ಮನೆ ಬಾಡಿಗೆ
ಬೆಂಗಳೂರಿನಂಥ ನಗರಗಳಲ್ಲಿ ಮನೆ ಅಥವಾ ಅಂಗಡಿಗಳನ್ನು ಬಾಡಿಗೆ ನೀಡುವಾಗ ಕರಾರನ್ನು (rental deed) ಕಡ್ಡಾಯವಾಗಿ ಮಾಡಿಕೊಳ್ಳಲಾಗುತ್ತದೆ. ಈ ಬಾಡಿಗೆ ಕರಾರು ಮಾಲೀಕರಿಗೂ ಕ್ಷೇಮ, ಬಾಡಿಗೆದಾರರಿಗೂ ಕ್ಷೇಮಕರ. ಸಾಮಾನ್ಯವಾಗಿ ರೆಂಟಲ್ ಅಗ್ರೀಮೆಂಟ್ 11 ತಿಂಗಳಿಗೆ ಮಾಡಿಸಲಾಗುತ್ತದೆ. 11 ತಿಂಗಳ ಬಳಿಕ ಅಗ್ರೀಮೆಂಟ್ ನವೀಕರಿಸಲಾಗುತ್ತದೆ. ಮಾಲೀಕರು ಮತ್ತು ಬಾಡಿಗೆದಾರರ ಇಬ್ಬರಿಗೂ ಒಂದಷ್ಟು ಬಾಧ್ಯತೆಗಳಿರುತ್ತವೆ. ಭಾರತದಲ್ಲಿ ಬಾಡಿಗೆಯ ನಿಯಮಗಳು ಸಮಗ್ರವಾಗಿಲ್ಲವಾದರೂ ಒಂದಷ್ಟು ಮೂಲಭೂತ ನಿಯಮಗಳನ್ನು ರೂಪಿಸಲಾಗಿದೆ. ಕರ್ನಾಟಕದ ಬಾಡಿಗೆ ನಿಯಮ ಕಾಯ್ದೆಯಲ್ಲಿ ಸಾಮಾನ್ಯ ಸಮಸ್ಯೆಗಳಿಗೆ ಸ್ಪಷ್ಟ ಕಾನೂನು ಇದೆ. ಬಾಡಿಗೆದಾರರನ್ನು ಖಾಲಿ ಮಾಡಿಸುವ ವಿಚಾರ, ಅಥವಾ ಬಾಡಿಗೆದಾರ ಮನೆ ಖಾಲಿ ಮಾಡುವ ವಿಚಾರದಲ್ಲಿ ಕಾಯ್ದೆಯಲ್ಲಿ ನಿರ್ದಿಷ್ಟ ನಿಯಮಗಳಿವೆ.
ಮನೆ ಮಾಲೀಕರು ಬಾಡಿಗೆದಾರರನ್ನು ಏಕಾಏಕಿ ಖಾಲಿ ಮಾಡಿಸಲು ಆಗುವುದಿಲ್ಲ. ಖಾಲಿ ಮಾಡಿಸುವ ಮುನ್ನ ಬಾಡಿಗೆದಾರರಿಗೆ ಮೂರು ತಿಂಗಳು ಮುಂಚೆ ನೋಟೀಸ್ ಕೊಡಬೇಕು ಎಂದು ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ ಹೇಳುತ್ತದೆ. ಹಾಗೆಯೇ, ಬಾಡಿಗೆದಾರರು ಕೂಡ ಖಾಲಿ ಮಾಡಬೇಕೆಂದರೆ ಮೂರು ತಿಂಗಳು ಮುನ್ನ ಮಾಲೀಕರ ಗಮನಕ್ಕೆ ತರಬೇಕು ಎನ್ನುತ್ತದೆ ನಿಯಮ. ಬಾಡಿಗೆ ವಿಚಾರದಲ್ಲಿ ಇನ್ನೂ ಕೆಲ ಪ್ರಮುಖ ನಿಯಮಗಳನ್ನು ಎಲ್ಲರೂ ತಿಳಿದಿರಬೇಕು. ಅದರ ವಿವರ ಇಲ್ಲಿದೆ…
ಇದನ್ನೂ ಓದಿ: ಎಸ್ಬಿಎಂನಲ್ಲಿ ಕೇವಲ 2,000 ರೂಗೆ ಎಫ್ಡಿ ಇಡಿ; ಸ್ಟೆಪಪ್ ಕ್ರೆಡಿಟ್ ಕಾರ್ಡ್ ಪಡೆಯಿರಿ
ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1999: ಮಾಲೀಕರ ಜವಾಬ್ದಾರಿಗಳು
- ಮಾಲೀಕರು ತಮ್ಮ ಮನೆ ಅಥವಾ ಅಂಗಡಿಗಳನ್ನು ರೆಂಟ್ ಅಥಾರಿಟಿ ಬಳಿ ನೊಂದಾಯಿಸಬೇಕು.
- ಬಾಡಿಗೆ ಕರಾರು ಅಥವಾ ರೆಂಟಲ್ ಡೀಡ್ ಅನ್ನು ಲಿಖಿತ ಸ್ವರೂಪದಲ್ಲಿ ಮಾಡಿಸಿ, ಸರಿಯಾಗಿ ನೊಂದಣಿ ಮಾಡಿಸಿರಬೇಕು.
- ಬಾಡಿಗೆದಾರರನ್ನು ಮನೆಯಿಂದ ಖಾಲಿ ಮಾಡಿಸಬೇಕಿದ್ದರೆ 3 ತಿಂಗಳು ಮುಂಚಿತವಾಗಿ ನೋಟೀಸ್ ಕೊಡಬೇಕು.
- ಮನೆ ಕಟ್ಟುವಾಗ ಅದರ ಆಸ್ತಿ ಮೌಲ್ಯ ಎಷ್ಟಿತ್ತು, ಮನೆ ಕಟ್ಟಲು ಎಷ್ಟು ಖರ್ಚಾಯಿತು ಅದರ ಆಧಾರದ ಮೇಲೆ ಬಾಡಿಗೆ ಮೊತ್ತ ನಿಗದಿ ಆಗಬೇಕು.
- ಬಾಡಿಗೆ ನೀಡುವ ಮನೆ ವಾಸಯೋಗ್ಯವಾಗಿರುವಂತಿರಬೇಕು. ಬಾಡಿಗೆ ಜೊತೆಗೆ ಇತರ ಪೂರಕ ಸೌಲಭ್ಯಗಳನ್ನು ಒದಗಿಸಬಹುದಾದರೂ ಅದಕ್ಕೆ ವಿಧಿಸುವ ಶುಲ್ಕ ಬಾಡಿಗೆಯ ಮೊತ್ತದ ಶೇ. 15ಕ್ಕಿಂತ ಹೆಚ್ಚಿರಬಾರದು.
- ಬಾಡಿಗೆದಾರರಿಗೆ ಅವರ ಜಾತಿ, ಧರ್ಮ, ಲಿಂಗ ಮತ್ತಿತರ ಯಾವುದೇ ವಿಚಾರದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
- ಬಾಡಿಗೆದಾರರ ಖಾಸಗಿತನದ ಹಕ್ಕಿಗೆ ಚ್ಯುತಿ ಆಗಬಾರದು. ಬಾಡಿಗೆದಾರರ ಅನುಮತಿ ಇಲ್ಲದೇ ಅವರ ಸ್ಥಳಕ್ಕೆ ಹೋಗುವ ಸ್ವಾತಂತ್ರ್ಯ ಮಾಲೀಕರಿಗೆ ಇರುವುದಿಲ್ಲ.
- ಒಪ್ಪಂದದ 11 ತಿಂಗಳ ಅವಧಿಯಲ್ಲಿ ಬಾಡಿಗೆ ಏರಿಕೆ ಮಾಡುವಂತಿಲ್ಲ.
ಇದನ್ನೂ ಓದಿ: ಮಾಜಿ ಐಸಿಐಸಿಐ ಸಿಇಒ ಚಂದಾ ಕೋಚರ್ ಬಂಧನ, ಇದು ಅಧಿಕಾರ ದುರುಪಯೋಗ: ಸಿಬಿಐಗೆ ಹೈಕೋರ್ಟ್ ಛೀಮಾರಿ
ಕರ್ನಾಟಕ ಬಾಡಿಗೆ ನಿಯಂತ್ರಣ ಕಾಯ್ದೆ 1999: ಬಾಡಿಗೆದಾರರ ಜವಾಬ್ದಾರಿಗಳು
- ಬಾಡಿಗೆದಾರರು ಒಪ್ಪಂದದಲ್ಲಿ ತಿಳಿಸಿರುವ ಪ್ರಕಾರ ಸರಿಯಾದ ಸಮಯಕ್ಕೆ ಬಾಡಿಗೆ ಪಾವತಿಸಬೇಕು.
- ಬಾಡಿಗೆ ಪಡೆದಿರುವ ಮನೆಯನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗುವುದು ಬಾಡಿಗೆದಾರರ ಕರ್ತವ್ಯ. ಮನೆಯೊಳಗಿನ ಯಾವುದಾದರೂ ವಸ್ತು ರಿಪೇರಿಗೆ ಬಂದರೆ ಅದನ್ನು ತಮ್ಮ ವೆಚ್ಚದಲ್ಲೇ ದುರಸ್ತಿ ಮಾಡಿಸಬೇಕು.
- ಬಾಡಿಗೆ ಒಪ್ಪಂದದಲ್ಲಿ ತಿಳಿಸಲಾಗಿರುವ ಉದ್ದೇಶಕ್ಕೆ ಮಾತ್ರ ಮನೆ ಬಳಕೆ ಆಗಬೇಕು. ಅಂದರೆ ವಾಸಕ್ಕೆಂದು ಒಪ್ಪಂದವಾಗಿದ್ದರೆ ವಾಸಕ್ಕಷ್ಟೇ ಬಳಕೆಯಾಗಬೇಕು.
- ಮನೆಯನ್ನು ಬಾಡಿಗೆಗೆ ಪಡೆದು ಅದನ್ನು ಬೇರೆಯವರಿಗೆ ಮರುಬಾಡಿಗೆ ನೀಡಲು ಆಗುವುದಿಲ್ಲ. ಹಾಗೆ ಮಾಡಬೇಕೆಂದಿದ್ದರೆ ಮಾಲೀಕರಿಂದ ಪೂರ್ವಾನುಮತಿ ಪಡೆಯಬೇಕು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ