ದೆಹಲಿ: ಗಣೇಶನ ಹಬ್ಬ ಈ ಸಲ ಚೆನ್ನಾಗಿ ಬಂದಿದೆ. ವಿನಾಯಕ ಚತುರ್ಥಿಯಂದೇ ಬಿಡುಗಡೆಯಾದ ಆಂಕಿಅಂಶಗಳು ಭಾರತದ ಜಿಡಿಪಿಯ ಬಗ್ಗೆ ಶುಭಸುದ್ದಿ ಕೊಟ್ಟಿದೆ. ಹಬ್ಬದ ಮಾರನೇ ದಿನ, ಅಂದರೆ ಗುರುವಾರ (ಸೆಪ್ಟೆಂಬರ್ 1) 19 ಕೆಜಿ ತೂಕದ ಅಡುಗೆ ಅನಿಲದ ವಾಣಿಜ್ಯ ಸಿಲಿಂಡರ್ಗಳ (Commercial Liquified Petroleum Gas – LPG) ಬೆಲೆ ಇಳಿಸುವ ನಿರ್ಧಾರ ಹೊರಬಿದ್ದಿದೆ. ವಾಣಿಜ್ಯ ಸಿಲಿಂಡರ್ ಬೆಲೆಯು ₹ 100ರಷ್ಟು ಕಡಿಮೆಯಾಗಿದೆ. ಆದರೆ ಗೃಹಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.
ದೆಹಲಿಯಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯು ₹ 91.50ರಷ್ಟು ಕಡಿಮೆಯಾಗಿದ್ದು, ₹ 1,885ಕ್ಕೆ ಮಾರಾಟವಾಗುತ್ತಿದೆ. ಮೊದಲು ಇದು ₹ 1,976.50 ಇತ್ತು. ಕಲ್ಕತ್ತಾದಲ್ಲಿ ಸಿಲಿಂಡರ್ ಬೆಲೆಯು ₹ 100 ಕಡಿಮೆಯಾಗಿದೆ. ಪ್ರಸ್ತುತ ₹ 1,995.50ಕ್ಕೆ ಮಾರಾಟವಾಗುತ್ತಿದೆ. ಚೆನ್ನೈನಲ್ಲಿ ₹ 96 ಕಡಿಮೆಯಾಗಿದ್ದು, ₹ 2,045ಕ್ಕೆ ಮಾರಾಟವಾಗುತ್ತಿದೆ. ಬೆಂಗಳೂರಿನಲ್ಲಿ ಪ್ರಸ್ತುತ ₹ 1,685ಕ್ಕೆ ಸಿಲಿಂಡರ್ ಮಾರಾಟವಾಗುತ್ತಿದೆ ಎಂದು ತೈಲ ಮಾರಾಟ ಕಂಪನಿಗಳ ವೆಬ್ಸೈಟ್ಗಳ ಮಾಹಿತಿ ತಿಳಿಸುತ್ತದೆ.
ಪ್ರತಿ ತಿಂಗಳ ಮೊದಲ ದಿನ ಕೆಲ ನಿಯಮಗಳಲ್ಲಿ ಮಾರ್ಪಾಡಾಗುವುದು ವಾಡಿಕೆ. ಎಲ್ಪಿಜಿ ಮತ್ತು ಇಂಧನ ದರಗಳ ಪರಿಷ್ಕರಣೆಯನ್ನೂ ತಿಂಗಳ ಮೊದಲ ದಿನದಿಂದಲೇ ಜಾರಿಗೆ ತರಲಾಗುತ್ತಿದೆ. ಆಗಸ್ಟ್ 1ರಂದು ವಾಣಿಜ್ಯ ಸಿಲಿಂಡರ್ ಬೆಲೆಯನ್ನು ₹ 36ರಷ್ಟು ಕಡಿಮೆ ಮಾಡಲಾಗಿತ್ತು. ಕಳೆದ ತಿಂಗಳೂ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಪರಿಷ್ಕರಣೆ ಆಗಿರಲಿಲ್ಲ.
ಇದು ವಾಣಿಜ್ಯ ಸಿಲಿಂಡರ್ ಬೆಲೆಗಳಲ್ಲಿ ಸತತ 5ನೇ ಕಡಿತವಾಗಿದೆ. ಜುಲೈ 6ರಂದು ₹ 50ರಷ್ಟು ಬೆಲೆ ಹೆಚ್ಚಿಸಲಾಗಿತ್ತು. ನಂತರದ ದಿನಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ಗಳ ಬೆಲೆ ಹೆಚ್ಚಾಗಿರಲಿಲ್ಲ.
Published On - 9:50 am, Thu, 1 September 22