AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿ ದೀಪಾವಳಿ ಗಿಫ್ಟ್ ಇದೇ: ಜಿಎಸ್​ಟಿ ಶೇ 12, 28ರ ಸ್ಲ್ಯಾಬ್‌ ರದ್ದು, 90 ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ

ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ದೇಶದ ಜನತೆಗೆ ದೀಪಾವಳಿ ಗಿಫ್ಟ್ ಕೊಡಲಿದ್ದೇವೆ ಎಂದು ಘೋಷಣೆ ಮಾಡಿದ್ದರು. ಇದೀಗ ಆ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವತ್ತ ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್​​ಟಿ ಕುರಿತ ವಿವಿಧ ರಾಜ್ಯಗಳ ಸಚಿವರ ಸಮಿತಿ ಮಹತ್ವದ ತೀರ್ಮಾನ ಕೈಗೊಂಡಿದೆ. ಇದರಿಂದಾಗಿ ಸುಮಾರು 90 ವಸ್ತುಗಳ ಬೆಲೆ ಇಳಿಕೆಯಾಗಲಿದೆ.

ಪ್ರಧಾನಿ ಮೋದಿ ದೀಪಾವಳಿ ಗಿಫ್ಟ್ ಇದೇ: ಜಿಎಸ್​ಟಿ ಶೇ 12, 28ರ ಸ್ಲ್ಯಾಬ್‌ ರದ್ದು, 90 ವಸ್ತುಗಳ ಬೆಲೆ ಇಳಿಕೆ ನಿರೀಕ್ಷೆ
ಜಿಎಸ್​ಟಿ (ಸಾಂದರ್ಭಿಕ ಚಿತ್ರ)
Ganapathi Sharma
|

Updated on:Aug 22, 2025 | 7:06 AM

Share

ನವದೆಹಲಿ, ಆಗಸ್ಟ್ 22: ಜಿಎಸ್​ಟಿಯ (GST) ಶೇಕಡಾ 12 ಮತ್ತು 28ರ ಸ್ಲ್ಯಾಬ್​ಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ವಿವಿಧ ರಾಜ್ಯಗಳ ಸಚಿವರನ್ನೊಳಗೊಂಡ ಸಮಿತಿ ಸಮ್ಮತಿ ಸೂಚಿಸಿದೆ. ಬಿಹಾರದ ಡಿಸಿಎಂ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಗುರುವಾರ ನಡೆದ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ. ಇದರಿಂದಾಗಿ ಸುಮಾರು 90 ರಷ್ಟು ಸರಕುಗಳ ಬೆಲೆ ಇಳಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಕ್ರಮವು ಜಿಎಸ್​​ಟಿ 2.0 ಎಂದು ಕರೆಯಲ್ಪಡುವ ಯೋಜನೆಯ ಆರಂಭವನ್ನು ಸೂಚಿಸುತ್ತದೆ. ಇದು ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ, ಸುಲಭಗೊಳಿಸುವ ಮತ್ತು ಜನರ ಹಾಗೂ ಉದ್ಯಮಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಪ್ರಸ್ತುತ, ಜಿಎಸ್‌ಟಿಯನ್ನು ನಾಲ್ಕು ವಿಭಿನ್ನ ಸ್ಲ್ಯಾಬ್​ಗಳಲ್ಲಿ ವಿಧಿಸಲಾಗುತ್ತಿದೆ. ಅವುಗಳೆಂದರೆ; ಶೇ 5, ಶೇ 12, ಶೇ 18 ಮತ್ತು ಶೇ 28. ಹೊಸ ಜಿಎಸ್​ಟಿ ಅಡಿಯಲ್ಲಿ, ಶೇ 12 ಮತ್ತು ಶೇ 28 ರ ಸ್ಲ್ಯಾಬ್‌ಗಳನ್ನು ರದ್ದುಗೊಳಿಸಲಾಗುತ್ತದೆ . ಹೀಗಾಗಿ ಇನ್ನುಮುಂದೆ ಶೇ 5 ಅಥವಾ ಶೇ 18 ರ ಸ್ಲ್ಯಾಬ್​​ ಮಾತ್ರ ಇರಲಿವೆ. ಎಲ್ಲ ಸರಕುಗಳು ಈ ಸ್ಲ್ಯಾಬ್​ ಅಡಿಯಲ್ಲೇ ಬರಲಿದ್ದು, ಅನೇಕ ಸರಕು ಮತ್ತು ಸೇವೆಗಳ ಬೆಲೆ ಗಣನೀಯ ಇಳಿಕೆಯಾಗಲಿದೆ.

ಜಿಎಸ್​​ಟಿ ಸ್ಲ್ಯಾಬ್​ ಇಳಿಕೆ: ಜನಸಾಮಾನ್ಯರಿಗೆ ಏನು ಉಪಯೋಗ?

ಜಿಎಸ್​​​ಟಿ ಸ್ಲ್​ಯಾಬ್​​​ಗಳ ಕಡಿತದಿಂದ ದಿನನಿತ್ಯದ ವಸ್ತುಗಳ ಮೇಲಿನ ಜಿಎಸ್‌ಟಿ ದರ ಕಡಿಮೆಯಾಗಲಿದೆ, ರೈತರು ಹಾಗೂ ಮಧ್ಯಮ ವರ್ಗಕ್ಕೆ ಅನುಕೂಲ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಔಷಧ, ಸಂಸ್ಕರಿಸಿದ ಆಹಾರ, ಬಟ್ಟೆ, ಪಾದರಕ್ಷೆ ಹಾಗೂ ಹಲವು ಗೃಹೋಪಯೋಗಿ ಉತ್ಪನ್ನಗಳು ಶೇ 5ರ ಸ್ಲ್ಯಾಬ್‌ಗೆ ಬದಲಾಗುವ ನಿರೀಕ್ಷೆಯಿದೆ. ಗೃಹೋಪಯೋಗಿ ವಸ್ತುಗಳು, ಟೆಲಿವಿಷನ್‌, ಇತರೆ ವಸ್ತುಗಳ ಸ್ಲ್ಯಾಬ್​​​ ಶೇ 28 ರ ಬದಲಿಗೆ ಶೇ 18 ರ ಸ್ಲ್ಯಾಬ್‌ ಅಡಿಯಲ್ಲಿ ಬರಲಿವೆ. ಮಧ್ಯಮ ವರ್ಗದ ಕುಟುಂಬಗಳಿಗೆ ಮತ್ತಷ್ಟು ಅನುಕೂಲವಾಗಲಿದೆ.

ತಂಬಾಕು ಮತ್ತು ಕೆಲವು ಐಷಾರಾಮಿ ವಸ್ತುಗಳ (Sin Goods) ಮೇಲೆ ಹೆಚ್ಚಿನ ಶೇ 40 ರ ತೆರಿಗೆ ಮುಂದುವರಿಯಲಿದೆ. ಐಷಾರಾಮಿ ಕಾರುಗಳನ್ನು ಶೇ 40 ರ ತೆರಿಗೆ ಶ್ರೇಣಿಯ ಅಡಿಯಲ್ಲಿ ತರಬೇಕೆಂದು ಸಮಿತಿ ಶಿಫಾರಸು ಮಾಡಿದೆ.

ಇದನ್ನೂ ಓದಿ: ಚೀನಾ ನೇತೃತ್ವದ ಆರ್​ಸಿಇಪಿಗೆ ಸೇರಲು ಭಾರತ ಯೋಜನೆ; ಆರು ವರ್ಷದ ಹಿಂದೆ ತೊರೆದಿದ್ದ ಗುಂಪಿಗೆ ಮತ್ತೆ ಸೇರ ಹೊರಟಿರುವುದು ಯಾಕೆ?

ಸದ್ಯ ಸಚಿವರ ಸಮಿತಿಯ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಜಿಎಸ್​​ಟಿ ಮಂಡಳಿಗೆ ಕಳುಹಿಸುತ್ತಾರೆ. ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಪರಿಶೀಲನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಸಚಿವರ ಸಮಿತಿಯಲ್ಲಿ ಕೃಷ್ಣ ಭೈರೇಗೌಡ

ವಿವಿಧ ರಾಜ್ಯಗಳ ಸಚಿವರ ಸಮಿತಿಯಲ್ಲಿ ಕರ್ನಾಟಕದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಸಹ ಸದಸ್ಯರಾಗಿದ್ದಾರೆ. ಉತ್ತರ ಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ, ರಾಜಸ್ಥಾನ ಆರೋಗ್ಯ ಸಚಿವ ಗಜೇಂದ್ರ ಸಿಂಗ್, ಪಶ್ಚಿಮ ಬಂಗಾಳದ ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಮತ್ತು ಕೇರಳದ ವಿತ್ತ ಸಚಿವ ಕೆ.ಎನ್. ಬಾಲಗೋಪಾಲ್ ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 7:05 am, Fri, 22 August 25