
ನವದೆಹಲಿ, ಜೂನ್ 3: ಕಳೆದ ಹತ್ತು ವರ್ಷದಲ್ಲಿ ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧದ ಹೋರಾಟದಲ್ಲಿ (climate action) ಭಾರತ ಸಾಕಷ್ಟು ಪ್ರಗತಿ ಸಾಧಿಸಿದೆ. ಮರುಬಳಕೆ ಇಂಧನ ಅಥವಾ ರಿನಿವಬಲ್ ಎನರ್ಜಿ ಉತ್ಪಾದನೆ ಗಣನೀಯವಾಗಿ ಹೆಚ್ಚಿದೆ. ಅದರಲ್ಲೂ 2024-25ರ ಹಣಕಾಸು ವರ್ಷದಲ್ಲಿ ಭಾರತದ ರಿನಿವಬಲ್ ಎನರ್ಜಿ ಸಾಮರ್ಥ್ಯ ಅತಿಹೆಚ್ಚು ಏರಿಕೆ ಆಗಿದೆ. ಭಾರತವನ್ನು ಸಂಪೂರ್ಣವಾಗಿ ಹಸಿರು ದೇಶವನ್ನಾಗಿ ಮಾಡುವ ಗುರಿಯತ್ತ ಪ್ರಬಲ ಹೆಜ್ಜೆಗಳನ್ನು ಇಡಲಾಗುತ್ತಿದೆ. ಪಳೆಯುಳಿಕೆ ಇಂಧನ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸೌರಶಕ್ತಿ, ವಾಯುಶಕ್ತಿ ಇತ್ಯಾದಿ ಮರುಬಳಕೆ ಇಂಧನ ಉತ್ಪಾದನೆಯನ್ನು ಹೆಚ್ಚಿಸಲಾಗುತ್ತಿದೆ.
ಹತ್ತು ವರ್ಷಗಳ ಹಿಂದೆ (2015) ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ನಡೆದ 21ನೇ ಕಾನ್ಫರೆನ್ಸ್ ಆಫ್ ಪಾರ್ಟೀಸ್ (ಸಿಒಪಿ21) ಸಭೆಯಲ್ಲಿ ಭಾರತ ಇಟ್ಟ ಗುರಿ ನಿಗದಿಗಿಂತ ಬೇಗ ಈಡೇರಿದೆ. 2030ರಷ್ಟರಲ್ಲಿ ಪಳೆಯುಳಿಕೆ ಇಂಧನ ಬಳಸದೇ ಶೇ 40ರಷ್ಟು ವಿದ್ಯುತ್ ಉತ್ಪಾದನೆ ಸಾಧಿಸುತ್ತೇವೆ ಎಂದು ಭಾರತ 2015ರಲ್ಲಿ ಪ್ರಮಾಣ ಮಾಡಿತ್ತು. ಆ ಗುರಿ ಈಡೇರಲು 15 ವರ್ಷ ಬೇಕಾಗಲಿಲ್ಲ. ಆರೇ ವರ್ಷದಲ್ಲಿ ಆ ಮಟ್ಟವನ್ನು ಭಾರತ ಮುಟ್ಟಿದೆ.
ಇದನ್ನೂ ಓದಿ: ಭಾರತದ ಭರ್ಜರಿ ಪ್ರವಾಸೋದ್ಯಮ; ವರ್ಷಕ್ಕೆ ಒಂದು ಕೋಟಿ ವಿದೇಶೀ ಪ್ರವಾಸಿಗರು, 2.7 ಲಕ್ಷ ಕೋಟಿ ರೂ ವಿದೇಶೀ ವಿನಿಮಯ ಗಳಿಕೆ
2021ರಲ್ಲಿ ಸ್ಕಾಟ್ಲ್ಯಾಂಡ್ನ ಗ್ಲಾಸ್ಗೋನಲ್ಲಿ ನಡೆದ 21ನೇ ಸಿಒಪಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಲೈಫ್ (LiFE- Lifestyle for Environment) ಎನ್ನುವ ಅಭಿಯಾನ ಆರಂಭಿಸಿದರು. ಪರಿಸರಕ್ಕೆ ಪೂರಕವಾಗುವ ರೀತಿಯಲ್ಲಿ ಜೀವನ ಶೈಲಿ ಅಳವಡಿಸಿಕೊಳ್ಳುವುದು, ಸಂಪನ್ಮೂಲ ಹಾಳಾಗದ ರೀತಿಯಲ್ಲಿ ಬಳಸುವುದು ಇವೇ ಮುಂತಾದ ಕಾರ್ಯಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶ.
ಕಳೆದ ವರ್ಷ (2024) ಅಜರ್ಬೈಜಾನ್ ದೇಶದ ಬಾಕು ನಗರದಲ್ಲಿ ನಡೆದ 29ನೇ ಸಿಒಪಿ ಸಭೆಯಲ್ಲಿ ಸ್ವಚ್ಛ ಇಂಧನ ಹಾಗೂ ಹವಾಮಾನ ಹೊಂದಾಣಿಕೆ ವಿಚಾರದಲ್ಲಿ ಭಾರತ ಎಷ್ಟು ಪ್ರಗತಿ ಹೊಂದಿದೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸಿತು. ಸ್ವೀಡನ್ ಮೊದಲಾದ ದೇಶಗಳ ಸಹಭಾಗಿತ್ವದಲ್ಲಿ ಭಾರತವು ಯಾವೆಲ್ಲಾ ಪರಿಸರಸ್ನೇಹಿ ಕ್ರಮಗಳನ್ನು ತೆಗೆದುಕೊಂಡು, ಎಷ್ಟು ಸಫಲವಾಗಿದೆ ಎನ್ನುವುದನ್ನು ತೋರಿಸಿತು.
ಇದನ್ನೂ ಓದಿ: ಭಾರತ್ಜೆನ್: ಸಂಪೂರ್ಣ ದೇಶೀಯವಾಗಿ ತಯಾರಾದ ಭಾರತದ ಮೊದಲ ಮಲ್ಟಿಮೋಡಲ್ ಎಲ್ಎಲ್ಎಂ; ಸರ್ವಂ ಎಐಗಿಂತ ಇದು ಹೇಗೆ ಭಿನ್ನ?
2014ರಿಂದ 2025ರವರೆಗೆ ಭಾರತದ ಸೌರ ಶಕ್ತಿಯ ಸ್ಥಾಪಿತ ಸಾಮರ್ಥ್ಯ 25 ಪಟ್ಟು ಹೆಚ್ಚಾಗಿದೆ. 2014ರಲ್ಲಿ ಸೌರಶಕ್ತಿ ಸಾಮರ್ಥ್ಯ 2.82 ಗಿ.ವ್ಯಾ.ನಷ್ಟಿತ್ತು. 2025ರ ಏಪ್ರಿಲ್ನಲ್ಲಿ ಅದು 71.78 ಗಿ.ವ್ಯಾ.ನಷ್ಟಾಗಿದೆ.
ಸೌರ ವಿದ್ಯುತ್ ದರಗಳೂ ಕೂಡ ಬಹಳ ಕಡಿಮೆ ಆಗಿದೆ. ವಿಶ್ವದಲ್ಲೇ ಅತ್ಯಂತ ಕಡಿಮೆ ಸೌರ ವಿದ್ಯುತ್ ದರ ಭಾರತದಲ್ಲಿ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ