ನವದೆಹಲಿ, ಆಗಸ್ಟ್ 29: ಎಲ್ಪಿಜಿ ಸಿಲಿಂಡರ್ಗಳ ಬೆಲೆ 200 ರೂನಷ್ಟು ಕಡಿಮೆ ಆಗಲಿದೆ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ (LPG Cylinder Price) 200 ರೂನಷ್ಟು ಸಬ್ಸಿಡಿ ಒದಗಿಸಲು ಕೇಂದ್ರ ಸಂಪುಟ (Union Cabinet) ಇಂದು ಅನುಮೋದನೆ ನೀಡಿದೆ. ಸದ್ಯ 14 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,100 ರೂ ಅಸುಪಾಸಿನಲ್ಲಿ ಇದೆ. ಇದರ ಬೆಲೆ ಸಾವಿರ ರೂ ಒಳಗೆ ಇರಲಿದೆ ಎನ್ನಲಾಗಿದೆ. ಪಿಎಂ ಉಜ್ವಲ ಯೋಜನೆಯ (PM Ujjwal Yojana) ಫಲಾನುಭವಿಗಳಿಗೆ ಸಬ್ಸಿಡಿ ರೂಪದಲ್ಲಿ ಬೆಲೆ ಇಳಿಕೆ ಸೌಲಭ್ಯ ಸಿಗಲಿದೆ. ಗ್ಯಾಸ್ ಬೆಲೆ ಕಡಿಮೆ ಆಗಿರುವ ಬಗ್ಗೆ ತೈಲ ಮಾರುಕಟ್ಟೆ ಕಂಪನಿಗಳು ಶೀಘ್ರದಲ್ಲೇ ಅಧಿಕೃತವಾಗಿ ಘೋಷಿಸುವ ಸಾಧ್ಯತೆ ಇದೆ.
ಟೈಮ್ಸ್ ಆಫ್ ಇಂಡಿಯಾದಲ್ಲಿ ಬಂದಿರುವ ವರದಿ ಪ್ರಕಾರ ಉಜ್ವಲ ಯೋಜನೆ ಅಡಿ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗೆ 200 ರೂ ಹೆಚ್ಚುವರಿ ಸಬ್ಸಿಡಿ ನೀಡಲಾಗುತ್ತಿದೆ. ಇದರೊಂದಿಗೆ, ಈ ಸ್ಕೀಮ್ನಲ್ಲಿ 14 ಕಿಲೋ ಎಲ್ಪಿಜಿ ಸಿಲಿಂಡರ್ಗೆ ನೀಡಲಾಗುವ ಒಟ್ಟು ಸಬ್ಸಿಡಿ 400 ರೂ ಆಗುತ್ತದೆ.
ಸಬ್ಸಿಡಿರಹಿತ 14 ಕಿಲೋ ಎಲ್ಪಿಜಿ ಸಿಲಿಂಡರ್ ದರ ಬೆಂಗಳೂರಿನಲ್ಲಿ 1,105.50 ರೂ ಇದೆ. ಕೋಲ್ಕತಾದಲ್ಲಿ 1,118.50 ರೂ ಇದೆ. ಚೆನ್ನೈನಲ್ಲಿ 1,102.50 ರೂ ಇದೆ.
ಮೇ ತಿಂಗಳಿಂದೀಚೆ ಐಒಸಿ, ಭಾರತ್ ಪೆಟ್ರೋಲಿಯಂ ಮೊದಲಾದ ತೈಲ ಮಾರುಕಟ್ಟೆ ಕಂಪನಿಗಳು ಮೂರು ಬಾರಿ ಎಲ್ಪಿಜಿ ದರಗಳನ್ನು ಏರಿಸಿವೆ. ಜುಲೈ ತಿಂಗಳಲ್ಲಿ 50 ರೂ ಹೆಚ್ಚಳವಾಗಿತ್ತು. ಈಗ ಉಜ್ವಲ ಸ್ಕೀಮ್ ಅಡಿಯಲ್ಲಿ ಸರ್ಕಾರ 200 ರೂ ಸಬ್ಸಿಡಿ ಘೋಷಿಸಿದೆ.
ಇದನ್ನೂ ಓದಿ: ಮೂರು ದೊಡ್ಡ ಸ್ಟಾರ್ಟಪ್ಗಳ ಮಾಲೀಕ ಸುಪಮ್ ಮಹೇಶ್ವರಿ ಮೇಲೆ ತೆರಿಗೆಗಳ್ಳತನ ಆರೋಪ; ಐಟಿಯಿಂದ ನೋಟೀಸ್
ಕೇಂದ್ರ ಸಂಪುಟ ಸಭೆ ಬಳಿಕ ಸಚಿವ ಅನುರಾಗ್ ಠಾಕೂರ್ ಅವರು ಪಿಎಂ ಉಜ್ವಲ ಸ್ಕೀಮ್ ಅಡಿಯಲ್ಲಿ ಅಡುಗೆ ಅನಿಲ ಸಿಲಿಂಡರ್ಗಳ ಬೆಲೆಯನ್ನು 200 ರೂನಷ್ಟು ಇಳಿಕೆ ಮಾಡಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಸರ್ಕಾರದ ಈ ಸಬ್ಸಿಡಿ ನಿರ್ಧಾರದಿಂದ ಒಂದು ವರ್ಷದಲ್ಲಿ ಸುಮಾರು 7,500 ಕೋಟಿ ರೂ ಹೊರೆಯಾಗುವ ನಿರೀಕ್ಷೆ ಇದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆ 2016ರಲ್ಲಿ ಶುರುವಾಗಿದ್ದು, ಬಡತನ ರೇಖೆಯಿಂದ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಎಲ್ಪಿಜಿ ಕನೆಕ್ಷನ್ ಕೊಡುವ ಉದ್ದೇಶ ಹೊಂದಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು ಇದರ ಫಲಾನುಭವಿಗಳಾಗಬಹುದು. 5 ಕೋಟಿ ಎಲ್ಪಿಜಿ ಸಂಪರ್ಕ ಕೊಡುವ ಗುರಿ ಇಡಲಾಗಿದೆ.
ಭಾರತದಲ್ಲಿ ನಗರ ಪ್ರದೇಶಗಳಲ್ಲಿ ಬಹುತೇಕ ಮನೆಗಳಲ್ಲಿ ಎಲ್ಪಿಜಿ ಸಿಲಿಂಡರ್ ಬಳಕೆ ಆಗುತ್ತದೆ. ಕರ್ನಾಟಕ, ದೆಹಲಿ, ಗೋವಾ, ತೆಲಂಗಾಣ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಶೇ. 90ಕ್ಕಿಂತ ಹೆಚ್ಚು ಮನೆಗಳು ಅಡುಗೆಗೆ ಎಲ್ಪಿಜಿ ಬಳಸುವುದುಂಟು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Tue, 29 August 23