Stock in focus: ಡೆವಿಡೆಂಡ್ ಘೋಷಿಸಿದ ಎಲ್ಐಸಿ, ಸತತ ಕುಸಿತ ಕಂಡಿದ್ದ ಷೇರು ಮೌಲ್ಯಕ್ಕೆ ತುಸು ಚೇತರಿಕೆ
ಸೌದಿ ಅರೇಬಿಯಾದ ಅರಾಮ್ಕೊ (Aramco) ಮಾದರಿಯಲ್ಲಿ ಎಲ್ಐಸಿ ಕೂಡ ದೊಡ್ಡಮಟ್ಟದ ಡಿವಿಡೆಂಡ್ ಘೋಷಿಸಬಹುದು ಎನ್ನುವ ಹೂಡಿಕೆದಾರರ ಆಸೆಯು ಹುಸಿಯಾಗಿದೆ.
ಮುಂಬೈ: ಭಾರತೀಯ ಜೀವ ವಿಮಾ ನಿಗಮದ (Life Insurance Corporation of India – LIC) ಷೇರು ವಹಿವಾಟು ಇಂದು ಷೇರುಪೇಟೆಯಲ್ಲಿ ಎದ್ದುಕಾಣುವಂತಿದೆ. ಸತತ ಇಳಿಕೆ ಕಂಡು ಕಳಾಹೀನವಾಗಿದ್ದ ಎಲ್ಐಸಿ ಷೇರು ಮೌಲ್ಯವು ಲಾಭಾಂಶ (Dividend) ಘೋಷಣೆಯ ನಂತರ ತುಸು ಏರುಗತಿ ಕಂಡಿವೆ. ಲಾಭಾಂಶ ಹಂಚಿಕೆಗೆ ಪರಿಗಣಿಸುವ ದಿನಾಂಕವಾಗಿ ಆಗಸ್ಟ್ 25 (ಇಂದು) ನಿಗದಿಯಾಗಿದೆ. ಪ್ರತಿ ಷೇರಿಗೆ 2021-22ರ ಹಣಕಾಸು ವರ್ಷಕ್ಕಾಗಿ ₹ 1.50 ಲಾಭಾಂಶ ಹಂಚಿಕೆ ಮಾಡುವುದಾಗಿ ಎಲ್ಐಸಿ ಷೇರುಪೇಟೆ ನಿಯಂತ್ರಕರಿಗೆ ಮಾಹಿತಿ ನೀಡಿದೆ. ಲಾಭಾಂಶ ಹಂಚಿಕೆಗೆ ನಾಳೆ (26ನೇ ಆಗಸ್ಟ್ 2022) ರೆಕಾರ್ಡ್ ಡೇಟ್ ಎಂದು ನಿಗದಿಪಡಿಸಲಾಗಿದೆ.
ಲಾಭಾಂಶ ಹಂಚಿಕೆ ಕುರಿತು ಆಡಳಿತ ಮೇ 30ರಂದು ನಡೆದಿದ್ದ ಆಡಳಿತ ಮಂಡಳಿ ಸಭೆಯಲ್ಲಿ ಎಲ್ಐಸಿ ನಿರ್ಧಾರ ತೆಗೆದುಕೊಂಡಿತ್ತು. ₹ 10 ಮುಖಬೆಲೆಯ ಎಲ್ಐಸಿ ಷೇರುಗಳಿಗೆ ₹ 1.50 ಲಾಭಾಂಶ ನಿಗದಿಪಡಿಸಲಾಗಿದೆ. ಎಲ್ಐಸಿ ಷೇರು ನಿನ್ನೆ (ಆಗಸ್ಟ್ 24) ₹ 675.90 ಗೆ ವಹಿವಾಟು ಮುಕ್ತಾಯಗೊಳಿಸಿತ್ತು. ಈ ಲೆಕ್ಕಾಚಾರದಲ್ಲಿ ಷೇರುದಾರರಿಗೆ ಸರಾಸರಿ ಶೇ 0.22 ಲಾಭಾಂಶ ಗಳಿಕೆ (Devidend Yield) ಸಿಕ್ಕಂತೆ ಆಗಿದೆ. ಸೌದಿ ಅರೇಬಿಯಾದ ಅರಾಮ್ಕೊ (Aramco) ಮಾದರಿಯಲ್ಲಿ ಎಲ್ಐಸಿ ಕೂಡ ದೊಡ್ಡಮಟ್ಟದ ಡಿವಿಡೆಂಡ್ ಘೋಷಿಸಬಹುದು ಎನ್ನುವ ಹೂಡಿಕೆದಾರರ ಆಸೆಯು ಹುಸಿಯಾಗಿದೆ.
ಎಲ್ಐಸಿ ಐಪಿಒ ಕಳೆದ ಎರಡು ವರ್ಷಗಳಿಂದ ಸದ್ದು ಮಾಡುತ್ತಿತ್ತು. ಮೇ ತಿಂಗಳಲ್ಲಿ ₹ 902ರಿಂದ ₹ 949ರ ಪ್ರೈಸ್ಬ್ಯಾಂಡ್ನೊಂದಿಗೆ ಐಪಿಒ ಘೋಷಿಸಲಾಯಿತು. ಆದರೆ ಮಾರುಕಟ್ಟೆಗೆ ಬಂದ ಮೊದಲ ದಿನ ಹೂಡಿಕೆದಾರರಿಗೆ ನಷ್ಟ ಉಂಟು ಮಾಡುವಂತೆ ₹ 872ಕ್ಕೆ (ಎನ್ಎಸ್ಇ) ಲಿಸ್ಟ್ ಆಯಿತು. ನಂತರದ ದಿನಗಳಲ್ಲಿ ಸತತ ಕುಸಿತ ಕಂಡ ಷೇರುಗಳು ₹ 650ಕ್ಕೆ ಬಿದ್ದಿತ್ತು. ಐಪಿಒ ಮೂಲಕ ಷೇರು ಪಡೆದ ಹೂಡಿಕೆದಾರರು ಈವರೆಗೆ ಅಸಲನ್ನೂ ಕಂಡಿಲ್ಲ.
ಎಲ್ಐಸಿ ಲಾಭಗಳಿಕೆ ಪ್ರಮಾಣ ಸುಧಾರಿಸಿರುವುದು ಹಾಗೂ ಭವಿಷ್ಯದ ವಹಿವಾಟು ಹೆಚ್ಚಾಗಬಹುದು ಎಂಬ ಆಶಯ ಇರುವುದರಿಂದ ಹಲವು ಬ್ರೋಕರೇಜ್ ಕಂಪನಿಗಳು ಎಲ್ಐಸಿ ಮೇಲೆ ಆಸೆ ಇರಿಸಿಕೊಂಡಿವೆ. ‘ಹೂಡಿಕೆದಾರರು ತಾತ್ಕಾಲಿಕ ಏರಿಳಿತಗಳ ಕಡೆಗೆ ಗಮನ ಕೊಡದೆ, ದೀರ್ಘಾವಧಿ ದೃಷ್ಟಿ ಇರಿಸಿಕೊಳ್ಳಬೇಕು’ ಎಂದು ಸಲಹೆ ಮಾಡಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿಯೂ ಎಲ್ಐಸಿ ಕಂಪನಿಯು ವಿಮಾ ಕಂತು (ಪ್ರೀಮಿಯಂ) ಸಂಗ್ರಹ ಗಮನಾರ್ಹ ಪ್ರಗತಿ ಕಂಡಿದೆ. ಈ ಅವಧಿಯಲ್ಲಿ ಸುಮಾರು ₹ 1 ಲಕ್ಷ ಕೋಟಿಯಷ್ಟು ಪ್ರೀಮಿಯಂ ಸಂಗ್ರಹವಾಗಿದ್ದು, ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಶೇ 20.35ರಷ್ಟು ಪ್ರಗತಿ ಸಾಧಿಸಿದಂತೆ ಎಂದು ಕಂಪನಿ ಹೇಳಿಕೊಂಡಿದೆ.
Published On - 10:36 am, Thu, 25 August 22