ಜಾಗತಿಕವಾಗಿ ಅತಿಹೆಚ್ಚು ಉತ್ಪಾದನೆ ಚೀನಾದಲ್ಲಿ ಆಗುತ್ತದೆ. ಆಟೊಮೊಬೈಲ್ನಿಂದ ಹಿಡಿದು ಎಲೆಕ್ಟ್ರಾನಿಕ್ಸ್ವರೆಗೆ ನಾನಾ ಉತ್ಪನ್ನಗಳ ತಯಾರಿಕೆ ಅತಿಹೆಚ್ಚು ಆಗುವುದು ಚೀನಾದಲ್ಲೇ. ಆ ದೇಶದಲ್ಲಿ ಬಹಳ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ. ಹೀಗಾಗಿ, ಕೂಲಿವೆಚ್ಚ ಉಳಿಸಲು ಪಾಶ್ಚಿಮಾತ್ಯ ಕಂಪನಿಗಳು ಚೀನಾದಲ್ಲಿ ಉತ್ಪಾದನೆ ಮಾಡುತ್ತವೆ, ಅಥವಾ ಚೀನೀ ಕಂಪನಿಗಳಿಗೆ ಗುತ್ತಿಗೆ ಕೊಡುತ್ತವೆ ಎನ್ನುವುದು ಸರ್ವೇಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಆ್ಯಪಲ್ನಂತಹ ಉತ್ಕೃಷ್ಟ ಸ್ಮಾರ್ಟ್ಫೋನ್ ಕಂಪನಿಯ ಹೆಚ್ಚಿನ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತವೆ. ಟೆಸ್ಲಾದಂಥ ಕಾರುಗಳ ತಯಾರಿಕೆಯೂ ಚೀನಾದಲ್ಲಿ ಆಗುತ್ತವೆ. ಆ ದೇಶದಲ್ಲಿ ಇವೆಲ್ಲಾ ತಯಾರಿಕೆ ಆಗಲು ಏನು ಕಾರಣ? ಕೇವಲ ಕೂಲಿವೆಚ್ಚ ಮಿಗಿಸಲು ದೊಡ್ಡ ದೊಡ್ಡ ಕಂಪನಿಗಳು ಚೀನಾ ಕಡೆ ಮುಖ ಮಾಡುತ್ತವಾ? ಆ್ಯಪಲ್ ಸಿಇಒ ಟಿಮ್ ಕುಕ್ ಇದಕ್ಕೆ ಕಾರಣ ಬಹಿರಂಗಪಡಿಸಿದ್ದಾರೆ. ಚೀನಾದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುವುದು ಕಾರಣವಲ್ಲ. ಆದರೆ, ಕೌಶಲ್ಯವಂತ ಕೆಲಸಗಾರರ ಸಂಖ್ಯೆ ಚೀನಾದಲ್ಲಿ ಬಹಳ ಹೆಚ್ಚಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟಿಮ್ ಕುಕ್ ಮಾತನಾಡಿರುವುದು ವೈರಲ್ ಆಗಿದೆ. ಟೆಸ್ಲಾ ಸಿಇಒ ಇಲಾನ್ ಮಸ್ಕ್ ಕೂಡ ಇದಕ್ಕೆ ಹೌದೆಂದಿದ್ದಾರೆ.
ಚೀನಾದಲ್ಲಿರುವಷ್ಟ ಕೌಶಲ್ಯವಂತ ಕಾರ್ಮಿಕರ ಪ್ರಮಾಣ ವಿಶ್ವದಲ್ಲೇ ಎಲ್ಲೂ ಇಲ್ಲ. ಆ್ಯಪಲ್ ಕಂಪನಿಯ ಮ್ಯಾನುಫ್ಯಾಕ್ಚರಿಂಗ್ ಘಟಕಗಳು ಚೀನಾದಲ್ಲಿ ನೆಲೆ ಹೊಂದಿರಲು ಇದು ಪ್ರಮುಖ ಕಾರಣ. ಆ್ಯಪಲ್ನ ಉತ್ಪನ್ನಗಳನ್ನು ತಯಾರಿಸಲು ಬೇಕಾದ ಅತ್ಯಾಧುನಿಕ ಟೂಲಿಂಗ್ ಮತ್ತು ಪ್ರಿಸಿಶನ್ ಚೀನಾದಲ್ಲಿ ಲಭ್ಯ ಇದೆ ಎನ್ನುತ್ತಾರೆ ಟಿಮ್ ಕುಕ್.
ಇದನ್ನೂ ಓದಿ: ಭಾರತದ ಜವಳಿ ಉದ್ಯಮಕ್ಕೆ ನೆರವಾದ ಬಾಂಗ್ಲಾದೇಶ ಬಿಕ್ಕಟ್ಟು; ಹೊಸ ಆರ್ಡರ್ಸ್ ಪ್ರಮಾಣ ಹೆಚ್ಚಳ
ಆ್ಯಪಲ್ ಉತ್ಪಾದನೆ ಚೀನಾದಲ್ಲಿ ಇರಲು ಕೌಶಲ್ಯವೆ ಕಾರಣ. ಒಂದೇ ಕಡೆ ನಿಮಗೆ ಗುಣಮಟ್ಟದ ಕೌಶಲ್ಯವಂತ ಕಾರ್ಮಿಕರು ಸಿಗುತ್ತಾರೆ. ಇಲ್ಲಿ ಟೂಲಿಂಗ್ ಸ್ಕಿಲ್ ಬಹಳ ಗಾಢವಾಗಿದೆ. ಅಮೆರಿಕದಲ್ಲಿ ಟೂಲಿಂಗ್ ಎಂಜಿನಿಯರುಗಳೆಲ್ಲರನ್ನೂ ಒಂದು ಕಡೆ ಕಲೆಹಾಕಿದರೆ ಒಂದು ರೂಮು ತುಂಬುತ್ತಾ ಗ್ಯಾರಂಟಿ ಇಲ್ಲ. ಆದರೆ, ಚೀನಾದಲ್ಲಿ ಹಲವು ಫುಟ್ಬಾಲ್ ಫೀಲ್ಡ್ ಆದರೂ ಸಾಲದು ಎಂದು ಟಿಮ್ ಕುಕ್ ಹೇಳುತ್ತಾರೆ.
ಆ್ಯಪಲ್ ಸಿಇಒ ಈ ಹಿಂದೆಯೂ ಹಲವು ಬಾರಿ ಈ ಮಾತುಗಳನ್ನು ಆಡಿದ್ದಾರೆ. ಎಕ್ಸ್ ಪ್ಲಾಟ್ಫಾರ್ಮ್ನಲ್ಲಿ ಹಿಸ್ಟೋರಿಕ್ ವಿಡಿಯೋಸ್ ಎನ್ನುವ ಖಾತೆಯೊಂದು ಮೊನ್ನೆ ಟಿಮ್ ಕುಕ್ ಮಾತನಾಡಿರುವುದನ್ನು ಪೋಸ್ಟ್ ಮಾಡಿತ್ತು. ಇಲಾನ್ ಮಸ್ಕ್ ಅದಕ್ಕೆ ಸ್ಪಂದಿಸಿ ‘ನಿಜ’ ಎಂದಿದ್ದರು.
ಇದನ್ನೂ ಓದಿ: ಸೆಬಿ vs ಉದ್ಯೋಗಿಗಳ ‘ಟಾಕ್ಸಿಕ್’ ಫೈಟ್; ಆರಂಭಿಕ ಸಂಬಳವೇ 34 ಲಕ್ಷ ಕೊಡ್ತೀವಿ; ಇದೆಲ್ಲಾ ಹೊರಗಿನವರ ಚಿತಾವಣೆ ಎಂದ ಸೆಬಿ
ಆ್ಯಪಲ್ ಉತ್ಪನ್ನಗಳ ತಯಾರಿಕೆಯ ಪ್ರಕ್ರಿಯೆಗಳಿಗೆ ಸಾಕಷ್ಟು ಕೌಶಲ್ಯವಂತ ಉದ್ಯೋಗಿಗಳ ಅವಶ್ಯಕತೆ ಇದೆ. ಹೀಗಾಗಿ, ಚೀನಾದಲ್ಲಿ ಉತ್ಪಾದನಾ ಕಾರ್ಯ ಹೆಚ್ಚಾಗಿ ನಡೆಯುತ್ತದೆ ಎಂದು ಕುಕ್ ವಿವರಿಸಿದ್ದಾರೆ.
ಚೀನಾದಲ್ಲಿ ದಶಕಗಳಿಂದ ಮ್ಯಾನುಫ್ಯಾಕ್ಚರಿಂಗ್ ಮೂಲಸೌಕರ್ಯ ಅಭಿವೃದ್ಧಿಯಾಗಿದೆ. ಕಚ್ಛಾ ವಸ್ತುಗಳ ಲಭ್ಯತೆ ಇದೆ. ಬಹುತೇಕ ಎಲ್ಲಾ ವಸ್ತುಗಳು, ಬಿಡಿಭಾಗಗಳ ತಯಾರಿಕೆಗೆ ಬೇಕಾದ ಎಲ್ಲಾ ಉದ್ದಿಮೆಗಳು ಚೀನಾದಲ್ಲಿ ಇವೆ. ಹೀಗಾಗಿ, ವಿಶ್ವದಲ್ಲಿ ಯಾವುದೇ ದೇಶಗಳಿಗೂ ಸಾಧ್ಯವಾಗದಷ್ಟು ಪ್ರಾವೀಣ್ಯತೆ ಮತ್ತು ಇನ್ಫ್ರಾಸ್ಟ್ರಕ್ಚರ್ ಅನ್ನು ಚೀನಾ ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ