
ನವದೆಹಲಿ, ಆಗಸ್ಟ್ 22: ವಿಶ್ವದ ಅತಿದೊಡ್ಡ ಐಟಿ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಕಂಪನಿಯಾದ ಕಿಂಡ್ರಿಲ್ (Kyndryl) ಭಾರತದಲ್ಲಿ ಮುಂದಿನ ಮೂರು ವರ್ಷದಲ್ಲಿ 2.25 ಬಿಲಿಯನ್ ಡಾಲರ್ (ಸುಮಾರು 20,000 ಕೋಟಿ ರೂ) ಹೂಡಿಕೆ ಮಾಡಲು ಬದ್ಧವಾಗಿದೆ. ಭವಿಷ್ಯದ ಅಗತ್ಯಗಳಿಗೆ ಅಗತ್ಯವಾಗಿರುವ ಪ್ರತಿಭೆಗಳನ್ನು ಬೆಳೆಸುವುದರಿಂದ ಹಿಡಿದು ಎಐ ಲ್ಯಾಬ್ ಸ್ಥಾಪಿಸುವವರೆಗೂ ವಿವಿಧ ಕಾರ್ಯಗಳನ್ನು ಕಿಂಡ್ರಿಲ್ ಯೋಜಿಸಿದೆ. ಇದರಲ್ಲಿ ಬೆಂಗಳೂರಿನಲ್ಲಿ ಎಐ ಇನ್ನೋವೆಶನ್ ಲ್ಯಾಬ್ (AI Lab in Bengaluru) ಸ್ಥಾಪನೆಯ ಯೋಜನೆಯೂ ಸೇರಿದೆ.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಐಟಿ ಪ್ರತಿಭೆಗಳ ಅಭಿವೃದ್ಧಿ, ಡಿಜಿಟಲ್ ಟ್ರೈನಿಂಗ್ ಇತ್ಯಾದಿ ವಿಚಾರದಲ್ಲಿ ಭಾರತ ಸರ್ಕಾರಕ್ಕೆ ನೆರವಾಗಲೆಂದು ಕಿಂಡ್ರಿಲ್ ಸಂಸ್ಥೆ ಬೆಂಗಳೂರಿನಲ್ಲಿ ಎಐ ಇನ್ನೋವೇಶನ್ ಲ್ಯಾಬ್ ಸ್ಥಾಪಿಸಲು ಯೋಜಿಸಿದೆ. ಎಐ ಶಕ್ತ ಕನ್ಸಲ್ಟಿಂಗ್ ಸರ್ವಿಸ್ ಬಲಗೊಳಿಸಲು ಈ ಲ್ಯಾಬ್ ಸಹಾಯವಾಗಲಿದೆ ಎಂಬುದು ಕಿಂಡ್ರಿಲ್ ಭಾವನೆ.
ಇದನ್ನೂ ಓದಿ: ಚೀನಾ ನೇತೃತ್ವದ ಆರ್ಸಿಇಪಿಗೆ ಸೇರಲು ಭಾರತ ಯೋಜನೆ; ಆರು ವರ್ಷದ ಹಿಂದೆ ತೊರೆದಿದ್ದ ಗುಂಪಿಗೆ ಮತ್ತೆ ಸೇರ ಹೊರಟಿರುವುದು ಯಾಕೆ?
ಈ ಎಐ ಲ್ಯಾಬ್ನಲ್ಲಿ ಡಾಟಾ ಸೈಂಟಿಸ್ಟ್ಗಳು, ಕನ್ಸಲ್ಟೆಂಟ್ಗಳು ಮೊದಲಾದವರು ಇರಲಿದ್ದಾರೆ. ಬ್ರಿಟನ್, ಸಿಂಗಾಪುರದಲ್ಲೂ ಕಿಂಡ್ರಿಲ್ ಎಐ ಲ್ಯಾಬ್ಗಳನ್ನು ಹೊಂದಿದೆ. ಅದೇ ಮಾದರಿಯಲ್ಲೇ ಬೆಂಗಳೂರಿನಲ್ಲಿ ಎಐ ಲ್ಯಾಬ್ ಸ್ಥಾಪಿಸಲಿದೆ. ಎಐ ಕೌಶಲ್ಯ, ಡಾಟಾ, ಕ್ಲೌಡ್, ಪ್ಲಾಟ್ಫಾರ್ಮ್ ಎಂಜಿನಿಯರಿಂಗ್ ಇತ್ಯಾದಿ ತಂತ್ರಜ್ಞಾನಗಳಲ್ಲಿ ಉದ್ಯೋಗಿಗಳಿಗೆ ತರಬೇತಿ ನೀಡಿ ಭವಿಷ್ಯದ ಅಗತ್ಯಗಳಿಗೆ ಅಣಿಗೊಳಿಸುವುದು ಎಐ ಲ್ಯಾಬ್ನ ಮುಖ್ಯ ಗುರಿಯಾಗಿದೆ. ಇದು ಕಂಪನಿಯ ಒಟ್ಟಾರೆ ಟ್ರೈನಿಂಗ್ ಸೆಂಟರ್ ರೀತಿ ಕಾರ್ಯನಿರ್ವಹಿಸುವ ಸಾದ್ಯತೆ ಇದೆ.
ಅಮೆರಿಕ ಮೂಲದ ಈ ಐಟಿ ಇನ್ಫ್ರಾಸ್ಟ್ರಕ್ಚರ್ ಸರ್ವಿಸ್ ಕಂಪನಿಯು ಭಾರತ ಸರ್ಕಾರದೊಂದಿಗೆ ವಿವಿಧ ಒಪ್ಪಂದ ಮತ್ತು ಸಹಭಾಗಿತ್ವ ಮಾಡಿಕೊಳ್ಳುತ್ತಿದೆ. ಆಡಳಿತದಲ್ಲಿ ಎಐ ನೆರವು ಪಡೆಯುವುದು, ಉದ್ಯಮ ನಿಯಮಗಳ ಸುಧಾರಣೆ ಇತ್ಯಾದಿ ವಿಚಾರದಲ್ಲಿ ಸರ್ಕಾರಕ್ಕೆ ಹಾಗೂ ವಿವಿಧ ಇಲಾಖೆಗಳಿಗೆ ಕಿಂಡ್ರಿಲ್ ಸಲಹೆಗಳನ್ನು ನೀಡಲಿದೆ.
ಇದನ್ನೂ ಓದಿ: ಆನ್ಲೈನ್ ಗೇಮಿಂಗ್ ಬಿಲ್ 2025; ಡ್ರೀಮ್11ನಂತಹ ಆ್ಯಪ್ಗಳ ಕತೆ ಏನು? ಇಲ್ಲಿದೆ ಈ ಮಸೂದೆಯ ಮುಖ್ಯಾಂಶಗಳು
ಕಿಂಡ್ರಿಲ್ ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಭಾರತದಾದ್ಯಂತ ಸ್ಕಿಲ್ಲಿಂಗ್ ಪ್ರೋಗ್ರಾಮ್ ಹಮ್ಮಿಕೊಳ್ಳಲಿದೆ. ಕೆಂಡ್ರಿಲ್ ಫೌಂಡೇಶನ್ ಮೂಲಕ ಎರಡನೇ ಸ್ತರ ಮತ್ತು ಮೂರನೇ ಸ್ತರ ನಗರಗಳಲ್ಲಿ ಎರಡು ಲಕ್ಷ ಮಂದಿಗೆ ಡಿಜಿಟಲ್ ಕೌಶಲ್ಯಗಳನ್ನು ಹೆಚ್ಚಿಸುವಂತಹ ತರಬೇತಿ ಒದಗಿಸಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ