Indian Rupee Value: ಅಮೆರಿಕನ್ ಡಾಲರ್ ವಿರುದ್ಧ 8 ತಿಂಗಳ ಕನಿಷ್ಠ ಮಟ್ಟ ಮುಟ್ಟಿದ ರೂಪಾಯಿ ಮೌಲ್ಯ
USD Vs INR: ಅಮೆರಿಕನ್ ಡಾಲರ್ ವಿರುದ್ಧ ಭಾರತದ ರೂಪಾಯಿ ಮೌಲ್ಯವು ಎಂಟು ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಮತ್ತಿತರ ಕಾರಣಗಳಿಂದ ಇಂಥ ಬೆಳವಣಿಗೆ ಆಗಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.
ಮುಂಬೈ: ಹಣದುಬ್ಬರ ಆತಂಕದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಭಾರೀ ಪ್ರಮಾಣದಲ್ಲಿ ಬಾಂಡ್ ಖರೀದಿ ಕಾರ್ಯಕ್ರಮದ ಮಧ್ಯೆ ಭಾರತದ ರೂಪಾಯಿ ಮೌಲ್ಯವು ಶುಕ್ರವಾರ ಅಮೆರಿಕನ್ ಡಾಲರ್ ವಿರುದ್ಧ 8 ತಿಂಗಳ ಕನಿಷ್ಠ ಮಟ್ಟವನ್ನು ತಲುಪಿದೆ. ಶುಕ್ರವಾರದಂದು ಭಾರತದ ರೂಪಾಯಿಯು ಅಮೆರಿಕದ ಡಾಲರ್ ವಿರುದ್ಧ 74.77ಕ್ಕೆ ವಹಿವಾಟು ಆರಂಭಿಸಿತು. ಕಳೆದ ವರ್ಷದ ಆಗಸ್ಟ್ 20ರ ನಂತರ, ಕನಿಷ್ಠ ಮಟ್ಟವಾದ 74.97 ತಲುಪಿತು. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಭಾರತದ ರೂಪಾಯಿ 74.86ರಲ್ಲಿ ವಹಿವಾಟು ನಡೆಸುತ್ತಿತ್ತು. ಈ ಹಿಂದಿನ ದಿನದ ಮುಕ್ತಾಯಕ್ಕೆ ಹೋಲಿಸಿದಲ್ಲಿ ಶೇ 0.33ರಷ್ಟು ಕಡಿಮೆ ಆಗಿತ್ತು. ಈ ವರ್ಷ ಇಲ್ಲಿಯ ತನಕ ರೂಪಾಯಿ ಮೌಲ್ಯವು ಅಮೆರಿಕ ಡಾಲರ್ ವಿರುದ್ಧ ಶೇ 2.4ರಷ್ಟು ಇಳಿಕೆ ಕಂಡಿದೆ.
ಈ ತ್ರೈಮಾಸಿಕದಲ್ಲಿ ಸಾಲದ ವೆಚ್ಚ ಕಡಿಮೆ ಇಡುವ ಉದ್ದೇಶದಿಂದ ಹಾಗೂ ಆರ್ಥಿಕ ಚೇತರಿಕೆಗೆ ಬೆಂಬಲ ನೀಡಬೇಕು ಎಂಬ ಕಾರಣಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಬಾಂಡ್ಗಳನ್ನು ಸೆಕೆಂಡರಿ ಮಾರ್ಕೆಟ್ನಿಂದ ಖರೀದಿ ಮಾಡುವ ಉದ್ದೇಶದ ಬಗ್ಗೆ ಬುಧವಾರದಂದು ಘೋಷಣೆ ಮಾಡಿತು. “ಆರ್ಬಿಐನಿಂದ ಸರ್ಕಾರದ ಬಾಂಡ್ ಖರೀದಿ ಕಾರ್ಯಕ್ರಮ ಘೋಷಣೆ ಮಾಡಿದ್ದು ನಮ್ಮ ದೃಷ್ಟಿಯಲ್ಲಿ ಭಾರತದ ರೂಪಾಯಿಗೆ ನೆಗೆಟಿವ್ ಅಚ್ಚರಿ. ಈಗಿನ ನೀತಿ ನಿರ್ಣಯದಿಂದ ಭಾರತದ ರೂಪಾಯಿಯ ನಕಾರಾತ್ಮಕ ಅಪಾಯವು ಸ್ಥಳೀಯ ಹಣದುಬ್ಬರ ಏರಿಕೆ, ದುರ್ಬಲ ಆರ್ಥಿಕ ಸ್ಥಿತಿ ಮತ್ತು ಜಾಗತಿಕ ಯೀಲ್ಡ್ಸ್ ಹೆಚ್ಚಳದಿಂದ ಬಂದಿದೆ,” ಎಂದು ನೂಮುರಾ ರೀಸರ್ಚ್ ತಿಳಿಸಿದೆ.
ಭಾರತದಲ್ಲಿ ಶುಕ್ರವಾರದಂದು 1,31,968 ಕೊರೊನಾ ಸೋಂಕು ಪ್ರಕರಣಗಳು ವರದಿ ಆಗಿವೆ. ಲಸಿಕೆ ಕೊರತೆ ಮತ್ತು ಹೊಸದಾಗಿ ಸ್ಥಳೀಯವಾಗಿ ಹಲವು ರಾಜ್ಯಗಳಲ್ಲಿ ಲಾಕ್ಡೌನ್ನಿಂದ ಹೂಡಿಕೆದಾರರು ಗಾಬರಿ ಬೀಳುವಂತೆ ಆಗಿದೆ. ಕಳೆದ ಒಂಬತ್ತು ಟ್ರೇಡಿಂಗ್ ಸೆಷನ್ನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) 102 ಕೋಟಿ ಅಮೆರಿಕನ್ ಡಾಲರ್ನಷ್ಟು ಈಕ್ವಿಟಿ ಮಾರಾಟ ಮಾಡಿದ್ದಾರೆ. ಇನ್ನು ಈ ವರ್ಷದಲ್ಲಿ ಇಲ್ಲಿಯ ತನಕದ 235 ಕೋಟಿ ಅಮೆರಿಕನ್ ಡಾಲರ್ ಡೆಟ್ ಮಾರಾಟ ಮಾಡಿದ್ದಾರೆ.
ಬೆಳವಣಿಗೆ ಕೆಳಗೆ ಇಳಿಯುವ ಅಪಾಯ, ಈಕ್ವಿಟಿ ಮಾರುಕಟ್ಟೆಗಳ ಸಂಕುಚಿತತೆ, ಕಾಲಮಾನಕ್ಕೆ (ಏಪ್ರಿಲ್- ಮೇ) ದುರ್ಬಲವಾಗುವ ಡಾಲರ್ ಪೂರೈಕೆ ಮತ್ತು ತ್ರೈಮಾಸಿಕ ಗಳಿಕೆ ಫಲಿತಾಂಶಗಳ ಘೋಷಣೆ ಇವೆಲ್ಲವೂ ಸೇರಿ ಭಾರತದ ರೂಪಾಯಿ ದುರ್ಬಲ ಆಗಬಹುದು ಎಂಬ ನಿರೀಕ್ಷೆ ಇದೆ. ಇನ್ನು ಡಾಲರ್ ವಿರುದ್ಧ ರೂಪಾಯಿ ಮೌಲ್ಯ 75.5 ತಲುಪಬಹುದು ಎಂದು ಯುಬಿಎಸ್ ವರದಿ ಹೇಳಿದೆ.
ಇದನ್ನೂ ಓದಿ: RBI Monetary Policy Highlights: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಘೋಷಿಸಿದ ಹಣಕಾಸು ನೀತಿಯ ಪ್ರಮುಖಾಂಶಗಳು
( Due to increase in corona numbers and other reasons Indian Rupee value at 8 month low against USD on April 9, 2021.)
Published On - 3:56 pm, Fri, 9 April 21