ಸರ್ಕಾರ ಇತ್ತೀಚೆಗೆ ಚಿನ್ನ ಹಾಗೂ ಚಿನ್ನದ ಆಭರಣಗಳ ಮಾರಾಟ ವಿಚಾರದಲ್ಲಿ ಪ್ರಮುಖ ನಿಯಮಗಳನ್ನು ರೂಪಿಸಿದೆ. ಚಿನ್ನದ ಗುಣಮಟ್ಟದಲ್ಲಿ ಏಕರೂಪ ತರುವ ನಿಟ್ಟಿನಲ್ಲಿ ಮತ್ತು ಗ್ರಾಹಕರಿಗೆ ವಂಚನೆ ಆಗದಂತೆ ತಡೆಯುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಹಾಲ್ಮಾರ್ಕ್ ಯೂನಿಕ್ ಐಡಿ ಅಥವಾ ಎಚ್ಯುಐಡಿ ನಂಬರ್ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಈ ಹೊಸ ಹಾಲ್ಮಾರ್ಕ್ ನಂಬರ್ ಇಲ್ಲದ ಯಾವುದೇ ಚಿನ್ನವನ್ನು ಮಾರುವಂತಿಲ್ಲ. ಏಪ್ರಿಲ್ 1ರಿಂದಲೇ ಈ ನಿಯಮ ಜಾರಿಯಲ್ಲಿದೆ. ನಿಮ್ಮಲ್ಲಿ ಇರುವ ಹಳೆಯ ಚಿನ್ನವನ್ನು ಮಾರಬೇಕೆಂದರೆ ಅದಕ್ಕೆ ಎಚ್ಯುಐಡಿ ನಂಬರ್ ಪಡೆದೇ ಮುಂದುವರಿಯಬೇಕು.
ಚಿನ್ನದ ಶುದ್ಧತೆಯ ಪ್ರಮಾಣವನ್ನು ಈ ಎಚ್ಯುಐಡಿ ನಂಬರ್ ತೋರಿಸುತ್ತದೆ. ಇದರಲ್ಲಿ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್ (ಬಿಐಎಸ್) ಲೋಗೋ ಇರುತ್ತದೆ. ಎಷ್ಟು ಕ್ಯಾರಟ್ನ ಚಿನ್ನ ಎಂಬುದನ್ನು ಈ ಎಚ್ಯುಐಡಿ ನಂಬರ್ನಿಂದ ತಿಳಿಯಬಹುದು.
ಎಚ್ಯುಐಡಿ ನಂಬರ್ ಕೊಡುವ ಮುನ್ನ, ಚಿನ್ನಕ್ಕೆ ಕೆಡಿಎಂ ಅಥವಾ ಹಾಲ್ಮಾರ್ಕ್ ಹಾಕಲಾಗುತ್ತಿತ್ತು. ಬಹಳ ಮಂದಿಯ ಬಳಿ ಇರುವ ಬಹುತೇಕ ಒಡವೆಗಳು ಹಳೆಯ ಹಾಲ್ಮಾರ್ಕ್ ಗುರುತಿ ಇರುವಂಥವೇ. ಇವರೆಲ್ಲರೂ ಏನು ಮಾಡಬೇಕು ಎಂಬ ಪ್ರಶ್ನೆ ಬರಬಹುದು. ಇಂಥವರು ಚಿನ್ನವನ್ನು ಮಾರಲು ಅಡ್ಡಿ ಇಲ್ಲ.
ಹಳೆಯ ಹಾಲ್ಮಾರ್ಕ್ ಇರುವ ಚಿನ್ನವನ್ನು ಗ್ರಾಹಕರಿಂದ ಖರೀದಿಸುವ ಜ್ಯುವಲರಿ ಅಂಗಡಿಯವರು, ಆ ಚಿನ್ನವನ್ನು ಕರಗಿಸಿ ಅದಕ್ಕೆ ಎಚ್ಯುಐಡಿ ಗುರುತು ಹಾಕಿಸಿಬೇಕು. ಒಡವೆ ಅಂಗಡಿಯವರು ಎಚ್ಯುಐಡಿ ಗುರುತು ಇಲ್ಲದ ಒಡವೆಯನ್ನು ಯಾವುದೇ ಕಾರಣಕ್ಕೂ ಮಾರುವಂತಿಲ್ಲ.
ಎರಡಕ್ಕಿಂತ ಕಡಿಮೆ ಗ್ರಾಮ್ನ ಚಿನ್ನ, ಅಂತಾರಾಷ್ಟ್ರೀಯ ಪ್ರದರ್ಶನಕ್ಕೆಂದು ತಯಾರಾದ ಆಭರಣ, ವಿದೇಶೀ ಗ್ರಾಹಕರ ನಿರ್ದಿಷ್ಟ ಅವಶ್ಯಕತೆಗೆ ತಕ್ಕಂತೆ ರೂಪಿಸಿ ರಫ್ತು ಮಾಡಲು ಇಟ್ಟಿರುವ ಆಭರಣಗಳಿಗೆ ಹಾಲ್ಮಾರ್ಕ್ ಅಥವಾ ಎಚ್ಯುಐಡಿ ಗುರುತು ಹಾಕಿಸುವ ಅಗತ್ಯ ಇಲ್ಲ. ಹಾಗೆಯೇ, ಫೌಂಟೇನ್ ಪೆನ್, ವಾಚು ಮತ್ತಿತರ ವಸ್ತುಗಳಿಗೆ ಬಳಸುವ ಚಿನ್ನಕ್ಕೂ ಹಾಲ್ಮಾರ್ಕ್ ಬೇಕಾಗುವುದಿಲ್ಲ. ಇನ್ನು, ವರ್ಷಕ್ಕೆ 40 ಲಕ್ಷ ರೂಗಿಂತ ಕಡಿಮೆ ಟರ್ನೋವರ್ ಇರುವ ಜ್ಯುವೆಲರಿ ಅಂಗಡಿಯವರಿಗೂ ಕಡ್ಡಾಯ ಹಾಲ್ಮಾರ್ಕ್ನಿಂದ ವಿನಾಯಿತಿ ನೀಡಲಾಗಿದೆ.
ಹಾಲ್ಮಾರ್ಕ್ ಸರ್ಟಿಫಿಕೇಶನ್ ನೀಡಲು ಬಿಐಎಸ್ ಪ್ರಮಾಣಿತ ಕೇಂದ್ರಗಳಿವೆ. ಬಹುತೇಕ ಎಲ್ಲಾ ನಗರ, ಪಟ್ಟಣಗಳಲ್ಲೂ ಇಂಥ ಕೇಂದ್ರಗಳಿರುತ್ತವೆ. ಇಲ್ಲಿ ಒಂದು ಒಡವೆ ವಸ್ತುವಿಗೆ ಹಾಲ್ಮಾರ್ಕ್ ಪರೀಕ್ಷೆ ನಡೆಸಿ ಗುರುತು ಹಾಕಲು ನಿರ್ದಿಷ್ಟ ಶುಲ್ಕ ಕೊಡಬೇಕಾಗುತ್ತದೆ.
ಬಿಐಎಸ್ಗೆ ನೊಂದಾಯಿತವಾದ ಆಭರಣ ವ್ಯಾಪಾರಿ ಮೂಲಕವೂ ಹಾಲ್ಮಾರ್ಕ್ ಹಾಕಿಸಬಹುದು. ಇವರು ನಿಮ್ಮ ಒಡವೆಯನ್ನು ಬಿಐಎಸ್ ಮಾನ್ಯತೆ ಪಡೆದ ಹಾಲ್ಮಾರ್ಕ್ ಕೇಂದ್ರಕ್ಕೆ ಹೋಗಿ ಪರೀಕ್ಷಿಸಿಕೊಂಡು ಬರುತ್ತಾರೆ.