರಯೋಗದ ಒಂದು ಉದಾಹರಣೆ ಫೈರ್ ಫೋನ್. ಈ ಯೋಜನೆಯಿಂದ 170 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟವಾಯಿತು. ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಫೈರ್ ಫೋನ್ನಿಂದ ಆಂಡ್ರಾಯ್ಡ್ ಮತ್ತು ಐಫೋನ್‌ಗೆ ಸ್ಪರ್ಧೆ ನೀಡಲು ಸಾಧ್ಯವಾಗಲಿಲ್ಲ. ಇನ್ನು ಇತರ ಪ್ರಮುಖ ವೈಫಲ್ಯವೆಂದರೆ ಅಮೆಜಾನ್ ಲೋಕಲ್. ಇದು ದೈನಂದಿನ ಡೀಲ್ ಒದಗಿಸುವ ಒಂದು ಯೋಚನೆ ಆಗಿತ್ತು. ಆದರೆ ಅದು ಸರಿಯಾಗಿ ಬರಲಿಲ್ಲ. ಅಮೆಜಾನ್ ವ್ಯಾಲೆಟ್, ಅಮೆಜಾನ್ ಲೋಕಲ್ ರಿಜಿಸ್ಟರ್, ಮ್ಯೂಸಿಕ್ ಇಂಪೋರ್ಟರ್, ಟೆಸ್ಟ್ ಡ್ರೈವ್, ಅಮೆಜಾನ್ ವೆಬ್‌ಪೇ, ಎಂಡ್ಲೆಸ್.ಕಾಮ್, ಆಸ್ಕ್ವಿಲ್ಲೆ ಮತ್ತು ಇನ್ನೂ ಹಲವು ಬೆಜೋಸ್ ಕಮಡ ವೈಫಲ್ಯಗಳ ಪಟ್ಟಿಯಲ್ಲಿವೆ. ಅಮೆಜಾನ್ ಕಿಂಡಲ್, ಅಮೆಜಾನ್ ಪ್ರೈಮ್, AWS ಮತ್ತು ಇಂಥ ಪ್ರಯೋಗಗಳು ಎಷ್ಟು ಯಶಸ್ವಿಯಾಗಿವೆ ಅಂದರೆ, ವೈಫಲ್ಯಗಳಿಗೆ ಅವುಗಳು ಪಾವತಿಸುತ್ತವೆ ಎಂದು ಬೆಜೋಸ್ ಹೇಳುತ್ತಾರೆ.
13 ಲಕ್ಷ ಮಂದಿಗೆ ಉದ್ಯೋಗ
ಜೆಫ್ ಅವರ ನಾಯಕತ್ವದಲ್ಲಿ 13 ಲಕ್ಷಕ್ಕೂ ಹೆಚ್ಚು ಪ್ರತಿಭಾವಂತ ವ್ಯಕ್ತಿಗಳನ್ನು ಅಮೆಜಾನ್ ನೇಮಿಸಿಕೊಂಡಿದೆ ಮತ್ತು ಆವಿಷ್ಕಾರವನ್ನು ಅದರ ಪ್ರಮುಖ ಕೇಂದ್ರವಾಗಿರಿಸಿಕೊಂಡಿದೆ. ಇತರ ಯೋಜನೆಗಳ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು ಅನ್ನೋ ಕಾರಣಕ್ಕೆ ಶೀಘ್ರದಲ್ಲೇ ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯುವುದಾಗಿ 2021ರ ಫೆಬ್ರವರಿಯಲ್ಲಿ ಬೆಜೋಸ್ ಘೋಷಿಸಿದರು. ನಿಮ್ಮ ಮನಸ್ಸಿನ ಒಳಗಿರುವ ಆಲೋಚನೆ ಅದೇ ಹಂತದಲ್ಲೇ ಉಳಿದುಹೋದರೆ ಅದು ಆಲೋಚನೆ ಅಷ್ಟೇ. ಅದು ವಿಫಲವೂ ಆಗಬಹುದು, ಯಶಸ್ವಿಯೂ ಆಗಬಹುದು. ಆದರೆ ನೆನಪಿಡಿ, ಒಂದು ವೇಳೆ ಅದು ಯಶಸ್ವಿಯೇ ಆಗಿಹೋದರೆ ನೀವು ಮತ್ತ್ಯಾವುದೋ ಎತ್ತರದಲ್ಲಿ ಇರುತ್ತೀರಿ ಎಂಬುದು ಜೆಫ್ ಬೆಜೋಸ್ ನಡೆದು ಬಂದ ಹಾದಿಯಿಂದ ಗೊತ್ತಾಗುತ್ತದೆ.
ಅಮೆಜಾನ್ ಹಾಗೂ ಜೆಫ್ ಬೆಜೋಸ್ ಜತೆಗೆ ಸಾಗಿಬಂದ ಹಾದಿ
– ಜುಲೈ 5, 1994 ಅಮೆಜಾನ್ ಆರಂಭ
– 1997 ಮೇ 15ರಂದು ಷೇರು ಬೆಲೆ 1.96* ಅಮೆರಿಕನ್ ಡಾಲರ್ಗೆ ಸಾರ್ವಜನಿಕ ವಿತರಣೆಗೆ
– ನವೆಂಬರ್ 18, 1997 ಎರಡನೇ ವಿತರಣೆ ಕೇಂದ್ರ ಸ್ಥಾಪನೆ
– ಜೂನ್ 11, 1998 ಸಂಗೀತ ಕ್ಷೇತ್ರಕ್ಕೂ ವ್ಯಾಪಿಸಿದ ಅಮೆಜಾನ್
– 28-9-1999 ಅಮೆಜಾನ್ಗೆ 1- ಕ್ಲಿಕ್ ಪೇಟೆಂಟ್
– 30-9-1999 ಥರ್ಡ್ ಪಾರ್ಟಿ ಸೆಲ್ಲರ್ ಮಾರ್ಕೆಟ್ ಪ್ಲೇಸ್ ಆರಂಭ
– 27-12-1999 ಟೈಮ್ ವರ್ಷದ ವ್ಯಕ್ತಿ ಎಂದು ಜೆಪ್ ಬೆಜೋಸ್ ಆಯ್ಕೆ
– ನವೆಂಬರ್ 7- 2002ರಲ್ಲಿ ಬಟ್ಟೆಗಳ ಮಾರಾಟ ಆರಂಭ
– 2003- ಜೂನ್ 10- ವೆಬ್ ಹೋಸ್ಟಿಂಗ್ ಉದ್ಯಮ ಆರಂಭ
– 2004- ಆಗಸ್ಟ್ 19- ಚೀನಾಗೆ ಪ್ರವೇಶ
– 2005- ಫೆಬ್ರವರಿ 2- ಅಮೆಜಾನ್ ಪ್ರೈಮ್ ಶುರು
– 2007- ನವೆಂಬರ್ 19- ಕಿಮಡಲ್ ಮಾರಾಟ ಆರಂಭ
– ಡಿಸೆಂಬರ್ 21ನೇ ತಾರೀಕು ಸೀಟಲ್ನಲ್ಲಿ ಹೊಸ ಮುಖ್ಯ ಕಚೇರಿ ಘೋಷಣೆ
– 2008 ಜನವರಿ 31 ಆಡಿಬಲ್ ಆಡಿಯೋ ಬುಕ್ಸ್ ಕಂಪೆನಿ ಖರೀದಿ
– 2009 ಜುಲೈ 22 ಶೂ ಶಾಪಿಂಗ್ ಸೈಟ್ ಝಾಪ್ಪೋಸ್ ಖರೀದಿ
– 2012 ಮಾರ್ಚ್ 19 ರೊಬೋಟಿಕ್ಸ್ ಕಂಪೆನಿ ಕಿವಾ ಸಿಸ್ಟಮ್ ಖರೀದಿ
– 2013 ಆಗಸ್ಟ್ 5 ವಾಷಿಂಗ್ಟನ್ ಪೋಸ್ಟ್ ಪತ್ರಿಕೆ ಖರೀದಿ ಉದ್ದೇಶದ ಘೋಷಣೆ ಮಾಡಿದ ಜೆಫ್
– ನವೆಂಬರ್ 11 ಭಾನುವಾರಗಳಂದು ಪ್ಯಾಕೇಜ್ ಡೆಲಿವರಿ ಆರಂಭ
– 2014 ಜೂನ್ 18 ಅಮೆಜಾನ್‌ನ ಮೊದಲ (ಕೊನೆಯ) ಸ್ಮಾರ್ಟ್ ಫೋನ್ ಅನಾವರಣ
– ಆಗಸ್ಟ್ 25ರಂದು ಸೋಷಿಯಲ್ ಮೀಡಿಯಾ ವಿಡಿಯೋ ಗೇಮ್ ಸ್ಟ್ರೀಮಿಂಗ್ ಸೈಟ್ ಟ್ವಿಚ್ ಖರೀದಿ
– 2015 ನವೆಂಬರ್ 2 ಮೊದಲ ಭೌತಿಕ ಬುಕ್ ಸ್ಟೋರ್ ಆರಂಭ
– ನವೆಂಬರ್ 10 ರಂದು Echo ವ್ಯಾಪಕವಾಗಿ ಸಿಗಲು ಆರಂಭವಾಯಿತು.
– 2017 ಜೂನ್ 16 ಹೋಲ್ ಫುಡ್ಸ್ ಖರೀದಿ
– ಸೆಪ್ಟೆಂಬರ್ 7 ಎರಡನೇ ಮುಖ್ಯ ಕಚೇರಿ ಹುಡುಕಾಟದ ಬಗ್ಗೆ ಘೋಷಣೆ
– 2018 ಸೆಪ್ಟೆಂಬರ್ 4 ಅಮೆಜಾನ್ ಕಂಪೆನಿ ಷೇರು ಮಾರುಕಟ್ಟೆ ಮೌಲ್ಯ 1 ಲಕ್ಷ ಕೋಟಿ ಅಮೆರಿಕನ್ ಡಾಲರ್
– ನವೆಂಬರ್ 13ಕ್ಕೆ ನ್ಯೂಯಾರ್ಕ್ ಮತ್ತು ವರ್ಜಿನಿಯಾವನ್ನು ಎರಡನೇ ಮುಖ್ಯ ಕಚೇರಿ ಎಂದು ಘೋಷಣೆ
– 2019 ಫೆಬ್ರವರಿ 14 ನ್ಯೂಯಾರ್ಕ್ ಘೋಷಣೆ ಕೈಬಿಡಲಾಯಿತು.
– ಜುಲೈ 5ಕ್ಕೆ ಅಮೆಜಾನ್ ಉದ್ಯಮ ಆರಂಭಿಸಿ 25 ವರ್ಷ ಪೂರ್ಣ
– 2020 ಅಕ್ಟೋಬರ್ 29 ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆಜಾನ್ ಮಾರಾಟ ಮತ್ತು ಲಾಭ ಎರಡರಲ್ಲೂ ಭಾರೀ ಏರಿಕೆ
– 2021 ಫೆಬ್ರವರಿ 2ರಂದು ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿಯುವ ಘೋಷಣೆ ಮಾಡಿದ ಜೆಫ್ ಬೆಜೋಸ್
ಇದನ್ನೂ ಓದಿ: Jeff Bezos: ಅಮೆಜಾನ್ ಸಿಇಒ ಹುದ್ದೆಯಿಂದ ಕೆಳಗಿಳಿದ ಜಗತ್ತಿನ ನಂಬರ್ ಒನ್ ಶ್ರೀಮಂತ ಜೆಫ್ ಬೆಜೋಸ್; ಪಿಕ್ಚರ್ ಅಭೀ ಬಾಕಿ ಹೈ
(July 5th 2021 is the last day of Jeff Bezos in Amazon.com as CEO. Here is the successful journey of Jeff Bezos and Amazon from small garage in Seattle to world’s one of the most valued company)
Published On - 2:46 pm, Mon, 5 July 21