ಸಿಡಬ್ಲ್ಯೂಎಂಎ ಆದೇಶ: ವಾಸ್ತವಾಂಶ ಮುಂದಿಟ್ಟರೂ ಹಿನ್ನಡೆಯಾಗುತ್ತಿದೆ ಎಂದ ಸಿದ್ದರಾಮಯ್ಯ
ತಮಿಳುನಾಡಿಗೆ ನೀರು ಹರಿಸುವ ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಮತ್ತೆ ಹಿನ್ನಡೆಯಾಗುತ್ತಲೇ ಇದೆ. ಪ್ರತೀ ಬಾರಿಯೂ ತಮಿಳುನಾಡು ಪರ ಆದೇಶ ಬರುತ್ತಲೇ ಇದ್ದು, ಕರ್ನಾಟಕದ ಅಧಿಕಾರಿಗಳು ಸರಿಯಾಗಿ ವಾದ ಮಂಡಿಸುತ್ತಿಲ್ಲ ಎಂಬ ಆರೋಪವಿದೆ. ಇಂದಿನ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವಾಸ್ತವಾಂಶ ಮುಂದಿಟ್ಟರೂ ಹಿನ್ನಡೆಯಾಗುತ್ತಿದೆ ಎಂದು ಹೇಳಿದ್ದಾರೆ.
ಬೆಂಗಳೂರು, ಸೆ.29: ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು (CWMA) ಕರ್ನಾಟಕಕ್ಕೆ ಆದೇಶ ಹೊರಡಿಸಿದೆ. ಈ ಬಗ್ಗೆ ರೈತರು ಹಾಗೂ ಕನ್ನಡಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಆದೇಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ವಾಸ್ತವಾಂಶ ಮುಂದಿಟ್ಟರೂ ಹಿನ್ನಡೆಯಾಗುತ್ತಿದೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಇಂದು ಸಿಡಬ್ಲ್ಯೂಎಂಎ ಸಭೆ ಇತ್ತು. ನಾವು ಇದರ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನೆ ಮಾಡಲು ಸಾಧ್ಯವಾ ಅಂತಾ ಕಾನೂನು ತಜ್ಞರ ತಂಡದ ಜೊತೆ ಕೇಳಿದ್ದೇನೆ. ಇಂದು ಸುಪ್ರೀಂ ಕೋರ್ಟ್ ನಿವೃತ್ತ ಜಡ್ಜ್ಗಳ ಜೊತೆ ಸಭೆ ಕರೆದಿದ್ದೇನೆ ಎಂದರು.
ಇದನ್ನೂ ಓದಿ: Karnataka Bandh: ರ‍್ಯಾಲಿ ತೆಗೆಯಲು ಅವಕಾಶ ನೀಡದ ಸಿದ್ದರಾಮಯ್ಯ ಯಾರ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ? ವಾಟಾಳ್ ನಾಗರಾಜ್
ನಾವು ಪ್ರಾಧಿಕಾರದ ಮುಂದೆ ಎಲ್ಲಾ ವಾಸ್ತವಾಂಶಗಳನ್ನು ಮುಂದೆ ಇಟ್ಟಿದ್ದೇವೆ. ಆದರೂ ನಮಗೆ ಹಿನ್ನೆಡೆ ಆಗುತ್ತಿದೆ. ನೋಡೋಣ ಲೀಗಲ್ ಟೀಮ್, ತಜ್ಞರ ಜೊತೆ ಸಭೆ ಬಳಿಕ ಒಂದು ತೀರ್ಮಾನ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಸಭೆ
ಸಿಡಬ್ಲ್ಯೂಎಂಎ, ಸಿಡಬ್ಲ್ಯೂಆರ್ಸಿ ಸಭೆಯಲ್ಲಿ ಕರ್ನಾಟಕಕ್ಕೆ ಪದೇಪದೆ ಹಿನ್ನಡೆಯಾಗುತ್ತಿರುವ ಹಿನ್ನೆಲೆ ಸಿದ್ದರಾಮಯ್ಯ ಅವರು ಇಂದು ಸಂಜೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಕಾನೂನು ತಜ್ಞರ ಸಭೆ ಕರೆದಿದ್ದಾರೆ. ಸುಪ್ರೀಂಕೋರ್ಟ್, ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳು ಸಭೆಯಲ್ಲಿ ಭಾಗಿಯಾಗಲಿದ್ದು, ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್.ಎಲ್.ದತ್ತು, ಗೋಪಾಲಗೌಡ, ರವೀಂದ್ರಬಾಬು, ರಾಜೇಂದ್ರಬಾಬು, ಎಂ.ಎನ್.ವೆಂಕಟಾಚಲಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ.
CWMA ಆದೇಶ ಉಲ್ಲಂಘಿಸಿದರೆ ಆಗುವ ಸಾಧಕ ಬಾಧಕಗಳ ಬಗ್ಗೆ ಕಾನೂನು ತಜ್ಞರ ಸಭೆಯಲ್ಲಿ ಚರ್ಚೆ ನಡೆಯಲಿದೆ. ಅಲ್ಲದೆ, ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರು ಚರ್ಚೆ ನಡೆಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:28 pm, Fri, 29 September 23