DA Hike: ಕೇಂದ್ರ ಸರ್ಕಾರದಿಂದ ಡಿಎ ಶೇ. 3 ಏರಿಕೆ; 1 ಕೋಟಿ ಉದ್ಯೋಗಿಗಳು, ಪಿಂಚಣಿದಾರರಿಗೆ ಖುಷಿ ಸುದ್ದಿ
Central govt announces 3pc DA hike: ಕೇಂದ್ರ ಸಂಪುಟವು ಜುಲೈನಿಂದ ಡಿಸೆಂಬರ್ವರೆಗೆ ನೀಡುವ ತುಟ್ಟಿಭತ್ಯೆಯನ್ನು ಶೇ. 3ರಷ್ಟು ಹೆಚ್ಚಿಸಿದೆ. ಶೇ. 55ರಷ್ಟು ಇದ್ದ ಡಿಎ ಮತ್ತು ಡಿಆರ್ ಈಗ ಶೇ. 58ಕ್ಕೆ ಏರಿದೆ. ದೇಶಾದ್ಯಂತ ಇರುವ ಹಾಲಿ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಇದು ಅನ್ವಯಿಸುತ್ತಿದೆ. ಇವರ ಸಂಖ್ಯೆ ಒಟ್ಟು 1.2 ಕೋಟಿಗೂ ಅಧಿಕ ಇದೆ.

ನವದೆಹಲಿ, ಅಕ್ಟೋಬರ್ 1: ಕೇಂದ್ರ ಸರ್ಕಾರೀ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ದೀಪಾವಳಿ ಉಡುಗೊರೆ ಸಿಗುತ್ತಿದೆ. ಜುಲೈನಿಂದ ಡಿಸೆಂಬರ್ವರೆಗಿನ ತುಟ್ಟಿಭತ್ಯೆಯನ್ನು (DA- Dearness Allowance) ಶೇ. 3ರಷ್ಟು ಏರಿಸಲಾಗಿದೆ. ಕೇಂದ್ರ ಸಂಪುಟದಿಂದ ಶೇ. 3 ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿದೆ ಎಂದು ಅಕ್ಟೋಬರ್ 1ರಂದು ಕೇಂದ್ರ ಮಾಹಿತಿ ಮತ್ತು ಪ್ರಸರಣ ಖಾತೆ ಸಚಿವ ಡಾ. ಅಶ್ವಿನಿ ವೈಷ್ಣವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಶೇ. 3ರಷ್ಟು ಏರಿಕೆಯೊಂದಿಗೆ ಪ್ರಸಕ್ತ ಡಿಎ ಮತ್ತು ಡಿಆರ್ ಶೇ. 58ಕ್ಕೆ ಏರಿದಂತಾಗಿದೆ.
ಈ ತುಟ್ಟಿಭತ್ಯೆ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ 10,084 ಕೋಟಿ ರೂನಷ್ಟು ಹೊರೆಯಾಗಲಿದೆ. ಆದರೆ, ದೇಶಾದ್ಯಂತ ಇರುವ 1.2 ಕೋಟಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಹಬ್ಬದ ಕೊಡುಗೆ ಸಿಕ್ಕಂತಾಗಿದೆ.
ಈಗ ತುಟ್ಟಿಭತ್ಯೆ ಏರಿಕೆ ಮಾಡಿದರೂ ಅದು ಜುಲೈ ತಿಂಗಳಿಂದಲೇ ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆ. ಅಕ್ಟೋಬರ್ ತಿಂಗಳಿಗೆ ಕೈಗೆ ಸಿಗುವ ಸಂಬಳದಲ್ಲೇ ಈ ಏರಿಕೆ ಆಗಿರುವ ಸಾಧ್ಯತೆ ಇದೆ. ಜುಲೈನಿಂದ ಇಲ್ಲಿಯವರೆಗೆ ಅರಿಯರ್ಸ್ ಸಮೇತವಾಗಿ ಹಣ ಬರಲಿದೆ.
ಇದನ್ನೂ ಓದಿ: ಜಿಡಿಪಿ, ಹಣದುಬ್ಬರ ಸ್ಥಿತಿ ಸಕಾರಾತ್ಮಕ; ಬಡ್ಡಿದರದಲ್ಲಿ ಇಲ್ಲ ಬದಲಾವಣೆ; ಇಲ್ಲಿವೆ ಆರ್ಬಿಐ ಎಂಪಿಸಿ ನಿರ್ಧಾರಗಳು
ಡಿಎ ಎಂಬುದು ಹಾಲಿ ಸೇವೆಯಲ್ಲಿರುವ ಸರ್ಕಾರಿ ಉದ್ಯೋಗಿಗಳಿಗೆ ಅವರ ಮೂಲ ವೇತನಕ್ಕೆ ಹೆಚ್ಚುವರಿಯಾಗಿ ನೀಡುವ ಭತ್ಯೆಯಾಗಿದೆ. ಡಿಆರ್ ಅಥವಾ ಡಿಯರ್ನೆಸ್ ರಿಲೀಫ್ ಎಂಬುದು ಪಿಂಚಣಿ ಪಡೆಯುತ್ತಿರುವ ನಿವೃತ್ತ ನೌಕರರಿಗೆ ಸಿಗುತ್ತದೆ.
ಶೇ. 3 ಡಿಎ ಹೆಚ್ಚಳದಿಂದ ಎಷ್ಟು ಸಂಬಳ ಏರಿಕೆ ಆಗುತ್ತದೆ?
ಒಬ್ಬ ಉದ್ಯೋಗಿಯ ಸಂಬಳದಲ್ಲಿ ಮೂಲವೇತನವು 50,000 ರೂ ಇದ್ದಲ್ಲಿ, ಶೇ. 3 ಡಿಎ ಎಂದರೆ 1,500 ರೂ ಆಗುತ್ತದೆ. ಅಂದರೆ, ಕೈಗೆ ಸಿಗುವ ಸಂಬಳದಲ್ಲಿ ಒಂದೂವರೆ ಸಾವಿರ ರೂ ಏರಿಕೆ ಆಗುತ್ತದೆ. ಮೂಲವೇತನ 60,000 ರೂ ಇದ್ದರೆ 1,800 ರೂನಷ್ಟು ಸಂಬಳ ಹೆಚ್ಚುತ್ತದೆ.
ಸದ್ಯ ಶೇ. 55ರಷ್ಟು ಡಿಎ ಸಿಗುತ್ತಿದೆ. ಈಗ ಅದು ಶೇ. 58ಕ್ಕೆ ಏರಿಕೆ ಆಗುತ್ತದೆ. 50,000 ರೂ ಮೂಲವೇತನ ಪಡೆಯುತ್ತಿರುವವರಿಗೆ ಒಟ್ಟು ಡಿಎ 27,500 ರೂನಿಂದ 29,000 ರೂಗೆ ಏರುತ್ತದೆ.
ಇದನ್ನೂ ಓದಿ: ಗೋಲ್ ಲೋನ್ನಿಂದ ಹಿಡಿದು ಸ್ಪೀಡ್ ಪೋಸ್ಟ್ ದರ ಹೆಚ್ಚಳದವರೆಗೆ, ಅ. 1ರಿಂದ ಬದಲಾಗಲಿರುವ ಹಣಕಾಸು ನಿಯಮಗಳು
ಡಿಎ ಮತ್ತು ಡಿಆರ್ ಕೊಡೋದು ಯಾಕೆ?
ಡಿಎ ಎಂಬುದು ತುಟ್ಟಿಭತ್ಯೆ. ಅಂದರೆ, ಬೆಲೆ ಏರಿಕೆಗೆ ಪರಿಹಾರವಾಗಿ ಉದ್ಯೋಗಿಗಳಿಗೆ ನೀಡುವ ಭತ್ಯೆ. ಹಣದುಬ್ಬರದಿಂದಾಗಿ ನೌಕರರ ಸಂಬಳದ ಮೌಲ್ಯ ಕುಂಠಿತಗೊಳ್ಳುತ್ತದೆ. ಇದಕ್ಕೆ ಪರಿಹಾರವಾಗಿ ಈ ಭತ್ಯೆ ಕೊಡಲಾಗುತ್ತದೆ. ವೇತನ ಪರಿಷ್ಕರಣೆ ಬೇರೆ, ಭತ್ಯೆ ಬೇರೆ. ವೇತನ ಪರಿಷ್ಕರಣೆ ಕಾರ್ಯ ಪ್ರತ್ಯೇಕವಾಗಿ ನಡೆಯುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




