ಸಿಲಿಕಾನ್ ಸಿಟಿಯಲ್ಲಿ ಅಮೋಘ ‘ಕಾರ್ಯ’ ವೈಖರಿ; ಬೆಂಗಳೂರಿನ ಈ ಸ್ಟಾರ್ಟಪ್ ಜೊತೆ ಗೂಗಲ್, ಮೈಕ್ರೋಸಾಫ್ಟ್ ಕೈಜೋಡಿಸಿರೋದು ಯಾಕೆ ನೋಡಿ..!

|

Updated on: Nov 03, 2023 | 1:22 PM

Karya Startup of Bengaluru: ಬೆಂಗಳೂರಿನಲ್ಲಿ ಪುಟ್ಟ ಸ್ಟಾರ್ಟಪ್​ವೊಂದು ಡಾಟಾ ಸಂಗ್ರಹದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದು, ಗೂಗಲ್, ಮೈಕ್ರೋಸಾಫ್ಟ್ ಸಂಸ್ಥೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮನು ಚೋಪ್ರಾ ಎಂಬ 27 ವರ್ಷದ ಯುವಕ ಬೆಂಗಳೂರಿನಲ್ಲಿ ‘ಕಾರ್ಯ’ ಎಂಬ ಸ್ಟಾರ್ಟಪ್ ನಡೆಸುತ್ತಿದ್ದು, ಅದರಲ್ಲಿ ಧ್ವನಿ ದತ್ತಾಂಶವನ್ನು ಸಂಗ್ರಹಿಸಿ ಟೆಕ್ ಕಂಪನಿಗಳಿಗೆ ಕೊಡಲಾಗುತ್ತಿದೆ.

ಸಿಲಿಕಾನ್ ಸಿಟಿಯಲ್ಲಿ ಅಮೋಘ ‘ಕಾರ್ಯ’ ವೈಖರಿ; ಬೆಂಗಳೂರಿನ ಈ ಸ್ಟಾರ್ಟಪ್ ಜೊತೆ ಗೂಗಲ್, ಮೈಕ್ರೋಸಾಫ್ಟ್ ಕೈಜೋಡಿಸಿರೋದು ಯಾಕೆ ನೋಡಿ..!
ಕಾರ್ಯ
Follow us on

ಬೆಂಗಳೂರು, ನವೆಂಬರ್ 3: ಭವಿಷ್ಯದ ದಿನಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ಗೆ ಸೇರಿದ್ದೆಂಬುದು ಕಟ್ಟಿಟ್ಟ ಬುತ್ತಿ ಎಂದೇ ಎಲ್ಲರೂ ತೀರ್ಮಾನಿಸಿದ್ದಾರೆ. ಅದರಂತೆ ಬಹಳಷ್ಟು ಟೆಕ್ ಕಂಪನಿಗಳು ಸದ್ದಿಲ್ಲದೇ ಎಐ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿವೆ. ಗೂಗಲ್, ಮೈಕ್ರೋಸಾಫ್ಟ್, ಮೆಟಾ ಹೀಗೆ ಬಹಳಷ್ಟು ಕಂಪನಿಗಳು ಎಐ ಸಮರ ನಡೆಸುತ್ತಿವೆ. ಎಐ ಮೆಷಿನ್ ಲರ್ನಿಂಗ್ ಮಾಡೆಲ್​ಗಳನ್ನು (AI machine learning model) ಅಭಿವೃದ್ಧಿಪಡಿಸಲು ವಿವಿಧ ಭಾಷೆಗಳಲ್ಲಿ ಆಡುಮಾತುಗಳನ್ನು ಸಂಗ್ರಹಿಸುವ ಕೆಲಸವಾಗುತ್ತಿದೆ. ಇದೇ ವೇಳೆ, ಬೆಂಗಳೂರಿನಲ್ಲಿ ಪುಟ್ಟ ಸ್ಟಾರ್ಟಪ್​ವೊಂದು ಡಾಟಾ ಸಂಗ್ರಹದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದ್ದು, ಗೂಗಲ್, ಮೈಕ್ರೋಸಾಫ್ಟ್ ಸಂಸ್ಥೆಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಮನು ಚೋಪ್ರಾ ಎಂಬ 27 ವರ್ಷದ ಯುವಕ ಬೆಂಗಳೂರಿನಲ್ಲಿ ‘ಕಾರ್ಯ’ (Karya startup) ಎಂಬ ಸ್ಟಾರ್ಟಪ್ ನಡೆಸುತ್ತಿದ್ದು, ಅದರಲ್ಲಿ ಧ್ವನಿ ದತ್ತಾಂಶವನ್ನು ಸಂಗ್ರಹಿಸಿ ಟೆಕ್ ಕಂಪನಿಗಳಿಗೆ ಕೊಡಲಾಗುತ್ತಿದೆ. ಮನು ಚೋಪ್ರಾ ಮತ್ತು ವಿವೇಕ್ ಶೇಷಾದ್ರಿ ಅವರಿಬ್ಬರು 2021ರಲ್ಲಿ ಕಾರ್ಯ ಸ್ಟಾರ್ಟಪ್ ಶುರು ಮಾಡಿದ್ದವರು.

ಕಾರ್ಯ ಸಂಸ್ಥೆಯಂತೆ ಜಗತ್ತಿನಾದ್ಯಂತ ಬಹಳಷ್ಟು ಕಂಪನಿಗಳು ಧ್ವನಿ ದತ್ತಾಂಶವನ್ನು ಕಲೆಹಾಕುವ ಕೆಲಸ ಮಾಡುತ್ತಿದೆ. ಆದರೆ, ಕಾರ್ಯ ಸಂಸ್ಥೆ ಧ್ವನಿ ಗುಣಮಟ್ಟ ಕಾಯ್ದುಕೊಳ್ಳುವುದಲ್ಲದೇ, ಧ್ವನಿ ನೀಡುಗರಿಗೆ ಹೆಚ್ಚಿನ ಸಂಬಳ ಕೊಡುತ್ತಿದೆ.

ಕಾರ್ಯದ ಕೆಲಸ ಹೇಗೆ?

ಬೆಂಗಳೂರಿನ ಹೊರವಲಯದಲ್ಲಿರುವ ಅಗರ ಎಂಬಲ್ಲಿ 70 ಮಂದಿಯನ್ನು ಕಾರ್ಯ ನೇಮಿಸಿಕೊಂಡಿದೆ. ಇವರಿಗೆ ಓದಲು ಒಂದಷ್ಟು ಕನ್ನಡ ನುಡಿಗಳನ್ನು ಕೊಡಲಾಗುತ್ತದೆ. ಸ್ಮಾರ್ಟ್​ಫೋನ್​ನಲ್ಲಿ ಆ್ಯಪ್ ತೆರೆದು, ಒಂದೊಂದು ವಾಕ್ಯವನ್ನೂ ಬಿಟ್ಟು ಬಿಟ್ಟು ಓದಿ ಆ್ಯಪ್​ಗೆ ರೆಕಾರ್ಡ್ ಮಾಡಲಾಗುತ್ತದೆ.

ಇದನ್ನೂ ಓದಿ: ಭಾರತದ 14 ಮಹಾದಾನಿಗಳಲ್ಲಿ ಕನ್ನಡಿಗರೇ ಹೆಚ್ಚು; ಇಲ್ಲಿದೆ ಹುರುನ್ ಫಿಲಾಂತ್ರೋಪಿ ಪಟ್ಟಿ ಮುಖ್ಯಾಂಶ

ಅಗರ ಸುತ್ತಮುತ್ತ ‘ಕಾರ್ಯ’ದಿಂದ ನೇಮಿಸಲಾದ 70 ಮಂದಿಯಲ್ಲಿ ಹೆಚ್ಚಿನವರು ಬಡ ಹೆಣ್ಮಕ್ಕಳೇ ಆಗಿದ್ದಾರೆ. ಒಬ್ಬ ಮಹಿಳೆ ಈ ರೀತಿ ಧ್ವನಿ ನೀಡಿಕೆಯ ಕೆಲಸದಿಂದ ಒಂದು ದಿನದಲ್ಲಿ ಏನಿಲ್ಲವೆಂದರೂ 1,000 ರೂ ಹಣ ಸಂಪಾದಿಸುತ್ತಾರೆ.

ಈ ಧ್ವನಿ ಮುದ್ರಿಕೆ ಯಾತಕ್ಕಾಗಿ?

ಈ ಧ್ವನಿ ಮಾದರಿಗಳನ್ನು ಬೇರೆ ಬೇರೆ ಕೆಲಸಕ್ಕೆ ಬಳಸಲಾಗುತ್ತದೆ. ಎಐ ಟ್ರೈನಿಂಗ್ ಡಾಟಾ ಮತ್ತು ಮೆಷಿನ್ ಲರ್ನಿಂಗ್ ಮಾಡಲ್​ಗಳಿಗೆ ಉಪಯೋಗಿಸಲಾಗುತ್ತದೆ. ಇದರಿಂದ ಬೇರೆ ಬೇರೆ ಪ್ರಾದೇಶಿಕ ಭಾಷೆಗಳಲ್ಲಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಬಳಸಲು ಅನುಕೂಲವಾಗುತ್ತದೆ.

ಭಾರತದಲ್ಲಿ ಏನಿಲ್ಲವೆಂದರೂ 32,000 ಮಂದಿ ಈ ರೀತಿ ಆ್ಯಪ್​ಗೆ ತಮ್ಮ ಧ್ವನಿ ನೀಡುವ ಕೆಲಸ ಮಾಡುತ್ತಿದ್ಧಾರೆ. ಧ್ವನಿ ನೀಡುವುದಷ್ಟೇ ಅಲ್ಲ ಚಿತ್ರಗಳನ್ನು ಗುರುತಿಸುವುದು, ವಿಡಿಯೋಗಳನ್ನು ನೋಡಿ ಸಂಭಾಷಣೆಯನ್ನು ಪಠ್ಯೀಕರಿಸುವುದು, ಧ್ವನಿಯನ್ನು ಪಠ್ಯೀಕರಿಸುವುದು ಇತ್ಯಾದಿ ಕೆಲಸಗಳನ್ನೂ ಇವರು ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಅಗರ ಮಾತ್ರವಲ್ಲ, ಇನ್ನೂ ಹಲವು ಕಡೆ ಸ್ಥಳೀಯರನ್ನು ಈ ಕೆಲಸಗಳಿಗೆ ಕಾರ್ಯವು ಬಳಸಿಕೊಳ್ಳುತ್ತಿದೆ.

ಇದನ್ನೂ ಓದಿ: ರಿಯಲ್ ಎಸ್ಟೇಟ್ ಬೆಲೆ ಏರಿಕೆ; ವಿಶ್ವನಗರಿಗಳಲ್ಲಿ ಬೆಂಗಳೂರು 17ನೇ ಸ್ಥಾನದಲ್ಲಿ; ಟಾಪ್-5ನಲ್ಲಿ ಮುಂಬೈ

ಗೂಗಲ್​ನಿಂದ ಕಾರ್ಯದ ಬಳಕೆ

ಗೂಗಲ್ ಸಂಸ್ಥೆ ಭಾರತದ 85 ಜಿಲ್ಲೆಗಳಲ್ಲಿ ಧ್ವನಿ ದತ್ತಾಂಶ ಕಲೆಹಾಕುತ್ತಿದೆ. ಅದಕ್ಕಾಗಿ ಕಾರ್ಯ ಹಾಗೂ ಇತರ ಕೆಲ ಸ್ಥಳೀಯ ಕಂಪನಿಗಳನ್ನು ಬಳಸಿಕೊಳ್ಳುತ್ತಿದೆ. 125 ಭಾರತೀಯ ಭಾಷೆಗಳಿಗೆ ಜನರೇಟಿವ್ ಎಐ ಮಾಡೆಲ್ ತಯಾರಿಸುವುದು ಗೂಗಲ್​ನ ಉದ್ದೇಶ.

ಬಹುತೇಕ ಟೆಕ್ ಕಂಪನಿಗಳು ತಮ್ಮ ಎಐ ಮಾಡೆಲ್​ಗಳಿಗೆ ಇಂಗ್ಲಿಷ್ ಭಾಷೆಯ ದತ್ತಾಂಶಗಳನ್ನು ಬಹುತೇಕ ಉಪಯೋಗಿಸಿವೆ. ಆದರೆ, ಸ್ಥಳೀಯ ಭಾಷೆಗಳ ದತ್ತಾಂಶ ಕಡಿಮೆ. ಬೇರೆ ಭಾಷಿಕರಿಗೂ ಎಐ ಸೌಲಭ್ಯ ಸಿಗಲು ಆ ಭಾಷೆಗಳ ಸ್ಪೀಚ್ ಮತ್ತಿತರ ಡಾಟಾವನ್ನು ಎಐಗೆ ಉಣಬಡಿಸಬೇಕಾಗುತ್ತದೆ. ಈ ಡಾಟಾ ಒದಗಿಸುವ ಕೆಲಸವನ್ನು ಕಾರ್ಯ ಹಾಗು ಇನ್ನೂ ಹಲವು ಕಂಪನಿಗಳು ಮಾಡುತ್ತಿವೆ.

ಕಾರ್ಯ ಕೇವಲ ದತ್ತಾಂಶ ಸಂಗ್ರಹದ ಬಿಸಿನೆಸ್ ಮಾಡುತ್ತಿಲ್ಲ. ಗ್ರಾಮೀಣ ಭಾಗದ ಬಡ ಜನರಿಗೆ ಪ್ರಮುಖ ಆದಾಯ ಮೂಲ ಒದಗಿಸುವ ಕಾರ್ಯ ಮಾಡುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ