ನವದೆಹಲಿ: ವಿವಿಧ ಕಾರಣಗಳಿಗೆ ಬ್ಯಾಂಕುಗಳಲ್ಲಿ ಇಡಲಾಗುವ ಕೆಲ ಠೇವಣಿಗಳು ಕ್ಲೈಮ್ ಆಗದೇ ಉಳಿದುಬಿಡುತ್ತವೆ. ಇಂಥ ಹಣದ ಮೊತ್ತ ಆರ್ಬಿಐ ಲೆಕ್ಕಾಚಾರ ಪ್ರಕಾರ ಬರೋಬ್ಬರಿ 48,262 ಕೋಟಿ ರೂನಷ್ಟು ಇದೆ. ಖಾತೆದಾರ ಅಸುನೀಗಿರುವುದು ಇತ್ಯಾದಿ ಕಾರಣಗಳಿಂದ ಇವು ಕ್ಲೈಮ್ ಆಗದೆ ಉಳಿದಿವೆ. ಈಗ ಈ ಅನ್ಕ್ಲೈಮ್ಡ್ ಹಣವನ್ನು ಖಾತೆದಾರರಿಗೆ (Account Holders) ಅಥವಾ ಅವರ ವಾರಸುದಾರರಿಗೆ (Nominees or Heirs) ಮರಳಿಸಲು ಆರ್ಬಿಐ ಯೋಜಿಸಿದ್ದು, ಅದರಂತೆ ‘100 ದಿನ 100 ಪಾವತಿ’ (100 Days 100 Pays) ಎಂಬ ಅಭಿಯಾನ ಹಮ್ಮಿಕೊಂಡಿದೆ. ಇದರಂತೆ ಪ್ರತಿಯೊಂದು ಬ್ಯಾಂಕು ಪ್ರತಿಯೊಂದು ಜಿಲ್ಲೆಯಲ್ಲೂ ಕ್ಲೈಮ್ ಆಗದೇ ಉಳಿದಿರುವ ಅತಿದೊಡ್ಡ 100 ಠೇವಣಿಗಳನ್ನು ಗುರುತಿಸಿ ಅದನ್ನು ಇತ್ಯರ್ಥಗೊಳಿಸುವುದು ಈ ಅಭಿಯಾನದ ಉದ್ದೇಶ. 100 ದಿನದೊಳಗೆ ಇದು ಆಗಬೇಕೆಂದಿದ್ದು ಅಭಿಯಾನ ಜೂನ್ 1ರಂದು ಆರಂಭವಾಗುತ್ತದೆ.
ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ 10 ವರ್ಷಕ್ಕಿಂತ ಹೆಚ್ಚು ಕಾಲ ನಿರ್ವಹಣೆ ಆಗದೇ ನಿಷ್ಕ್ರಿಯವಾಗಿದ್ದರೆ ಅದರಲ್ಲಿರುವ ಠೇವಣಿಯನ್ನು ಅನ್ಕ್ಲೈಮ್ಡ್ ಡೆಪಾಸಿಟ್ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ, ನಿಶ್ಚಿತ ಠೇವಣಿಗಳು ಕಾಲಾವಧಿ ಮುಗಿದು 10 ವರ್ಷವಾದರೂ ಕ್ಲೈಮ್ ಆಗದೇ ಉಳಿದಿದ್ದರೆ ಅದೂ ಕೂಡ ಅನ್ಕ್ಲೈಮ್ಡ್ ಡೆಪಾಸಿಟ್ ಎನಿಸುತ್ತದೆ. ಈ ಹಣ ಬ್ಯಾಂಕ್ನಲ್ಲೇ ಉಳಿದುಹೋಗುತ್ತವೆ. ಈಗ ಇವುಗಳನ್ನು ಕಟ್ಟುನಿಟ್ಟಾಗಿ ವಿಲೇವಾರಿ ಮಾಡಲು ರಿಸರ್ವ್ ಬ್ಯಾಂಕ್ ಮುಂದಾಗಿದೆ.
ಇದನ್ನೂ ಓದಿ: RBI: 2,000 ರೂ ನೋಟು ವಿನಿಮಯ: ಬ್ಯಾಂಕುಗಳಿಗೆ ಆರ್ಬಿಐ ಮಾರ್ಗಸೂಚಿ ಬಿಡುಗಡೆ; ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಿದು
ಕೆಲವೊಮ್ಮೆ ಕಾರಣಾಂತರಗಳಿಂದ ಖಾತೆದಾರರ ತನ್ನ ಎಸ್ಬಿ ಖಾತೆಯನ್ನು ನಿರ್ವಹಿಸದೇ ಹಾಗೇ ಬಿಟ್ಟುಬಿಟ್ಟಿರುವುದುಂಟು. ಬಹುಖಾತೆಗಳಿದ್ದಾಗ ಇಂಥದ್ದು ಆಗುವ ಸಾಧ್ಯತೆ ಉಂಟು. ಈ ರೀತಿ 10 ವರ್ಷ ನಿಷ್ಕ್ರಿಯವಾಗಿರುವ ಖಾತೆದಾರರು ತಮ್ಮ ಠೇವಣಿ ಹಣವನ್ನು ವಾಪಸ್ ಪಡೆಯುವುದು ಸುಲಭ. ಅವರು ತಮ್ಮ ಖಾತೆ ಇರುವ ಬ್ಯಾಂಕಿನ ಶಾಖೆಗೆ ಹೋಗಿ ಕ್ಲೈಮ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಬೇಕು. ಜೊತೆಗೆ, ಕೆವೈಸಿ ದಾಖಲೆಗಳಾದ ಐಡಿ, ವಿಳಾಸ ಪ್ರೂಫ್ಗಳನ್ನು ಒದಗಿಸಬೇಕು. ಪಾಸ್ಬುಕ್, ಎಫ್ಡಿ ರಸೀದಿ, ಇತ್ತೀಚಿನ ಫೋಟೋ ಇತ್ಯಾದಿಯನ್ನೂ ಒದಗಿಸಬೇಕಾಗುತ್ತದೆ. ಇವು ಸಮರ್ಪಕವಾಗಿದ್ದರೆ ಬ್ಯಾಂಕುಗಳು ನಿಮ್ಮ ಹಣವನ್ನು ಮರಳಿಸುತ್ತವೆ.
ಒಂದು ವೇಳೆ ಖಾತೆದಾರರು ಮೃತಪಟ್ಟ ಕಾರಣಕ್ಕೆ ಠೇವಣಿ ಹಣ ಕ್ಲೈಮ್ ಆಗದೇ ಉಳಿದಿದ್ದರೆ, ಅದನ್ನು ಪಡೆಯುವ ಹಕ್ಕು ನಾಮಿನಿ ಅಥವಾ ವಾರಸುದಾರರಿಗೆ ಇರುತ್ತದೆ. ಈ ವಾರಸುದಾರರು ಬ್ಯಾಂಕಿನ ಶಾಖೆಗೆ ಹೋಗಿ ಅಲ್ಲಿ ಐಡಿ ಪ್ರೂಫ್, ಖಾತೆದಾರರ ಡೆತ್ ಸರ್ಟಿಫಿಕೇಟ್, ಎಫ್ಡಿ ರಸೀದಿ, ಪಾಸ್ಬುಕ್ ಇತ್ಯಾದಿ ದಾಖಲೆಗಳನ್ನು ಒದಗಿಸಬೇಕು.