ಒಂದರ ಹಿಂದೊಂದು ಸ್ಟ್ರೈಕ್, ಬಂದ್; ಪೇಚಿಗಿಟ್ಟುಕೊಂಡ ಉದ್ಯಮಗಳು; ರಾಜ್ಯಕ್ಕೆ ಆದ ನಷ್ಟ ಎಷ್ಟು ಗೊತ್ತಾ?

|

Updated on: Sep 29, 2023 | 5:33 PM

Cauvery Water Dispute and Bandhs: ಇವತ್ತು ಕರ್ನಾಟಕ ಬಂದ್ ಮಾಡಿರುವಾಗ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್ ಯಾಕೆ ಮಾಡಬೇಕಿತ್ತು? ಒಂದು ದಿನ ಸ್ತಬ್ಧವಾದರೆ ಉದ್ದಿಮೆಗಳಿಗೆ ಅದೆಷ್ಟು ನಷ್ಟ ಆಗುತ್ತದೆ ಗೊತ್ತಾ ಎಂದು ಕೇಳುವ ಬೆಂಗಳೂರಿನ ಉದ್ಯಮಿಗಳು, ಕಾವೇರಿ ನೀರು ಪ್ರಾಧಿಕಾರ ಮತ್ತು ನ್ಯಾಯಮಂಡಳಿಗಳ ತೀರ್ಪಿನ ಮೇಲೆ ಬಂದ್ ಯಾವ ಪರಿಣಾಮ ಬೀರುವುದಿಲ್ಲ. ಇವು ಸುಮ್ಮನೆ ವ್ಯರ್ಥ ಎನ್ನುತ್ತಾರೆ. ಬ್ರ್ಯಾಂಡ್ ಬೆಂಗಳೂರಿಗೂ ಧಕ್ಕೆ ಆಗುತ್ತದೆ. ಹಲವು ಕಂಪನಿಗಳು ಬೇರೆ ರಾಜ್ಯಗಳಿಗೆ ವಲಸೆ ಹೋಗಬಹುದು.

ಒಂದರ ಹಿಂದೊಂದು ಸ್ಟ್ರೈಕ್, ಬಂದ್; ಪೇಚಿಗಿಟ್ಟುಕೊಂಡ ಉದ್ಯಮಗಳು; ರಾಜ್ಯಕ್ಕೆ ಆದ ನಷ್ಟ ಎಷ್ಟು ಗೊತ್ತಾ?
ಕಾವೇರಿ ಹೋರಾಟ
Follow us on

ಬೆಂಗಳೂರು, ಸೆಪ್ಟೆಂಬರ್ 29: ಇವರಿಗೆ ಕುಡಿಯಲು ಕಾವೇರಿ ನೀರು ಬೇಕು, ಆ ನೀರಿಗಾಗಿ ಹೋರಾಟ ಬೇಕಿಲ್ಲ ಎಂದು ಇವತ್ತಿನ ಕರ್ನಾಟಕ ಬಂದ್ (Karnataka Bandh) ಹೋರಾಟದಲ್ಲಿ ಪಾಲ್ಗೊಂಡವರು ಐಟಿ ಮತ್ತಿತರ ಉದ್ಯಮದವರಿಗೆ ಹಿಡಿಶಾಪ ಹಾಕುವುದನ್ನು ಟಿವಿಗಳಲ್ಲಿ ನೋಡಿರಬಹುದು. ಒಂದೊಂದು ದಿನವೂ ಮುಖ್ಯವೆನಿಸಿ ಕಾರ್ಯ ನಿರ್ವಹಿಸುವ ಉದ್ದಿಮೆಗಳ ಮೇಲೆ ಬಂದ್​ನ ಪರಿಣಾಮ ಎಂಥದ್ದು ಎಂದು ಯಾರೂ ಯೋಚಿಸುವುದಿಲ್ಲ ಎನ್ನುತ್ತಾರೆ ಉದ್ಯಮಿಗಳು., ಕೆಲವೇ ದಿನಗಳ ಅಂತರದಲ್ಲಿ ಮೂರು ಬಂದ್ ಮತ್ತು ಸ್ಟ್ರೈಕ್​ಗಳಿಗೆ ಸಿಲಿಕಾನ್ ಸಿಟಿ ಬೆಂಗಳೂರು ಸಾಕ್ಷಿಯಾಗಿದೆ. ಸೆಪ್ಟೆಂಬರ್ 11ರಂದು ಕ್ಯಾಬ್ ಮತ್ತು ಆಟೊರಿಕ್ಷಾ ಚಾಲಕರು ವಿವಿಧ ಬೇಡಿಕೆಗಳನ್ನು ಇಟ್ಟು ಪ್ರತಿಭಟನೆ ನಡೆಸಿದ್ದರು. ಆಗ ಬೆಂಗಳೂರು ಭಾಗಶಃ ಸ್ತಬ್ಧವಾಗಿತ್ತು. ತಮಿಳುನಾಡಿಗೆ ಕಾವೇರಿ ನೀರು ಹರಿಸಬಾರದು ಎಂದು ಆಗ್ರಹಿಸಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್ (Bengaluru Bandh) ಮಾಡಲಾಯಿತು. ಇದೀಗ ಅದೇ ಕಾರಣಕ್ಕೆ ಕರ್ನಾಟಕ ಬಂದ್ ಮಾಡಲಾಗಿದೆ. ಸೆ. 26 ಮತ್ತು ಇಂದು ಸೆ. 29 ಈ ಎರಡು ದಿನಗಳೂ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ. ಐಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಕೊಡಲಾಗಿದೆ. ಇತರ ಹಲವು ಕಂಪನಿಗಳು ಅರ್ಧ ಸಿಬ್ಬಂದಿಯೊಂದಿಗೆ ಕೆಲಸ ಮಾಡಬೇಕಾಗಿದೆ.

ಬಂದ್​ನಿಂದ ಎಷ್ಟು ನಷ್ಟ ಗೊತ್ತಾ?

ಇವತ್ತಿನ ಕರ್ನಾಟಕ ಬಂದ್​ನಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಆಗುವ ತೆರಿಗೆ ನಷ್ಟ ಬರೋಬ್ಬರಿ 400 ಕೋಟಿ ರೂ ಎಂದು ಕರ್ನಾಟಕ ವಾಣಿಜ್ಯ ಮತ್ತು ಉದ್ಯಮ ಮಂಡಳಿಗಳ ಒಕ್ಕೂಟ (ಎಫ್​ಕೆಸಿಸಿಐ) ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ಅವರು ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.

ಇನ್ನು, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಬಿ.ವಿ. ಗೋಪಾಲ್ ರೆಡ್ಡಿ ಅವರು, ಸೆಪ್ಟೆಂಬರ್ 26ರಂದು ನಡೆದ ಬೆಂಗಳೂರು ಬಂದ್​ನಿಂದ ಆದ ನಷ್ಟ 200ರಿಂದ 250 ಕೋಟಿ ರೂ ಇರಬಹುದು ಎಂದಿದ್ದಾರೆ. ಇವತ್ತು ನಡೆದ ಬಂದ್​ನಿಂದ ರಾಜ್ಯಕ್ಕೆ 500ರಿಂದ 600 ಕೋಟಿ ರೂನಷ್ಟು ನಷ್ಟವಾಗಬಹುದು. ಕಾವೇರಿ ನೀರು ನಮಗೆ ಬೇಕು. ಆದರೆ, ಬಂದ್ ಮಾಡಿದರೆ ಪರಿಸ್ಥಿತಿ ಬದಲಾಗಲ್ಲ. ಇದು ಜನರಿಗೆ ಹಾನಿ ಮಾಡುತ್ತದೆ ಅಷ್ಟೇ ಎಂದು ಅವರು ಮನಿಕಂಟ್ರೋಲ್ ಬಳಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ವಾದಕ್ಕಿಲ್ಲ ಕಿಂಚಿತ್ತೂ ಕಿಮ್ಮತ್ತು: ತಮಿಳುನಾಡಿಗೆ ಪ್ರತಿ ದಿನ 3000 ಕ್ಯೂಸೆಕ್ ನೀರು ಹರಿಸುವಂತೆ ಮತ್ತೆ ಆದೇಶ

ಸಂಬಳ ನಷ್ಟ

ಇನ್ನು, ಬೆಂಗಳೂರಿನ ಪೀಣ್ಯದಂಥ ಹಲವು ಕೈಗಾರಿಕಾ ಪ್ರದೇಶಗಳಲ್ಲಿ ಅಸಂಖ್ಯಾತ ಎಂಎಸ್​ಎಂಇಗಳಿವೆ. ಒಂದು ದಿನ ಬಂದ್ ಆದರೆ ಒಂದು ಸಣ್ಣ ಸಂಸ್ಥೆಗೆ ಒಂದು ದಿನದ ಸಂಬಳದಲ್ಲಿ 50ರಿಂದ 60 ಸಾವಿರ ರೂ ನಷ್ಟ ಆಗುತ್ತದೆ.

ಡೆಡ್​ಲೈನ್ ಮುಟ್ಟೋದು ಕಷ್ಟ

ಹಲವು ಉದ್ದಿಮೆಗಳು ಡೆಡ್​ಲೈನ್​ನಲ್ಲಿ ಕೆಲಸ ಮಾಡುತ್ತವೆ. ಸರ್ಕಾರದಿಂದಲೂ ಗುತ್ತಿಗೆ ಪಡೆದಿರುತ್ತವೆ. ಗಡುವಿನೊಳಗೆ ಉತ್ಪನ್ನಗಳನ್ನು ಸಿದ್ಧಪಡಿಸಿ ಸರಬರಾಜು ಮಾಡಲಿಲ್ಲವೆಂದರೆ ದಂಡ ಕಟ್ಟಿಕೊಡಬೇಕಾಗುತ್ತದೆ.

ಉದ್ದಿಮೆಗಳು ಗುಳೆ ಹೋದರೆ ಕಥೆ ಏನು?

ರಾಜ್ಯದ, ಅದರಲ್ಲೂ ಬೆಂಗಳೂರಿಗೆ ಆಧಾರವಾಗಿರುವುದು ಅದರ ಐಟಿ ಉದ್ಯಮ ಮತ್ತು ವಿವಿಧ ಕೈಗಾರಿಕೆಗಳು. ರಾಜ್ಯದಲ್ಲಿ 750ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿವೆ. 5,500ಕ್ಕೂ ಹೆಚ್ಚು ಐಟಿ ಕಂಪನಿಗಳಿವೆ. ಇವುಗಳಲ್ಲಿ 12 ಲಕ್ಷ ಮಂದಿ ನೇರ ಉದ್ಯೋಗಿಗಳಿದ್ದಾರೆ. 31 ಲಕ್ಷಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳಿಗೆ ಈ ಐಟಿ ಕಂಪನಿಗಳು ಕಾರಣವಾಗಿವೆ. ರಾಜ್ಯದ ಜಿಡಿಪಿಯ ಶೇ. 25ರಷ್ಟು ಪಾಲು ಈ ಐಟಿ ಉದ್ಯಮದಿಂದಲೇ ಇದೆ.

ಇದನ್ನೂ ಓದಿ: ಸಿಡಬ್ಲ್ಯೂಎಂಎ ಆದೇಶ: ವಾಸ್ತಾಂಶ ಮುಂದಿಟ್ಟರೂ ಹಿನ್ನಡೆಯಾಗುತ್ತಿದೆ ಎಂದ ಸಿದ್ದರಾಮಯ್ಯ

ಅಷ್ಟೇ ಅಲ್ಲ, ಭಾರತದ 155 ಬಿಲಿಯನ್ ಡಾಲರ್ ಮೊತ್ತದ ರಫ್ತಿನಲ್ಲಿ ಶೇ. 40ರಷ್ಟು ಪಾಲು ಐಟಿ ಉದ್ಯಮದಿಂದಲೇ ಬರುತ್ತದೆ. ಅಷ್ಟರಮಟ್ಟಿಗೆ ಮುಖ್ಯವಾಗಿರುವ ಉದ್ಯಮ ಸರಾಗವಾಗಿ ನಡೆಯಲು ಬೇಕಾದ ಪೂರಕ ವಾತಾವರಣ ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಮಾತುಮಾತಿಗೂ ಬಂದ್ ಮಾಡಿದರೆ ಕಷ್ಟ ಎನ್ನುತ್ತಾರೆ ಉದ್ಯಮಿಗಳು.

ವಿಧಾನಸಭೆ ಎದುರು ಪ್ರತಿಭಟನೆಗೆಂದು ಮೈದಾನಗಳಿರಲಿ…

ಭಿನ್ನಮತ, ಪ್ರತಿಭಟನೆ ಎಂಬುದು ಪ್ರಜಾತಂತ್ರದ ಅಗತ್ಯ ಭಾಗ. ವಿಧಾನಸಭೆ, ಸಂಸತ್ತಿನ ಎದುರು ಪ್ರತಿಭಟನೆಗೆಂದು ಪ್ರತ್ಯೇಕ ಮೈದಾನ ಇರಲಿ. ಇಲ್ಲಿ ಪ್ರತಿಭಟನೆ ಮಾಡಿದರೆ ಸರ್ಕಾರಿ ನೌಕರರಿಗೆ ತಮ್ಮ ಜವಾಬ್ದಾರಿ ನೆನಪಾಗಬಹುದು. ಈಗ ಪ್ರತಿಭಟನೆಗಳು ಚದುರಿ ಹೋಗಿರುವುದರಿಂದ ಜನಪ್ರತಿನಿಧಿಗಳಿಗೆ ಇದರ ಬಿಸಿ ತಾಕುವುದಿಲ್ಲ ಎಂದು ಎನ್​ಜಿಒವೊಂದರ ಸ್ಥಾಪಕ ಸಂದೀಪ್ ಅನಿರುದ್ಧನ್ ಹೇಳುತ್ತಾರೆ. ಹಾಗೆಯೇ, ಸರ್ಕಾರ ತನ್ನ ಬಳಿ ಜಲ ನೀತಿ ಇರುವುದನ್ನೇ ಮರೆತುಬಿಟ್ಟಿದೆ. ಜಲ ಸಂಸರಕ್ಷಣೆ ಕಾರ್ಯಗಳ ಬಗ್ಗೆ ಸರ್ಕಾರಕ್ಕೆ ಆಸಕ್ತಿಯೇ ಇಲ್ಲ ಎಂದು ಅನಿರುದ್ಧನ್ ವಿಷಾದಿಸುತ್ತಾರೆ.

ಇದನ್ನೂ ಓದಿ: ಕಾವೇರಿ ನೀರು ಸಂಕಷ್ಟ ಸೂತ್ರ ರೆಡಿ ಮಾಡ್ತೇವೆ, ಕರ್ನಾಟಕ ಬಂದ್ ಅವಶ್ಯಕತೆ ಇರಲಿಲ್ಲ: ಡಿಕೆ ಶಿವಕುಮಾರ್

ಬಂದ್​ನಿಂದ ಏನು ಪ್ರಯೋಜನ?

ನೀರಿಗಾಗಿ ಹೋರಾಟ ನಡೆಸುವುದು ಹೌದು. ಆದರೆ, ಬಂದ್ ಮಾಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ಬಂದ್ ನೋಡಿ ಸುಪ್ರೀಂಕೋರ್ಟ್ ತೀರ್ಪು ಬದಲಾಗುವುದಿಲ್ಲ. ಕೋರ್ಟ್ ಮೇಲೆ ಬಂದ್ ಯಾವ ಪರಿಣಾಮ ಬೀರುವುದಿಲ್ಲ. ಒಂದು ದಿನ ಬಂದ್ ಆದರೆ ಅದರ ಪರಿಣಾಮ ಅನುಭವಿಸುವುದು ಚಾಲಕರು, ಡೆಲಿವರಿ ಬಾಯ್​ಗಳು. ಹಾಗೆಯೇ, ವಿದೇಶಗಳಿಗೆ ರಫ್ತು ಮಾಡುವ ಕಂಪನಿಗಳಿಗೆ ಹೊಡೆತ ಬೀಳುತ್ತವೆ. ಬಂದ್​ನಿಂದಾಗಿ ಒಂದು ದಿನ ಉತ್ಪಾದನೆ ಆಗಿಲ್ಲ ಎಂದು ಈ ಕಂಪನಿಗಳು ಸಬೂಬು ಹೇಳಲು ಆಗುವುದಿಲ್ಲ ಎಂದು ಅಸೋಚಾಮ್ ಸದಸ್ಯ ಆರ್.ಕೆ. ಮಿಶ್ರಾ ಹೇಳುತ್ತಾರೆ.

ಬೆಂಗಳೂರಿನಲ್ಲಿ ಎರಡೆರಡು ದಿನ ಬಂದ್ ಮಾಡುವ ಅಗತ್ಯತೆ ಏನಿತ್ತು ಎಂದು ಇದೇ ವೇಳೆ ಹಲವರು ಪ್ರಶ್ನಿಸಿದ್ದಾರೆ. ಪ್ರತಿಭಟನಾಕಾರರು ಕೂತು ಚರ್ಚಿಸಿ ಯಾವುದಾದರೂ ಒಂದು ದಿನವನ್ನು ಬಂದ್​ಗೆ ಆಯ್ಕೆ ಮಾಡಬಹುದಿತ್ತು ಎಂದು ಇವರು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:10 pm, Fri, 29 September 23