
ಬೆಂಗಳೂರು, ನವೆಂಬರ್ 7: ದೇಶದ ಸ್ಟಾರ್ಟಪ್ ನಗರಿ ಎನ್ನುವ ಗರಿಮೆ ಹೊಂದಿರುವ ಬೆಂಗಳೂರು ನಗರದಲ್ಲಿ ಇರುವ ಸ್ಟಾರ್ಟಪ್ಗಳ ಸಂಖ್ಯೆ ಮುಂದಿನ ಐದು ವರ್ಷದಲ್ಲಿ ಬಹುತೇಕ ದ್ವಿಗುಣಗೊಳ್ಳುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ (Karnataka) ಮಹತ್ವಾಕಾಂಕ್ಷಿ ಯೋಜನೆ ಹಮ್ಮಿಕೊಂಡಿದೆ. ರಾಜ್ಯಾದ್ಯಂತ ಮುಂದಿನ ಐದು ವರ್ಷದಲ್ಲಿ 25,000 ಸ್ಟಾರ್ಟಪ್ಗಳನ್ನು ಸ್ಥಾಪಿಸಲು ಉತ್ತೇಜಿಸವಂತಹ ನೀತಿಯನ್ನು ಸರ್ಕಾರ ರೂಪಿಸಿದ್ದು, ಇದಕ್ಕೆ ರಾಜ್ಯ ಸಂಪುಟದ ಅನುಮೋದನೆ ಸಿಕ್ಕಿದೆ.
ಈ 25,000 ಸ್ಟಾರ್ಟಪ್ಗಳಲ್ಲಿ 15,000 ಸ್ಟಾರ್ಟಪ್ಗಳು ಬೆಂಗಳೂರಿನಲ್ಲಿ ಇರಲಿದ್ದರೆ, ಉಳಿದ 10,000 ಸ್ಟಾರ್ಟಪ್ಗಳು ಬೆಂಗಳೂರಿನ ಹೊರಗೆ ಇರುವಂತೆ ನೋಡಿಕೊಳ್ಳಲಾಗುತ್ತದೆ. ಈ ನೀತಿಯ ಜಾರಿಗೆ ರಾಜ್ಯ ಸರ್ಕಾರ ಸದ್ಯ 518 ಕೋಟಿ ರೂ ಬಜೆಟ್ ಇಟ್ಟಿದೆ.
ಇದನ್ನೂ ಓದಿ: ಪಿಎಂ ಕೌಶಲ್ ವಿಕಾಸ್ ಯೋಜನೆಯ ದುರುಪಯೋಗ; 178 ಟ್ರೈನಿಂಗ್ ಪಾರ್ಟ್ನರ್ಗಳನ್ನು ಕಪ್ಪುಪಟ್ಟಿಗೆ ಸೇರಿಸಿದ ಸರ್ಕಾರ
ಕರ್ನಾಟಕದ ಸ್ಟಾರ್ಟಪ್ ನೀತಿಯು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬ್ಲಾಕ್ಚೈನ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತಿತರ ಡೀಪ್ ಟೆಕ್ ಕ್ಷೇತ್ರಗಳಿಗೆ ಒತ್ತು ಕೊಡುವಂತೆ ರೂಪಿತವಾಗಿದೆ. ಇನ್ಕುಬೇಶನ್ ಸೆಂಟರ್ಗಳು, ಎಕ್ಸಲೆನ್ಸ್ ಸೆಂಟರ್ಗಳು, ಆರ್ ಅಂಡ್ ಡಿ ಸೆಂಟರ್ಗಳು ಇತ್ಯಾದಿಯನ್ನು ಪ್ರೋತ್ಸಾಹಿಸಲಾಗುತ್ತದೆ. ಹೊಸದಾಗಿ ಶುರುವಾಗುವ ಸ್ಟಾರ್ಟಪ್ಗಳಿಗೆ ಆರಂಭಿಕ ಹಂತದಲ್ಲಿ ಸರ್ಕಾರವು ಹಣಕಾಸು ನೆರವು ಒದಗಿಸುವ ವ್ಯವಸ್ಥೆ ಮಾಡಲಿದೆ.
ವಿಶೇಷ ತರಬೇತಿ ಯೋಜನೆಗಳು, ಇಂಡಸ್ಟ್ರಿ ಸರ್ಟಿಫಿಕೇಶನ್ ಸಬ್ಸಿಡಿ, ಸ್ಟಾರ್ಟಪ್ ಕೇಂದ್ರಿತ ಕೌಶಲ್ಯಾಭಿವೃದ್ದಿ ಯೋಜನೆಗಳಿಗೆ ದೇಣಿಗೆ, ಮೆಂಟರ್ಶಿಪ್ ಕೇಂದ್ರಿತ ಹಣಕಾಸು ನೆರವು ಇತ್ಯಾದಿಯನ್ನು ರಾಜ್ಯ ಸರ್ಕಾರ ತನ್ನ ನೀತಿಯಲ್ಲಿ ಸೇರಿಸಿಕೊಂಡಿದೆ.
ಮಹಿಳೆಯರಿಂದ ಮುನ್ನಡೆಸುವ ಹಾಗೂ ಗ್ರಾಮೀಣ ಭಾಗಗಳನ್ನು ಕೇಂದ್ರಿತವಾಗಿಸುವ ಉದ್ದಿಮೆಗಳಿಗೆ ಸರ್ಕಾರದಿಂದ ದೇಣಿಗೆ ಕೊಡುವ ಯೋಜನೆಗಳೂ ಈ ಹೊಸ ನೀತಿಯಲ್ಲಿವೆ. ಉದ್ದಿಮೆಗಳಿಗೆ ಕಾನೂನು ನಿಯಮಾವಳಿಗಳನ್ನು ಸರಳಗೊಳಿಸುವುದಕ್ಕೆ ಒತ್ತು ಕೊಡಲಾಗುತ್ತದೆ.
ಇದನ್ನೂ ಓದಿ: ದಸರಾ ವೇಳೆ GST ಸಂಗ್ರಹದಲ್ಲಿ ಕರ್ನಾಟಕ ಟಾಪ್: ಗ್ಯಾರಂಟಿ ಯೋಜನೆ ಎಫೆಕ್ಟ್ ಎಂದ ಸಿಎಂ ಸಿದ್ದರಾಮಯ್ಯ
ವಿಶ್ವದಲ್ಲೇ ಭಾರತ ಮೂರನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಂ ಹೊಂದಿದೆ. ಇಲ್ಲಿ 1.59 ಲಕ್ಷ ಸ್ಟಾರ್ಟಪ್ಗಳಿವೆ. ಈ ಪೈಕಿ ಹತ್ತಿರಹತ್ತಿರ ಅರ್ಧದಷ್ಟು ಸ್ಟಾರ್ಟಪ್ಗಳು ಮಹಿಳೆಯರಿಂದ ಮುನ್ನಡೆಸಲ್ಪಡುತ್ತಿವೆ. ಈ ಒಂದೂವರೆ ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳಲ್ಲಿ ಕರ್ನಾಟಕದಲ್ಲಿ 18,000ದಷ್ಟಿವೆ. ಡಿಪಿಐಐಟಿಯಿಂದ ಮಾನ್ಯಗೊಳಿಸಲಾಗಿರುವ ಸ್ಟಾರ್ಟಪ್ಗಳಲ್ಲಿ ಕರ್ನಾಟಕದಲ್ಲೇ ಶೇ. 15ರಷ್ಟಿವೆ.
ಇನ್ನು, ಫಂಡಿಂಗ್ ಪಡೆದ ಸ್ಟಾರ್ಟಪ್ಗಳಲ್ಲಿ ಅರ್ಧದಷ್ಟವು ಬೆಂಗಳೂರಿನಲ್ಲಿ ನೆಲೆ ಹೊಂದಿರುವುದು ಗಮನಾರ್ಹ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ