ನಷ್ಟದಲ್ಲಿದ್ದ ದಾವಣಗೆರೆ ರೈತರ ಕೈ ಹಿಡಿದ ಡ್ರ್ಯಾಗನ್ ಫ್ರೂಟ್: ಅನ್ನದಾತ ಸುಖೀಭವ
ಮೆಕ್ಕೆಜೋಳ ಬೆಳೆದು ಬೇಸತ್ತಿದ್ದ ಸಾವಿರಾರು ರೈತರಿಗೆ ಯುವ ರೈತ ಆಶಾಕಿರಣ ಆಗಿದ್ದಾರೆ. ಕಡಿಮೆ ಖರ್ಚಿನಲ್ಲೇ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯುವು ಹೇಗೆ ಎಂಬುವುದನ್ನು ಯುವ ರೈತ ತೋರಿಸಿಕೊಟ್ಟಿದ್ದಾರೆ. ಯುವ ರೈತನ ಕಾರ್ಯಕ್ಕೆ ಇತರ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಯುವ ರೈತ ಒಂದು ವರ್ಷಕ್ಕೆ ಪ್ರತಿ ಎಕರೆಯಲ್ಲಿ 2-6 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ. ಇಲ್ಲಿದೆ ವರದಿ.
ದಾವಣಗೆರೆ ತಾಲೂಕಿನ ಮಾಯಕೊಂಡ ಗ್ರಾಮದ ರೈತ ಹನುಮಂತಪ್ಪ ಮರಡಿ ಅವರ ಪುತ್ರ ಸಾಪ್ಟವೇರ್ ಇಂಜಿನೀಯರ್ ನವೀನ್ ಮರಡಿ ತಮ್ಮ ಒಂದು ಎಕರೆ ಜಮೀನಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಪ್ರತಿವರ್ಷ 6 ರಿಂದ 7 ಟನ್ ಫಸಲು ಒಂದು ಎಕರೆಯಲ್ಲಿ ಬರುತ್ತದೆ. ಸಾಕಷ್ಟು ನೀರು, ರಸಗೊಬ್ಬರ, ಕೀಟನಾಶಕಗಳನ್ನು ಬಳಕೆ ಮಾಡುವುದರಿಂದ ಉತ್ತಮ ಇಳುವರಿ ಬರುತ್ತಿದೆ.
1 / 6
ದಾವಣಗೆರೆ ಜಿಲ್ಲೆಯಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯುವ ರೈತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಸ್ತುತ 45 ಹೆಕ್ಟರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಗುಲಾಬಿ ಸುಂದರಿ ಡ್ರ್ಯಾಗನ್ ಫ್ರೂಟ್ ಅನ್ನು ಹೇರಳವಾಗಿ ಬೆಳೆಯಲಾಗುತ್ತಿದೆ. ಮೆಕ್ಕೆಜೋಳ ದರ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಡ್ರ್ಯಾಗನ್ ಫ್ರೂಟ್ ಕೈ ಹಿಡಿದಿದೆ.
2 / 6
ನವೀನ್ ಮರಡಿ ಅವರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಒಟ್ಟು 6 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ಡ್ರ್ಯಾಗನ್ ಫ್ರೂಟ್ ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 50 ರಿಂದ 60 ರೂಪಾಯಿಗೆ ಮಾರಾಟವಾಗುತ್ತದೆ. ಚೆನೈ ಮಾರುಕಟ್ಟೆಯಲ್ಲಿ 80 ರಿಂದ 100, ಬೆಂಗಳೂರಿನಲ್ಲಿ 100 ಹಾಗೂ ಮುಂಬೈನಲ್ಲಿ ಕೆಜಿಗೆ 130 ರಿಂದ 150 ರೂಪಾಯಿಗೆ ಮಾರಾಟವಾಗುತ್ತಿದೆ.
3 / 6
ಇದೇ ಕಾರಣಕ್ಕೆ ದಾವಣಗೆರೆ ಜಿಲ್ಲೆಯ ರೈತರು ಡ್ರ್ಯಾಗನ್ ಫ್ರೂಟ್ ಬೆಳೆಯಲು ಆರಂಭಿಸಿದ್ದಾರೆ. ರೈತರು ಡ್ರ್ಯಾಗನ್ ಫ್ರೂಟ್ ಹಣ್ಣನ್ನು ಬೆಂಗಳೂರು, ಮುಂಬೈ, ಮಾರುಕಟ್ಟೆಗೆ ಕಳುಹಿಸುತ್ತಾರೆ. ಕೆಲವೊಮ್ಮೆ ದಾವಣಗೆರೆ ಮಾರುಕಟ್ಟೆಯಲ್ಲೇ ಪ್ರತಿ ಕೆಜಿಗೆ 50-70 ರೂಪಾಯಿಗೆ ಮಾರಾಟ ಮಾಡುತ್ತಾರೆ. ದೂರದ ಮಾರುಕಟ್ಟೆಗಳಿಗೆ ಕಳಿಸುವುದಕ್ಕಿಂತ ಇಲ್ಲೇ ಮಾರಾಟ ಮಾಡುವುದೇ ಉತ್ತಮ. ಬೇರೆ ಕಡೆ ಮಾರಾಟ ಮಾಡಿದರೆ ಲಾಭವಿದೆ. ಆದರೆ, ಸಾಗಾಣಿಕಾ ವೆಚ್ಚ ಸ್ವಲ್ಪ ಜಾಸ್ತಿ ಆಗುತ್ತದೆ ಎಂದು ರೈತರು ಹೇಳಿದ್ದಾರೆ.
4 / 6
ಜಿಲ್ಲೆಯಲ್ಲಿ ಸುಮಾರು 14 ವರ್ಷಗಳಿಂದ ರೈತರು ಈ ಹಣ್ಣನ್ನು ಬೆಳೆಯುತ್ತಿದ್ದಾರೆ. ಖರ್ಚು ವೆಚ್ಚ ತೆಗೆದು ಅತ್ಯಧಿಕ ಲಾಭ ಕಂಡುಕೊಂಡಿದ್ದಾರೆ ಮತ್ತು ಕೃಷಿ ಲಾಭದಾಯಕ ಎಂದು ತೋರಿಸಿಕೊಟ್ಟ ಉದಾಹರಣೆಗಳಿವೆ. ಮಾಯಕೊಂಡ ಹೋಬಳಿಯ ರೈತರು ಮೆಕ್ಕೆಜೋಳ ಬಿಟ್ಟರೆ ಅಡಕೆ ಬೆಳೆಗೆ ಅಂಟಿ ಕೊಂಡಿದ್ದಾರೆ.
5 / 6
ಏಕಬೆಳೆ ಪದ್ಧತಿ ಕೈ ಬಿಟ್ಟು ವಿವಿಧ ಬಗೆಯ ಹಣ್ಣು ಮತ್ತು ತರಕಾರಿಗಳನ್ನು ಬೆಳೆದರೆ ಆರ್ಥಿಕವಾಗಿ ಸದೃಢವಾಗಬಹುದು ಎಂದು ನಂಬಿದ್ದಾರೆ. ಅಡಿಕೆ ರೀತಿಯಲ್ಲಿ ಒಮ್ಮೆ ನಾಟಿ ಮಾಡಿದರೇ 25 ವರ್ಷ ನಿರಂತರ ಫಲಸಿಗುವುದು ಇದರ ವಿಶೇಷವಾಗಿದೆ.