ಬೆಂಗಳೂರು, ಅಕ್ಟೋಬರ್ 4: ಅಮೆರಿಕ ಮೂಲದ ಸೆಮಿಕಂಡಕ್ಟರ್ ತಯಾರಕಾ ಸಂಸ್ಥೆಗಳಾದ ಕ್ರಿಪ್ಟಾನ್ ಸಲ್ಯುಶನ್ಸ್ (Krypton Solutions) ಮತ್ತು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (texas instruments) ಕರ್ನಾಟಕದಲ್ಲಿ ತಮ್ಮ ಹೆಜ್ಜೆಗುರುತು ಹೆಚ್ಚಿಸಲು ಹೊರಟಿದೆ. ಟೆಕ್ಸಾಸ್ನಲ್ಲಿ ಮುಖ್ಯ ಕಚೇರಿ ಹೊಂದಿರುವ ಕ್ರಿಪ್ಟಾನ್ ಸಲ್ಯೂಷನ್ಸ್ ಕಂಪನಿ ಕರ್ನಾಟಕದಲ್ಲಿ ಹೊಸ ಪ್ರಿಂಟೆಡ್ ಸರ್ಕ್ಯುಟ್ ಬೋರ್ಡ್ ಘಟಕ (PCB unit) ಸ್ಥಾಪಿಸಲು ಹೊರಟಿದೆ. ಡಲ್ಲಾಸ್ನ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ ತನ್ನ ಆರ್ ಅಂಡ್ ಡಿ ಸೌಲಭ್ಯವನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೇತೃತ್ವದ ರಾಜ್ಯ ನಿಯೋಗವೊಂದು ಅಮೆರಿಕದಲ್ಲಿ ವಿವಿಧ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಬಂದಿರುವುದು ತಿಳಿದುಬಂದಿದೆ. ಕ್ರಿಪ್ಟೋನ್ ಸಲ್ಯೂಷನ್ಸ್, ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಜೊತೆಗೆ ಇಆರ್ಬಿ ಲಾಜಿಕ್ (ERPL) ಕಂಪನಿಯೊಂದಿಗೂ ಪಾಟೀಲ್ ನೇತೃತ್ವದ ನಿಯೋಗ ಮಾತನಾಡಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಕ್ರಿಪ್ಟೋನ್ ಸಲ್ಯೂಷನ್ಸ್ ಮೈಸೂರು ಮತ್ತು ಚಾಮರಾಜನಗರದಲ್ಲಿ ಪಿಸಿಬಿ ಫ್ಯಾಬ್ರಿಕೇಶನ್ ಘಟಕಗಳನ್ನು ಸ್ಥಾಪಿಸಬಹುದು. ಇದಕ್ಕೆ ಅಂದಾಜು 100 ಮಿಲಿಯನ್ ಡಾಲರ್ (ಸುಮಾರು 832 ಕೋಟಿ ರೂ) ಹೂಡಿಕೆ ಆಗಬಹುದು. ಟೆಕ್ಸಾಸ್ನಲ್ಲಿರುವ ಕ್ರಿಪ್ಟೋನ್ನ 40,000 ಚದರಡಿಯಷ್ಟಿರುವ ಬೃಹತ್ ಘಟಕಕ್ಕೆ ರಾಜ್ಯ ನಿಯೋಗ ಭೇಟಿ ನೀಡಿ ವೀಕ್ಷಣೆ ನಡೆಸಿತು. ಹಾಗೆಯೇ, ಡಲ್ಲಾಸ್ನಲ್ಲಿರುವ ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಕಂಪನಿಯ 300 ಎಂಎಂ ವೇಫರ್ ಫ್ಯಾಬ್ ತಯಾರಿಕಾ ಘಟಕಕ್ಕೂ ಭೇಟಿ ಕೊಟ್ಟಿತು.
ಇದನ್ನೂ ಓದಿ: ಈ ಹಣಕಾಸು ವರ್ಷ ಭಾರತದ ಆರ್ಥಿಕತೆ ಶೇ. 6.3 ಬೆಳೆಯಬಹುದು: ವಿಶ್ವಬ್ಯಾಂಕ್ ಅಂದಾಜು
ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಮತ್ತು ಕ್ರಿಪ್ಟೋನ್ ಸಲ್ಯೂಷನ್ಸ್ ಈ ಎರಡು ಕಂಪನಿಗಳು ಎಲಕ್ಟ್ರಾನಿಕ್ ಮತ್ತು ಸೆಮಿಕಂಡಕ್ಟರ್ ತಯಾರಕ ಕ್ಷೇತ್ರದಲ್ಲಿ ಹೆಸರು ಮಾಡಿವೆ. ಈ ಎರಡೂ ಕಂಪನಿಗಳಿಗೆ ಕರ್ನಾಟಕ ಹೊಸದಲ್ಲ. ಕ್ರಿಪ್ಟಾನ್ ಸಲ್ಯೂಷನ್ಸ್ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಪಿಸಿಬಿ ಯೂನಿಟ್ ಹೊಂದಿದೆ.
ಇನ್ನು ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ ಸಂಸ್ಥೆ ವೈಟ್ಫೀಲ್ಡ್ನಲ್ಲಿ ಆರ್ ಅಂಡ್ ಡಿ ಘಟಕ ಹೊಂದಿದೆ. 1985ರಲ್ಲೇ ಇದು ಬೆಂಗಳೂರಿನಲ್ಲಿ ಆರ್ ಅಂಡ್ ಡಿ ಕೇಂದ್ರವನ್ನು ಸ್ಥಾಪಿಸಿತ್ತು. ಡಲ್ಲಾಸ್ನಲ್ಲಿರುವ ಅದರ ಆರ್ ಅಂಡ್ ಡಿ ಬಿಟ್ಟರೆ ಬೆಂಗಳೂರಿನಲ್ಲೇ ಅತಿದೊಡ್ಡ ಆರ್ ಅಂಡ್ ಡಿ ಘಟಕ ಇರುವುದು. ವೈಟ್ಫೀಲ್ಡ್ ಸೆಮಿಕಂಡಕ್ಟರ್ ಪಾರ್ಕ್ ಸ್ಥಾಪಿಸುವ ಸಾಧ್ಯತೆ ಬಗ್ಗೆಯೂ ರಾಜ್ಯ ನಿಯೋಗವು ಟಿಐ ಪ್ರತಿನಿಧಿಗಳ ಜೊತೆ ಮಾತನಾಡಿರುವುದು ಗೊತ್ತಾಗಿದೆ.
ಎಂಬಿ ಪಾಟೀಲ್ ನೇತೃತ್ವದ ಕರ್ನಾಟಕ ನಿಯೋಗ ಕಳೆದ 10 ದಿನಗಳಿಂದ ಅಮೆರಿಕ ಪ್ರವಾಸದಲ್ಲಿದೆ. 12 ದಿನಗಳ ಈ ಪ್ರವಾಸ ಅಕ್ಟೋಬರ್ 6ಕ್ಕೆ ಮುಗಿಯುತ್ತದೆ. ರಾಜ್ಯಕ್ಕೆ ಹೂಡಿಕೆ ಆಕರ್ಷಿಸಲು ನಿಯೋಗವು ಅಮೆರಿಕದ ವಿವಿಧ ಕಂಪನಿಗಳ ಕದ ತಟ್ಟುವ ಕೆಲಸ ಮಾಡಿದೆ. ಸಚಿವ ಎಂಬಿ ಪಾಟೀಲ್ ಜೊತೆಗೆ ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕೆಗಳ ಆಯುಕ್ತ ಗುಂಜನ್ ಕೃಷ್ಣ ಮೊದಲಾದವರಿದ್ದಾರೆ.
ಇದನ್ನೂ ಓದಿ: ಐಟಿ ಉದ್ಯೋಗಿಗಳ ವರ್ಕ್ ಫ್ರಂ ಹೋಮ್ ಸವಲತ್ತು ಪೂರ್ಣ ನಿಲ್ಲುತ್ತಾ? ಕಚೇರಿ ಹೋಗಿ ಕೆಲಸ ಮಾಡುವುದು ಕಡ್ಡಾಯ?
ಟೆಕ್ಸಾಸ್ನಲ್ಲಿರುವ ಇಆರ್ಪಿ ಲಾಜಿಕ್ ಸಂಸ್ಥೆ ಎಸ್ಎಪಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ತಮಿಳುನಾಡಿನ ಚೆನ್ನೈ ಮತ್ತು ಸೇಲಂ ಹಾಗೂ ತೆಲಂಗಾಣದ ಹೈದರಾಬಾದ್ ನಗರದಲ್ಲಿ ಇದು ಕಚೇರಿ ಹೊಂದಿದೆ. ಕರ್ನಾಟಕದಲ್ಲೂ ಇದಕ್ಕೆ ಮಣೆಹಾಕಲು ರಾಜ್ಯ ಸರ್ಕಾರ ಆಸಕ್ತಿ ತೋರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ