ಕೊರೊನಾ ಲಸಿಕೆ ಕೊರತೆ; ಮುಂಬೈನ 71 ವಿತರಣಾ ಕೇಂದ್ರ ಬಂದ್

ಬೃಹನ್ ಮುಂಬೈ ನಗರ ಪಾಲಿಕೆ ವ್ಯಾಪ್ತಿಯ 71 ಕೊರೊನಾ ಲಸಿಕೆ ವಿತರಣೆ ಕೇಂದ್ರಗಳು ಸ್ಥಗಿತಗೊಂಡಿವೆ. ಈ ಮುಂಚೆಯೇ ಮುಂಬೈಯಂಥ ನಗರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಬಲವಂತದಿಂದ ಮುಚ್ಚಿಸಿ ಜನರನ್ನು ವಾಪಸ್ಸು ಕಳಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಹೇಳಿದ್ದರು.

  • TV9 Web Team
  • Published On - 22:58 PM, 9 Apr 2021
ಕೊರೊನಾ ಲಸಿಕೆ ಕೊರತೆ; ಮುಂಬೈನ 71 ವಿತರಣಾ ಕೇಂದ್ರ ಬಂದ್
ಸಾಂದರ್ಭಿಕ ಚಿತ್ರ

ಮುಂಬೈ: ದೇಶದಲ್ಲಿ ಕೊರೊನಾ ಲಸಿಕೆಯ ಕೊರತೆ ಉಂಟಾಗಿದೆ ಎಂಬ ವಾದ ಮುನ್ನೆಲೆಗೆ ಬರುತ್ತಿರುವ ಸಂದರ್ಭದಲ್ಲೇ ಬೃಹನ್ ಮುಂಬೈ ನಗರ ಪಾಲಿಕೆ ವ್ಯಾಪ್ತಿಯ 71 ಕೊರೊನಾ ಲಸಿಕೆ ವಿತರಣೆ ಕೇಂದ್ರಗಳು ಸ್ಥಗಿತಗೊಂಡಿವೆ. ಮುಂಬೈನಲ್ಲಿ ಒಟ್ಟು 120 ಕೊರೊನಾ ಲಸಿಕೆ ಕೇಂದ್ರಗಳಿದ್ದು ಇವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ವಿತರಣಾ ಕೇಂದ್ರಗಳಲ್ಲಿ ಲಸಿಕೆ ಕೊರತೆ ಉಂಟಾಗಿದೆ. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೊರೊನಾ ಲಸಿಕೆ ವಿತರಣಾ ಕೇಂದ್ರವೊಂದರ ಅಧಿಕಾರಿ ರಾಜೇಶ್ ಡೇರೆ, ‘ಇಂದು ಲಸಿಕೆ ವಿತರಿಸಲು ನಿನ್ನೆ ರಾತ್ರಿಯೇ ನಮ್ಮ ವಿತರಣಾ ಕೇಂದ್ರವನ್ನು ತಲುಪುತ್ತದೆ ಎಂದು ಭಾವಿಸಿದ್ದೆವು. ಆದರೆ ಈವರೆಗೂ ನಮಗೆ ಕೊರೊನಾ ಲಸಿಕೆ ತಲುಪಿಲ್ಲ. ನಮ್ಮ ಬಳಿ 160 ಡೋಸ್ ಕೊರೊನಾ ಲಸಿಕೆಯಷ್ಟೇ ಇದೆ ಎಂದು ತಿಳಿಸಿದ್ದಾರೆ.

ರಾಜ್ಯದ ಹಲವು ನಗರಗಳಲ್ಲಿ ಕೊವಿಡ್ ಲಸಿಕೆ ವಿತರಣೆ ಕೇಂದ್ರಗಳು ಲಸಿಕೆ ಇಲ್ಲದೇ ಸ್ಥಗಿತಗೊಳ್ಳುವ ಹಂತ ತಲುಪಿವೆ. ಮುಂಬೈ ಒಂದೇ ಅಲ್ಲದೆ ಸತಾರಾ, ಸಾಂಗ್ಲಿ ನಗರಗಳಲ್ಲಿ ಹಲವು ಕೊರೊನಾ ಲಸಿಕೆ ವಿತರಣೆ ಕೇಂದ್ರಗಳು ಮುಚ್ಚುವ ಹಂತ ತಲುಪಿವೆ ಎಂದು ವರದಿಯಾಗಿದೆ.  ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ ತೋಪೆ, ರಾಜ್ಯದಲ್ಲಿ ಕೊವಿಡ್​ ಲಸಿಕೆಯ ದಾಸ್ತಾನು ಮೂರು ದಿನಗಳಲ್ಲಿ ಮುಗಿದು ಹೋಗಲಿದೆ ಎಂದಿದ್ದರು ಮತ್ತು ಕೇಂದ್ರ ಸರ್ಕಾರವನ್ನು ಬೇಗ ದಾಸ್ತಾನು ರವಾನಿಸುವಂತೆ ಆಗ್ರಹಿಸಿದ್ದರು. ಮುಂಬೈಯಂಥ ನಗರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳನ್ನು ಬಲವಂತದಿಂದ ಮುಚ್ಚಿಸಿ ಜನರನ್ನು ವಾಪಸ್ಸು ಕಳಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಟೋಪೆ ಹೇಳಿದ್ದರು.

ಮಹಾರಾಷ್ಟ್ರ ಆರೋಗ್ಯ ಸಚಿವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್,  ‘ ಸೋಂಕಿನ ಪ್ರಮಾಣವನ್ನು ತಡೆಯಲು ವಿಫಲವಾಗುತ್ತಿರುವ ಕೆಲ ರಾಜ್ಯ ಸರ್ಕಾರಗಳು ಗಮನ ಬೇರೆಡೆ ತಿರುಗಿಸಲು ಮತ್ತು ಬೇರೆಯವನ್ನು ದೂಷಿಸುವ ಭರದಲ್ಲಿ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿವೆ,’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ‘ಮಹಾರಾಷ್ಟ್ರ ಸರ್ಕಾರದ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಧೋರಣೆ ಕೊರೊನಾ ವೈರಸ್ ವಿರುದ್ಧ ಇಡೀ ದೇಶ ನಡೆಸುತ್ತಿರುವ ಹೋರಾಟವನ್ನು ನಿಷ್ಫಲಗೊಳಿಸುತ್ತಿದೆ,’ ಎಂದು ಸಚಿವ ಡಾ.ಹರ್ಷವರ್ಧನ್ ಹೇಳಿದ್ದರು.

ಇದನ್ನೂ ಓದಿ: ಭಾರತದ ಸಂಗ್ರಹದಲ್ಲಿರುವುದು 5 ದಿನಕ್ಕಾಗುವಷ್ಟು ಕೊವಿಡ್ ಲಸಿಕೆ; ಲಸಿಕೆ ಕೊರತೆ ಇಲ್ಲ ಎಂದ ಕೇಂದ್ರ ಸರ್ಕಾರ

Vaccine Utsav: ಭಾರತೀಯರೆಲ್ಲರಿಗೂ ಕೊರೊನಾ ಲಸಿಕೆ ನೀಡಬೇಕು; ಪ್ರಧಾನಿ ಮೋದಿಗೆ ಪತ್ರ ಬರೆದ ರಾಹುಲ್ ಗಾಂಧಿ