ಕಲ್ಲಿದ್ದಲು ಹಗರಣದಲ್ಲಿ 900 ಕೋಟಿ ಹಣ ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯನ ಕೈಸೇರಿದೆ: ಸುವೇಂದು ಅಧಿಕಾರಿ ಆರೋಪ
900 ಕೋಟಿಯಷ್ಟು ಬೃಹತ್ ಮೊತ್ತ ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯನ ಕೈಸೇರಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
ಕೊಲ್ಕತ್ತಾ: ಬಹು ಚರ್ಚಿತ ಕಲ್ಲಿದ್ದಲು ಹಗರಣದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಸರ್ಕಾರದ ಕೈವಾಡವಿದೆ. 900 ಕೋಟಿಯಷ್ಟು ಬೃಹತ್ ಮೊತ್ತ ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯನ ಕೈಸೇರಿದೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಆರೋಪಿಸಿದರು. ಈಗಾಗಲೇ ಎರಡು ಹಂತದ ಚುನಾವಣೆ ಮುಗಿಸಿ ಮಿಕ್ಕ ಆರು ಹಂತದ ಚುನಾವಣೆಗೆ ಭರದಿಂದ ಸಿದ್ಧತೆ ನಡೆಸುತ್ತಿರುವ ಪಶ್ಚಿಮ ಬಂಗಾಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದರು.
ಈಮುನ್ನವೂ ಅನೇಕ ಬಾರಿ ಸುವೆಂದು ಅಧಿಕಾರಿ ಸಿಎಂ ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ಸರ್ಕಾರದ ವಿರುದ್ಧ ಟೀಕೆ ನಡೆಸಿದ್ದರು. ‘ನಾನು ತೃಣಮೂಲ ಕಾಂಗ್ರೆಸ್ ಜತೆ ಇದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ’ ಎಂದು ಕೆಲವು ದಿನಗಳ ಹಿಂದೆಯಷ್ಟೇ ಟಿಎಂಸಿ ತೊರೆದು ಬಿಜೆಪಿ ಸೇರಿದ್ದ ಪಶ್ಚಿಮ ಬಂಗಾಳದ ನಾಯಕ ಸುವೇಂದು ಅಧಿಕಾರಿ ಹೇಳಿದ್ದರು
West Bengal CM’s and State government’s involvement in the coal scam has been proved; Rs 900 crores went to the CM’s nephew: BJP leader Suvendu Adhikari, in Kolkata pic.twitter.com/7qKNEplisd
— ANI (@ANI) April 4, 2021
ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಈ ಹಿಂದೆ ಇದ್ದ ಪಕ್ಷದಲ್ಲಿ ಶಿಸ್ತು ಇಲ್ಲ. ಅದು ಪಕ್ಷದಿಂದ ಕಂಪನಿಯಾಗಿ ಬದಲಾಗಿದೆ. 21 ವರ್ಷಗಳ ಕಾಲ ಆ ಪಕ್ಷದೊಂದಿಗೆ ಇದ್ದೆ ಎಂದು ಹೇಳಲು ನಾಚಿಕೆಯಾಗುತ್ತಿದೆ ಎಂದಿದ್ದರು.
ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವ ಬೇಕಿದೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ತ್ಯಾಗದಿಂದಾಗಿಯೇ ನಾವು ಈಗ ಪಶ್ಚಿಮ ಬಂಗಾಳದಲ್ಲಿ ಬದುಕಲು ಸಾಧ್ಯವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಬರಬೇಕು. ಹಾಗಿದ್ದರೆ ಮಾತ್ರ ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಅಭಿವೃದ್ಧಿಯಾಗಬಹುದು. ನಿರುದ್ಯೋಗ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ಹೇಳಿದ್ದರು.
ಈಶ್ವರ್ ಚಂದ್ರ ವಿದ್ಯಾಸಾಗರ್ ಅವರ ನೆಲದಲ್ಲಿ ನಮ್ಮನ್ನು ಸ್ವೀಕರಿಸಿದ್ದಕ್ಕೆ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದಗಳನ್ನರ್ಪಿಸುತ್ತೇನೆ. ಬಿಜೆಪಿ ಜಗತ್ತಿನಲ್ಲಿಯೇ ಅತೀ ದೊಡ್ಡ ಪಕ್ಷವಾಗಿದೆ. ನಾನು ಈಗ ರಾಷ್ಟ್ರೀಯವಾದಿ, ಬಹುತ್ವವಾದಿ, ಶಿಸ್ತು ಮತ್ತು ದೇಶಭಕ್ತಿಯಿರುವ ಪಕ್ಷದ ಸದಸ್ಯನಾಗಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷವನ್ನು ಗೆಲ್ಲಿಸಿ ಸೋನಾರ್ ಬಾಂಗ್ಲಾ (ಸುವರ್ಣ ಬಾಂಗ್ಲಾ) ಮಾಡುವ ಹೊಣೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟಿದ್ದರು.
ವ್ಯಕ್ತಿ-ವ್ಯಕ್ತಿತ್ವ: ಟಿಎಂಸಿಯಲ್ಲಿ ಬೆಳೆದ ಸುವೇಂದು ಅಧಿಕಾರಿ ಈಗ ಬಿಜೆಪಿಯ ದೊಡ್ಡ ಅಸ್ತ್ರ