PM KUSUM Scheme: ಪಿಎಂ ಕುಸುಮ್- ಕೇಂದ್ರದ ದೂರದೃಷ್ಟಿಯ ಒಂದು ಯೋಜನೆ

|

Updated on: Feb 27, 2023 | 4:52 PM

Solar Electricity Generation in Farm Field: ರೈತರು ತಮ್ಮ ಬಂಜರು ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಬಹುದು. ತಮ್ಮ ಸ್ವಂತ ಬಳಕೆಯ ಬಳಿಕ ಮಿಗುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್​ಗೆ ಕಳುಹಿಸಿ, ಅದರಿಂದ ಆದಾಯ ಪಡೆಯಬಹುದು.

PM KUSUM Scheme: ಪಿಎಂ ಕುಸುಮ್- ಕೇಂದ್ರದ ದೂರದೃಷ್ಟಿಯ ಒಂದು ಯೋಜನೆ
ಸೌರ ವಿದ್ಯುತ್
Follow us on

ನವದೆಹಲಿ: ಹವಾಮಾನ ಬದಲಾವಣೆ ಸಮಸ್ಯೆ ಹೋಗಲಾಡಿಸಲು ವಿಶ್ವಸಂಸ್ಥೆ ನೀಡಿರುವ ಗುರಿ ಈಡೇರಿಕೆಯಲ್ಲಿ ಭಾರತದ ಪ್ರಯತ್ನಕ್ಕೆ ಪೂರಕವಾಗಿ ಪಿಎಂ ಕುಸುಮ್ ಯೋಜನೆ (PM KUSUM Yojana) ರೂಪಿಸಲಾಗಿದೆ. ಇದು ಪರ್ಯಾಯ ಮತ್ತು ಹಸಿರು ಇಂಧನ ಎನಿಸಿರುವ ಸೌರ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ರೂಪಿಸಿರುವ ಯೋಜನೆಯಾಗಿದೆ. 2018ರ ಬಜೆಟ್​ನಲ್ಲೇ ಈ ಯೋಜನೆ ಘೋಷಣೆಯಾಗಿ (PM KUSUM Scheme) 10 ವರ್ಷಗಳಿಗೆ 48 ಸಾವಿರ ಕೋಟಿ ರೂ ವಿನಿಯೋಗಿಸಲು ನಿರ್ಧರಿಸಲಾಗಿದೆ. ಈ ಯೋಜನೆಯಿಂದ ಸೌರ ವಿದ್ಯುತ್ ಉತ್ಪಾದನೆ ಹೆಚ್ಚುವುದಲ್ಲದೇ ರೈತರಿಗೂ ಒಂದು ಆದಾಯ ಮೂಲವಾಗಬಲ್ಲುದು.

ಪಿಎಂ ಕುಸುಮ್ ಯೋಜನೆ ಎಂದರೆ ಪಿಎಂ ಕಿಸಾನ್ ಊರ್ಜಾ ಸುರಕ್ಷಾ ಮತ್ತು ಉತ್ಥಾನ ಮಹಾಭಿಯಾನ. ಕೇಂದ್ರದ ಹೊಸ ಮತ್ತು ಮರುಬಳಕೆ ಇಂಧನ ಸಚಿವಾಲಯದ ಅಡಿಯಲ್ಲಿ ಚಾಲನೆಯಲ್ಲಿರುವ ಯೋಜನೆಯಾಗಿದೆ. ಇದರಲ್ಲಿ ರೈತರು ತಮ್ಮ ಬಂಜರು ಭೂಮಿಯನ್ನು ಸೌರ ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಬಹುದು. ತಮ್ಮ ಸ್ವಂತ ಬಳಕೆಯ ಬಳಿಕ ಮಿಗುವ ಹೆಚ್ಚುವರಿ ವಿದ್ಯುತ್ ಅನ್ನು ಗ್ರಿಡ್​ಗೆ ಕಳುಹಿಸಿ, ಅದರಿಂದ ಆದಾಯ ಪಡೆಯಬಹುದು. ರಾಜ್ಯದ ಡಿಸ್ಕಾಮ್​ಗಳು ಅಥವಾ ವಿದ್ಯುತ್ ಪ್ರಸರಣ ಸಂಸ್ಥೆಗಳು ರೈತರಿಂದ ಸೌರ ವಿದ್ಯುತ್ ಖರೀದಿ ಮಾಡುತ್ತವೆ.

ಈ ಯೋಜನೆಯ ಆರಂಭದಲ್ಲಿ ಸರ್ಕಾರ 17.5 ಲಕ್ಷದಷ್ಟು ಜಾಲಮುಕ್ತ ಸೌರ ನೀರಾವರಿ ಪಂಪ್​ಸೆಟ್​ಗಳನ್ನು ವಿತರಿಸಿತ್ತು. ಬಂಜರು ಪ್ರದೇಶಗಳಲ್ಲಿ 10 ಸಾವಿರ ಮೆ.ವ್ಯಾ. ಸೋಲಾರ್ ಪವರ್ ಘಟಕಗಳನ್ನು ನಿರ್ಮಿಸಲಾಗಿತ್ತು. ಅದಕ್ಕಾಗಿ 2 ಮೆ.ವ್ಯಾ.ವರೆಗಿನ ಸಾಮರ್ಥ್ಯದ ಹಲವು ಸಣ್ಣ ಸೌರ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಯಿತು. ಜಾಲ ಸಂಪರ್ಕಿತ 15 ಲಕ್ಷ ಕೃಷಿ ಪಂಪ್​ಗಳಿಗೆ ಸೌರಶಕ್ತಿ ಅಳವಡಿಸುವ ಗುರಿ ಇದೆ.

ಇದನ್ನೂ ಓದಿRs 5 Coin: ಭಾರತದ 5 ರೂ ನಾಣ್ಯ ಬಳಸಿ ಬಾಂಗ್ಲಾದಲ್ಲಿ ಬ್ಲೇಡ್ ಬಿಸಿನೆಸ್? ಆರ್​ಬಿಐ ಕಾಯಿನ್ ಕಥೆ

ಸರ್ಕಾರ ತನ್ನಲ್ಲಿರುವ ಎಲ್ಲಾ ಪಂಪ್​ಸೆಟ್​ಗಳು ಮತ್ತು ಕೊಳವೆಬಾವಿಗಳಿಗೆ ಸೌರ ವಿದ್ಯುತ್ ಅಳವಡಿಸಿದೆ. ಒಟ್ಟಾರೆ, ಕೃಷಿಯಲ್ಲಿ ಸಂಪೂರ್ಣ ಸೌರವಿದ್ಯುತ್ ಬಳಕೆ ಆಗಬೇಕೆಂಬುದು ಈ ಯೋಜನೆಯ ಗುರಿ. ಸೌರವಿದ್ಯುತ್ ವ್ಯವಸ್ಥೆಯ ಅಳವಡಿಕೆಯಲ್ಲಿ ರೈತರಿಗೆ ತಗುಲುವ ವೆಚ್ಚದಲ್ಲಿ ಶೇ. 60ರಷ್ಟು ಭಾಗವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಭರಿಸುತ್ತವೆ. ಶೇ. 30ರಷ್ಟು ವೆಚ್ಚಕ್ಕೆ ರೈತರಿಗೆ ಬ್ಯಾಂಕ್ ಸಾಲ ಲಭ್ಯ ಇರುತ್ತದೆ. ಇನ್ನುಳಿದ ಶೇ. 10ರಷ್ಟು ವೆಚ್ಚಕ್ಕೆ ರೈತರು ಸ್ವಂತ ಜೇಬಿನಿಂದ ಹಣ ಹಾಕಬೇಕಾಗಬಹುದು. ಒಟ್ಟಾರೆ, ಸೌರವಿದ್ಯುತ್ ವ್ಯವಸ್ಥೆ ಅಳವಡಿಕೆಯಲ್ಲಿ ರೈತರಿಗೆ ಶೇ. 60ರಷ್ಟು ಸಬ್ಸಿಡಿ ಸಿಗುತ್ತದೆ. ಇನ್ನುಳಿದ ವೆಚ್ಚವನ್ನು ಕೆಲವೇ ವರ್ಷಗಳಲ್ಲಿ ರೈತರು ಮರಳಿಪಡೆದು ಆದಾಯ ಮೂಲವಾಗಿ ಮಾಡಿಕೊಳ್ಳಬಹುದು.

ಈ ಯೋಜನೆಯಿಂದ ಡಿಸ್ಕಾಂಗಳ ಮೇಲಿನ ಹೊರೆ ತಗ್ಗುತ್ತದೆ. ಡಿಸ್ಕಾಂಗಳಿಗೆ ಸಬ್ಸಿಡಿ ಕೊಡುವ ಕೇಂದ್ರ ಸರ್ಕಾರಕ್ಕೂ ಖರ್ಚು ಮಿಗುತ್ತದೆ. ಅಲ್ಲದೇ ಕುಸುಮ್ ಯೋಜನೆಯು ಉದ್ಯೋಗಸೃಷ್ಟಿಗೂ ಕಾರಣವಾಗುತ್ತದೆ. ಒಂದು ಮೆಗಾ ವ್ಯಾಟ್ ಸಣ್ಣ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಸ್ಥಾಪನೆಯಿಂದ 24.50 ಉದ್ಯೋಗವರ್ಷ ಸೃಷ್ಟಿಯಾಗುವ ನಿರೀಕ್ಷೆ ಇದೆ. ಈ ಲೆಕ್ಕಾಚಾರದಲ್ಲಿ ಕುಸುಮ್ ಯೋಜನೆಯಿಂದ ಒಟ್ಟು 7.55 ಲಕ್ಷ ಉದ್ಯೋಗವರ್ಷ ನಿರ್ಮಾಣವಾಗಬಹುದು. ಒಂದು ಉದ್ಯೋಗವರ್ಷ ಎಂದರೆ ಒಬ್ಬ ವ್ಯಕ್ತಿ ಒಂದು ವರ್ಷ ಕೆಲಸ ಮಾಡುವುದು.

ಇದನ್ನೂ ಓದಿMarch 1 Rules Change: ಮಾರ್ಚ್ 1ರಿಂದ ಹೊಸ ಬದಲಾವಣೆಗಳು; ಜನಸಾಮಾನ್ಯರಿಗೆ ಮುಖ್ಯವಾದದ್ದೇನು?

ಒಬ್ಬ ರೈತ ತನ್ನ ಜಮೀನಿನಲ್ಲಿ 500 ಕಿ.ವ್ಯಾಟ್​ನಿಂದ 2 ಮೆ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಮಾಡಬಹುದು. 2 ಮೆ.ವ್ಯಾ. ವಿದ್ಯುತ್ ಘಟಕಕ್ಕೆ ಕೋಟಿಗಟ್ಟಲೆ ವೆಚ್ಚ ಇರುತ್ತದೆ. ಒಂದು ಕೋಟಿ ವೆಚ್ಚದ್ದಾದರೆ ರೈತರು ಕೈಯಿಂದ ತೆರಬೇಕಿರುವುದು 10 ಲಕ್ಷ ರೂ ಮಾತ್ರ.

ಒಬ್ಬ ರೈತನಿಗೆ ಇಷ್ಟು ಹಣ ಭರಿಸುವುದು ಕಷ್ಟವಾದರೆ ವಿವಿಧ ರೈತರು ಸೇರಿ ಸೌರ ಘಟಕ ಸ್ಥಾಪಿಸಬಹುದು. ಅಥವಾ ಗ್ರಾಮ ಪಂಚಾಯಿತಿ ವತಿಯಿಂದಲೂ ಈ ಕೆಲಸ ಆಗಬಹುದು. ಪಿಎಂ ಕುಸುಮ್ ಯೋಜನೆಯ ಪೋರ್ಟಲ್​ಗೆ ಹೋದರೆ ಹೆಚ್ಚಿನ ಮಾಹಿತಿ ಲಭ್ಯ ಇರುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:52 pm, Mon, 27 February 23