ಬೆಂಗಳೂರು, ಸೆಪ್ಟೆಂಬರ್ 8: ಸಿಲಿಕಾನ್ ಸಿಟಿಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಬಹಳ ದಿನಗಳಿಂದ ಕಾಡುತ್ತಿದ್ದ ಆತಂಕ ಈಗ ನಿಜವಾಗುವಂತಿದೆ. ಮುಂಬರುವ ಅಕ್ಟೋಬರ್ 1ರಿಂದ ರಾಜ್ಯದಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ (Guidance Value) ಅಥವಾ ಗೈಡೆನ್ಸ್ ವ್ಯಾಲ್ಯೂ ಗಣನೀಯವಾಗಿ ಹೆಚ್ಚಾಗಲಿದೆ. ಗೈಡನ್ಸ್ ವ್ಯಾಲ್ಯೂ ಶೇ. 30ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದು ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಮತ್ತು ಮನೆ ಖರೀದಿಸುವ ಆಸೆಯಲ್ಲಿರುವವರನ್ನು ಚಿಂತೆಗೀಡು ಮಾಡಲಿದೆ. ಹೊಸ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಸರ್ಕಾರ ಶೀಘ್ರದಲ್ಲೇ ಸಾರ್ವತ್ರಿಕಗೊಳಿಸಲಿದ್ದು, ಜನಾಭಿಪ್ರಾಯ ಸಂಗ್ರಹಣೆ ಬಳಿಕ ದರಗಳನ್ನು ಅಂತಿಮಗೊಳಿಸಿ ಅಕ್ಟೋಬರ್ 1ರಿಂದ ಜಾರಿಗೊಳಿಸುವ ಸಾಧ್ಯತೆ ಇದೆ.
ಮಾಧ್ಯಮಗಳಿಗೆ ಬಂದಿರುವ ಮಾಹಿತಿ ಪ್ರಕಾರ ಗೈಡೆನ್ಸ್ ಮೌಲ್ಯ ಶೇ. 30ರಷ್ಟು ಹೆಚ್ಚಾಗಲಿದೆ. ಹಿಂದೆ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರ ಇದ್ದಾಗಲೂ ಗೈಡೆನ್ಸ್ ವ್ಯಾಲ್ಯೂ ಹೆಚ್ಚಳ ಮಾಡುವ ಪ್ರಸ್ತಾಪ ಇತ್ತು. ಆದರೆ ಶೇ. 14ರಷ್ಟು ಮಾತ್ರ ಮಾರ್ಗಸೂಚಿ ದರ ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು. ಈ ಸರ್ಕಾರ ಶೇ. 30ರಷ್ಟು ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸುತ್ತಿದೆ. 2013ರಲ್ಲಿಯೂ ಶೇ. 30ರಷ್ಟು ಗೈಡೆನ್ಸ್ ವ್ಯಾಲ್ಯೂ ಹೆಚ್ಚಳವಾಗಿತ್ತು. ಅದಾದ ಬಳಿಕ ಇಷ್ಟೊಂದು ಮಟ್ಟದಲ್ಲಿ ಮಾರ್ಗಸೂಚಿ ದರ ಏರಿಕೆಯಾಗಲಿರುವುದು ಇದೇ ಮೊದಲು.
ಇದು ಯಾವುದೇ ಪ್ರದೇಶದ ಸ್ಥಿರಾಸ್ತಿಗಳಿಗೆ ಸರ್ಕಾರ ನಿಗದಿ ಮಾಡುವ ಕನಿಷ್ಠ ಮೌಲ್ಯವಾಗಿದೆ. ಈ ಮೌಲ್ಯಕ್ಕಿಂತ ಕಡಿಮೆ ಮೊತ್ತಕ್ಕೆ ಒಂದು ಆಸ್ತಿಯ ಮಾರಾಟ ಆಗುವಂತಿಲ್ಲ. ಆಸ್ತಿ ಮಾರಾಟದ ವೇಳೆ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಹಲವರು ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಆಸ್ತಿಮೌಲ್ಯ ತೋರಿಸಿ ಮಾರಾಟ ಮಾಡುತ್ತಿದ್ದರು. ಈ ಕಳ್ಳತನ ತಡೆಯಲು ಸರ್ಕಾರ ಒಂದು ಆಸ್ತಿಗೆ ಕನಿಷ್ಠ ಮೌಲ್ಯ ನಿಗದಿ ಮಾಡುತ್ತದೆ.
ಒಂದು ಪ್ರದೇಶದಲ್ಲಿ ನಿಗದಿಯಾಗಿರುವ ಮಾರ್ಗಸೂಚಿ ದರಕ್ಕಿಂತ ಕಡಿಮೆ ಬೆಲೆಗೆ ಯಾವ ಆಸ್ತಿಯನ್ನೂ ಮಾರಾಟ ಮಾಡಲು ಆಗುವುದಿಲ್ಲ.
ಇದನ್ನೂ ಓದಿ: ಐವತ್ತು ವರ್ಷದಲ್ಲಿ ಆಗುವಂಥದ್ದನ್ನು ಆರೇ ವರ್ಷದಲ್ಲಿ ಸಾಧಿಸಿದೆ ಭಾರತ: ವಿಶ್ವಬ್ಯಾಂಕ್ ಪ್ರಶಂಸೆ
ಸರ್ಕಾರ ಬಹಳ ಅಸ್ಥೆಯಿಂದ ನಿರ್ವಹಿಸುತ್ತಿರುವ ತನ್ನ ಐದು ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಎಲ್ಲಾ ಮಾರ್ಗೋಪಾಯಗಳನ್ನು ಅವಲೋಕಿಸುತ್ತಿದೆ. ಈ ನಿಟ್ಟಿನಲ್ಲಿ ಸ್ಥಿರಾಸ್ತಿ ಮಾರ್ಗಸೂಚಿ ದರ ಏರಿಕೆ ಕ್ರಮ ಒಂದು. ಸಿಎಂ ಸಿದ್ದರಾಮಯ್ಯ ಜುಲೈ ತಿಂಗಳಲ್ಲಿ ಮಂಡಿಸಿದ ಬಜೆಟ್ ವೇಳೆ ಗೈಡೆನ್ಸ್ ವ್ಯಾಲ್ಯೂ ಹೆಚ್ಚಿಸುವ ಬಗ್ಗೆ ಮಾತನಾಡಿದ್ದರು.
ಸ್ಥಿರಾಸ್ತಿ ಮಾರ್ಗಸೂಚಿ ದರ ಹೆಚ್ಚಾದಾಗ ಆಸ್ತಿ ನೊಂದಣಿ ವೆಚ್ಚವೂ ಹೆಚ್ಚಾಗುತ್ತದೆ. ಇದರಿಂದ ಮನೆ ಅಥವಾ ನಿವೇಶನ ಖರೀದಿಸಬಯಸುವವರು ಹೆಚ್ಚು ವ್ಯಯಿಸಬೇಕಾಗುತ್ತದೆ. ರಾಜ್ಯಾದ್ಯಂತ ನಡೆಯುವ ಆಸ್ತಿ ವಹಿವಾಟಿನಲ್ಲಿ ಶೇ. 60ಕ್ಕಿಂತ ಹೆಚ್ಚಿನವರು ಬೆಂಗಳೂರಿನಲ್ಲೇ ಆಗುವುದು ಹೌದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ