IPL-Insurance: ಐಪಿಎಲ್ ಅಬ್ಬರದ ಮಧ್ಯೆ ನಷ್ಟ ಎದುರಿಸಲು ಇನ್ಷೂರೆನ್ಸ್ ಮೊರೆ; ಯಾವ್ಯಾವುದಕ್ಕೆ ವಿಮೆ? ಇಲ್ಲಿದೆ ಡೀಟೇಲ್ಸ್
Insurance Coverage For Loss of IPL Revenue: ಈ ಬಾರಿಯ ಐಪಿಎಲ್ನಲ್ಲಿ ಹಣದ ಹೊಳೆಯೇ ಹರಿಯುತ್ತಿದ್ದು, ಟೂರ್ನಿಯಲ್ಲಿ ಸ್ವಲ್ಪ ಏರುಪೇರಾದರೂ ಸಂಬಂಧಪಟ್ಟವರಿಗೆ ದೊಡ್ಡ ನಷ್ಟವೇ ಆಗುತ್ತದೆ. ಹೀಗಾಗಿ, ಈ ನಷ್ಟ ಸಾಧ್ಯತೆ ಎದುರಿಸಲು ಹಲವರು ವಿಮಾ ಪಾಲಿಸಿ ಮಾಡಿಸಿದ್ದಾರೆ.
ನವದೆಹಲಿ: ಐಪಿಎಲ್ನ 16ನೇ ಸೀಸನ್ ಧಮಾಕ ಚಾಲ್ತಿಯಲ್ಲಿದೆ. ಇಡೀ ವಿಶ್ವದಲ್ಲೇ ದೊಡ್ಡ ಬ್ಯುಸಿನೆಸ್ ಇರುವ ಕ್ರೀಡಾಕೂಟದಲ್ಲಿ ಐಪಿಎಲ್ ಕೂಡ ಒಂದು. ಈ ಟೂರ್ನಿಗೆ ಹಣದ ಸುರಿಮಳೆಯೇ ಆಗುತ್ತದೆ. ಹಣ ಹಾಕಿದವರು ದುಪ್ಪಟ್ಟು ಲಾಭವನ್ನೂ ಗಳಿಸುತ್ತಿದ್ದಾರೆ. ಅಂತೆಯೇ ಪ್ರತಿಯೊಂದೂ ಇಲ್ಲಿ ದೊಡ್ಡ ಮೊತ್ತದ ಹೂಡಿಕೆ ಮತ್ತು ವ್ಯವಹಾರವೇ. ಅಮೆರಿಕದ ನ್ಯಾಷನಲ್ ಫುಟ್ಬಾಲ್ ಲೀಗ್ (NFL) ಬಿಟ್ಟರೆ ಅತೀ ಹೆಚ್ಚು ಮೌಲ್ಯದ ಕ್ರೀಡಾಕೂಟ ಎಂದರೆ ಅದು ಐಪಿಎಲ್. ಮಾಧ್ಯಮ ಪ್ರಸಾರ ಹಕ್ಕುಗಳಿಂದಲೇ ಈ ಸೀಸನ್ನಲ್ಲಿ ಬಿಸಿಸಿಐ ಬರೋಬ್ಬರಿ 48,000 ಕೋಟಿ ರೂ ಗಳಿಸಿದೆ. 2018ರ ಸೀಸನ್ಗೆ (IPL-14) ಹೋಲಿಸಿದರೆ ಈ ಬಾರಿ ಮಾಧ್ಯಮ ಹಕ್ಕಿನಿಂದ ಬಿಸಿಸಿಐಗೆ ಮೂರು ಪಟ್ಟು ಹೆಚ್ಚು ಬೆಲೆ ಸಿಕ್ಕಿದೆ.
ಐಪಿಎಲ್ಗೆ ಜೋಡಿತವಾದ ಎಲ್ಲಾ ವ್ಯವಹಾರಸ್ಥರು (IPL Stakeholders) ಉದಾರವಾಗಿ ಹಣ ಹಾಕುತ್ತಿದ್ದಾರೆ. ಪಂದ್ಯ ನಿಂತುಹೋಗಿಯೋ, ಏನಾದರೂ ಯಾವುದಾದರೂ ರೀತಿಯಲ್ಲಿ ಅವಘಡ ಸಂಭವಿಸಿ ನಷ್ಟವಾಗುವ ಅಪಾಯ ಹೆಚ್ಚೇ ಇರುತ್ತದೆ. ಒಂದು ಲೆಕ್ಕಾಚಾರದಲ್ಲಿ ಈ ವರ್ಷದ ಐಪಿಎಲ್ನಲ್ಲಿ ವಿವಿಧ ವ್ಯವಹಾರಸ್ಥರಿಗೆ ನಷ್ಟ ಎದುರಾಗುವ ಅಪಾಯ ಇರುವ ಮೊತ್ತ 10 ಸಾವಿರ ಕೋಟಿ ರೂ ಎಂದು ಅಂದಾಜು ಮಾಡಲಾಗಿದೆ. ಹೀಗಾಗಿ, ಈ ನಷ್ಟಕ್ಕೆ ಪ್ರತಿಯಾಗಿ ಅದನ್ನು ಸರಿದೂಗಿಸಲು ಹಲವರು ಇನ್ಷೂರೆನ್ಸ್ ಮೊರೆ ಹೋಗಿದ್ದಾರೆ. ವಿವಿಧ ರೀತಿಯ ಇನ್ಷೂರೆನ್ಸ್ ಪಾಲಿಸಿಗಳನ್ನು ನಷ್ಟಕ್ಕೆ ಪ್ರತಿಯಾಗಿ ಮಾಡಿಸುತ್ತಿದ್ದಾರೆ. ಇದರ ಮಧ್ಯೆ ವಿಮಾ ಸಂಸ್ಥೆಗಳು ಅವಘಡ ಸಂಭವಿಸದಿರಲಿ ಎಂದು ಕಾತರದಿಂದ ಕಾದು ಕೂರುವಂತಾಗಿದೆ.
ಇದನ್ನೂ ಓದಿ: Hardwyn India: 3 ವರ್ಷದಲ್ಲಿ 43ಪಟ್ಟು ಹೆಚ್ಚು ಲಾಭ; ಹಾರ್ಡ್ವಿನ್ ಷೇರಿಗೆ ಹಣ ಹಾಕಿದವರು ಇವತ್ತು ಕೋಟ್ಯಾಧೀಶ್ವರರು
ಐಪಿಎಲ್ ಜೋಡಿತ ವ್ಯವಹಾರಿಗಳೆಂದರೆ ಇಲ್ಲಿ ಬಿಸಿಸಿಐ, ಪ್ರಸಾರ ಸಂಸ್ಥೆಗಳು, ಪ್ರಾಯೋಜಕರು, ಫ್ರಾಂಚೈಸಿ ಮಾಲೀಕರು ಮೊದಲಾದವರು ಬರುತ್ತಾರೆ. ಹವಾಮಾನ ಬದಲಾವಣೆ, ಗಲಭೆ, ಉಗ್ರ ದಾಳಿ ಇತ್ಯಾದಿ ಕಾರಣದಿಂದ ಪಂದ್ಯ ರದ್ದಾಗಿ ಅದರಿಂದ ನಷ್ಟ ಎದುರಾಗಬಹುದು. ಆಟಗಾರನಿಗೆ ಗಾಯವಾಗಿ, ಅನಾರೋಗ್ಯವಾಗಿ ಫ್ರಾಂಚೈಸಿಗೆ ನಷ್ಟ ಆಗಬಹುದು. ಅನಿರೀಕ್ಷಿತ ಕಾನೂನು ವೆಚ್ಚವೂ ಎದುರಾಗಬಹುದು. ಇವುಗಳಿಂದ ಉಂಟಾಗಬಹುದಾದ ನಷ್ಟವನ್ನು ಕವರ್ ಮಾಡುವಂತಹ ವಿಮಾ ಪಾಲಿಸಿಗಳನ್ನು ಮಾಡಿಸಲಾಗಿರುವುದು ತಿಳಿದುಬಂದಿದೆ.
ಐಪಿಎಲ್ಗೆ ಕೋವಿಡ್ ಪರಿಣಾಮಕ್ಕೆ ಇನ್ಷೂರೆನ್ಸ್ ಕವರೇಜ್ ಇಲ್ಲ
ಕಳೆದ ವರ್ಷ 2022ರಲ್ಲಿ ಇಂಗ್ಲೆಂಡ್ನ ವಿಂಬಲ್ಡನ್ನಲ್ಲಿ ನಡೆದ ಗ್ರ್ಯಾನ್ಸ್ಲಾಮ್ ಟೆನಿಸ್ ಟೂರ್ನಿಗೆ ವಿಮೆ ಮಾಡಿಸಲಾಗಿತ್ತು. ಆಲ್ ಇಂಡಿಯಾ ಲಾನ್ ಟೆನಿಸ್ ಕ್ಲಬ್ ಕೋವಿಡ್ ರೋಗದಿಂದ ಉಂಟಾಗುವ ನಷ್ಟಕ್ಕೆ ಕವರ್ ಮಾಡುವ ಇನ್ಷೂರೆನ್ಸ್ ಪಾಲಿಸಿ ಮಾಡಿಸಿತ್ತು. ವಿಮಾ ಕಂಪನಿ ದುರದೃಷ್ಟಕ್ಕೆ 2022ರ ವಿಂಬಲ್ಡನ್ ಟೆನಿಸ್ ಟೂರ್ನಿ ಕೋವಿಡ್-19 ಕಾರಣಕ್ಕೆ ರದ್ದುಗೊಂಡಿತ್ತು. ಎಐಎಲ್ಟಿಸಿಯ ಅದೃಷ್ಟಕ್ಕೆ ವಿಮಾ ಪಾಲಿಸಿ ಇದ್ದರಿಂದ 142 ಮಿಲಿಯನ್ ಡಾಲರ್ (ಸುಮಾರು 1,100 ಕೋಟಿ ರೂ) ಮೊತ್ತದಷ್ಟು ಭಾರೀ ಹಣ ಕ್ಲೈಮ್ ಮಾಡಿತ್ತು.
ಈ ಹಿನ್ನೆಲೆಯಲ್ಲಿ ಐಪಿಎಲ್ 2023 ಟೂರ್ನಿಗೆ ಕೋವಿಡ್ ಸಂಗತಿಯನ್ನು ವಿಮಾ ವ್ಯಾಪ್ತಿಯಿಂದ ದೂರ ಇಡಲು ಇನ್ಷೂರೆನ್ಸ್ ಕಂಪನಿಗಳು ನಿರ್ಧರಿಸಿರುವಂತಿವೆ. ಕೋವಿಡ್ನಿಂದಾಗಿ ಟೂರ್ನಿ ರದ್ದಾದರೆ, ಅಥವಾ ಯಾವುದಾದರೂ ಪಂದ್ಯ ರದ್ದಾದರೆ ಅದಕ್ಕೆ ಇನ್ಷೂರೆನ್ಸ್ ಕವರೇಜ್ ಇರುವುದಿಲ್ಲ.