Direct tax collection: 2020-21ರಲ್ಲಿ ತಾತ್ಕಾಲಿಕ ನೇರ ತೆರಿಗೆ ಸಂಗ್ರಹದಲ್ಲಿ ಶೇ 5ರಷ್ಟು ಹೆಚ್ಚಳ
2020- 21ನೇ ಸಾಲಿನಲ್ಲಿ ನೇರ ತೆರಿಗೆ ಸಂಗ್ರಹದ ತಾತ್ಕಾಲಿಕ ಮಾಹಿತಿ ಇಲ್ಲಿದೆ. ಬಜೆಟ್ನಲ್ಲಿ ಅಂದಾಜು ಮಾಡಿದ್ದಕಿಂತ ಶೇಕಡಾ 104ರಷ್ಟು ಸಂಗ್ರಹ ಆಗಿದೆ ಎಂಬ ಅಂಕಿ- ಅಂಶವು ವಾರ್ತಾ ಇಲಾಖೆಯಿಂದ ಒದಗಿಸಿರುವ ಮಾಹಿತಿಯಿಂದ ತಿಳಿದುಬರುತ್ತದೆ.
2020-21ನೇ ಸಾಲಿನ ಹಣಕಾಸು ವರ್ಷದಲ್ಲಿ 9.45 ಲಕ್ಷ ಕೋಟಿ ರೂಪಾಯಿ ನಿವ್ವಳ ನೇರ ತೆರಿಗೆ ಸಂಗ್ರಹ ಆಗಿರುವುದನ್ನು ತಾತ್ಕಾಲಿಕ ಅಂಕಿ-ಅಂಶಗಳು ಸೂಚಿಸುತ್ತಿವೆ. ಈ ನಿವ್ವಳ ನೇರ ತೆರಿಗೆ ಸಂಗ್ರಹವು 4.57 ಲಕ್ಷ ಕೋಟಿ ರೂಪಾಯಿ ಕಾರ್ಪೊರೇಷನ್ ತೆರಿಗೆ (ಸಿಐಟಿ) ಹಾಗೂ ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಸೇರಿದಂತೆ 4.88 ಲಕ್ಷ ಕೋಟಿ ರೂಪಾಯಿ ವೈಯಕ್ತಿಕ ಆದಾಯ ತೆರಿಗೆಯನ್ನು (ಪಿಐಟಿ) ಒಳಗೊಂಡಿದೆ. 9.05 ಲಕ್ಷ ಕೋಟಿ ರೂಪಾಯಿ ನಿವ್ವಳ ನೇರ ತೆರಿಗೆ ಸಂಗ್ರಹವು 2020-21ನೇ ಸಾಲಿನ ನೇರ ತೆರಿಗೆಗಳ ಪರಿಷ್ಕೃತ ಅಂದಾಜಿನ ಶೇಕಡಾ 104.46ರಷ್ಟು ಆಗುತ್ತದೆ.
2020-21ನೇ ಸಾಲಿನ ಹಣಕಾಸು ವರ್ಷದಲ್ಲಿ ನೇರ ತೆರಿಗೆಗಳ ಒಟ್ಟು ಸಂಗ್ರಹವು (ಮರುಪಾವತಿಗೆ ಹೊಂದಾಣಿಕೆಗೆ ಮೊದಲು) 12.06 ಲಕ್ಷ ಕೋಟಿ ರೂಪಾಯಿಯಷ್ಟಿದೆ. ಈ ಮೊತ್ತವು 6.31 ಲಕ್ಷ ಕೋಟಿ ರೂಪಾಯಿ ಕಾರ್ಪೊರೇಷನ್ ತೆರಿಗೆ (ಸಿಐಟಿ) ಹಾಗೂ ಭದ್ರತಾ ವಹಿವಾಟು ತೆರಿಗೆ (ಎಸ್‌ಟಿಟಿ) ಸೇರಿದಂತೆ 5.75 ಲಕ್ಷ ಕೋಟಿ ರೂಪಾಯಿ ವೈಯಕ್ತಿಕ ಆದಾಯ ತೆರಿಗೆ (ಪಿಐಟಿ), 4.95 ಲಕ್ಷ ಕೋಟಿ ರೂಪಾಯಿ ಮುಂಗಡ ತೆರಿಗೆ, 5.45 ಲಕ್ಷ ಕೋಟಿ ರೂಪಾಯಿ ಮೂಲದಿಂದ ಕಡಿತ ಮಾಡಿದ ತೆರಿಗೆ (ಕೇಂದ್ರ ಟಿಡಿಎಸ್ ಸೇರಿದಂತೆ), 1.07 ಲಕ್ಷ ಕೋಟಿ ರೂಪಾಯಿ ಸ್ವಯಂ ಮೌಲ್ಯಮಾಪನ ತೆರಿಗೆ, 42,372 ಕೋಟಿ ರೂಪಾಯಿ ನಿಯಮಿತ ಮೌಲ್ಯಮಾಪನ ತೆರಿಗೆ, 13,237 ಕೋಟಿ ರೂಪಾಯಿ ಲಾಭಾಂಶ ವಿತರಣಾ ತೆರಿಗೆ ಮತ್ತು 2,612 ಕೋಟಿ ರೂಪಾಯಿ ಇತರ ಸಣ್ಣ ಬಾಬ್ತುಗಳ ಅಡಿಯಲ್ಲಿ ಸಂಗ್ರಹಿಸಲಾದ ತೆರಿಗೆಯನ್ನು ಒಳಗೊಂಡಿದೆ.
ಕೊರೊನಾ ಕಾರಣದಿಂದಾಗಿ ಅತ್ಯಂತ ಸವಾಲಿನ ವರ್ಷದ ಹೊರತಾಗಿಯೂ 2020-21ನೇ ಸಾಲಿನ ಹಣಕಾಸು ವರ್ಷದಲ್ಲಿ 4.95 ಲಕ್ಷ ಕೋಟಿ ರೂಪಾಯಿಯಷ್ಟು ಮುಂಗಡ ತೆರಿಗೆ ಸಂಗ್ರಹವಾಗಿದ್ದು, ಈ ಪ್ರಮಾಣ ಹಿಂದಿನ ಹಣಕಾಸು ವರ್ಷದ ಮುಂಗಡ ತೆರಿಗೆ ಸಂಗ್ರಹಗಳಿಗೆ ಹೋಲಿಸಿದರೆ ಸುಮಾರು ಶೇಕಡಾ 6.7ರಷ್ಟು ಹೆಚ್ಚಾಗಿರುವುದನ್ನು ಕಾಣಬಹುದು. 2019-20ನೇ ಸಾಲಿನಲ್ಲಿ ನೀಡಲಾದ 1.83 ಲಕ್ಷ ಕೋಟಿ ರೂಪಾಯಿಗಳ ಮರುಪಾವತಿಗೆ ಹೋಲಿಸಿದರೆ, 2020-21ನೇ ಸಾಲಿನಲ್ಲಿ 2.61 ಲಕ್ಷ ಕೋಟಿ ರೂಪಾಯಿಗಳ ಮರುಪಾವತಿಯನ್ನು ನೀಡಲಾಗಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ ಶೇಕಡಾ 42.1ರಷ್ಟು ಹೆಚ್ಚಳವಾಗಿದೆ.
ಅಂದಹಾಗೆ, ಈ ಮೇಲಿನವು ತಾತ್ಕಾಲಿಕ ಅಂಕಿ-ಅಂಶಗಳಾಗಿದ್ದು, ತೆರಿಗೆ ಸಂಗ್ರಹ ಕುರಿತ ಅಂತಿಮ ದತ್ತಾಂಶ ಸಂಗ್ರಹದ ಬಳಿಕ ಇವುಗಳಲ್ಲಿ ವ್ಯತ್ಯಾಸವಾಗಬಹುದು. (ಮಾಹಿತಿ: ವಾರ್ತಾ ಇಲಾಖೆ)
ಇದನ್ನೂ ಓದಿ: Tax Saving: ತೆರಿಗೆ ಉಳಿತಾಯದ 10 ಉತ್ತಮ ಯೋಜನೆಗಳು ಇಲ್ಲಿವೆ
(Central government actual direct tax collection is 5% more to 2020-21 budgeted estimate.)