LinkedIn data breach: ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಎಂಬ ಸುದ್ದಿಗೆ ಕಂಪೆನಿಯಿಂದ ಸ್ಪಷ್ಟನೆ

ಲಿಂಕ್ಡ್​ಇನ್​ನ 50 ಕೋಟಿ ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ ಎಂಬ ಬಗ್ಗೆ ಸುದ್ದಿ ಬಂದಿದ್ದು, ಇದನ್ನು ಕಂಪೆನಿ ನಿರಾಕರಿಸಿದೆ. ಡಾರ್ಕ್ ವೆಬ್​ನಲ್ಲಿ ಇರುವ ಮಾಹಿತಿಗಳು ನಿರುಪಯುಕ್ತವಾದವು ಎಂದು ಹೇಳಿದೆ.

LinkedIn data breach: ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಎಂಬ ಸುದ್ದಿಗೆ ಕಂಪೆನಿಯಿಂದ ಸ್ಪಷ್ಟನೆ
ಸಾಂದರ್ಭಿಕ ಚಿತ್ರ

Updated on: Apr 09, 2021 | 6:53 PM

ಕೆಲ ದಿನಗಳ ಹಿಂದಷ್ಟೇ 53.3 ಕೋಟಿ ಬಳಕೆದಾರರ ವೈಯಕ್ತಿಕ ಮಾಹಿತಿಯ ಭಾರೀ ಸೋರಿಕೆಯಲ್ಲಿ ಫೇಸ್​ಬುಕ್ ಒಳಗೊಂಡಿರುವ ಬಗ್ಗೆ ಸುದ್ದಿ ಬಂದಿತ್ತು. ಫೇಸ್​ಬುಕ್ ಮಾಹಿತಿ ಸೋರಿಕೆ ಶಾಕ್​ನಿಂದ ಇಡೀ ವಿಶ್ವ ಇನ್ನೂ ಆಚೆ ಬಂದಿಲ್ಲ. ಅದಾಗಲೇ ಮತ್ತೊಂದು ದೊಡ್ಡ ಮಾಹಿತಿ ಸೋರಿಕೆ ಸುದ್ದಿ ಬಂದಿದೆ. ಉದ್ಯೋಗ ಹುಡುಕುವುದಕ್ಕಾಗಿ ಇರುವ ವೆಬ್​ಸೈಟ್ ಲಿಂಕ್ಡ್​ಇನ್ ಹೆಸರು ಈಗಿನ ಮಾಹಿತಿ ಸೋರಿಕೆಯಲ್ಲಿ ತಳುಕು ಹಾಕಿಕೊಂಡಿದ್ದು, ಮತ್ತೊಂದು ಸುತ್ತು ಇಡೀ ವಿಶ್ವ ಶೇಕ್ ಶೇಕ್ ಶೇಕ್ ಆಗಿದೆ. ವರದಿಯ ಪ್ರಕಾರ, ಲಿಂಕ್ಡ್​ಇನ್​ನ 50 ಕೋಟಿಯಷ್ಟು ಬಳಕೆದಾರರ ಮಾಹಿತಿ ಸೋರಿಕೆ ಆಗಿದೆ.

ಸೈಬರ್​​ನ್ಯೂಸ್ ಪ್ರಕಾರ, ಈ ದೊಡ್ಡ ಮಟ್ಟದ ಮಾಹಿತಿ ಸೋರಿಕೆಯಲ್ಲಿ ಲಿಂಕ್ಡ್​ಇನ್ ಭಾಗವಾಗಿದೆ. 50 ಕೋಟಿ ಬಳಕೆದಾರರ ಅತಿ ಮುಖ್ಯವಾದ ದತ್ತಾಂಶವನ್ನು ಡಾರ್ಕ್​ವೆಬ್​ನಲ್ಲಿ ಬಯಲು ಮಾಡಲಾಗಿದೆ. ಲಿಂಕ್ಡ್​ಇನ್ ಐಡಿ, ಪೂರ್ತಿ ಹೆಸರು, ಇಮೇಲ್ ವಿಳಾಸಗಳು, ಫೋನ್ ನಂಬರ್​ಗಳು, ಲಿಂಗ, ಲಿಂಕ್ಡ್​ಇನ್ ಪ್ರೊಫೈಲ್​ಗಳ ಲಿಂಕ್​ಗಳು, ಇತರ ಸೋಷಿಯಲ್ ಮೀಡಿಯಾ ಪ್ರೊಫೈಲ್​ಗಳ ಲಿಂಕ್​ಗಳು, ವೃತ್ತಿಪರ ಟೈಟಲ್​ಗಳು, ಇತರ ಉದ್ಯೋಗ ಸಂಬಂಧಿತ ಮಾಹಿತಿಗಳು ಸೋರಿಕೆ ಆಗಿದೆ. ವರದಿಗಳು ತಿಳಿಸುವಂತೆ, ಅಪ್​ಡೇಟ್ ಆಗಿರುವ ಲಿಂಕ್ಡ್​ಇನ್ ಪ್ರೊಫೈಲ್​ಗಳನ್ನು ಮಾರಲಾಗುತ್ತಿದೆಯಾ ಅಥವಾ ಈ ಹಿಂದೆ ಲಿಂಕ್ಡ್​ಇನ್​​ನಿಂದ ಆದ ದತ್ತಾಂಶ ಸೋರಿಕೆಯನ್ನೇ ಈಗ ಒಗ್ಗೂಡಿಸಲಾಗಿದೆಯಾ ಎಂಬುದು ತಿಳಿದಿಲ್ಲ.

ಸಾರ್ವಜನಿಕವಾಗಿ ನೋಡಬಹುದಾದ ಪ್ರೊಫೈಲ್​ಗಳೂ ಇವೆ
ಮಾಹಿತಿ ಸೋರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಿಂಕ್ಡ್​ಇನ್, ಮಾಹಿತಿ ಸೋರಿಕೆಯಲ್ಲಿ ಸಾರ್ವಜನಿಕವಾಗಿ ನೋಡಬಲ್ಲಂಥ ಪ್ರೊಫೈಲ್ ಒಳಗೊಂಡಿದ್ದು, ಅದನ್ನು ಲಿಂಕ್ಡ್​ಇನ್ ನಿರುಪಯುಕ್ತ ಎಂದು ಪರಿಗಣಿಸಿದೆ ಎಂದಿದೆ. “ಸದಸ್ಯರು ತಮ್ಮ ದತ್ತಾಂಶಕ್ಕೆ ಲಿಂಕ್ಡ್​ಇನ್ ಅನ್ನು ನಂಬುತ್ತಾರೆ. ಆ ನಂಬಿಕೆ ಉಳಿಸಿಕೊಳ್ಳುವುದಕ್ಕೆ ನಾವು ಕ್ರಮ ಕೈಗೊಳ್ಳುತ್ತೇವೆ. ಮಾರಾಟಕ್ಕೆ ಇಡಲಾದ ಲಿಂಕ್ಡ್​ಇನ್ ದತ್ತಾಂಶದ ಆರೋಪಕ್ಕೆ ಸಂಬಂಧಿಸಿದಂತೆ ನಾವು ತನಿಖೆ ನಡೆಸಿದ್ದೇವೆ. ಅವುಗಳು ವಾಸ್ತವವಾಗಿ ವಿವಿಧ ವೆಬ್​ಸೈಟ್​ಗಳು ಮತ್ತು ಕಂಪೆನಿಗಳ ಮಾಹಿತಿಯನ್ನು ಒಗ್ಗೂಡಿಸಿರುವುದು. ಸಾರ್ವಜನಿಕವಾಗಿ ನೋಡಬಹುದಾದ ಪ್ರೊಫೈಲ್​ಗಳೂ ಇದರಲ್ಲಿ ಒಳಗೊಂಡಿವೆ. ಅವುಗಳನ್ನು ಪ್ರಯೋಜನಕ್ಕೆ ಇಲ್ಲ ಎಂದು ಲಿಂಕ್ಡ್​ಇನ್ ಪರಿಗಣಿಸಿತ್ತು.

“ಇದು ಲಿಂಕ್ಡ್​ಇನ್ ಮಾಹಿತಿ ಸೋರಿಕೆ ಅಲ್ಲ. ಖಾಸಗಿ ಸದಸ್ಯರ ಖಾತೆ ಮಾಹಿತಿಯನ್ನು ನಾವು ಪರಿಶೀಲಿಸಬಹುದಾದ್ದರಲ್ಲಿ ಸೇರಿಸಿಲ್ಲ. ನಮ್ಮ ಸದಸ್ಯರ ದತ್ತಾಂಶದ ದುರ್ಬಳಕೆ, ಸ್ಕ್ರಾಪಿಂಗ್ ಮಾಡುವಂಥದ್ದು ಕಂಡುಬಂದಲ್ಲಿ ಲಿಂಕ್ಡ್​ಇನ್ ಸೇವೆಯ ನಿಬಂಧನೆಗಳನ್ನು ಉಲ್ಲಂಘಿಸಿದಂತಾಗುತ್ತದೆ. ಯಾರಾದರೂ ಸದಸ್ಯರ ಮಾಹಿತಿಯನ್ನು ಬಳಸುವುದಕ್ಕೆ ಪ್ರಯತ್ನಿಸಿದಲ್ಲಿ ಮತ್ತು ಲಿಂಕ್ಡ್​ಇನ್ ಉದ್ದೇಶಕ್ಕಾಗಿ ಬಳಸಿದಲ್ಲಿ ಹಾಗೂ ನಮ್ಮ ಸದಸ್ಯರು ಒಪ್ಪದಿದ್ದಲ್ಲಿ, ನಾವು ಅವರನ್ನು ತಡೆಯಲು ಶ್ರಮಿಸುತ್ತೇವೆ ಮತ್ತು ಅದಕ್ಕೆ ಉತ್ತರದಾಯಿತ್ವ ವಹಿಸುವಂತೆ ಮಾಡುತ್ತೇವೆ,” ಎಂದು ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್​ಇನ್ ಹೇಳಿಕೆಯಲ್ಲಿ ತಿಳಿಸಿದೆ.

ಲಿಂಕ್ಡ್​ಇನ್ ಪಾಸ್​ವರ್ಡ್ ಬದಲಿಸಿ
ಖಾಸಗಿತನದ ನಿಗಾ ವಹಿಸುವ ಇಟಾಲಿಯನ್ ಸಂಸ್ಥೆಯು ಲಿಂಕ್ಡ್​ಇನ್ ಮಾಹಿತಿ ಸೋರಿಕೆ ಬಗ್ಗೆ ತನಿಖೆ ಶುರು ಮಾಡಿದೆ. ಅಧಿಕಾರಿಗಳು ಬ್ಲೂಮ್​ಬರ್ಗ್​ಗೆ ಈ ಬಗ್ಗೆ ತಿಳಿಸಿದ್ದು, ಬಳಕೆದಾರರ ಐಡಿಗಳು, ಪೂರ್ತಿ ಹೆಸರು, ಇಮೇಲ್ ವಿಳಾಸಗಳು, ದೂರವಾಣಿ ಸಂಖ್ಯೆಗಳು ಮೊದಲಾದ ಮಾಹಿತಿಗಳನ್ನು ಬಯಲು ಮಾಡಲಾಗಿದೆ ಎಂದು ತಿಳಿದು ಬಂದ ಮೇಲೆ ತನಿಖೆ ಕೈಗೆತ್ತಿಕೊಂಡಿರುವುದಾಗಿ ಹೇಳಿಕೊಂಡಿದೆ. ಸೈಬರ್​ನ್ಯೂಸ್ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದು, ಲಿಂಕ್ಡ್​ಇನ್ ಬಳಕೆದಾರರು ಪಾಸ್​ವರ್ಡ್ ಬದಲಿಸಿಕೊಳ್ಳುವಂತೆ ಮತ್ತು ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ತಿಳಿಸಿದೆ.

ಇದನ್ನೂ ಓದಿ: 61 ಲಕ್ಷ ಭಾರತೀಯ ಫೇಸ್​ಬುಕ್ ಬಳಕೆದಾರರ ಮಾಹಿತಿ ಲೀಕ್

(LinkedIn 50 crore users data breach alleged by cybernews. Company clarification regarding this.)