ಸಿನಿಮಾಗಳು ತೋಪಾದರೂ, ಅಪ್ಪನ ಹಣಬಲ ಇಲ್ಲದೆಯೂ ಶ್ರೀಮಂತನಾದ ಈ ಬಾಲಿವುಡ್ ನಟ; ಹೇಗೆ ಸಾಧ್ಯ?
Bollywood actor Vivek Oberoi's movies and businesses: ಒಂದು ಕಾಲದಲ್ಲಿ ಬಾಲಿವುಡ್ ಖಾನ್ದಾನ್ಗಳಿಗೆ ಸೆಡ್ಡು ಹೊಡೆಯುವ ಹುಡುಗ ಎಂದೇ ಎನಿಸಿದ್ದ ವಿವೇಕ್ ಓಬೇರಾಯ್ ಕೊನೆಗೆ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಕಂಡವರಲ್ಲ. ಆದರೆ, ಜೀವನ ರಂಗದಲ್ಲಿ ಭರ್ಜರಿ ಸಕ್ಸಸ್ ಕಂಡಿದ್ದಾರೆ. ಅಪ್ಪನಿಂದ ಹಣದ ಬಲ ಪಡೆಯಲಿಲ್ಲವಾದರೂ ಬ್ಯುಸಿನೆಸ್ ವಿದ್ಯೆ ಪ್ರಾಪ್ತಿಯಾಗಿದ್ದು ವಿವೇಕ್ಗೆ ಅದು ಕೈಹಿಡಿದಿದೆ.

ವಿವೇಕ್ ಓಬೇರಾಯ್ ಹೆಸರು ಕೇಳಿರಬಹುದು. ಎರಡು ದಶಕಗಳಿಂದ ಭಾರತೀಯ ಸಿನಿರಂಗದಲ್ಲಿ ಚಿರಪರಿಚಿತವಾಗಿರುವ ನಟ. ಮೊದಲ ಕೆಲ ಚಿತ್ರಗಳ ಮೂಲಕ ಒಮ್ಮೆಲೇ ಸ್ಟಾರ್ ಆದ ವಿವೇಕ್ ಒಬೇರಾಯ್ (Vivek Oberoi) ಅವರ ಸಿನಿಮಾ ವೃತ್ತಿಜೀವನ ಯಶಸ್ಸಿನ ಮಟ್ಟ ಏರುವಲ್ಲಿ ವಿಫಲವಾಗಿದೆ. ಸದ್ಯ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಕೆಲ ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪರದೆ ಮೇಲೆ ಅಸ್ತಿತ್ವ ಉಳಿಸಿಕೊಂಡು ಬಂದಿದ್ದಾರೆ. ಆದರೆ, ವಿವೇಕ್ ಓಬೇರಾಯ್ ಅವರು ಸಿನಿಮಾ ಫೀಲ್ಡ್ನಲ್ಲಿ ತೋಪಾದರೂ ಬ್ಯುಸಿನೆಸ್ ಫೀಲ್ಡ್ನಲ್ಲಿ ಸೈ ಎನಿಸಿದ್ದಾರೆ.
ವಿವೇಕ್ ಓಬೇರಾಯ್ ಅವರು ಒಂದಲ್ಲ, ಎರಡಲ್ಲ, ಹಲವು ಉದ್ದಿಮೆಗಳನ್ನು ನಿಭಾಯಿಸುತ್ತಾರೆ. ಹಲವು ಉದ್ಯಮಗಳಲ್ಲಿ ಬಂಡವಾಳ ಹಾಕಿದ್ದಾರೆ. ಅವರ ಉದ್ಯಮ ಸಾಮ್ರಾಜ್ಯ 1,200 ಕೋಟಿ ರೂ ಇದೆ. ಅಂದರೆ ಅವರ ಒಟ್ಟು ಸಂಪತ್ತಿನ ಮೌಲ್ಯ 1,200 ಕೋಟಿ ರೂ.
ದುಬೈನಲ್ಲಿ ಬಿಎನ್ಡಬ್ಲ್ಯು ಎನ್ನುವ ರಿಯಲ್ ಎಸ್ಟೇಟ್ ಡೆವಲಪ್ಮೆಂಟ್ ಕಂಪನಿ, ಕೃತಕ ವಜ್ರ ತಯಾರಿಸುವ ಸಾಲಿಟಾರಿಯೋ ಮೊದಲಾದ ಕಂಪನಿಗಳನ್ನು ಹೊಂದಿದ್ದಾರೆ. ಇಂಪ್ರೆಸ್ಸಾರಿಯೋ ಗ್ಲೋಬಲ್, ರುಟ್ಲ್ಯಾಂಡ್ ಸ್ಕ್ವಯರ್ ಸ್ಪಿರಿಟ್ಸ್, ರೆಡಿಅಸಿಸ್ಟ್ ಎನ್ನುವ ವಿವಿಧ ಉದ್ದಿಮೆಗಳಿಗೆ ಬಂಡವಾಳ ಒದಗಿಸಿದ್ದಾರೆ.
ಇದನ್ನೂ ಓದಿ: ಯಾವ್ಯಾವ ವಯಸ್ಸಲ್ಲಿ ನಿಮ್ಮ ಸೇವಿಂಗ್ಸ್ ಕನಿಷ್ಠ ಎಷ್ಟಿರಬೇಕು? ಇಲ್ಲಿದೆ ಕುತೂಹಲಕಾರಿ ಉತ್ತರ
ಐದನೇ ಕ್ಲಾಸ್ನಲ್ಲೇ ವಿವೇಕ್ ಓಬೇರಾಯ್ಗೆ ಅಪ್ಪನಿಂದ ಬ್ಯುಸಿನೆಸ್ ಪಾಠ
ವಿವೇಕ್ ಓಬೇರಾಯ್ ಅವರು ಬ್ಯುಸಿನೆಸ್ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಅಪ್ಪ ಕಾರಣವಂತೆ. ಅಪ್ಪನಿಂದ ಹಣಬಲ ಸಿಗಲಿಲ್ಲವಾದರೂ ಅಮೂಲ್ಯವಾದ ಹಣಕಾಸು ಮತ್ತು ಬ್ಯುಸಿನೆಸ್ ತಂತ್ರಗಳನ್ನು ಕಲಿತೆ ಎನ್ನುತ್ತಾರೆ ಬಾಲಿವುಡ್ ನಟ.
‘ಹತ್ತನೇ ವಯಸ್ಸಿನಲ್ಲಿ ನನಗೆ ಬ್ಯುಸಿನೆಸ್ನ ನಯನಾಜೂಕುಗಳು ಅರ್ಥವಾಗತೊಡಗಿದವು. ಅಪ್ಪ ಒಂದು ಉತ್ಪನ್ನವನ್ನು ನನಗೆ ಕೊಟ್ಟು, ಅದನ್ನು ಹೇಗೆ ಮಾರಾಟ ಮಾಡಬಹುದು ಎಂದು ಬ್ಯುಸಿನೆಸ್ ಪ್ಲಾನ್ ರೂಪಿಸುವಂತೆ ಹೇಳುತ್ತಿದ್ದರು. ನಾನು ಮನೆಮನೆಗೆ ಹೋಗಿ ಆ ಉತ್ಪನ್ನವನ್ನು ಮಾರುತ್ತಿದ್ದೆ’ ಎಂದು ಪೋಡ್ಕ್ಯಾಸ್ಟ್ವೊಂದರಲ್ಲಿ ವಿವೇಕ್ ಓಬೇರಾಯ್ ಹೇಳಿಕೊಂಡಿದ್ದಾರೆ.
ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಪರಿಚಯ ಮಾಡಿಸಿದ್ದ ಅಪ್ಪ…
ನಾನು ಶ್ರೀಮಂತ, ನೀನಲ್ಲ. ನೀನೂ ಶ್ರೀಮಂತನಾಗಬಹುದು. ಆದರೆ, ನಿನ್ನದೇ ಪರಿಶ್ರಮದಿಂದ ಆಗಬೇಕು ಎಂದು ಅಪ್ಪ ನನಗೆ ಹೇಳುತ್ತಿದ್ದರು ಎಂದು ತಿಳಿಸಿರುವ ಬಾಲಿವುಡ್ ನಟ ವಿವೇಕ್ ಒಬೇರಾಯ್, ಷೇರು ಟ್ರೇಡಿಂಗ್ ಮತ್ತು ರಿಯಲ್ ಎಸ್ಟೇಟ್ ಹೂಡಿಕೆ ಬಗ್ಗೆ ಚಿಕ್ಕ ವಯಸ್ಸಿನಲ್ಲೇ ತನಗೆ ಅರಿವಿತ್ತು ಎಂದಿದ್ದಾರೆ.
ಇದನ್ನೂ ಓದಿ: ಅಹ್ಮದಾಬಾದ್ ವಿಮಾನ ಅಪಘಾತ: ವಿಮಾದಾರ ಮತ್ತು ನಾಮಿನಿ ಇಬ್ಬರೂ ಮೃತ; ಏನಾಗುತ್ತೆ ಇನ್ಷೂರೆನ್ಸ್ ಹಣ?
‘ನನಗೆ 19 ವರ್ಷ ವಯಸ್ಸಿದ್ದಾಗ ನನ್ನ ಮೊದಲ ಕಂಪನಿಗೆ 3 ಮಿಲಿಯನ್ ಡಾಲರ್ ಹಣ ಪಡೆಯಲು ಯಶಸ್ವಿಯಾಗಿದ್ದೆ. ನನಗೆ ಹಾಗೂ ನನ್ನ ಹೂಡಿಕೆದಾರರಿಗೆ ಸಾಕಷ್ಟು ಲಾಭ ಮಾಡಿದ್ದೆ. 23ರ ವಯಸ್ಸಿನಲ್ಲಿ ಆ ಕಂಪನಿಯನ್ನು ಮಾರಿದೆ. ಸಣ್ಣ ವಯಸ್ಸಿನಿಂದಲೇ ಬ್ಯುಸಿನೆಸ್ನಲ್ಲಿ ನಾನು ತೊಡಗಿಸಿಕೊಳ್ಳದೇ ಹೋಗಿದ್ದರೆ ಅದು ಸಾಧ್ಯವಾಗುತ್ತಿರಲಿಲ್ಲ. ನಾನು ಶ್ರಮ ಹಾಕುತ್ತಿರುವುದರ ಫಲವಾಗಿ ಇವತ್ತು ಒಂಬತ್ತು ಕಂಪನಿಗಳನ್ನು ಷೇರು ಮಾರುಕಟ್ಟೆಗೆ ತರಲು ಸಾಧ್ಯವಾಗಿದೆ’ ಎಂದು ವಿವೇಕ್ ಓಬಾರಾಯ್ ಪೋಡ್ಕ್ಯಾಸ್ಟ್ನಲ್ಲಿ ಹೇಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




