ECMS: ಎಲೆಕ್ಟ್ರಾನಿಕ್ಸ್ ಇಕೋಸಿಸ್ಟಂ ನಿರ್ಮಾಣಕ್ಕೆ ಇಸಿಎಂಎಸ್ ಸ್ಕೀಮ್; ಭರ್ಜರಿ ಸ್ಪಂದನೆ
249 applications submitted for manufacturing 12 electronics components: ಎಲೆಕ್ಟ್ರಾನಿಕ್ಸ್ ಕಾಂಪೊನೆಂಟ್ಗಳ ಮ್ಯಾನುಫ್ಯಾಕ್ಚರಿಂಗ್ಗೆ ಸರ್ಕಾರ ನಡೆಸುತ್ತಿರುವ ಇಸಿಎಂಎಸ್ ಸ್ಕೀಮ್ಗೆ ಒಳ್ಳೆಯ ಸ್ಪಂದನೆ ಸಿಕ್ಕಿದೆ. 2025ರ ಸೆಪ್ಟೆಂಬರ್ 30ರವರೆಗೂ ಅರ್ಜಿಗಳಿಗೆ ಕಾಲಾವಕಾಶ ಕೊಡಲಾಗಿತ್ತು. 12 ವಿವಿಧ ಬಿಡಿಭಾಗಗಳ ತಯಾರಿಕೆಗೆ ಒಟ್ಟು 249 ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಿಂದ ಒಟ್ಟು ಹೂಡಿಕೆ 1.15 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ.

ನವದೆಹಲಿ, ಅಕ್ಟೋಬರ್ 2: ಸರ್ಕಾರ ಇತ್ತೀಚೆಗೆ ಆರಂಭಿಸಿದ ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆ ಯೋಜನೆಗೆ (ECMS- Electronics Component Manufacturing Scheme) ಭರ್ಜರಿ ಸ್ಪಂದನೆ ಸಿಕ್ಕಿದೆ. ನಿರೀಕ್ಷೆಮೀರಿದ ರೀತಿಯಲ್ಲಿ ಹೂಡಿಕೆಗಳು ಹರಿದುಬಂದಿವೆ. ವಿವಿಧ ಎಲೆಕ್ಟ್ರಾನಿಕ್ ಬಿಡಿಭಾಗಗಳ ತಯಾರಿಕೆಗೆ ಒಟ್ಟು 249 ಅರ್ಜಿಗಳು ಸಲ್ಲಿಕೆಯಾಗಿದ್ದು, 1.15 ಲಕ್ಷ ಕೋಟಿ ರೂ ಹೂಡಿಕೆ ಪ್ರಸ್ತಾಪ ಇದೆ. ಸರ್ಕಾರವು ಈ ಅರ್ಜಿಗಳನ್ನು ಪರಿಶೀಲಿಸುತ್ತಿದ್ದು, ಸೂಕ್ತವಾದ ಕಂಪನಿಗಳಿಗೆ ಗುತ್ತಿಗೆ ಕೊಡುವ ಸಾಧ್ಯತೆ ಇದೆ.
ಇಸಿಎಂಸಿ ಯೋಜನೆಯಲ್ಲಿ ಅರ್ಜಿಗಳನ್ನು ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿತ್ತು. ಸರ್ಕಾರವು ಇದರಿಂದ 59,350 ಕೋಟಿ ರೂ ಹೂಡಿಕೆ ನಿರೀಕ್ಷಿಸಿತ್ತು. ಈಗ ಬಂದಿರುವ ಅರ್ಜಿಗಳ ಪ್ರಸ್ತಾಪ ಗಮನಿಸಿದರೆ 1,15,351 ಕೋಟಿ ರೂ ಹೂಡಿಕೆ ಬರಬಹುದು. ಇದರಿಂದ 1,41,801 ಮಂದಿಗೆ ಕೆಲಸ ಸಿಗುವ ನಿರೀಕ್ಷೆ ಇದೆ. ಉತ್ಪಾದನೆ ಮೌಲ್ಯ 10 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ಡಿಎ ಶೇ. 3 ಏರಿಕೆ; 1 ಕೋಟಿ ಉದ್ಯೋಗಿಗಳು, ಪಿಂಚಣಿದಾರರಿಗೆ ಖುಷಿ ಸುದ್ದಿ
ಡಿಸ್ಪ್ಲೇ ಮಾಡ್ಯೂಲ್ ಸಬ್ ಅಸೆಂಬ್ಲಿ, ಕ್ಯಾಮರಾ ಮಾಡ್ಯೂಲ್ ಸಬ್ ಅಸೆಂಬ್ಲಿ, ಎಲೆಕ್ಟ್ರೋ ಮೆಕ್ಯಾನಿಕಲ್ಸ್, ಮಲ್ಟಿಲೇಯರ್ ಪಿಸಿಬಿ, ಆಪ್ಟಿಕಲ್ ಟ್ರಾನ್ಸೀವರ್ ಇತ್ಯಾದಿ 12 ಸೆಗ್ಮೆಂಟ್ಗಳನ್ನು ಇಸಿಎಂಎಸ್ ಸ್ಕೀಮ್ನಲ್ಲಿ ಗುರಿ ಮಾಡಲಾಗಿದೆ. ಈ ಪೈಕಿ ಎಲೆಕ್ಟ್ರೋ ಮೆಕ್ಯಾನಿಕಲ್ಸ್ ಮತ್ತು ಮಲ್ಟಿಲೇಯರ್ ಪಿಸಿಬಿ ಕಾಂಪೊನೆಂಟ್ಗಳ ತಯಾರಿಕೆಗೆ ಹೆಚ್ಚಿನ ಅರ್ಜಿಗಳು ಸಲ್ಲಿಕೆ ಆಗಿವೆ. ಎಸ್ಎಂಡಿ ಪಾಸಿವ್ ಕಾಂಪೊನೆಂಟ್ಗಳಿಗೆ ಕಡಿಮೆ ಅರ್ಜಿ ಸಲ್ಲಿಕೆ ಆಗಿವೆ.
ಎಸ್ಎಂಡಿ ಪಾಸಿವ್ಸ್, ಲ್ಯಾಮಿನೇಟ್ಸ್, ಫ್ಲೆಕ್ಸಿಬಲ್ ಪಿಸಿಬಿ, ಕ್ಯಾಪಿಟಲ್ ಎಕ್ವಿಪ್ಮೆಂಟ್ನಂತಹ ಸೆಗ್ಮೆಂಟ್ಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆ ಹೂಡಿಕೆಗಳು ಹರಿದುಬರುತ್ತಿವೆ. ಇವೆಲ್ಲವೂ ಕೂಡ ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆಗೆ ಪ್ರಬಲವಾದ ಇಕೋಸಿಸ್ಟಂ ನಿರ್ಮಾಣಕ್ಕೆ ಎಡೆ ಮಾಡಿಕೊಡಲಿವೆ. 2030-31ರಲ್ಲಿ ಭಾರತದಲ್ಲಿ 500 ಬಿಲಿಯನ್ ಡಾಲರ್ ಮೌಲ್ಯದ ದೇಶೀ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ವ್ಯವಸ್ಥೆ ನಿರ್ಮಿಸುವ ಗುರಿ ಬೇಗ ಸಾಕಾರಗೊಳ್ಳಲಿದೆ.
ಇದನ್ನೂ ಓದಿ: ಇದು ಭಾರತದ ವಾಟ್ಸಾಪ್; ಅರಟ್ಟೈನಲ್ಲಿದೆ ವಾಟ್ಸಾಪ್ನಲ್ಲಿ ಇಲ್ಲದ ಒಂದು ಸ್ಮಾರ್ಟ್ ಫೀಚರ್
ಸೆಮಿಕಂಡಕ್ಟರ್ ಪ್ರಾಜೆಕ್ಟ್ಗಳಿಗೂ ಉತ್ತಮ ಸ್ಪಂದನೆ
ಸೆಮಿಕಂಡಕ್ಟರ್ ಚಿಪ್ ತಯಾರಿಕೆಯ ಯೋಜನೆಗಳೂ ಕೂಡ ಸಾಕಷ್ಟು ಬರುತ್ತಿವೆ. ಸೆಮಿಕಾನ್ ಸ್ಕೀಮ್ನಲ್ಲಿ (Semicon) 10 ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ. ಇದರಿಂದ 1.60 ಲಕ್ಷ ಕೋಟಿ ರೂ ಹೂಡಿಕೆ ಬರಲಿದೆ. 23 ಡಿಸೈನ್ ಕಂಪನಿಗಳಿಗೆ ಹಸಿರು ನಿಶಾನೆ ತೋರಲಾಗಿದೆ.
ಮೊಬೈಲ್ ತಯಾರಿಕೆ ಪಿಎಲ್ಐ ಯೋಜನೆಯಲ್ಲಿ 12,612 ಕೊಟಿ ರೂ ಹೂಡಿಕೆ ಬಂದಿದೆ. ಕಳೆದ ದಶಕದಲ್ಲಿ ಮೊಬೈಲ್ ಉತ್ಪಾದನೆ ವರ್ಷಕ್ಕೆ ಶೇ. 24ರ ಸಿಎಜಿಆರ್ನಲ್ಲಿ ಬೆಳೆದಿದೆ.
ಐಟಿ ಹಾರ್ಡ್ವೇರ್ ಪಿಎಲ್ಐನಲ್ಲಿ 2,439 ಕೋಟಿ ರೂ ಹೂಡಿಕೆ ಬರುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




