61 ಲಕ್ಷ ಭಾರತೀಯ ಫೇಸ್ಬುಕ್ ಬಳಕೆದಾರರ ಮಾಹಿತಿ ಲೀಕ್
ಬಳಕೆದಾರರ ಹೆಸರು, ಲಿಂಗ, ವೃತ್ತಿ, ಮದುವೆ ಆಗಿದೆಯೇ ಇಲ್ಲವೇ ಎಂಬ ವಿವರ, ಕೆಲಸ ಮಾಡುವ ಸ್ಥಳ ಮತ್ತು ಇನ್ನಿತರ ಮಾಹಿತಿಗಳು ಸೋರಿಕೆ ಆಗಿವೆ ಎಂಬ ಆರೋಪ ಫೇಸ್ಬುಕ್ ಮೇಲೆ ಕೇಳಿಬಂದಿದೆ.

ದೆಹಲಿ: ಅತಿ ದೊಡ್ಡ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿರುವ ಫೇಸ್ಬುಕ್ ಬಳಕೆದಾರಲ್ಲಿ ಭಯ ಹುಟ್ಟಿಸುವ ಸುದ್ದಿಯೊಂದು ಹೊರಬಿದ್ದಿದೆ. 100 ದೇಶಗಳ 53.3 ಕೋಟಿ ಫೇಸ್ಬುಕ್ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆಯಾಗಿದೆ ಎಂದು ಸೈಬರ್ ಭದ್ರತೆಗೆ ಸಂಬಂಧಿಸಿದ ಹಡ್ಸನ್ ರಾಕ್ ಕಂಪನಿ ಆರೋಪಿಸಿದೆ. ಈ ಪೈಕಿ 61 ಲಕ್ಷ ಭಾರತೀಯ ಫೇಸ್ಬುಕ್ ಬಳಕೆದಾರರ ಮಾಹಿತಿಯೂ ಇದೆ ಎನ್ನಲಾಗುತ್ತಿದೆ. ಬಳಕೆದಾರರ ಹೆಸರು, ಲಿಂಗ, ವೃತ್ತಿ, ಮದುವೆ ಆಗಿದೆಯೇ ಇಲ್ಲವೇ ಎಂಬ ವಿವರ, ಕೆಲಸ ಮಾಡುವ ಸ್ಥಳ ಮತ್ತು ಇನ್ನಿತರ ಮಾಹಿತಿಗಳು ಸೋರಿಕೆ ಆಗಿವೆ ಎಂಬ ಆರೋಪ ಫೇಸ್ಬುಕ್ ಮೇಲೆ ಕೇಳಿಬಂದಿದೆ. ಅತ್ಯಂತ ಕೆಳಮಟ್ಟದ ಹ್ಯಾಕಿಂಗ್ ವೇದಿಕೆಗಳಲ್ಲಿ ಬೃಹತ್ ಸಂಖ್ಯೆಯ ಫೇಸ್ಬುಕ್ ಬಳಕೆದಾರರ ಖಾಸಗಿ ಮಾಹಿತಿಗಳು ದೊರೆಯುತ್ತಿವೆ ಎಂದು ಹೇಳಲಾಗಿದೆ.
ಈ ಮುನ್ನವೂ ಫೇಸ್ಬುಕ್ ಮೇಲೆ ಇಂತಹುದೇ ಆರೋಪ ಕೇಳಿಬಂದಿತ್ತು. 2019ರಲ್ಲಿ ಟೆಲಿಗ್ರಾಂ ಆ್ಯಪ್ ಮೂಲಕ 20 ಡಾಲರ್ಗೆ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆ ಮಾಡಲಾಗಿತ್ತು ಎಂದು ಹೇಳಲಾಗಿತ್ತು. ನಂತರ 2020ರ ಜೂನ್ ಮತ್ತು 2021ರ ಜನವರಿಯಲ್ಲೂ ಮಾಹಿತಿ ಸೋರಿಕೆಯಾಗಿದೆ ಎಂದು ದೊಡ್ಡ ಸುದ್ದಿಯಾಗಿತ್ತು.
ಈ ಬಾರಿ ಸೋರಿಕೆಯಾದ ಮಾಹಿತಿಯಲ್ಲಿ ಭಾರತೀಯ ಫೇಸ್ಬುಕ್ ಬಳಕೆದಾರರ ಮಾಹಿತಿಯೂ ಸೇರಿದೆ ಎಂಬುದು ಕಳವಳದ ಸಂಗತಿಯಾಗಿದೆ. 61 ಲಕ್ಷ ಭಾರತೀಯ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗುತ್ತಿದೆ. ಜತೆಗೆ ಅಫ್ಘಾನಿಸ್ತಾನದ 5.5 ಲಕ್ಷ, ಬಾಂಗ್ಲಾದೇಶದ 38 ಲಕ್ಷ, ಬ್ರೆಜಿಲ್ನ 80 ಲಕ್ಷ, ಆಸ್ಟ್ರೇಲಿಯಾದ 12 ಲಕ್ಷ ಫೇಸ್ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಭಾರತೀಯರ ಪಾಲಿಗೆ ಗಾಬರಿ ಹುಟ್ಟಿಸುವ ವಿಚಾರ ಏನೆಂದರೆ, ಒಂದು ವಾರದ ಹಿಂದಷ್ಟೇ ಗುರುಗ್ರಾಮ ಮೂಲದ ಪೇಮೆಂಟ್ ಆ್ಯಪ್ ಮೊಬಿಕ್ವಿಕ್ನ 10 ಕೋಟಿ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ ಎಂಬ ವಿಷಯ ಹೊರಬಿದ್ದಿತ್ತು.
ಇತ್ತೀಚಿಗಷ್ಟೇ ನಡೆದಿತ್ತು ಆಸ್ಟ್ರೇಲಿಯಾ ಸರ್ಕಾರ- ಫೇಸ್ಬುಕ್ ನಡುವೆ ಕಲಹ ಅತಿದೊಡ್ಡ ಸಾಮಾಜಿಕ ಜಾಲತಾಣವೆನಿಸಿಕೊಂಡಿರುವ ಫೇಸ್ಬುಕ್ ಫೆ.23ರಂದು ತಾಂತ್ರಿಕ ಸಂಸ್ಥೆಗಳು ಸುದ್ದಿ ಬಿತ್ತರಿಸಲು ಹಣ ತೆರುವ ಕುರಿತು ಆಸ್ಟ್ರೇಲಿಯಾದ ಸರ್ಕಾರದೊಂದಿಗೆ ತಾನೊಂದು ಪರಿಷ್ಕೃತ ಕರಾರು ಮಾಡಿಕೊಂಡಿದ್ದು ಆ ದೇಶದಲ್ಲಿ ತನ್ನ ಸೇವೆಯನ್ನು ಪುನರ್ಸ್ಥಾಪಿಸಲು ನಿರ್ಧರಿಸಿರುವುದಾಗಿ ಹೇಳಿದೆ. ಪತ್ರಿಕೋದ್ಯಮ ಕಂಟೆಂಟ್ ನೀಡಲು ಸುದ್ದಿಸಂಸ್ಥೆಗಳಿಗೆ ಸಾಮಾಜಿಕ ಜಾಲತಾಣ ಕಂಪನಿಗಳು ಹಣ ಪಾವತಿಸಬೇಕೆಂಬ ವಿಷಯವು ಕಳೆದ ವಾರ ಚರ್ಚೆಗೆ ಬಂದಿತ್ತು. ಪ್ರಮಾದವಶಾತ್, ಕೊವಿಡ್-19ಕ್ಕೆ ಸಂಬಂಧಿಸಿದ ಎಚ್ಚರಿಕೆಗಳೂ ಸೇರಿದಂತೆ ಸರ್ಕಾರದ ಕೆಲವು ಸುದ್ದಿ ಮತ್ತು ಪ್ರಕಟಣೆಗಳು ನಿರ್ಬಂಧಕ್ಕೊಳಗಾಗಿ ಕೋಲಾಹಲ ಉಂಟಾಗಿತ್ತು.
ಆಸ್ಟ್ರೇಲಿಯಾ ಸರ್ಕಾರದ ಮೈಲಿಗಲ್ಲು ಎನಿಸಿರುವ, ‘ದಿ ಕೋಡ್’ ಅಂತಲೂ ಕರೆಸಿಕೊಳ್ಳುವ ಮಾಧ್ಯಮ ಚೌಕಾಶಿ ಕಾನೂನುಗಳು, ಆ ದೇಶದ ಸಂಸತ್ತಿನಲ್ಲಿ ಇನ್ನೂ ಪಾಸಾಗಬೇಕಿದೆ.
ಆಸ್ಟ್ರೇಲಿಯಾ ಸರ್ಕಾರದ ಕೋಶಾಧಿಕಾರಿಯಾಗಿರುವ ಜೊಷ್ ಫ್ರೈಡೆನ್ಬರ್ಗ್ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕರ್ಬರ್ಗ್ ಅವರೊಂದಿಗೆ ಸುದೀರ್ಘವಾದ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತಾಡುತ್ತಾ, ‘ಫೇಸ್ಬುಕ್ ಸಂಸ್ಥೆಯು ಆಸ್ಟ್ರೇಲಿಯಾದೊಂದಿಗೆ ಪುನಃ ಬಾಂಧವ್ಯ ಬೆಳೆಸಿದೆ. ಫೇಸ್ಬುಕ್ ಪ್ಲಾಟ್ಫಾರ್ಮ್ನಲ್ಲಿ ಆಸ್ಟ್ರೇಲಿಯಾದ ಸುದ್ದಿಗಳನ್ನು ಪುನರ್ಸ್ಥಾಪಿಸಲಾಗುವುದು. ಹಾಗೆಯೇ, ಫೇಸ್ಬುಕ್ ಅಸ್ಟ್ರೇಲಿಯಾದ ಸುದ್ದಿಸಂಸ್ಥೆಗಳೊಂದಿಗೆ ಸೌಹಾರ್ದಯುತ ವಿಚಾರ-ವಿಮರ್ಶೆಗಳನ್ನು ನಡೆಸಲು ಮತ್ತು ಸುದ್ದಿ ವಿಷಯಗಳಿಗೆ ಹಣ ಪಾವತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರಾರುಗಳನ್ನು ಮಾಡಿಕೊಳ್ಳಲು ಬದ್ಧವಾಗಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: Women’s Day 2021: ಮಹಿಳೆಯರೇ ಸುರಕ್ಷಿತವಾಗಿರಲಿ ನಿಮ್ಮ ಫೇಸ್ಬುಕ್, ಇನ್ಸ್ಟಾಗ್ರಾಂ ಖಾತೆ
ಪೈರಸಿ ಮಾಡುತ್ತಿದ್ದ ಅತಿ ದೊಡ್ಡ ಜಾಲ ಅರೆಸ್ಟ್; ಇವರ ತಂತ್ರಜ್ಞಾನ ನೋಡಿ ಪೊಲೀಸರೇ ಕಂಗಾಲು
Published On - 2:31 pm, Sun, 4 April 21



