ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ ಅನ್ನೋದು ಮೂರ್ಖತನ: ಟಾಪ್ ಸಿಇಒಗಳಿಗೆ ಝಾಡಿಸಿದ ಮೆಲಿಂಡಾ ಗೇಟ್ಸ್

|

Updated on: Sep 22, 2024 | 3:41 PM

Melinda French Gates criticizes executives encouraging sleep deprivation: ನಿದ್ರೆ ಕಡಿಮೆ ಮಾಡುತ್ತೇವೆ, ಹೆಚ್ಚು ಅವಧಿ ಕೆಲಸ ಮಾಡುತ್ತೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ವಿವಿಧ ಕಂಪನಿಗಳ ಸಿಇಒಗಳನ್ನು ಮೆಲಿಂಡಾ ಗೇಟ್ಸ್ ಟೀಕಿಸಿದ್ದಾರೆ. ಇಂಥವರ ಮಾತು ಮೂರ್ಖತನದ್ದು ಎಂದು ಬಿಲ್ ಗೇಟ್ಸ್ ಮಾಜಿ ಪತ್ನಿಯಾದ ಮೆಲಿಂಡಾ ಅನಿಸಿಕೆ. ನಿದ್ರೆ ಕಡಿಮೆ ಆದರೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮಸ್ಯೆ ಆಗುತ್ತದೆ ಎಂದು ಹಲವು ಸಂಶೋಧನೆಗಳು ಹೇಳುತ್ತವೆ.

ನಿದ್ದೆಗೆಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಿಗುತ್ತೆ ಅನ್ನೋದು ಮೂರ್ಖತನ: ಟಾಪ್ ಸಿಇಒಗಳಿಗೆ ಝಾಡಿಸಿದ ಮೆಲಿಂಡಾ ಗೇಟ್ಸ್
ಮೆಲಿಂಡಾ ಗೇಟ್ಸ್
Follow us on

ಕಡಿಮೆ ನಿದ್ದೆ ಹೆಚ್ಚು ಕೆಲಸ… ಇದು ಜಾಗತಿಕವಾಗಿ ಸಿಇಒ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ವರ್ಕ್ ಕಲ್ಚರ್ ಎನಿಸಿದೆ. ನಿವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಸೇರಿದಂತೆ ಬಹಳಷ್ಟು ಜನರು ಈ ನಿದ್ದಾಹೀನ ಕೆಲಸ ಸಂಸ್ಕೃತಿಯನ್ನು ಪುರಸ್ಕರಿಸುತ್ತಿದ್ದಾರೆ. ಇವರ ಈ ಧೋರಣೆಯನ್ನು ಮೆಲಿಂಡಾ ಫ್ರೆಂಚ್ ಗೇಟ್ಸ್ ಕಟುವಾಗಿ ಟೀಕಿಸಿದ್ದು, ಇದು ಮೂರ್ಖತನ ಎಂದು ಬಣ್ಣಿಸಿದ್ದಾರೆ. ವ್ಯಾನಿಟಿ ಫೇರ್ ಎಂಬ ಮ್ಯಾಗಝೀನ್​ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಅವರು ನಿದ್ರಾವಂಚನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಕಡಿಮೆ ನಿದ್ರೆ, ಹೆಚ್ಚು ಕೆಲಸದಿಂದ ಉತ್ಪನ್ನಶೀಲತೆ ಹೆಚ್ಚುತ್ತದೆ ಎನ್ನುವ ವಾದವನ್ನು ಅವರು ಬಲವಾಗಿ ಅಲ್ಲಗಳೆದಿದ್ದಾರೆ.

‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಂಥವರ ಜೊತೆ ಇರಲು ಹಲವರಿಗೆ ಇಷ್ಟವಾಗಲ್ಲ…’: ಇದು ಹೆಚ್ಚು ನಿದ್ರೆಯ ಅವಶ್ಯಕತೆ ಇಲ್ಲ ಎನ್ನುವ ಸಿಇಒಗಳನ್ನು ಉದ್ದೇಶಿಸಿ ಮೆಲಿಂಡಾ ಗೇಟ್ಸ್ ಮಾಡಿದ ಟೀಕೆ. ಮೆಲಿಂಡಾ ಗೇಟ್ಸ್ ಅವರು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ವಿಚ್ಛೇದಿತ ಪತ್ನಿ. ತಮ್ಮಲ್ಲಿರುವ ಸಂಪತ್ತನ್ನು ಬಳಸಿ ಸಾಮಾಜಿಕ ಸೇವೆಗಳನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?

ಹೆಚ್ಚಿನ ಅವಧಿ ಕೆಲಸ ಮಾಡುತ್ತೇವೆ, ಕಡಿಮೆ ನಿದ್ದೆ ಮಾಡುತ್ತೇವೆ ಎನ್ನುವ ಸಿಇಒಗಳ ಮಧ್ಯೆ, ನಿದ್ರೆ ಬಹಳ ಮುಖ್ಯ ಎನ್ನುವ ಸಿಇಒಗಳ ಗುಂಪೂ ಇದೆ. ಬಿಲ್ ಗೇಟ್ಸ್, ಇಲಾನ್ ಮಸ್ಕ್, ಜೆಫ್ ಬೇಜೋಸ್ ಮೊದಲಾದವರು ಈ ಸಾಲಿಗೆ ಬರುತ್ತಾರೆ. ಬಹಳ ನೇರವಾಗಿ ಮಾತನಾಡುವ ಇಲಾನ್ ಮಸ್ಕ್ ತಾನು ಕಡಿಮೆ ಅವಧಿ ನಿದ್ದೆ ಮಾಡಿದಾಗ ಹೆಚ್ಚು ಕೆಲಸ ಆಗೋದಿಲ್ಲ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.

‘ನಾನು ನಿದ್ರೆ ಅವಧಿ ಕಡಿಮೆಗೊಳಿಸಲು ಯತ್ನಿಸಿದ್ದೇನೆ. ಆದರೆ, ಹೆಚ್ಚು ಕೆಲಸ ಮಾಡಲು ಆಗುತ್ತಿರಲಿಲ್ಲ. ನಿದ್ರೆ ಅವಧಿ ಆರು ಗಂಟೆಗಿಂತ ಕಡಿಮೆ ಆದರೆ ಮಿದುಳು ನೋವು ಕೆಟ್ಟದಾಗಿರುತ್ತದೆ,’ ಎಂದು ಇಲಾನ್ ಮಸ್ಕ್ ಕಳೆದ ವರ್ಷ ಸಿಎನ್​ಬಿಸಿ ಸಂದರ್ಶನದಲ್ಲಿ ಹೇಳಿದ್ದುಂಟು.

ಇದನ್ನೂ ಓದಿ: ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು

ಬಹಳಷ್ಟು ಸಂಶೋಧನೆಗಳು ಮತ್ತು ಅಧ್ಯಯನಗಳು ನಿದ್ರೆಯ ಮಹತ್ವವನ್ನು ಬಾರಿ ಬಾರಿ ದೃಢಪಡಿಸಿವೆ. ಒಬ್ಬ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತನಾಗಿರಬೇಕಾದರೆ ಆರರಿಂದ ಎಂಟು ಗಂಟೆ ಕಾಲವಾದರೂ ನಿದ್ರಿಸಬೇಕು ಎಂದು ಹೆಚ್ಚಿನ ತಜ್ಞರು ಸಲಹೆ ನೀಡುತ್ತಾರೆ. ಸರಿಯಾಗಿ ನಿದ್ರೆ ಆಗಲಿಲ್ಲವೆಂದರೆ ಮಾನಸಿಕ ಮತ್ತು ದೈಹಿಕ ಸ್ಥಿಮಿತತೆ ಕುಂದುತ್ತದೆ. ತತ್​ಪರಿಣಾಮವಾಗಿ ಕೆಲಸದಲ್ಲಿ ವ್ಯಕ್ತಿಯ ಕ್ಷಮತೆ ಮತ್ತು ಉತ್ಪನ್ನಶೀಲತೆಯೂ ಕಡಿಮೆ ಆಗುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ