Big Relief: ಕರ್ನಾಟಕ ಹೈಕೋರ್ಟ್ ತೀರ್ಪಿಂದ ಗೇಮ್ಸ್​ಕ್ರಾಫ್ಟ್ ನಿರಾಳ; ತಪ್ಪಿತು 21,000 ಕೋಟಿ ರೂ ತೆರಿಗೆ ಭೀತಿ

GamesKraft Technology Tax Evasion: 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ 21,000 ಕೋಟಿ ರೂನಷ್ಟು ಜಿಎಸ್​ಟಿ ಪಾವತಿಸಿಲ್ಲ ಎಂಬುದು ಜಿಎಸ್​ಟಿ ಇಂಟೆಲಿಜೆನ್ಸ್ ಯೂನಿಟ್​ನ ಆರೋಪ. ಆದರೆ, ಕರ್ನಾಟಕ ಹೈಕೋರ್ಟ್ ಇದೀಗ ಗೇಮಿಂಗ್ ಕಂಪನಿ ಪರವಾಗಿ ತೀರ್ಪು ಕೊಟ್ಟಿದೆ.

Big Relief: ಕರ್ನಾಟಕ ಹೈಕೋರ್ಟ್ ತೀರ್ಪಿಂದ ಗೇಮ್ಸ್​ಕ್ರಾಫ್ಟ್ ನಿರಾಳ; ತಪ್ಪಿತು 21,000 ಕೋಟಿ ರೂ ತೆರಿಗೆ ಭೀತಿ
ಕರ್ನಾಟಕ ಹೈಕೋರ್ಟ್
Edited By:

Updated on: Oct 14, 2026 | 3:50 PM

ಬೆಂಗಳೂರು: ಭಾರತದ ಗೇಮಿಂಗ್ ಉದ್ಯಮಕ್ಕೆ (Gaming Industry) ಸಕಾರಾತ್ಮಕವಾಗಿ ಪರಿಣಮಿಸುವ ಮತ್ತು ಸ್ಪಷ್ಟತೆ ಕೊಡುವ ಬೆಳವಣಿಗೆಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿಗೆ (GTPL- GamesKraft Technology Pvt Ltd) ನೀಡಿದ ಜಿಎಸ್​ಟಿ ತೆರಿಗೆ ನೋಟೀಸ್ ಅನ್ನು ಕರ್ನಾಟಕ ಹೈಕೋರ್ಟ್ (Karnataka High Court) ರದ್ದು ಮಾಡಿದೆ. 21,000 ಕೋಟಿ ರೂನಷ್ಟು ತೆರಿಗೆಯನ್ನು ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಪಾವತಿಸಿಲ್ಲ ಎಂದು ಜಿಎಸ್​​ಟಿ ಇಂಟೆಲಿಜೆನ್ಸ್ ಯೂನಿಟ್ 2022ರ ಸೆಪ್ಟಂಬರ್​ನಲ್ಲಿ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಬೆಂಗಳೂರು ಮೂಲದ ಈ ಗೇಮಿಂಗ್ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಜಿಎಸ್​ಟಿ ನೋಟೀಸ್ (GST Notice) ಅನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿರುವುದು ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿಗೆ ನಿರಾಳತೆ ತಂದಿದೆ. 2017ರಿಂದ 2022 ಜೂನ್ 30ರವರೆಗಿನ ಅವಧಿಯಲ್ಲಿ ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ 20,000 ಕೋಟಿ ರೂನಷ್ಟು ಜಿಎಸ್​ಟಿ ಪಾವತಿಸಿಲ್ಲ ಎಂಬುದು ಜಿಎಸ್​ಟಿ ಇಂಟೆಲಿಜೆನ್ಸ್ ಯೂನಿಟ್​ನ ಆರೋಪ. ಭಾರತದ ಇತಿಹಾಸದಲ್ಲಿ ಯಾವುದೇ ಕಂಪನಿ ವಿರುದ್ಧ ಇಷ್ಟೊಂದು ಮೊತ್ತದ ಜಿಎಸ್​ಟಿ ಬಾಕಿ ಬಗ್ಗೆ ನೋಟೀಸ್ ಜಾರಿ ಆಗಿದ್ದು ಅದೇ ಮೊದಲು.

ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಕಂಪನಿಯು ಕಾರ್ಡ್, ರಮ್ಮಿ ಕಲ್ಚರ್, ಗೇಮ್​ಜಿ, ರಮ್ಮಿ ಟೈಮ್ ಇತ್ಯಾದಿ ಮೂಲಕ ಆನ್​ಲೈನ್ ಬೆಟ್ಟಿಂಗ್​ಗೆ ಪ್ರಚೋದನೆ ಕೊಡುತ್ತಿದೆ. ಗ್ರಾಹಕರಿಗೆ ಇನ್ವಾಯ್ಸ್ ಕೊಡುತ್ತಿಲ್ಲ ಎಂಬಿತ್ಯಾದಿ ಆರೋಪಗಳೂ ಇವೆ. ಜಿಎಸ್​ಟಿ ಅಧಿಕಾರಿಗಳು ಗೇಮ್ಸ್​ಕ್ರಾಫ್ಟ್ ಪ್ಲಾಟ್​ಫಾರ್ಮ್​ಗಳಲ್ಲಿ ದಾಖಲಾದ ಆನ್​ಲೈನ್ ಬೆಟ್ಟಿಂಗ್ ಮೊತ್ತದ ಮೇಲೆ ಶೇ. 28ರಷ್ಟು, ಅಂದರೆ 77,000 ಕೋಟಿ ರೂನಷ್ಟು ಜಿಎಸ್​ಟಿ ತೆರಿಗೆಯನ್ನು ಹೇರಿತ್ತು.

ಅಷ್ಟೇ ಅಲ್ಲ, ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಸಂಸ್ಥೆಯ ದಾಖಲೆಗಳ ಫೋರೆನ್ಸಿಕ್ ಪರೀಕ್ಷೆ ಮಾಡಿದಾಗ ನಕಲಿ ಇನ್ವಾಯ್ಸ್ ಮತ್ತು ಹಿಂದಿನ ದಿನಾಂಕಗಳ ಇನ್ವಾಯ್ಸ್​ಗಳನ್ನು ಸಲ್ಲಿಸಿದ್ದು ಕಂಡುಬಂದಿತ್ತು ಎಂದೂ ಜಿಎಸ್​ಟಿ ಅಧಿಕಾರಿಗಳು ಆರೋಪಿಸಿದ್ದರು.

ಆದರೆ, ಗೇಮ್ಸ್​ಕ್ರಾಫ್ಟ್ ಟೆಕ್ನಾಲಜಿ ಕಂಪನಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ತಮ್ಮದು ಕೌಶಲ್ಯ ಆಧಾರಿತ ಗೇಮಿಂಗ್ ನಡೆಸುತ್ತಿದ್ದೇವೆ. ಈ ಸೇವೆಗೆ ಜಿಎಸ್​ಟಿ ಶೇ. 18 ಮಾತ್ರ ಇದೆ. ಗೇಮ್ ಆಡುವ ಆಟಗಾರರ ಪ್ರವೇಶ ಶುಲ್ಕದಿಂದ ಈ ಜಿಎಸ್​ಟಿ ಮುರಿದುಕೊಳ್ಳಲಾಗುತ್ತದೆ ಎಂದು ಈ ಕಂಪನಿ ಪರ ವಕೀಲರು ಉಚ್ಚ ನ್ಯಾಯಾಲಯದಲ್ಲಿ ವಾದಿಸಿದ್ದರು.

2017ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಗೇಮ್ಸ್​ಕ್ರಾಫ್ಟ್ ಸಂಸ್ಥೆ ಆನ್​ಲೈನ್​ನಲ್ಲಿ ಹಲವು ರಮ್ಮಿ ಗೇಮ್​ಗಳು, ಲುಡೋ, ಫ್ಯಾಂಟಸಿ ಸ್ಪೋರ್ಟ್ಸ್ ಇತ್ಯಾದಿಯನ್ನು ನಡೆಸುತ್ತದೆ. ಇದೀಗ ಅಪಾರ ಪ್ರಮಾಣದ ಜಿಎಸ್​ಟಿ ತೆರಿಗೆ ಹೊರೆಯಿಂದ ತನ್ನನ್ನು ಬಚಾವ್ ಮಾಡಿದ ಹೈಕೋರ್ಟ್ ತೀರ್ಪನ್ನು ಗೇಮ್ಸ್​ಕ್ರಾಫ್ಟ್ ಸ್ವಾಗತಿಸಿದೆ. ಈ ಬಗ್ಗೆ ಮಾತನಾಡಿದ ಕಂಪನಿ ಪರ ವಕೀಲ ಜಾಯ್​ಜ್ಯೋತಿ ಮಿಶ್ರ, ನಮ್ಮ ಬ್ಯುಸಿನೆಸ್ ಮಾಡಲ್ ನ್ಯಾಯಯುತವಾಗಿರುವುದು ಸ್ಪಷ್ಟವಾಗಿದೆ. ಸರ್ಕಾರ ಮತ್ತು ನ್ಯಾಯಾಂಗದ ಬಗ್ಗೆ ನಮಗೆ ಮೊದಲಿಂದಲೂ ನಂಬಿಕೆ ಇತ್ತು. ಮುಂದೆಯೂ ಇರುತ್ತದೆ. ಈ ನ್ಯಾಯತೀರ್ಪಿನಿಂದ ಮುಂದಿನ ದಿನಗಳಲ್ಲಿ ಜಿಎಸ್​ಟಿ ಅಧಿಕಾರಿಗಳೊಂದಿಗೆ ಸಕಾರಾತ್ಮಕ ಸಂವಾದಕ್ಕೆ ದಾರಿ ಸಿಕ್ಕು, ಗೇಮಿಂಗ್ ಕ್ಷೇತ್ರದಲ್ಲಿ ಪ್ರಗತಿಪರ ಜಿಎಸ್​ಟಿ ಕಾಯ್ದೆಗಳು ರಚನೆ ಆಗಲು ಅನುಕೂಲವಾಗಬಹುದು ಎಂದು ಹೇಳಿದ್ದಾರೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:02 pm, Thu, 11 May 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us