Sin Tax: ಸಿನ್ ಟ್ಯಾಕ್ಸ್ ಇನ್ನಷ್ಟು ಹೆಚ್ಚಿಸುವಂತೆ ಮನವಿ; ಏನಿದು ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ?

|

Updated on: Jan 30, 2024 | 5:38 PM

Union Budget 2024: ತೆರಿಗೆಗಳು ಸರ್ಕಾರದ ಪ್ರಮುಖ ಆದಾಯ ಮೂಲಗಳಲ್ಲಿ ಸೇರಿವೆ. ಬಹಳ ಅಳೆದುತೂಗಿ ತೆರಿಗೆ ಏರಿಳಿಕೆ ಮಾಡಲಾಗುತ್ತದೆ. ಸರ್ಕಾರ ಕಣ್ಮುಚ್ಚಿಕೊಂಡು ಏರಿಕೆ ಮಾಡುವ ತೆರಿಗೆಗಳಲ್ಲಿ ಸಿನ್ ಟ್ಯಾಕ್ಸ್ ಒಂದು. ವ್ಯಕ್ತಿ ಮತ್ತು ಸಮಾಜದ ಸ್ವಾಸ್ಥ್ಯಕ್ಕೆ ಹಾನಿ ತರುವ ವಸ್ತು ಮತ್ತು ಸೇವೆಗಳಿಗೆ ವಿಧಿಸುವ ಹೆಚ್ಚುವರಿ ತೆರಿಗೆಯೇ ಸಿನ್ ಟ್ಯಾಕ್ಸ್.

Sin Tax: ಸಿನ್ ಟ್ಯಾಕ್ಸ್ ಇನ್ನಷ್ಟು ಹೆಚ್ಚಿಸುವಂತೆ ಮನವಿ; ಏನಿದು ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ?
ಸಿನ್ ಟ್ಯಾಕ್ಸ್
Follow us on

ನವದೆಹಲಿ, ಜನವರಿ 30: ಸರ್ಕಾರಗಳಿಗೆ ಪ್ರಮುಖ ಆದಾಯ ಮೂಲಗಳಲ್ಲಿ (Revenue sources) ತೆರಿಗೆ ಇದೆ. ಜನಸಾಮಾನ್ಯರಿಗೆ ಹೊರೆಯಾಗದಂತೆ ಮತ್ತು ಆರ್ಥಿಕ ಬೆಳವಣಿಗೆಗೆ ಹಿನ್ನಡೆ ಆಗದಂತೆ ತೆರಿಗೆ ಹೆಚ್ಚಳ ಮಾಡಲು ಸರ್ಕಾರ ಕಸರತ್ತು ನಡೆಸಬೇಕಾಗುತ್ತದೆ. ಬಹಳ ಸೂಕ್ಷ್ಮವಾಗಿ ಅವಲೋಕಿಸಿ ತೆರಿಗೆ ಏರಿಕೆ ಅಥವಾ ಇಳಿಕೆ ಮಾಡುತ್ತದೆ. ಆದರೆ, ಕೆಲ ವಸ್ತು ಮತ್ತು ಸೇವೆಗಳಿಗೆ ಸರ್ಕಾರಗಳು ಮನಬಂದಂತೆ ತೆರಿಗೆ ಏರಿಕೆ ಮಾಡುತ್ತವೆ. ಸಿಗರೇಟು, ಆಲ್ಕೋಹಾಲ್ ಮೊದಲಾದವು ಉದಾಹರಣೆ. ಇಂಥವಕ್ಕೆ ತೆರಿಗೆ ಹೆಚ್ಚಿಸಿದರೆ ವಿರೋಧ ವ್ಯಕ್ತವಾಗುವುದು ಕಡಿಮೆ. ಅದುವೇ ಸಿನ್ ಟ್ಯಾಕ್ಸ್ (Sin tax) ಅಥವಾ ಪಾಪ ತೆರಿಗೆ.

ಏನಿದು ಸಿನ್ ಟ್ಯಾಕ್ಸ್?

ವ್ಯಕ್ತಿಗಳಿಗೆ ಮತ್ತು ಸಮಾಜಕ್ಕೆ ಹಾನಿಕಾರಕ ವಸ್ತುಗಳನ್ನು ಮಾರಾಟ ಮಾಡುವುದು ಪಾಪದ ಕೆಲಸ. ಅದಕ್ಕೆ ಹೆಚ್ಚಿನ ತೆರಿಗೆ ವಿಧಿಸುವುದು ನೈತಿಕತೆಯ ಕ್ರಮ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಸಿನ್ ಟ್ಯಾಕ್ಸ್ ಅಥವಾ ಪಾಪ ತೆರಿಗೆ ಎಂದು ಕರೆಯಲಾಗುತ್ತದೆ. ತಂಬಾಕು ಉತ್ಪನ್ನಗಳು, ಆಲ್ಕೋಹಾಲ್ ಉತ್ಪನ್ನಗಳು ಆರೋಗ್ಯಕ್ಕೆ ಹಾನಿ ತರುತ್ತವೆ. ಇಂಥವಕ್ಕೆ ಅಬಕಾರಿ ಸುಂಕ ಹಾಕಲಾಗುತ್ತದೆ.

ಸಮಾಜದ ಸ್ವಾಸ್ಥ್ಯಕ್ಕೆ ಮಾರಕವಾಗುವ ಲಾಟರಿ, ಗ್ಯಾಂಬ್ಲಿಂಗ್ ಇತ್ಯಾದಿ ಆಟಗಳಿಗೂ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತದೆ. ಇವುಗಳ ಬಳಕೆಯನ್ನು ನಿಯಂತ್ರಿಸುವುದು ತೆರಿಗೆ ಹೇರಿಕೆಯ ಉದ್ದೇಶವಾಗಿರುತ್ತದೆ.

ಇದನ್ನೂ ಓದಿ: Budget 2024 Date: ಕೇಂದ್ರ ಬಜೆಟ್ ದಿನ, ಸಮಯ, ಸೆಷನ್, ದಾಖಲೆ ಮತ್ತಿತರ ವಿವರ

18ನೇ ಶತಮಾನದಲ್ಲೂ ಈ ರೀತಿಯ ಸಿನ್ ಟ್ಯಾಕ್ಸ್ ಹೇರಿಕೆ ವಿಶ್ವದ ಕೆಲವೆಡೆ ಇತ್ತು. ಸಕ್ಕರೆಗೂ ಅಧಿಕ ತೆರಿಗೆ ಹೇರಲಾಗಿದ್ದ ನಿದರ್ಶನ ಇದೆ. ಈಗ ಬ್ರಿಟನ್, ಸ್ವೀಡನ್ ಕೆನಡಾ ಮೊದಲಾದ ಹಲವು ದೇಶಗಳಲ್ಲಿ ನಿರ್ದಿಷ್ಟ ಉತ್ಪನ್ನಗಳಿಗೆ ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ.

ಭಾರತದಲ್ಲಿ ಹೆಚ್ಚು ಸಿನ್ ಟ್ಯಾಕ್ಸ್

2017ರಲ್ಲಿ ಜಿಎಸ್​ಟಿಯ ಭಾಗವಾಗಿ ಭಾರತದಲ್ಲಿ ಸಿನ್ ಟ್ಯಾಕ್ಸ್ ಕ್ರಮ ಜಾರಿಗೆ ತರಲಾಯಿತು. ಅದಕ್ಕೆ ಮುಂಚಿನಂದಲೇ ಸಿಗರೇಟ್ ಇತ್ಯಾದಿ ಉತ್ಪನ್ನಗಳಿಗೆ ಹೆಚ್ಚುವರಿ ತೆರಿಗೆ ಇತ್ತು. ಜಿಎಸ್​ಟಿಯಲ್ಲಿ 2017ರಲ್ಲಿ ಸಿನ್ ಟ್ಯಾಕ್ಸ್ ಚಾಲನೆಗೆ ತಂದಿತು. 2015ರಲ್ಲಿ ಅಂದಿನ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ನೇತೃತ್ವದ ಸಮಿತಿ ಶೇ. 40ರಷ್ಟು ಸಿನ್ ಟ್ಯಾಕ್ ವಿಧಿಸಲು ಶಿಫಾರಸು ಮಾಡಿತ್ತು.

ಇದನ್ನೂ ಓದಿ: eKYC: ಪಿಎಂ ಕಿಸಾನ್: ಜ. 31ರೊಳಗೆ ಇಕೆವೈಸಿ ಮಾಡದಿದ್ದರೆ ಸಿಗುವುದಿಲ್ಲ 16ನೇ ಕಂತಿನ ಹಣ; ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಖಚಿತಪಡಿಸಿಕೊಳ್ಳಿ

ಈಗ ಭಾರತದಲ್ಲಿ ಸಿಗರೇಟುಗಳಿಗೆ ಶೇ. 52.7ರಷ್ಟು ಸಿನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಧೂಮರಹಿತ ತಂಬಾಕಿಗೆ ಶೇ. 63.6ರಷ್ಟು ತೆರಿಗೆ ಇದೆ. ಬೀಡಿಗಳಿಗೆ ಶೇ. 22.2ರಷ್ಟು ಸಿನ್ ಟ್ಯಾಕ್ಸ್ ಹಾಕಲಾಗುತ್ತದೆ. ಈ ಬಜೆಟ್​ನಲ್ಲಿ ಇನ್ನೂ ಹೆಚ್ಚಿನ ಸಿನ್ ಟ್ಯಾಕ್ಸ್ ವಿಧಿಸುವಂತೆ ಆರೋಗ್ಯ ಕ್ಷೇತ್ರದ ಪರಿಣಿತರು ಮನವಿ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ