ಸೆಮಿಕಂಡಕ್ಟರ್ ಎಂದರೇನು, ಆ ಉದ್ಯಮ ಸ್ಥಾಪನೆಯಿಂದ ಭಾರತಕ್ಕೇನು ಲಾಭ? ಕೇಂದ್ರ ಸಚಿವ ವೈಷ್ಣವ್ ಅನಿಸಿಕೆ ಇದು
Ashwini Vaishnaw Explains Semiconductors: ಸೆಮಿಕಂಡಕ್ಟರ್ ಅಂದರೇನು? ಈ ಉದ್ಯಮದ ಮಹತ್ವ ಏನು? ಚೀನಾದ ಪ್ರಾಬಲ್ಯವನ್ನು ಭಾರತ ಮುರಿಯಲು ಸಾಧ್ಯವೇ? ಈ ವಿಚಾರಗಳ ಬಗ್ಗೆ ಬ್ರುಟ್ ಇಂಡಿಯಾ (Brut India) ಎಂಬ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಚಿವ ಎ ವೈಷ್ಣವ್ ಮಾಹಿತಿ ನೀಡಿದ್ದಾರೆ. ಆಲೂಗಡ್ಡೆ ಚಿಪ್ ತಯಾರಿಸುವ ವಿಧಾನದ ಮೂಲಕ ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಬಗ್ಗೆ ಅವರು ಸರಳವಾಗಿ ವಿವರಣೆ ಕೊಟ್ಟಿದ್ದಾರೆ. ಅದರ ವಿಡಿಯೋ ಲಿಂಕ್ ಕೂಡ ಈ ಸುದ್ದಿಯ ಕೊನೆಯಲ್ಲಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ವಿಷಯ ಪರಿಣಿತಿ ಹೊಂದಿರುವ ಅಪರೂಪದ ಸಚಿವ. ಪರಿಪಕ್ವ ತಾಂತ್ರಿಕ ಜ್ಞಾನ ಹೊಂದಿರುವ ಅವರು ಭಾರತದಲ್ಲಿ ಉದ್ಯಮ ಅಭಿವೃದ್ಧಿಗೆ ಪೂರಕವಾದ ಹೆಜ್ಜೆಗಳನ್ನು ಇಡುತ್ತಾರೆ. ಇವರ ಸುಪರ್ದಿಯಲ್ಲಿ ಭಾರತ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ (Semiconductor Industry) ದೃಢವಾದ ಹೆಜ್ಜೆಗಳನ್ನು ಇಡುತ್ತಿದೆ. ಹಲವಾರು ಜಾಗತಿಕ ಸೆಮಿಕಂಡಕ್ಟರ್ ಚಿಪ್ ಕಂಪನಿಗಳು ಭಾರತದಲ್ಲಿ ಉತ್ಪಾದನೆ ಆರಂಭಿಸಲು ಆಸಕ್ತಿ ತೋರಿವೆ. ವಿಶ್ವದ ಫ್ಯಾಕ್ಟರಿ ಎನಿಸಿರುವ ಚೀನಾ ತನ್ನಲ್ಲಿ ತಯಾರಿಕಾ ಕ್ಷೇತ್ರವನ್ನು ಬೆಳೆಸಲು ಮೂರು ದಶಕಗಳೇ ಆದವು. ಭಾರತದಲ್ಲಿ ಕ್ಷಿಪ್ರಗತಿಯಲ್ಲಿ ನಡೆಗಳಾಗುತ್ತಿದ್ದು, ಕೆಲವೇ ವರ್ಷಗಳಲ್ಲಿ ತಯಾರಿಕಾ ವಲಯ ಹುಲುಸಾಗಿ ಬೆಳೆಯುವ ನಿರೀಕ್ಷೆ ಇದೆ. ಈಗ ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಗೆ ಹೆಚ್ಚು ಗಮನ ಕೊಡಲಾಗುತ್ತಿದೆ.
ಸೆಮಿಕಂಡಕ್ಟರ್ ಅಂದರೇನು? ಈ ಉದ್ಯಮದ ಮಹತ್ವ ಏನು? ಚೀನಾದ ಪ್ರಾಬಲ್ಯವನ್ನು ಭಾರತ ಮುರಿಯಲು ಸಾಧ್ಯವೇ? ಈ ವಿಚಾರಗಳ ಬಗ್ಗೆ ಬ್ರುಟ್ ಇಂಡಿಯಾ (Brut India) ಎಂಬ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಚಿವ ಎ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಸೆಮಿಕಂಡಕ್ಟರ್ ಚಿಪ್ ಎಂದರೇನು?
‘ನೀವು ಒಂದು ಆಲೂಗಡ್ಡೆಯನ್ನು ಎಳೆ ಎಳೆಯಾಗಿ ಕತ್ತರಿಸಿ ಅದನ್ನು ಚಿಪ್ಸ್ ಮಾಡಲು ಬಳಸುತ್ತೀರಿ. ಅದೇ ರೀತಿ ಸಿಲಿಕಾನ್ ಗಟ್ಟಿಯನ್ನು ತೆಗೆದು ವಿವಿಧ ಗಾತ್ರದ ಎಳೆಗಳಾಗಿ ಕತ್ತರಿಸಲಾಗುತ್ತದೆ. ಒಂದು ಪುಟ್ಟ ಚಿಪ್ನಲ್ಲಿ ಸುಮಾರು 70ರಿಂದ 80 ಕಿಲೋಮೀಟರ್ಗಳಷ್ಟು ವೈರಿಂಗ್ ಮಾಡಿದಷ್ಟು ಇರುತ್ತದೆ. ಉದಾಹರಣೆಗೆ, 10 ಅಂತಸ್ತಿನ ಮಹಡಿ ಇರುವ ಕಟ್ಟಡ ಪರಿಗಣಿಸಿ. ಅದರಲ್ಲಿ ಸ್ಟೇರ್ಕೇಸ್, ಲಿಫ್ಟ್, ಎಲೆಕ್ಟ್ರಿಕ್ ವೈರಿಂಗ್, ಪ್ಲಂಬಿಂಗ್ ಇತ್ಯಾದಿ ವ್ಯವಸ್ಥೆ ಇರುತ್ತದೆ. ಅದೇ ರೀತಿಯಲ್ಲಿ ಚಿಪ್ನಲ್ಲೂ ವಿವಿಧ ಕಾರ್ಯಗಳಿಗೆ ಅನುವಾಗುವ ರಚನಾ ವ್ಯವಸ್ಥೆ ಇರುತ್ತದೆ.
‘ಚಿನ್ನದ ಆಭರಣಕ್ಕೆ ಬಹಳ ಸೂಕ್ಷ್ಮವಾದ ಕಸೂತಿ ಕಲೆ ಅವಶ್ಯಕತೆ ಇರುವ ರೀತಿಯಲ್ಲಿ ಸಿಲಿಕಾನ್ ವೇಫರ್ನಲ್ಲಿ ಚಿಪ್ನಲ್ಲೂ ಸೂಕ್ಷ್ಮವಾಗಿ ರಚನೆಗಳಿರುತ್ತವೆ. ವೇಫರ್ ಮೇಲಿನ ಚಿಪ್ ಅನ್ನು ಬಹಳ ಸಂಕೀರ್ಣ ವಿಧಾನಗಳ ಮೂಲಕ ಹೊರತೆಗೆಯಲಾಗುತ್ತದೆ’ ಎಂದು ಅಶ್ವಿನಿ ವೈಷ್ಣವ್ ವಿವರಿಸಿದ್ದಾರೆ.
ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು
ಭಾರತದಲ್ಲಿ ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆಯಾದರೆ ಲಾಭವೇನು?
‘ಭಾರತದಲ್ಲಿ ಈಗ ಬಳಸುವ ಸೆಮಿಕಂಡಕ್ಟರ್ ಚಿಪ್ ಎಲ್ಲವೂ ಆಮದು ಮಾಡಿಕೊಳ್ಳಲಾಗಿರುವಂಥವು. ಇವುಗಳನ್ನು ಭಾರತದಲ್ಲೇ ತಯಾರಿಸಿದರೆ ಬೆಲೆ ಕಡಿಮೆ ಆಗುತ್ತದೆ. ಯುವಕರಿಗೆ ಕೆಲಸದ ಅವಕಾಶ ಹೆಚ್ಚುತ್ತದೆ.
ಸೆಮಿಕಂಡಕ್ಟರ್ ಉದ್ಯಮವೊಂದು ಸ್ಥಾಪನೆಯಾದರೆ ಅದಕ್ಕೆ ಪೂರಕವಾದ ಎಲೆಕ್ಟ್ರಾನಿಕ್ಸ್, ಟೆಲಿಕಾಂ ಉಪಕರಣ ಇತ್ಯಾದಿ ಉದ್ಯಮಗಳ ಬೆಳವಣಿಗೆಯೂ ಆಗುತ್ತದೆ. ಹೆಚ್ಚೆಚ್ಚು ಉದ್ಯೋಗಸೃಷ್ಟಿಯಾಗುತ್ತದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು ಹೇಳಿದ್ದಾರೆ.
ಸೆಮಿಕಂಡಕ್ಟರ್ ಉದ್ಯಮದಲ್ಲಿ ಚೀನಾಗೆ ಭಾರತ ಪರ್ಯಾಯವಾಗಬಲ್ಲುದಾ?
‘ಜಾಗತಿಕವಾಗಿ ಇದು 650 ಬಿಲಿಯನ್ ಡಾಲರ್ ಮೌಲ್ಯದ ಉದ್ಯಮ. ಇನ್ನು ಆರೇಳು ವರ್ಷದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಮೌಲ್ಯ ದ್ವಿಗುಣಗೊಂಡು, 1 ಟ್ರಿಲಿಯನ್ ಡಾಲರ್ ಗಡಿ ದಾಟುತ್ತದೆ. ಆ ಪರಿಯಲ್ಲಿ ಇದು ಬೆಳೆಯಲಿದೆ. ಹೀಗಾಗಿ, ಈ ಉದ್ಯಮದಲ್ಲಿ ಹಿಡಿತ ಸಾಧಿಸಲು ಭಾರತಕ್ಕೆ ಇದು ಸುಸಂದರ್ಭ ಎನಿಸಿದೆ.
ಇದನ್ನೂ ಓದಿ: Foxconn: ಕರ್ನಾಟಕದಲ್ಲಿ ಫಾಕ್ಸ್ಕಾನ್ನಿಂದ ಐಫೋನ್ ಕೇಸಿಂಗ್ ಮತ್ತು ಚಿಪ್ ಟೂಲ್ ತಯಾರಿಕಾ ಘಟಕಗಳು
‘ಇವತ್ತು ಭಾರತದ ಬಗ್ಗೆ ವಿಶ್ವಕ್ಕೆ ನಂಬಿಕೆ ಇದೆ. ನಮ್ಮ ವಿದೇಶಾಂಗ ನೀತಿ ವಿಶ್ವಾಸಾರ್ಹ ಎನಿಸಿದೆ. ನಮ್ಮ ನಡತೆ ಬಗ್ಗೆ ವಿಶ್ವಕ್ಕೆ ಗೌರವ ಇದೆ. ನಮ್ಮದು ಬಹಳ ದೊಡ್ಡ ಪ್ರಜಾತಂತ್ರ ದೇಶ. ಬಹಳ ಮುಕ್ತವಾದ ಮತ್ತು ಪಾರದರ್ಶಕವಾದ ನೀತಿ ಹೊಂದಿದ್ದೇವೆ. ಹೀಗಾಗಿ, ವಿಶ್ವವು ಭಾರತಕ್ಕೆ ಬಂದು ಇಲ್ಲಿ ಉತ್ಪಾದನೆ ಮಾಡಲು ಆಸ್ತಿ ತೋರಿದೆ. ಮುಂಬರುವ ಐದು ವರ್ಷದಲ್ಲಿ ಭಾರತ ವಿಶ್ವದ ಅತಿದೊಡ್ಡ ಸೆಮಿಕಂಡಕ್ಟರ್ ತಯಾರಕ ದೇಶವಾಗಲಿದೆ. ವಿಶ್ವದ ಹೆಚ್ಚಿನ ಭಾಗಕ್ಕೆ ಭಾರತ ನಂಬುಗೆಯ ಜೊತೆಗಾರ ಎನಿಸಲಿದೆ’ ಎಂದು ಎ ವೈಷ್ಣವ್ ಅಭಿಪ್ರಾಯಪಟ್ಟಿದ್ದಾರೆ.
ಬ್ರುಟ್ ಇಂಡಿಯಾಗೆ ಎ ಅಶ್ವಿನ್ ಸಂದರ್ಶನ ನೀಡಿದ ವಿಡಿಯೋದ ಲಿಂಕ್ ಇಲ್ಲಿದೆ. ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ