ಜಾಗತಿಕ ಉದ್ದಿಮೆದಾರರಲ್ಲಿ ಹೆಚ್ಚಿನ ಮಹಿಳೆಯರು (Women Entrepreneurs) ಸಿಗುವುದು ಕಡಿಮೆ. ಅಂತಾರಾಷ್ಟ್ರೀಯ ಉದ್ಯಮ ಈಗಲೂ ಬಹುತೇಕ ಪುರುಷಪ್ರಾಬಲ್ಯದಲ್ಲೇ ಇದೆ. ಇಷ್ಟಾದರೂ ಬಹಳಷ್ಟು ಮಹಿಳೆಯರು ಅಲೆಗೆ ವಿರುದ್ಧವಾಗಿ ಈಜಿ, ವ್ಯವಹಾರದಲ್ಲಿ ಸೈ ಎನಿಸಿದ್ದಾರೆ. ಜಾಗತಿಕ ವ್ಯವಹಾರಗಳನ್ನು ನಿಭಾಯಿಸುವ ಕ್ಷಮತೆ ಹೊಂದಿರುವುವರೆಂದು ರುಜುವಾತು ಮಾಡಿ ತೋರಿಸಿದ್ದಾರೆ. ಕೆಲ ಮಹಿಳೆಯರು ಸ್ವಂತ ಬಲದಿಂದ ಉದ್ದಿಮೆ ಕಟ್ಟಿ ಬೆಳೆದವರಾದರೆ, ಇನ್ನೂ ಕೆಲವರು ಕೌಟುಂಬಿಕ ವ್ಯವಹಾರದಿಂದ ಬಳುವಳಿಯಾಗಿ ಸಂಪತ್ತು ಪಡೆದವರಿದ್ದಾರೆ. ಅದೇನೇ ಇರಲಿ, ಜಾಗತಿಕವಾಗಿ 50 ಅತಿಶ್ರೀಮಂತ ವ್ಯಕ್ತಿಗಳಲ್ಲಿ ನಾಲ್ಕೈದು ಮಹಿಳೆಯರೂ ಇದ್ದಾರೆ. ಈ ಪೈಕಿ ಫ್ರಾನ್ಸ್ ದೇಶದ ಫ್ರಾಂಕಾಯಿಸ್ ಬೆಟೆನ್ಕೋರ್ಟ್ ಮೆಯೆರ್ಸ್ (Francoise Bettencourt Meyers) ಅತಿ ಶ್ರೀಮಂತ ಮಹಿಳೆ ಎನಿಸಿದ್ದಾರೆ.
ಫ್ರಾಂಕಾಯಿಸ್ ಬೆಟೆನ್ಕೋರ್ಟ್ ಮೆಯೆರ್ಸ್ ಅವರು ವಿಶ್ವ ಪ್ರಸಿದ್ಧ ಪರ್ಫ್ಯೂಮ್ ಬ್ರ್ಯಾಂಡ್ ಲಾರಿಯಲ್ನ (l’oréal) ಸಂಸ್ಥಾಪಕರ ಮೊಮ್ಮಗಳು. ಈಕೆ ಹತ್ತಿರಹತ್ತಿರ 90 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಈಕೆ ಶ್ರೀಮಂತಿಕೆಯಲ್ಲಿ ರಿಲಾಯನ್ಸ್ ಅಧಿಪತಿ ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರನ್ನೂ ಮೀರಿಸಿದ್ದರು.
ಫ್ರೆಂಚ್ ಪರ್ಫ್ಯೂಮ್ ಕಂಪನಿ ಲಾರಿಯಲ್ಸ್ನ ಆಸ್ತಿ ಮೂಲಕ ಮೆಯೆರ್ಸ್ ಬೆಟೆನ್ಕೋರ್ಟ್ ಶ್ರೀಮಂತಿಕೆ ಪಡೆದಿದ್ದಾರೆ. 1997ರಿಂದಲೂ ಮೆಯೆರ್ಸ್ ಅವರು ಲಾರಿಯಲ್ ಕಂಪನಿಯ ಮಂಡಳಿಯಲ್ಲಿ ಇದ್ದಾರೆ. ಈಕೆಯ ತಾಯಿ ಲಿಲಿಯಾನೆ ಬೆಟೆನ್ಕೋರ್ಟ್ ಈ ಹಿಂದೆ ಲಾರಿಯಲ್ನ ಮುಖ್ಯಸ್ಥೆಯಾಗಿದ್ದರು. 2017ರಲ್ಲಿ ಅವರು ಮೃತಪಟ್ಟ ಬಳಿಕ ಏಕೈಕ ವಾರಸುದಾರೆಯಾಗಿ ಫ್ರಾಂಕಾಯಿಸ್ ಬೆಟೆನ್ಕೋರ್ಟ್ ಮೆಯೆರ್ಸ್ ಅವರು ಆಡಳಿತ ಚುಕ್ಕಾಣಿ ಪಡೆದಿದ್ದಾರೆ.
ಲಾರಿಯಲ್ ಸಂಸ್ಥೆಯಲ್ಲಿ ಮೆಯೆರ್ಸ್ ಮತ್ತವರ ಕುಟುಂಬದ ಪಾಲು ಶೇ. 33ರಷ್ಟಿದೆ. ಇತ್ತೀಚಿನ ದಿನಗಳಲ್ಲಿ ಲಾರಿಯಲ್ ಸಂಸ್ಥೆಯ ಷೇರುಮೌಲ್ಯ ಭರಪೂರವಾಗಿ ಬೆಳೆದಿದೆ. 2009ರಲ್ಲಿ 50 ಯೂರೋ ಇದ್ದ ಲಾರಿಯಲ್ ಷೇರುಮೌಲ್ಯ ಇದೀಗ 412 ಯೂರೋಗಿಂತಲೂ ಹೆಚ್ಚಾಗಿದೆ. ಹೀಗಾಗಿ, ಫ್ರಾಂಕಾಯಿಸ್ ಬೆಟೆನ್ಕೋರ್ಟ್ ಮೆಯೆರ್ಸ್ ಅವರ ಒಟ್ಟು ಆಸ್ತಿ ಬ್ಲೂಮ್ಬರ್ಗ್ ಇಂಡೆಕ್ಸ್ ಪ್ರಕಾರ, 89.7 ಬಿಲಿಯನ್ ಡಾಲರ್ ಆಗಿದೆ. ವಿಶ್ವ ಶ್ರೀಮಂತಿಕೆಯಲ್ಲಿ ಇವರು 13ನೇ ಸ್ಥಾನದಲ್ಲಿದ್ದಾರೆ. ಕೆಲ ದಿನಗಳ ಹಿಂದೆ ಇವರಿಗಿಂತ ಕೆಳಗಿದ್ದ ಮುಕೇಶ್ ಅಂಬಾನಿ ಅವರ ಒಟ್ಟು ಆಸ್ತಿಮೌಲ್ಯ 95 ಬಿಲಿಯನ್ ಡಾಲರ್ ಗಡಿ ದಾಟಿದೆ.
ಫ್ರಾಂಕಾಯಿಸ್ ಬೆಟೆನ್ಕೋರ್ಟ್ ಮೆಯೆರ್ಸ್ ಅವರು ಕ್ಯಾಥೋಲಿಕ್ ಕ್ರೈಸ್ತರಾಗಿದ್ದು ಹಲವು ಬೈಬಲ್ ಕಾಮೆಂಟರಿಗಳನ್ನು ಬರೆದಿದ್ದಾರೆ. ಐದು ದೊಡ್ಡ ಪುಸ್ತಕಗಳನ್ನು ಬರೆದಿದ್ದಾರೆ. ಗಂಟೆಗಟ್ಟಲೆ ಅವರು ಪಿಯಾನೋ ನುಡಿಸಬಲ್ಲುರು.
ಪ್ರಚಾರದಿಂದ ತುಸು ದೂರವೇ ಉಳಿಯುವ ಫ್ರಾಂಕಾಯಿಸ್ ಮೆಯೆರ್ಸ್ ಅವರು ಜೀನ್ ಪಿಯೆರೆ ಮೆಯೆರ್ಸ್ ಅವರನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ