
ನವದೆಹಲಿ, ಅಕ್ಟೋಬರ್ 2: ಡಿಫೆನ್ಸ್ ಕ್ಷೇತ್ರದಲ್ಲಿ ಭಾರತ ಸ್ವಾವಲಂಬನೆ (Defence sector self reliance) ಸಾಧಿಸುವುದು ಬಹಳ ಮುಖ್ಯ ಎಂದು ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ (ಎಡಿಎ) ಮಾಜಿ ಹಿರಿಯ ಅಧಿಕಾರಿ ಡಾ. ಕೋಟ ಹರಿನಾರಾಯಣ ಸಲಹೆ ನೀಡಿದ್ದಾರೆ. ಅಲ್ಪಾವಧಿ ಅಗತ್ಯತೆಗಳಿಗೆ ವಿದೇಶಗಳಿಂದ ಯುದ್ಧವಿಮಾನ ಖರೀದಿಸುವುದರಿಂದ ಭಾರತದ ಎಎಂಸಿಎ ಯೋಜನೆಗೆ ಹಿನ್ನಡೆ ಆಗಬಹುದು ಎಂಬುದು ಅವರ ವಾದ.
ರಷ್ಯಾ ದೇಶವು ತನ್ನ ಐದನೇ ತಲೆಮಾರಿನ ಎಸ್ಯು-57 ಫೆಲಾನ್ ಯುದ್ಧವಿಮಾನವನ್ನು ಭಾರತಕ್ಕೆ ಮಾರಲು ಪ್ರಯತ್ನಿಸುತ್ತಿದೆ. ಅಮೆರಿಕ ಕೂಡ ತನ್ನ ಎಫ್-35 ಲೈಟ್ನಿಂಗ್-2 ಯುದ್ಧವಿಮಾನವನ್ನು ಖರೀದಿಸಲು ಭಾರತದ ಮೇಲೆ ಒತ್ತಡ ಹೇರುತ್ತಿದೆ. ಭಾರತದ ಬಳಿ ಸದ್ಯ ಐದನೇ ತಲೆಮಾರಿನ ಯಾವ ಯುದ್ಧವಿಮಾನವೂ ಇಲ್ಲ. ರಫೇಲ್ ಇನ್ನೂ ಈ ಹಂತಕ್ಕೆ ಬಂದಿಲ್ಲ. ಭಾರತಕ್ಕೂ ಈಗ ಐದನೇ ತಲೆಮಾರಿನ ಯುದ್ಧವಿಮಾನಗಳ ಅವಶ್ಯಕತೆ ಇದೆ. ಹೀಗಾಗಿ, ಕೆಲವರು ರಷ್ಯಾ ಅಥವಾ ಅಮೆರಿಕದಿಂದ ಫೈಟರ್ ಜೆಟ್ಗಳನ್ನು ಖರೀದಿಸಬಹುದು ಎನ್ನುವ ಸಲಹೆಗಳು ಕೆಲವೆಡೆಯಿಂದ ಬರುತ್ತಿವೆ. ಆದರೆ, ಡಾ. ಕೋಟ ಹರಿನಾರಾಯಣ ಅವರು ಈ ಸಲಹೆಯನ್ನು ತಿರಸ್ಕರಿಸುತ್ತಾರೆ.
ಕೋಟ ಹರಿನಾರಾಯಣ ಅವರು ಭಾರತದ ಸ್ವಂತ ತಯಾರಿಕೆ ಎಲ್ಸಿಎ ತೇಜಸ್ ಯೋಜನೆಯ ರೂವಾರಿ. ಎಡಿಎಯಲ್ಲಿ ಅವರು 1989ರಿಂದ 2004ರವರೆಗೂ ಮುಖ್ಯ ಡಿಸೈನರ್ ಮತ್ತು ಪ್ರೋಗ್ರಾಮ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದರು. ಅವರು ಇನ್ನೋವೇಶನ್ಗೆ ಒತ್ತು ಕೊಡುತ್ತಿದ್ದರು. ಐದನೇ ತಲೆಮಾರಿನ ಫೈಟರ್ ಜೆಟ್ಗಳಿಗೆ ಬೇಕಾಗುವ ಫ್ಲೈಯಿಂಗ್ ವಿಂಗ್ ಡಿಸೈನ್ ಅನ್ನು ನಿರ್ಮಿಸಲು ಅವರು ಆಗಲೇ ಕೆಲಸ ಮಾಡಿದ್ದರು. ಇಂಥ ಕೋಟ ಹರಿನಾರಾಯಣ ಅವರು ಈಗ ವಿದೇಶಗಳಿಂದ ಫೈಟರ್ ಜೆಟ್ ಖರೀದಿಸುವ ಬದಲು ಭಾರತವೇ ಸ್ವಂತವಾಗಿ ಯುದ್ಧವಿಮಾನ ಅಭಿವೃದ್ಧಿಯತ್ತ ಗಮನ ಕೊಡಬೇಕು ಎಂದು ಕಿವಿ ಮಾತು ಹೇಳುತ್ತಿದ್ದಾರೆ.
ಇದನ್ನೂ ಓದಿ: ಎಲೆಕ್ಟ್ರಾನಿಕ್ಸ್ ಇಕೋಸಿಸ್ಟಂ ನಿರ್ಮಾಣಕ್ಕೆ ಇಸಿಎಂಎಸ್ ಸ್ಕೀಮ್; ಭರ್ಜರಿ ಸ್ಪಂದನೆ
ರಷ್ಯಾದ ಎಸ್ಯು-57 ಮತ್ತು ಎಫ್-35 ಯುದ್ಧವಿಮಾನಗಳನ್ನು ಖರೀದಿಸುವುದು ಎಷ್ಟು ತಪ್ಪು ನಿರ್ಧಾರ ಆಗುತ್ತದೆ ಎಂಬುದನ್ನೂ ಅವರು ವಿವರಿಸುತ್ತಾರೆ. ಅವರ ಪ್ರಕಾರ ಎಸ್ಯು-57 ಯುದ್ಧವಿಮಾನದ ಸ್ಟೀಲ್ತ್ ಸಾಮರ್ಥ್ಯ ಕಡಿಮೆ ಇದೆ. ಅಂದರೆ, ಶತ್ರುಗಳ ರಾಡಾರ್ ಕಣ್ಣಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ಕಡಿಮೆ ಇದೆ. ಇದರ ಸ್ಟೀಲ್ ಕೋಟಿಂಗ್ಸ್ ಸಮರ್ಪಕವಾಗಿಲ್ಲ. ಇದರ ಉತ್ಪಾದನಾ ಪ್ರಮಾಣವನ್ನು ಗಣನೀಯವಾಗಿ ಏರಿಸಲು ಆಗುವುದಿಲ್ಲ. ಇದರ ತಯಾರಿಕೆಗಾಗಿ ರಷ್ಯಾದ ಸಪ್ಲೈ ಚೈನ್ಗಳ ಮೇಲೆ ಅವಲಂಬನೆ ಆಗಬೇಕಾಗುತ್ತದೆ.
ಇನ್ನು, ಅಮೆರಿಕದ ಎಫ್-35 ಯುದ್ಧವಿಮಾನವು ತಾಂತ್ರಿಕವಾಗಿ ಹೆಚ್ಚು ಸಮರ್ಪಕವಾಗಿದ್ದರೂ ಅದರ ಬಳಕೆಯಲ್ಲಿ ಪೂರ್ಣ ಸ್ವಾತಂತ್ರ್ಯ ಇರುವುದಿಲ್ಲ. ತೇಜಸ್ನಂತಹ ದೇಶೀಯ ಸಿಸ್ಟಂಗಳೊಂದಿಗೆ ಅದನ್ನು ಮೇಳೈಸಲು ಆಗುವುದಿಲ್ಲ ಎಂಬುದು ಕೋಟ ಹರಿನಾರಾಯಣ ಅವರ ವಾದ.
ಎಎಂಸಿಎ ಎಂದರೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್. ಇದು ಐದನೇ ತಲೆಮಾರಿನ ಫೈಟರ್ ಜೆಟ್ ನಿರ್ಮಾಣ ಯೋಜನೆ. ಡಿಆರ್ಡಿಒ ಮತ್ತು ಎಡಿಎ ಜಂಟಿಯಾಗಿ ಎಎಂಸಿಎ ಅನ್ನು ಅಭಿವೃದ್ಧಿಪಡಿಸುತ್ತಿವೆ. 2029ರೊಳಗೆ ಪ್ರೋಟೋಟೈಪ್ ಸಿದ್ಧವಾಗುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ವಿವಿಧ ಬಿಡಿಭಾಗಗಳ ತಯಾರಿಕೆಗೆ ಅವಶ್ಯವಾಗಿರುವ ಸಾಮಗ್ರಿಗಳನ್ನು ಕಲೆಹಾಕಲಾಗುತ್ತಿದೆ.
ಇದನ್ನೂ ಓದಿ: ನೀರಲ್ಲಿ ಹೋಮ ಮಾಡಿದಂತಾಯ್ತು ಅಮೆರಿಕದ 19,000 ಕೋಟಿ ರೂ ಮೆಗಾ ಸೋಲಾರ್ ಪ್ರಾಜೆಕ್ಟ್
ಈ ಯೋಜನೆಯಲ್ಲಿ ಜೆಟ್ಗಳನ್ನು ನಿರ್ಮಾಣ ಮಾಡಲು ವಿವಿಧ ಸಂಸ್ಥೆಗಳನ್ನು ಆಹ್ವಾನಿಸಲಾಗಿದೆ. 28 ಖಾಸಗಿ ಕಂಪನಿಗಳು ಬಿಡ್ ಸಲ್ಲಿಸಿವೆ. ಬೇರೆ ಬೇರೆ ಕಂಪನಿಗಳು ಒಂದು ಗುಂಪು ಮಾಡಿಕೊಂಡು ಬಿಡ್ ಮಾಡಿವೆ. ಭಾರತ್ ಫೋರ್ಜ್, ಬೆಮೆಲ್, ಡಾಟಾ ಪ್ಯಾಟರ್ನ್ಸ್ ಕಂಪನಿಗಳು ಒಂದು ಗ್ರೂಪ್ ಮಾಡಿಕೊಂಡಿವೆ. ಎಲ್ ಅಂಡ್ ಟಿ ಮತ್ತು ಬಿಇಎಲ್ ಒಂದು ಗುಂಪು ಮಾಡಿಕೊಂಡಿವೆ. ಎಚ್ಎಎಲ್ ನೇತೃತ್ವದಲ್ಲಿ ಮತ್ತೊಂದು ಗುಂಪು ಸಿದ್ಧವಾಗಿದೆ. ಹೀಗೆ ಬೇರೆ ಬೇರೆ ಕಂಪನಿಗಳು ಗುಂಪು ರಚಿಸಿಕೊಂಡು ಯೋಜನೆಗೆ ಬಿಡ್ ಸಲ್ಲಿಸಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ