ನವದೆಹಲಿ, ಏಪ್ರಿಲ್ 25: ಹೊಸ ಕ್ರೆಡಿಟ್ ಕಾರ್ಡ್ ನೀಡಬಾರದು ಎಂಬಿತ್ಯಾದಿ ನಿರ್ಬಂಧಗಳನ್ನು ಆರ್ಬಿಐ ವಿಧಿಸಿದ ಬಳಿಕ ನಿರೀಕ್ಷೆಯಂತೆ ಕೋಟಕ್ ಮಹೀಂದ್ರ ಬ್ಯಾಂಕ್ನ ಷೇರುಬೆಲೆ (Kotak Mahindra Bank share price) ಕುಸಿತ ಕಾಣುತ್ತಿದೆ. ಗುರುವಾರದ ಮಧ್ಯಾಹ್ನ 1 ಗಂಟೆಯಲ್ಲಿ ಕೋಟಕ್ ಬ್ಯಾಂಕ್ ಷೇರು ಶೇ. 11ರಷ್ಟು ಕುಸಿದೆ. ಸುಮಾರು 200 ರೂಗಳಷ್ಟು ಕುಸಿತ ಕಂಡಿದೆ. ಬುಧವಾರ ಸಂಜೆ 1,842 ರೂ ಇದ್ದ ಅದರ ಷೇರುಬೆಲೆ ಈಗ 1,642 ಕೋಟಿ ರೂ ತಲುಪಿದೆ. ಬೆಳಗ್ಗೆಯಿಂದಲೇ ಆರಂಭವಾದ ಪತನ ಒಂದು ಹಂತದಲ್ಲಿ ಕೆಳಗಿನ ಮಿತಿಯಾದ ಶೇ. 15ರಷ್ಟು ಪ್ರಮಾಣದಲ್ಲಿ ಷೇರುಬೆಲೆ ಕುಸಿದಿತ್ತು. ಬ್ಯಾಂಕ್ನ ಷೇರುಸಂಪತ್ತು ಒಂದೇ ದಿನದಲ್ಲಿ ಸುಮಾರು 50,000 ಕೋಟಿ ರೂ ನಶಿಸಿದಂತಾಗಿದೆ.
ಕುತೂಹಲ ಎಂದರೆ ನಿಫ್ಟಿ ಬ್ಯಾಂಕ್ ಇಂಡೆಕ್ಸ್ನಲ್ಲಿ ಕೋಟಕ್ ಮಹೀಂದ್ ಬ್ಯಾಂಕ್ ಬಿಟ್ಟು ಉಳಿದ ಎಲ್ಲಾ ಬ್ಯಾಂಕ್ ಸ್ಟಾಕ್ಗಳು ಹಸಿರು ಬಣ್ಣದಲ್ಲಿ ಟ್ರೇಡ್ ಆಗುತ್ತಿವೆ. ಅಂದರೆ ಷೇರುಬೆಲೆ ಹೆಚ್ಚಳ ಕಂಡಿವೆ. ಕೋಟಕ್ ಮಹೀಂದ್ರದ ಈಗಿನ ಒಟ್ಟು ಮಾರುಕಟ್ಟೆ ಸಂಪತ್ತು 3.27 ಲಕ್ಷ ಕೋಟಿ ರೂ ಇದೆ. ಅದೇ ವೇಳೆ ಎಕ್ಸಿಸ್ ಬ್ಯಾಂಕ್ ಷೇರು ಶೇ. 5ರಷ್ಟು ಹೆಚ್ಚಾಗಿದ್ದು ಅದರ ಮಾರುಕಟ್ಟೆ ಸಂಪತ್ತು 3.43 ಲಕ್ಷ ಕೋಟಿ ರೂ ತಲುಪಿದೆ.
ಈ ಮೊದಲು ಅತಿಹೆಚ್ಚು ಮಾರುಕಟ್ಟೆ ಸಂಪತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕೋಟಕ್ ಮಹೀಂದ್ರ ಬ್ಯಾಂಕ್ ಒಂದು ಸ್ಥಾನ ಕುಸಿದಿದೆ. ಎಕ್ಸಿಸ್ ಬ್ಯಾಂಕ್ ನಾಲ್ಕನೇ ಸ್ಥಾನಕ್ಕೆ ಏರಿದೆ.
ಅತಿ ಹೆಚ್ಚು ಮಾರುಕಟ್ಟೆ ಸಂಪತ್ತು ಹೊಂದಿರುವ ಭಾರತೀಯ ಬ್ಯಾಂಕುಗಳಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಎಚ್ಡಿಎಫ್ಸಿ ಮತ್ತು ಎಚ್ಡಿಎಫ್ಸಿ ಬ್ಯಾಂಕ್ ವಿಲೀನದ ಬಳಿಕ ಅದರ ಷೇರುಸಂಪತ್ತು ದುಪ್ಪಟ್ಟಾಗಿತ್ತು. ಮಾರುಕಟ್ಟೆ ಸಂಪತ್ತಿನಲ್ಲಿ ಟಾಪ್-5 ಕಂಪನಿಗಳು ಇಂತಿವೆ:
ಕೋಟಕ್ ಮಹೀಂದ್ರ ಬ್ಯಾಂಕ್ನ ಮಾಜಿ ಮುಖ್ಯಸ್ಥ ಹಾಗೂ ಅದರ ಪ್ರೊಮೋಟರ್ ಅಥವಾ ಸಂಸ್ಥಾಪಕ ಕುಟುಂಬಕ್ಕೆ ಸೇರಿದ ಉದಯ್ ಕೋಟಕ್ ಅವರು ಷೇರು ಕುಸಿತದ ಪರಿಣಾಮವಾಗಿ ಒಂದೇ ದಿನದಲ್ಲಿ 10,000 ಕೋಟಿ ರೂನಷ್ಟು ನಷ್ಟ ಕಂಡಿದ್ದಾರೆ.
ಇದನ್ನೂ ಓದಿ: ಕೆಎಂಎಫ್ಗೆ ಈಗ 50 ವರ್ಷದ ಇತಿಹಾಸ; ನಂದಿನಿ ಬ್ರ್ಯಾಂಡ್ ಶುರುವಾದ ಕಥೆ; ಅಮೂಲ್ ಅನ್ನು ಮೀರಿಸಬಲ್ಲುದಾ?
ಉದಯ್ ಕೋಟಕ್ ಅವರು ತಮ್ಮ ಬ್ಯಾಂಕ್ನಲ್ಲಿ 51,10,27,100 (51.11 ಕೋಟಿ) ಷೇರುಗಳನ್ನು ಹೊಂದಿದ್ದಾರೆ. ಇದು ಶೇ. 25.17ರಷ್ಟು ಷೇರುಪಾಲು. ಈ ಪ್ರಕಾರ ಈ ಸಮಯಕ್ಕೆ ಉದಯ್ ಕೋಟಕ್ ಅವರಿಗೆ ಆಗಿರುವ ಷೇರುಸಂಪತ್ತಿನ ನಷ್ಟ 10,088 ಕೋಟಿ ರೂ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ