ಫೇಸ್ಬುಕ್ ಮಾಲೀಕತ್ವದ ವಾಟ್ಸಾಪ್ನಿಂದ ಅಮೆಜಾನ್ ಪೇ ಅಧಿಕಾರಿ ಮನೇಶ್ ಮಹಾತ್ಮೆ ಅವರನ್ನು ಭಾರತದಲ್ಲಿ ಹೆಡ್ ಆಫ್ ಪೇಮೆಂಟ್ಸ್ (ಪಾವತಿ ವಿಭಾಗದ ಮುಖ್ಯಸ್ಥ) ಆಗಿ ನೇಮಿಸಲಾಗಿದೆ. ಬಳಕೆದಾರರಿಗೆ ಪಾವತಿ ಅನುಭವದ ವಿಸ್ತರಣೆಗಾಗಿ ಮಹಾತ್ಮೆ ಗಮನ ಹರಿಸಲಿದ್ದಾರೆ. ಜತೆಗೆ ದೇಶದಲ್ಲಿ ಒದಗಿಸುತ್ತಿರುವ ಸೇವೆಯ ವ್ಯಾಪ್ತಿ ಜಾಸ್ತಿ ಮಾಡುವತ್ತಲೂ ಶ್ರಮಿಸುತ್ತಾರೆ ಎಂದು ಜೂನ್ 28ರಂದು ಕಂಪೆನಿಯಿಂದ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಮಹಾತ್ಮೆ ಅವರು ಏಳು ವರ್ಷಗಳ ಕಾಲ ಅಮೆಜಾನ್ ಪೇನಲ್ಲಿ ಕಾರ್ಯ ನಿರ್ವಹಿಸಿದ್ದರು. ಅಮೆಜಾನ್ ಪೇ ಇಂಡಿಯಾ ನಿರ್ದೇಶಕ ಮತ್ತು ಮಂಡಳಿ ಸದಸ್ಯರಾಗಿದ್ದರು. ಹಾಗೂ ಪ್ರಾಡಕ್ಟ್, ಎಂಜಿನಿಯರಿಂಗ್ ಮತ್ತು ಬೆಳವಣಿಗೆ ತಂಡವನ್ನು ಮುನ್ನಡೆಸಿದ್ದರು. ಅಮೆಜಾನ್ ಇಂಡಿಯಾದ ಮಾರ್ಕೆಟ್ಪ್ಲೇಸ್ ಉದ್ಯಮದ ಪ್ಲಾಟ್ಫಾರ್ಮ್ ಮತ್ತು ಪಾವತಿ ಅನುಭವ ರೂಪಿಸುವ ಹಾಗೂ ವಿಸ್ತರಿಸುವಲ್ಲಿ ಪ್ರಮುಖವಾಗಿ ಕಾರ್ಯ ನಿರ್ವಹಿಸಿದವರು.
ಸಿಟಿಬ್ಯಾಂಕ್, ಏರ್ಟೆಲ್ ಮನಿ ಹಾಗೂ ಅಮೆಜಾನ್ ಒಳಗೊಂಡಂತೆ ಡಿಜಿಟಲ್ ಫೈನಾನ್ಷಿಯಲ್ ಸರ್ವೀಸ್ ಮತ್ತು ಪೇಮೆಂಟ್ಸ್ನಲ್ಲಿ 17 ವರ್ಷದ ಕಾರ್ಯಾನುಭವ ಹೊಂದಿದ್ದಾರೆ ಮಹಾತ್ಮೆ. BITS, ಪಿಳಾನಿ (ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್) ಪದವೀಧರರು ಹಾಗೂ ಮುಂಬೈನ ಎಸ್ಪಿ ಜೈನ್ನಲ್ಲಿ ಮ್ಯಾನೇಜ್ಮೆಂಟ್ ಕೋರ್ಸ್ ಮುಗಿಸಿದ್ದಾರೆ. “ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಡಿಜಿಟಲ್ ಪಾವತಿಗಳ ಬೆಳವಣಿಗೆಯಲ್ಲಿ ಮನೇಶ್ ಅವರು ಪ್ರಮುಖ ಅನ್ವೇಷಕರಲ್ಲಿ ಒಬ್ಬರು. ಅವರ ಅನುಭವದ ಮೂಲಕ ವಾಟ್ಸಾಪ್ನ ಪಾವತಿಯಲ್ಲಿ ಗರಿಷ್ಠ ಪರಿಣಾಮ ಬೀರಲು ಹಾಗೂ ವ್ಯಾಪ್ತಿ ವಿಸ್ತರಣೆಗೆ ನೆರವಾಗುತ್ತದೆ. ಎಲ್ಲ ಸೆಗ್ಮೆಂಟ್ಗಳ ಜನರನ್ನು ಡಿಜಿಟಲ್ ಆಗಿ ಸಶಕ್ತಗೊಳಿಸಲು ವಾಟ್ಸಾಪ್ಗೆ ಅಪಾರ ಸಾಮರ್ಥ್ಯ ಇದೆ ಮತ್ತು ಸರ್ಕಾರವು ಯುಪಿಐ ಹಾಗೂ ಡಿಜಿಟಲ್ ಪಾವತಿ ಮೂಲಕ ಎಲ್ಲರನ್ನೂ ಹಣಕಾಸು ಒಳಗೊಳ್ಳುವಿಕೆಗೆ ಶ್ರಮಿಸುತ್ತಿರುವುದಕ್ಕೆ ವೇಗ ದೊರಕಿಸಲು ಸಹಾಯ ಮಾಡುತ್ತದೆ,” ಎಂದು ವಾಟ್ಸಾಪ್ ಇಂಡಿಯಾದ ಮುಖ್ಯಸ್ಥ ಅಭಿಜಿತ್ ಬೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಾಟ್ಸಾಪ್ನಲ್ಲಿ ಪಾವತಿಯು ವಿಶಿಷ್ಟ ಸಹಭಾಗಿ ಆಗಲಿದೆ. ದೇಶದ ಬೆಳವಣಿಗೆ ಕಾರ್ಯಸೂಚಿಯನ್ನು ಗಮನದಲ್ಲಿ ಇರಿಸಿಕೊಂಡು ಭಾರತದ ಉದ್ದಗಲಕ್ಕೂ ಜನರಿಗೆ ಡಿಜಿಟಲ್ ಪೇಮೆಂಟ್ಸ್ ದೊರೆಯುವಂತೆ ಮಾಡಲು ಮಹತ್ವದ ಸಹಭಾಗಿ ಆಗಿದೆ. ಈ ಬೆಳವಣಿಗೆ ಗಾಥೆಯಲ್ಲಿ ನಾನೂ ಕೂಡ ಭಾಗಿ ಆಗಿರುವುದು ವಿಪರೀತ ಸಂತೋಷ ತಂದಿದೆ ಎಂದು ಮಹಾತ್ಮೆ ಹೇಳಿದ್ದಾರೆ.
ಇದನ್ನೂ ಓದಿ: How to book gas cylinder: ವಾಟ್ಸಾಪ್ ಮೂಲಕ ಇಂಡೇನ್, ಎಚ್ಪಿ, ಭಾರತ್ ಗ್ಯಾಸ್ ಸಿಲಿಂಡರ್ ಬುಕ್ಕಿಂಗ್ ಹೇಗೆ?
(Manesh Mahatme appointed as Chief to Facebook owned WhatsApp pay India. He was with Amazon pay as executive)
Published On - 11:24 am, Tue, 29 June 21