ಭಾರತದಲ್ಲಿ 71 ದಿನದಲ್ಲಿ ಕೊವಿಡ್ ಲಸಿಕೆ ಪಡೆದ 176 ಮಂದಿ ಸಾವು; ಲಸಿಕೆಗೂ ಸಾವಿಗೂ ನೇರ ಸಂಬಂಧ ಪತ್ತೆಯಾಗಿಲ್ಲ
COVID-19 vaccine: 176 ಸಾವುಗಳ ಪೈಕಿ 76 ಸಾವುಗಳು ಆಸ್ಪತ್ರೆಯಲ್ಲಿ ಸಂಭವಿಸಿದ್ದು 97 ಸಾವುಗಳು ರೋಗಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಸಂಭವಿಸಿದ್ದಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತೋರಿಸುತ್ತವೆ.
ನವದೆಹಲಿ: ದೇಶದಲ್ಲಿ ಕೊವಿಡ್ ಲಸಿಕೆ ವಿತರಣೆ ಪ್ರಕ್ರಿಯೆ ಮುಂದುವರಿಯುತ್ತಿದ್ದು 71 ದಿನಗಳ ಅವಧಿಯಲ್ಲಿ ಕೊವಿಡ್ ಲಸಿಕೆ ಸ್ವೀಕರಿಸಿದ 176 ಮಂದಿ ಮೃತಪಟ್ಟಿದ್ದಾರೆ. ಜ.16ರಿಂದ ಮಾರ್ಚ್ 27ರ ಅವಧಿಯಲ್ಲಿ ಇಷ್ಟು ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳನ್ನು ಆಧರಿಸಿ ದಿ ಪ್ರಿಂಟ್ ವರದಿ ಮಾಡಿದೆ. ಆದಾಗ್ಯೂ ಲಸಿಕೆ ಸ್ವೀಕರಿಸಿರುವುದರಿಂದಲೇ ಸಾವು ಸಂಭವಿಸಿದೆ ಎಂದು ಹೇಳಲು ಯಾವುದೇ ಸಾಕ್ಷ್ಯ ಇಲ್ಲ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿದ್ದಾರೆ. ಆರೋಗ್ಯ ತಜ್ಞರ ಪ್ರಕಾರ ಇಮ್ಯುನೈಸೇಶನ್ (ಎಇಎಫ್‌ಐ) ನಂತರ ಸಂಭವಿಸಿ ಸಾವುಗಳು ಮತ್ತು ಪ್ರತಿಕೂಲ ಘಟನೆಗಳ ಕುರಿತಾದ ಮಾಹಿತಿಯನ್ನು ವಿವೇಚನೆಯಿಂದ ನೋಡಬೇಕಾಗಿದೆ. ಸಾಧಕ-ಬಾಧಕಗಳನ್ನು ಅಳೆಯುವ ಮೂಲಕ ಮತ್ತು ಸಾರ್ವಜನಿಕ ಹಿತಾಸಕ್ತಿಗನುಗುಣವಾಗಿ ಜಾಗೃತ ನಿರ್ಧಾರ ತೆಗೆದುಕೊಳ್ಳಬೇಕು. ಇವುಗಳ ಜತೆಗೆ ಸರ್ಕಾರ ಸಾರ್ವಜನಿಕರಿಗೆ ನೀಡುವ ಮಾಹಿತಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಬೇಕು ಎಂದಿದ್ದಾರೆ. ಜ.16 ಮತ್ತು ಮಾರ್ಚ್ 27ರ ಅವಧಿಯಲ್ಲಿ 6 ಕೋಟಿಗಿಂತಲೂ ಹೆಚ್ಚು (6,11,13,354) ಕೊವಿಡ್ ಲಸಿಕೆ ನೀಡಲಾಗಿದೆ.
ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಇವೆರಡನ್ನೂ ಕೇಂದ್ರ ಸರ್ಕಾರ ನೀಡುತ್ತಿದ್ದು, ಎಷ್ಟು ಜನರಿಗೆ ಲಸಿಕೆ ನೀಡಲಾಗಿದೆ ಎಂಬುದನ್ನು ನಿಖರವಾಗಿ ಹೇಳುವುದು ಕಷ್ಟ. ಆದರೆ ಎಷ್ಟು ಡೋಸ್ ಲಸಿಕೆ ನೀಡಲಾಗಿದೆ ಎಂಬ ಮಾಹಿತಿ ಮಾತ್ರ ಸಿಗುತ್ತದೆ. 176 ಮಂದಿ ಸಾವಿಗೀಡಾಗಿದ್ದರೆ ಎಂದರೆ 3.4 ಲಕ್ಷ ಡೋಸ್ ಗೆ ಒಂದು ಸಾವು ಸಂಭವಿಸಿದೆ ಎಂದು ಲೆಕ್ಕಹಾಕಬಹುದು. ‘ದೇಶದಾದ್ಯಂತ ಲಸಿಕೆ ಪಡೆದವರ ಪೈಕಿ ಒಟ್ಟು 176 ಮಂದಿ ಮೃತಪಟ್ಟಿದ್ದಾರೆ. ಈ ಸಾವುಗಳಿಗೆ ಲಸಿಕೆಯೇ ಕಾರಣ ಎಂದು ಹೇಳುವುದಕ್ಕೆ ಸ್ಪಷ್ಟ ಸಾಕ್ಷ್ಯಗಳು ಇಲ್ಲ, ಇವುಗಳ ಬಗ್ಗೆ ತಜ್ಞರ ಸಮಿತಿ ಪರಿಶೀಲಿಸುತ್ತಿದೆ’ ಎಂಬ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿ ಹೇಳಿಕೆಯನ್ನು ದಿ ಪ್ರಿಂಟ್ ಜಾಲತಾಣ ಉಲ್ಲೇಖಿಸಿದೆ.
ಜ.16ರಿಂದ ಮಾರ್ಚ್ 27ರ ಅವಧಿಯಲ್ಲಿ ವರದಿಯಾದ ಲಸಿಕಾ ನಂತರದ ಪ್ರತಿಕೂಲ ಘಟನೆಗಳು (AEFI) CoWin ಪೋರ್ಟಲ್ ನಲ್ಲಿದೆ. ಇದರ ಪ್ರಕಾರ ಪ್ರತಿ 1 ಲಕ್ಷ ಡೋಸ್ ಗೆ 31 ಎಇಎಫ್ ಪ್ರಕರಣಗಳು ವರದಿಯಾಗಿದೆ. ಈ ಪೈಕಿ 18,305 ಘಟನೆಗಳು ಸಣ್ಣ ಪ್ರಮಾಣದ್ದು, 286 ಸಾಧಾರಣ ಮತ್ತು 396 ಘಟನೆಗಳು ಗಂಭೀರ ಸ್ವರೂಪದ್ದಾಗಿದೆ. ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್ ಲಸಿಕೆಯನ್ನು ನೀಡುವ ಪ್ರಕ್ರಿಯೆ ಜ.16ರಿಂದ ಆರಂಭವಾಗಿತ್ತು. ಮಾರ್ಚ್ 1ರಿಂದ 45-59 ವಯಸ್ಸಿನ ಕೊವಿಡ್ ಆತಂಕವಿರುವ ವ್ಯಕ್ತಿಗಳಿಗೆ ಲಸಿಕೆ ನೀಡಿತ್ತು. ಏ.1 ರಿಂದ 45 ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಜನರಿಗೆ ಮೂರನೇ ಹಂತದಲ್ಲಿ (ಯಾವುದೇ ಷರತ್ತು ಇಲ್ಲದೆ) ಕೊವಿಡ್ ಲಸಿಕೆ ನೀಡಲಾಗುತ್ತಿದೆ.
ಕೋವಿಡ್ -19 ಲಸಿಕೆ ನಂತರ ಎಇಎಫ್‌ಐಗಳ ಸಾಂದರ್ಭಿಕ ಮೌಲ್ಯಮಾಪನ ನಡೆಸಲು ಸರ್ಕಾರ ತಜ್ಞರ ಸಮಿತಿ ರಚಿಸಿದೆ. ಮಾರ್ಚ್ 17 ರಂದು, ಆರೋಗ್ಯ ಸಚಿವಾಲಯವು ಲಸಿಕೆ ಪಡೆದ ನಂತರ ಸಾವನ್ನಪ್ಪಿದ ಎಂಟು ಪ್ರಕರಣಗಳಲ್ಲಿ ಮಾಡಿದ ಮೌಲ್ಯಮಾಪನದ ಫಲಿತಾಂಶಗಳನ್ನು ಬಹಿರಂಗಪಡಿಸಿತ್ತು. ಇದರಲ್ಲಿ ಮೂರು ಪ್ರಕರಣಗಳು ಲಸಿಕೆಯಿಂದಾಗಿ ಸಾವು ಸಂಭವಿಸಿದೆ ಎಂದು ಹೇಳಲು ಸ್ಥಿರವಾದ ಸಂಬಂಧವನ್ನು ಹೊಂದಿರುವುದು ಕಂಡುಬಂದಿದೆ. ನಾಲ್ಕು ಪ್ರಕರಣಗಳಲ್ಲಿ ಲಸಿಕೆಗೂ ಅಸಮಂಜಸವಾದ ಕಾರಣವನ್ನು ಹೊಂದಿವೆ ಎಂದು ಕಂಡುಬಂದಿದೆ. ಇನ್ನೊಂದು ಪ್ರಕರಣವು ವರ್ಗೀಕರಿಸಲು ಸಾಧ್ಯವಾಗಿರಲಿಲ್ಲ.
ಆಂಧ್ರ ಪ್ರದೇಶದಲ್ಲಿ ಹೆಚ್ಚು ಸಾವು 176 ಸಾವುಗಳ ಪೈಕಿ 76 ಸಾವುಗಳು ಆಸ್ಪತ್ರೆಯಲ್ಲಿ ಸಂಭವಿಸಿದ್ದು 97 ಸಾವುಗಳು ರೋಗಿ ಆಸ್ಪತ್ರೆಗೆ ದಾಖಲಾಗುವ ಮುನ್ನ ಸಂಭವಿಸಿದ್ದಾಗಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತೋರಿಸುತ್ತವೆ. ಆಂಧ್ರ ಪ್ರದೇಶದಲ್ಲಿ 19 ಮಂದಿ ಸಾವಿಗೀಡಾಗಿದ್ದು ಕೇರಳದಲ್ಲಿ 16, ಪಶ್ಚಿಮ ಬಂಗಾಳದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ 15 ಮಂದಿ ಸಾವಿಗೀಡಾಗಿದ್ದಾರೆ. ಚಿಕ್ಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಲಕ್ಷ ಡೋಸ್ಗೆ ಹೆಚ್ಚು ಲಸಿಕಾ ನಂತರದ ಪ್ರತಿಕೂಲ ಘಟನೆಗಳು (ಎಇಎಫ್‌ಐ) ವರದಿಯಾಗಿದೆ. ಪ್ರತಿಕೂಲ ಪ್ರಕರಣಗಳ ಪೈಕಿ ದಾದ್ರಾ ಮತ್ತು ನಾಗರ್ ಹವೇಲಿಯಲ್ಲಿ (776) ಪ್ರಕರಣಗಳು ವರದಿಯಾಗಿದೆ. ಅದೇ ವೇಳೆ ಮಿಜೊರಾಂ 715, ಗೋವಾ 478, ಸಿಕ್ಕಿಂ 378, ಅರುಣಾಚಲ ಪ್ರದೇಶ 310 , ಮೇಘಾಲಯ 242, ಹಿಮಾಚಲ ಪ್ರದೇಶ 130 ಮತ್ತು ದೆಹಲಿಯಲ್ಲಿ 65 ಪ್ರಕರಣಗಳು ವರದಿಯಾಗಿವೆ.
ಅದೇ ವೇಳೆ ದೊಡ್ಡ ರಾಜ್ಯಗಳ ಅಂಕಿಅಂಶ ಪರಿಶೀಲಿಸಿದರೆ ಕೇರಳದಲ್ಲಿ 10 ಲಕ್ಷ ಡೋಸ್ಗೆ 115 ಲಸಿಕಾ ನಂತರದ ಪ್ರತಿಕೂಲ ಘಟನೆ (ಎಇಎಫ್‌ಐ) ವರದಿಯಾಗಿದೆ. ಕರ್ನಾಟಕದಲ್ಲಿ 71, ಹರ್ಯಾಣ 59 ಮತ್ತು ತೆಲಂಗಾಣದಲ್ಲಿ 56 ಪ್ರಕರಣಗಳು ವರದಿ ಆಗಿವೆ. ಎಇಎಫ್‌ಐ ಕಣ್ಗಾವಲು ಸಮಿತಿ ಪ್ರಕಾರ ಆಸ್ಪತ್ರೆಗೆ ದಾಖಲಾದವರಿಗೆ ಮತ್ತು ಸಾವಿಗೀಡಾದವರಿಗೆ ಆರ್ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯವಾಗಿದೆ. ಅದೇ ವೇಳೆ ವೈದ್ಯರು ರೋಗಿಯ ಹಿಸ್ಟೊಪಾಥೋಲಾಜಿಕಲ್ ಪರೀಕ್ಷೆ ನಡೆಸಿದ್ದರೆ ಅದರ ವಿವರಗಳನ್ನು ಸಲ್ಲಿಸಬೇಕು. ನಾವು ಎಇಎಫ್‌ಐ / ಸಾವುಗಳನ್ನು ಮೌಲ್ಯಮಾಪನ ಮಾಡುವಾಗ ವಿವಿಧ ವಯೋಮಾನದವರು ಲಸಿಕೆ ಪಡೆದಿದ್ದಾರೆಯೇ ಇಲ್ಲವೇ ಎಂಬ ಮಾಹಿತಿ ಕಲೆ ಹಾಕುವುದು ದೊಡ್ಡ ಸವಾಲು ಎಂದು ಏಮ್ಸ್‌ನ ಪ್ರಾಧ್ಯಾಪಕ ಡಾ.ಆನಂದ್ ಕೃಷ್ಣನ್ ಹೇಳಿದ್ದಾರೆ.
ಆದಾಗ್ಯೂ, ಲಸಿಕೆಯಿಂದಾಗಿ ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂದು ನಾವು ಭಾವಿಸಿದರೆ ನಾವು ಸಾಧಕ-ಬಾಧಕಗಳನ್ನು ಅಳೆಯಬೇಕು ಮತ್ತು ಖಾಸಗಿ ಹಾನಿಯ ವಿರುದ್ಧ ಸಾರ್ವಜನಿಕ ಹಿತವನ್ನು ಸಮತೋಲನಗೊಳಿಸುವ ಪ್ರಜ್ಞಾಪೂರ್ವಕ ನಿರ್ಧಾರ ತೆಗೆದುಕೊಳ್ಳಬೇಕು. ಸಾರ್ವಜನಿಕ ವಲಯದಲ್ಲಿ ಲಭ್ಯವಿರುವ ಎಲ್ಲ ಮಾಹಿತಿಯೊಂದಿಗೆ ಇದನ್ನು ಪಾರದರ್ಶಕ ರೀತಿಯಲ್ಲಿ ಮಾಡಬೇಕು.
ರಾಜಸ್ಥಾನದಲ್ಲಿ ಶೇ 52 ಹಿರಿಯ ನಾಗರಿಕರಿಗೆ ಲಸಿಕೆ ಮಾರ್ಚ್ 31ರ ಅಂಕಿಅಂಶಗಳ ಪ್ರಕಾರ ಲಡಾಖ್ನಲ್ಲಿ ಶೇ 82, ತ್ರಿಪುರಾದಲ್ಲಿ ಶೇ 59 ಮತ್ತು ರಾಜಸ್ಥಾನದಲ್ಲಿ ಶೇ 52 ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿದೆ. ಅದೇ ವೇಳೆ ಗುಜರಾತ್ನಲ್ಲಿ ಶೇ 42 , ಕೇರಳದಲ್ಲಿ ಶೇ 33 ಮಂದಿಗೆ ಲಸಿಕೆ ನೀಡಲಾಗಿದೆ. ಇನ್ನುಳಿದಂತೆ ಕರ್ನಾಟಕ, ಜಾರ್ಖಂಡ್, ಗೋವಾ , ಜಮ್ಮು ಮತ್ತು ಕಾಶ್ಮೀರದಲ್ಲಿ ಶೇ 24, ಮಹಾರಾಷ್ಟ್ರದಲ್ಲಿ ಶೇ 19,ತಮಿಳುನಾಡಿನಲ್ಲಿ ಶೇ 9, ಪಂಜಾಬ್ನಲ್ಲಿ ಶೇ 7, ತೆಲಂಗಾಣದಲ್ಲಿ ಶೇ 10 ಹಿರಿಯ ನಾಗರಿಕರಿಗೆ ಲಸಿಕೆ ನೀಡಲಾಗಿದೆ.
ಅಂಕಿಅಂಶಗಳ ಪ್ರಕಾರ ತಮಿಳುನಾಡಿನಲ್ಲಿ ಅತಿಹೆಚ್ಚು ಕೊವಿಶೀಲ್ಡ್ ಲಸಿಕೆ ವ್ಯರ್ಥವಾಗಿದೆ. ಇಲ್ಲಿ ಶೇ 10 ಡೋಸ್ ಗಳು ವ್ಯರ್ಥವಾಗಿವೆ. ಅಸ್ಸಾಂನಲ್ಲಿ ಕೋವ್ಯಾಕ್ಸಿನ್ ಅತೀ ಹೆಚ್ಚು ವ್ಯರ್ಥವಾಗಿದ್ದು, ಇಲ್ಲಿ ಶೇ 16.1 ಲಸಿಕೆ ಬಳಕೆಯಾಗದೆ ಪೋಲಾಗಿತ್ತು.
ಇದನ್ನೂ ಓದಿ: ಲಸಿಕೆ ಪಡೆಯಲು ಹಿಂದೇಟು ಹಾಕಿದ ಜನ; ಮುಸ್ಲಿಂ ಧರ್ಮಗುರುಗಳಿಗೆ ಮನವೊಲಿಸಿ ಲಸಿಕೆ ನೀಡಿದ ಜಿಲ್ಲಾಡಳಿತ
ಇದನ್ನೂ ಓದಿ: Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೊದಿಗೆ ಪತ್ರ ಬರೆದ ರಾಹುಲ್ ಗಾಂಧಿ