ನವದೆಹಲಿ: ಕಂಪನಿಗಳ ಆರ್ಥಿಕ ಬೆಳವಣಿಗೆಯಲ್ಲಿ ಮುಂದಿನ ದಿನಗಳಲ್ಲಿ ಕುಸಿತವಾಗುವ ಸಾಧ್ಯತೆ ಇದ್ದು, 2023ರಲ್ಲಿ ಭಾರತದಲ್ಲಿ ಆರ್ಥಿಕ ಹಿಂಜರಿತ (Recession) ಕಂಡುಬರಬಹುದು ಎಂದು ಹಲವು ಕಂಪನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEOs) ಅಭಿಪ್ರಾಯಪಟ್ಟಿದ್ದಾರೆ. ಆದರೆ ಇದು ಅಲ್ಪಾವಧಿಯದ್ದಾಗಿರಲಿದೆ. ಕೆಲವು ಸಮಯದಲ್ಲಿ ಮತ್ತೆ ಚೇತರಿಕೆ ಕಾಣಿಸುವ ನಿರೀಕ್ಷೆ ಇದೆ ಎಂದು ‘ಕೆಪಿಎಂಜಿ 2022’ರ (KPMG – ಇದು ಆಡಿಟ್, ತೆರಿಗೆ ಮತ್ತು ಸಲಹಾ ಸೇವೆಗಳನ್ನು ಒದಗಿಸುವ ವೃತ್ತಿಪರ ಸಂಸ್ಥೆಗಳ ಜಾಗತಿಕ ಜಾಲವಾಗಿದೆ) ವರದಿಯಲ್ಲಿ ಭಾರತೀಯ ಸಿಇಒಗಳು ಹೇಳಿದ್ದಾರೆ.
ಆರ್ಥಿಕ ಹಿಂಜರಿತವು ಕಂಪನಿಗಳ ಗಳಿಕೆಯ ಮೇಲೆ ಮುಂದಿನ 12 ತಿಂಗಳ ಅವಧಿಯಲ್ಲಿ ಶೇಕಡಾ 10ರಷ್ಟು ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಜಾಗತಿಕವಾಗಿ ಶೇಕಡಾ 71ರಷ್ಟು ಸಿಇಒಗಳು ಹಾಗೂ ಭಾರತದ ಶೇಕಡಾ 86ರಷ್ಟು ಸಿಇಒಗಳು ಹೇಳಿದ್ದಾರೆ. ಇದರಿಂದಾಗಿ ವಿವಿಧ ಕಂಪನಿಗಳಲ್ಲಿ ಉದ್ಯೋಗ ಕಡಿತದ ಸಾಧ್ಯತೆಯೂ ಇದೆ ಎಂದು ‘ಬ್ಯುಸಿನೆಸ್ ಸ್ಟಾಂಡರ್ಡ್’ ವರದಿ ಮಾಡಿದೆ. ಲಾಭಾಂಶ ಕಡಿಮೆಯಾಗುವುದು, ನಿರ್ವಹಣಾ ವೆಚ್ಚದಲ್ಲಿ ಹೆಚ್ಚಳ, ಉತ್ಪಾದನೆ ಹೆಚ್ಚಿಸುವ ಸವಾಲುಗಳನ್ನು ಕಂಪನಿಗಳು ಎದುರಿಸಬೇಕಾಗಲಿದ್ದು, ನೇಮಕಾತಿ ಪ್ರಕ್ರಿಯೆಯಲ್ಲಿ ಕಡಿತವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಜಾಗತಿಕ ಸಿಇಒಗಳಿಗೆ ಹೋಲಿಸಿದರೆ ಭಾರತದ ಅರ್ಧದಷ್ಟು ಮಂದಿ ನಿರೀಕ್ಷಿತ ಆರ್ಥಿಕ ಹಿಂಜರಿತಕ್ಕೆ ಸಿದ್ಧವಾಗುವುದಕ್ಕಾಗಿ ಡಿಜಿಟಲ್ ರೂಪಾಂತರ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
2007 ಮತ್ತು 2009 ರ ನಡುವೆ ಸಂಭವಿಸಿದ ಆರ್ಥಿಕ ಹಿಂಜರಿತದಂತೆಯೇ ಈ ಬಾರಿಯೂ ಆಗುವ ಮುನ್ಸೂಚನೆ ಇದೆ. ಇದು ಎಲ್ಲ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದ್ದು ಇದು ಕೆಲವು ತಿಂಗಳುಗಳಿಗಿಂತ ಹೆಚ್ಚು ಕಾಲ ಇರಲಿದೆ ಎಂದು ‘ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರಿಸರ್ಚ್’ ಇತ್ತೀಚೆಗೆ ಹೇಳಿತ್ತು. ಈ ಆರ್ಥಿಕ ಹಿಂಜರಿತವು ಹೆಚ್ಚಿನ ವಜಾ, ನಿರುದ್ಯೋಗ ಪ್ರಮಾಣದ ಏರಿಕೆ, ಕಡಿಮೆ ಉದ್ಯೋಗಗಳು ಮತ್ತು ಹೆಚ್ಚಿನ ಬಡ್ಡಿದರಗಳಿಗೆ ಕಾರಣವಾಗಬಹುದು ಎಂದು ಸಂಸ್ಥೆ ಹೇಳಿತ್ತು. 10 ಅಮೆರಿಕನ್ನರಲ್ಲಿ ಏಳು ಮಂದಿ ಆರ್ಥಿಕ ಹಿಂಜರಿತದತ್ತ ಸಾಗುವ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ ಸಕಾರಾತ್ಮಕ ಟಿಪ್ಪಣಿಯಲ್ಲಿ, 74 ಪ್ರತಿಶತದಷ್ಟು ಜನರು ಆರ್ಥಿಕ ಕುಸಿತಕ್ಕೆ ತಯಾರಿ ಮಾಡಲು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಬ್ಯಾಂಕ್ರೇಟ್ ಸಮೀಕ್ಷೆ ತಿಳಿಸಿತ್ತು.