
ನವದೆಹಲಿ: ಭಾರತದ ನಂಬರ್ ಒನ್ ಡಿಜಿಟಲ್ ಪೇಮೆಂಟ್ ಕಂಪನಿ ಫೋನ್ ಪೇ (PhonePe) ದಿನ ಕಳೆದಂತೆ ಪ್ರಬಲವಾಗುತ್ತಲೇ ಹೋಗುತ್ತಿದೆ. ಬಹಳ ಹೆಚ್ಚು ಫೀಚರ್ಸ್ ಮತ್ತು ವಿಸ್ತಾರ ಹೊಂದಿರುವ ಪೇಟಿಎಂ ಹಾಗೂ ದೈತ್ಯ ಗೂಗಲ್ನ ಜಿಪೇಗೂ ಫೋನ್ ಪೇ ಅನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ. ಪೇಟಿಎಂ ಮತ್ತು ಗೂಗಲ್ ಪೇಗಿಂತ ಹೆಚ್ಚು ಗ್ರಾಹಕರನ್ನು ಫೋನ್ ಪೇ ಹೊಂದಿದೆ. ಮೊದಲಿಂದಲೂ ಫೋನ್ ಪೇ ಮಾರುಕಟ್ಟೆ ಪ್ರಾಬಲ್ಯ ಉಳಿಸಿಕೊಂಡು ಬರುತ್ತಿದೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವಂತಹ ಪ್ರಯೋಗಗಳನ್ನು ಫೋನ್ ಪೇ ಮಾಡುತ್ತಿರುತ್ತದೆ.
ಪೇಟಿಎಂನ ಸೌಂಡ್ಬಾಕ್ಸ್ (Paytm Soundbox) ರೀತಿಯಲ್ಲಿ ಫೋನ್ ಪೇ ಕಳೆದ ವರ್ಷ ಸ್ಮಾರ್ಟ್ ಸ್ಪೀಕರ್ ಅನ್ನು ಬಿಡುಗಡೆ ಮಾಡಿತ್ತು. ಕೇವಲ 6 ತಿಂಗಳಲ್ಲಿ ವರ್ತಕರ ಅಂಗಡಿಗಳಿಗೆ 20 ಲಕ್ಷ ಸ್ಮಾರ್ಟ್ ಸ್ಪೀಕರ್ಗಳನ್ನು (Smart Speakers) ಫೋನ್ ಪೇ ಅಳವಡಿಸಿದೆ. ಈ ಸ್ಮಾರ್ಟ್ಸ್ಪೀಕರ್ಗಳು ಯಾರಾದರೂ ಗ್ರಾಹಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿದಾಗ ಧ್ವನಿ ಸಂದೇಶದ ಮೂಲಕ ಅಲರ್ಟ್ ಮಾಡುತ್ತವೆ. ಫೋನ್ ಪೇ ಸ್ಮಾರ್ಟ್ಸ್ಪೀಕರ್ ಸಾಧನ ಒಮ್ಮೆ ಚಾರ್ಜ್ ಮಾಡಿದರೆ ನಾಲ್ಕು ದಿನಗಳವರೆಗೆ ಅದರ ಬ್ಯಾಟರಿ ಬಾಳಿಕೆ ಬರುತ್ತದೆ.
ಅಂದಹಾಗೆ, ಇಂಥ ಸ್ಪೀಕರ್ಗಳನ್ನು ಮೊದಲು ಜಾರಿಗೆ ತಂದಿದ್ದು ಪೇಟಿಎಂ. ಸೌಂಡ್ಬಾಕ್ಸ್ ಎಂಬ ಅದರ ಸಾಧನ ಜನಪ್ರಿಯವಾಗಿದೆ. ಇದೀಗ ಈ ಸೌಂಡ್ಬಾಕ್ಸ್ ಪೇಟಿಎಂನ ಒಂದು ಪ್ರಮುಖ ಆದಾಯ ಮೂಲವೂ ಹೌದು. ಪೇಟಿಎಂನ ನಿವ್ವಳ ಪೇಮೆಂಟ್ ಆದಾಯದಲ್ಲಿ ಶೇ. 38ರಷ್ಟು ಪಾಲು ಸೌಂಡ್ಬಾಕ್ಸ್ನಿಂದಲೇ ಬರುತ್ತದೆ.
ಬಹಳ ಅಂಗಡಿಗಳಲ್ಲಿ ಮಾಲೀಕರ ಮೊಬೈಲ್ ನಂಬರ್ಗೆ ಪೇಮೆಂಟ್ ಅಲರ್ಟ್ ಬರುತ್ತದೆ. ಆದರೆ, ಮಾಲೀಕರು ಅಂಗಡಿಯಲ್ಲಿ ಇಲ್ಲದಾಗ ಪೇಮೆಂಟ್ ಆಗಿದೆಯಾ ಎಂದು ಖಚಿತಪಡಿಸಿಕೊಳ್ಳಲು ಅಂಗಡಿಯಲ್ಲಿರುವ ಬೇರೆ ಕೆಲಸಗಾರರಿಗೆ ಸಾಧ್ಯವಾಗುವುದಿಲ್ಲ. ಪದೇ ಪದೇ ಮಾಲೀಕರಿಗೆ ಫೋನ್ ಮಾಡಿ ಖಚಿಪಡಿಸಿಕೊಳ್ಳುವುದು ಇಬ್ಬರಿಗೂ ಕಿರಿಕಿರಿಯೇ. ಸೌಂಡ್ಬಾಕ್ಸ್ ಅಥವಾ ಸ್ಮಾರ್ಟ್ಸ್ಪೀಕರ್ಗಳು ಈ ರಗಳೆ ನಿವಾರಿಸುತ್ತವೆ. ಅಂಗಡಿಯ ಸ್ಕ್ಯಾನರ್ ಮೂಲಕ ಯಾರಾದರೂ ಪೇಮೆಂಟ್ ಮಾಡಿದಾಗ ಈ ಬಾಕ್ಸ್ನಲ್ಲೇ ಅಲರ್ಟ್ ಮೆಸೇಜ್ ಹೊರಡುತ್ತದೆ. ಅಂದಹಾಗೆ ಈ ಬಾಕ್ಸ್ ಅನ್ನು ಅಂಗಡಿಯವರು ಹಣ ಕೊಟ್ಟು ಖರೀದಿಸಬೇಕು. ಇದರ ಸೇವೆಗೆ ನಿರ್ದಿಷ್ಟ ಮಾಸಿಕ ಶುಲ್ಕವೂ ಇರುತ್ತದೆ. ಫೋನ್ ಪೇ ಈಗ ಬಹಳ ಅಗ್ರೆಸಿವ್ ಆಗಿ ಸ್ಮಾರ್ಟ್ ಸ್ಪೀಕರ್ಗಳನ್ನು ವರ್ತಕರಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಫೋನ್ಪೇ
ಇನ್ನು, ಫೋನ್ ಪೇ ಇತ್ತೀಚೆಗಷ್ಟೇ ಪಿನ್ಕೋಡ್ (Pincode App) ಎನ್ನುವ ಹೊಸ ಶಾಪಿಂಗ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಸದ್ಯ ಇದರ ಸೇವೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿದೆ. ಇಲ್ಲಿ ಯಶಸ್ವಿಯಾದರೆ ದೇಶಾದ್ಯಂತ ಸೇವೆ ವಿಸ್ತರಿಸುವ ಆಲೋಚನೆ ಫೋನ್ ಪೇನದ್ದು.
ಪಿನ್ಕೋಡ್ ಆ್ಯಪ್ ಅನ್ನು ಡಿಜಿಟಲ್ ಕಾಮರ್ಸ್ ಓಪನ್ ನೆಟ್ವರ್ಕ್ನ ಪ್ಲಾಟ್ಫಾರ್ಮ್ (ONDC- Open Network for Digital Commerce) ಬಳಸಿ ಅಭಿವೃದ್ಧಿಪಡಿಸಲಾಗಿದೆ. ಜನಸಾಮಾನ್ಯರು ಹಾಗೂ ವಾಸಸ್ಥಳ ಸಮೀಪದ ಅಂಗಡಿಗಳ ಮಧ್ಯೆ ಈ ಆ್ಯಪ್ ಒಂದು ರೀತಿಯಲ್ಲಿ ಡಿಜಿಟಲ್ ಕೊಂಡಿಯಾಗಿದೆ. ದೊಡ್ಡ ದೊಡ್ಡ ಇ–ಕಾಮರ್ಸ್ ಕಂಪನಿಗಳಲ್ಲಿ ಬರೀ ದೊಡ್ಡ ಅಂಗಡಿ, ಮಳಿಗೆಯವರೇ ಜೋಡಿತವಾಗಿರುತ್ತಾರೆ. ಸಣ್ಣ ಪುಟ್ಟ ಕಾಕಾ ಅಂಗಡಿ, ಶೆಟ್ಟರ ಅಂಗಡಿ, ಭಟ್ಟರ ಕಾಂಡಿಮೆಂಟ್ಸ್ ಇತ್ಯಾದಿ ವರ್ತಕರು ಮತ್ತು ಮಾರಾಟಗಾರರು ಡಿಜಿಟಲ್ ವ್ಯಾಪ್ತಿಯಿಂದ ಹೊರಗುಳಿದು ಹೋಗಿದ್ದಾರೆ. ಇಂಥವರನ್ನು ಇ–ಕಾಮರ್ಸ್ ವ್ಯಾಪ್ತಿಗೆ ತರುತ್ತದೆ ಫೋನ್ಪೇನ ಪಿನ್ಕೋಡ್ ಆ್ಯಪ್.
ಅಂದಹಾಗೆ, ಬೆಂಗಳೂರಿನಲ್ಲಿ ಅಪ್ಪಟ ಭಾರತೀಯರು ಹುಟ್ಟುಹಾಕಿದ್ದ ಫೋನ್ಪೇ ಸಂಸ್ಥೆಗೆ ಇದೀಗ ಅಮೆರಿಕದ ವಾಲ್ಮಾರ್ಟ್ ಸಂಸ್ಥೆ ಮಾಲಕತ್ವ ಹೊಂದಿದೆ. ಹೀಗಾಗಿ, ಫೋನ್ಪೇಗೆ ಬಂಡವಾಳದ ಕೊರತೆ ಎದುರಾಗುವುದಿಲ್ಲ.
Published On - 7:03 pm, Thu, 13 April 23