Akriti Chopra: ಈಕೆ ಆಕೃತಿ ಚೋಪ್ರಾ; ಉದ್ಯೋಗಿಯಾದವಳಿಗೆ ಸಿಕ್ತು ಸಹ-ಸಂಸ್ಥಾಪಕಿ ಪಟ್ಟ; ಗಂಡನ ಸಂಸ್ಥೆಯನ್ನೇ ಖರೀದಿಸಿತು ಈಕೆಯ ಕಂಪನಿ
Zomato Shareholding Employee: ಜೊಮಾಟೋದ ಅಕೃತಿ ಚೋಪ್ರಾ ಉದ್ಯೋಗಿಯಾಗಿ ಕೆಲಸಕ್ಕೆ ಸೇರಿ ಕಂಪನಿಯ ಸಹ-ಸಂಸ್ಥಾಪಕಿಯಾಗಿ ಭಡ್ತಿ ಪಡೆದು ಸುದ್ದಿಯಾದವರು. ಜೊಮಾಟೋದ ಅತಿಹೆಚ್ಚು ಷೇರುಗಳನ್ನು ಹೊಂದಿರುವ ಉದ್ಯೋಗಿಗಳಲ್ಲಿ ಅವರಿದ್ದಾರೆ. ಅವರ ಪತಿ ಸ್ಥಾಪಿಸಿದ ಕಂಪನಿಯನ್ನು ಜೊಮಾಟೋ ಕಳೆದ ವರ್ಷ ಖರೀದಿಸಿತ್ತು.
ಸಂಸ್ಥೆಯನ್ನಲ್ಲ, ಕೆಲಸವನ್ನು ಪ್ರೀತಿಸಿ ಎಂದು ಅನುಭವಿಗಳು ಹಿತವಚನ ಹೇಳುವುದುಂಟು. ಕೆಲವರು ಕೆಲಸದ ಜೊತೆಗೆ ಸಂಸ್ಥೆಯನ್ನೂ ಪ್ರೀತಿಸಿ, ಅದಕ್ಕಾಗಿ ತಮ್ಮೆಲ್ಲವನ್ನೂ ಮುಡಿಪಾಗಿಡುತ್ತಾರೆ. ಅಂತಹ ಉದ್ಯೋಗಿಗಳನ್ನು ಕೆಲ ಸಂಸ್ಥೆಗಳು ಗುರುತಿಸಿ ಗೌರವಿಸುತ್ತವೆ. ಇತ್ತೀಚೆಗೆ ಇಂತಹ ಕಾರ್ಯತತ್ಪರ ಎನಿಸಿರುವ ಉದ್ಯೋಗಿಗಳನ್ನು ಸಂಸ್ಥೆಯ ಸಹ–ಸಂಸ್ಥಾಪಕ ಪದವಿಗೆ ಏರಿಸುವ ಪರಂಪರೆ ಶುರುವಾಗಿದೆ. ಸ್ವಿಗ್ಗಿ, ಜೊಮಾಟೊ, ರೆಬೆಲ್ ಫುಡ್ಸ್, ಹೋಮ್ಲೇನ್, ಹೌಸ್ಜಾಯ್ ಮೊದಲಾದ ಸ್ಟಾರ್ಟಪ್ಗಳು ಇಂತಹದೊಂದು ಕೋ–ಫೌಂಡರ್ (Co Founder) ಟ್ರೆಂಡಿಂಗ್ ಸೃಷ್ಟಿಸಿವೆ. 2021ರಲ್ಲಿ ಜೊಮಾಟೋ ಸಂಸ್ಥೆ ತನ್ನ ಸಿಎಫ್ಒ ಆಕೃತಿ ಚೋಪ್ರಾ (Akriti Chopra) ಅವರನ್ನು ಕೋ–ಫೌಂಡರ್ ಆಗಿ ಭಡ್ತಿ ನೀಡಿತು. ವರ್ಷಕ್ಕೆ 2 ಕೋಟಿಗೂ ಹೆಚ್ಚು ಸಂಬಳ ಪಡೆಯುವ ಈ ಆಕೃತಿ ಚೋಪ್ರಾ ಜೊಮಾಟೋದಲ್ಲಿ ಹೊಂದಿರುವ ಷೇರುಗಳ ಮೌಲ್ಯವೇ 149 ಕೋಟಿ ರೂ ಆಗಿದೆ.
ಜೊಮಾಟೋದಲ್ಲಿ ಆಕೃತಿ ಚೋಪ್ರಾ ಯಶಸ್ಸಿನ ಹಾದಿ
34 ವರ್ಷದ ಆಕೃತಿ ಚೋಪ್ರಾ ದೆಹಲಿಯ ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಓದಿದವರು. ಚಾರ್ಟರ್ಡ್ ಅಕೌಂಟೆಂಟ್ ಆದವರು. ಜೊಮಾಟೊಗೆ 2011ರಲ್ಲಿ ಸೇರುವ ಮುನ್ನ ಪ್ರೈಸ್ವಾಟರ್ ಕೂಪರ್ (ಪಿಡಬ್ಲ್ಯೂಸಿ) ಸಂಸ್ಥೆಯ ಲವ್ಲಾಕ್ ಎಂಡ್ ಲಿವಿಸ್ ಎಂಬ ನೆಟ್ವರ್ಕ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಜೊಮಾಟೋದ ಅತ್ಯಂತ ಹಿರಿಯ ಉದ್ಯೋಗಿಗಳಲ್ಲಿ ಆಕೃತಿಯೂ ಒಬ್ಬರು. ಕಂಪನಿಯ ಫೈನಾನ್ಸ್ ಮತ್ತು ಆಪರೇಷನ್ಸ್ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಜೊಮಾಟೋದಲ್ಲಿ ವೃತ್ತಿ ಆರಂಭಿಸಿದ ಆಕೃತಿ ಚೋಪ್ರಾ, ಒಂದೇ ವರ್ಷದಲ್ಲಿ ವೈಸ್ ಪ್ರೆಸಿಡೆಂಟ್ ಅಗಿ ಭಡ್ತಿ ಪಡೆದರು. 2010ರಲ್ಲಿ ಜೊಮಾಟೋದ ಸಿಎಫ್ಒ ಆದರು. 2021ರಲ್ಲಿ ಚೀಫ್ ಪೀಪಲ್ ಆಫೀಸ್ (ಸಿಪಿಒ) ಆಗಿ ಪ್ರೊಮೋಟ್ ಆದರು. ಹಾಗೆಯೇ, ಕೋ ಫೌಂಡರ್ ಹುದ್ದೆಗೂ ಭಡ್ತಿ ಸಿಕ್ಕಿತು.
149 ಕೋಟಿ ರೂ ಮೌಲ್ಯದ ಜೊಮಾಟೋ ಷೇರುಗಳು ಆಕೃತಿ ಬಳಿ
2021ರಲ್ಲಿ ಜೊಮಾಟೋ ಐಪಿಒ ಆಫರ್ ಕೊಟ್ಟಿತು. ಅದರಲ್ಲಿ ಉದ್ಯೋಗಿಗಳ ಪಾಲಿನ ಷೇರುಗಳ ವಿತರಣೆಯಲ್ಲಿ ಆಕೃತಿ ಚೋಪ್ರಾಗೆ ಲಕ್ಷಾಂತರ ಮೊತ್ತದ ಷೇರುಗಳು ಸಿಕ್ಕವು. ಈ ಷೇರುಗಳ ಮೌಲ್ಯ 149 ಕೋಟಿ ರೂ ಆಗಿವೆ. ಜೊಮಾಟೋದಲ್ಲಿ ಅತಿ ಹೆಚ್ಚು ಷೇರುಗಳನ್ನು ಹೊಂದಿರುವ ಉದ್ಯೋಗಿಗಳಲ್ಲಿ ಅವರೂ ಒಬ್ಬರು.
ಆಕೃತಿ ಚೋಪ್ರಾ 2021ರಲ್ಲಿ ಪಡೆಯುತ್ತಿದ್ದ ಸಂಬಳ ವರ್ಷಕ್ಕೆ 1.63 ಕೋಟಿ ರೂ ಇತ್ತು. ಇದೀಗ ಇವರ ಸಂಬಳ 2 ಕೋಟಿ ರೂಗಿಂತಲೂ ಹೆಚ್ಚಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Success Story: ಆಶಯ್ ಮಿಶ್ರಾ ಯಶೋಗಾಥೆ; 99 ರೂನಿಂದ ಆರಂಭಿಸಿದ ಸಂಸ್ಥೆಯಿಂದ ಇವತ್ತು 25 ಕೋಟಿ ಅದಾಯದ ಬ್ಯುಸಿನೆಸ್
ಆಕೃತಿ ಚೋಪ್ರಾ ಪತಿ ಸ್ಥಾಪಿಸಿದ ಕಂಪನಿಯನ್ನು ಖರೀದಿಸಿದ ಜೊಮಾಟೊ
ಆಕೃತಿ ಚೋಪ್ರಾ ಪತಿ ಹೆಸರು ಆಲ್ಬಿಂದರ್ ಧಿಂಡಸಾ. ಇವರು ಆನ್ಲೈನ್ ಡೆಲಿವರಿ ಸಂಸ್ಥೆ ಬ್ಲಿಂಕಿಟ್ನ ಸ್ಥಾಪಕರು. ಕಳೆದ ವರ್ಷ ಜೊಮಾಟೊ ಸಂಸ್ಥೆ ಬ್ಲಿಂಕಿಟ್ನ ಮಾಲಕ ಸಂಸ್ಥೆ ಬಿಸಿಪಿಎಲ್ನ ಎಲ್ಲಾ ಷೇರುಗಳನ್ನು ಖರೀದಿಸಿತು. ಇದರೊಂದಿಗೆ ಬ್ಲಿಂಕಿಟ್ ಜೊಮಾಟೋದ ಪಾಲಾಯಿತು. ಬ್ಲಿಂಕಿಟ್ ಖರೀದಿಗೆ ಜೊಮಾಟೊ 4,447 ಕೋಟಿ ರೂ ವ್ಯಯಿಸಿತು.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:01 pm, Sun, 23 April 23