
ಮುಂಬೈ, ಮೇ 6: ಭಾರತೀಯ ರಿಸರ್ವ್ ಬ್ಯಾಂಕ್ (RBI) ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಬಲಪಡಿಸಲು ಮತ್ತು ಸಾಲದ ಅಪಾಯಗಳನ್ನು ಮುಂಚಿತವಾಗಿಯೇ ನಿರ್ವಹಿಸಲು ಅನುತ್ಪಾದಕ ಆಸ್ತಿ (Bad Loans/NPA) ವರ್ಗೀಕರಣ ಹಾಗೂ ಪ್ರಾವಿಷನಿಂಗ್ (Provisions) ನಿಯಮಗಳಲ್ಲಿ ಭಾರಿ ಬದಲಾವಣೆಗಳನ್ನು ತಂದಿದೆ. ಆರ್‌ಬಿಐ ಬಿಡುಗಡೆ ಮಾಡಿರುವ ಹೊಸ ನಿರ್ದೇಶನಗಳು (Master Directions) ಬ್ಯಾಂಕುಗಳು ಹಾಗೂ ಸಾಲ ಪಡೆದ ಗ್ರಾಹಕರ ಮೇಲೆ ನೇರ ಪರಿಣಾಮ ಬೀರಲಿವೆ. ಈ ಹೊಸ ನಿಯಮಗಳು ಏಪ್ರಿಲ್ 1, 2027 ರಿಂದ ಜಾರಿಗೆ ಬರಲಿದ್ದು, ಬ್ಯಾಂಕುಗಳು ಮತ್ತು ಸಾಲಗಾರರು ತಿಳಿದುಕೊಳ್ಳಬೇಕಾದ 5 ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
ಹೊಸ ನಿಯಮಗಳ ಪ್ರಕಾರ, ಒಬ್ಬನೇ ಸಾಲಗಾರ (Borrower) ಒಂದು ಬ್ಯಾಂಕಿನಲ್ಲಿ ಒಂದಕ್ಕಿಂತ ಹೆಚ್ಚು ಸಾಲಗಳನ್ನು (ಉದಾಹರಣೆಗೆ: ಬಿಸಿನೆಸ್ ಲೋನ್, ಹೋಮ್ ಲೋನ್ ಮತ್ತು ಕಾರ್ ಲೋನ್) ಪಡೆದಿದ್ದು, ಅದರಲ್ಲಿ ಯಾವುದಾದರೂ ಒಂದು ಲೋನ್ ಅಕೌಂಟ್ ನಿಗದಿತ 90 ದಿನಗಳ ಅವಧಿಯಲ್ಲಿ ಮರುಪಾವತಿಯಾಗದೆ NPA ಎಂದು ಘೋಷಿಸಲ್ಪಟ್ಟರೆ, ಆತನ ಉಳಿದೆಲ್ಲಾ ಸಾಲದ ಖಾತೆಗಳನ್ನೂ ಬ್ಯಾಂಕುಗಳು ಸ್ವಯಂಚಾಲಿತವಾಗಿ NPA ಎಂದೇ ಪರಿಗಣಿಸಬೇಕಾಗುತ್ತದೆ. ಸಾಲಗಾರರನ್ನು ಹೆಚ್ಚು ಶಿಸ್ತುಬದ್ಧಗೊಳಿಸಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಕಾಗ್ನಿಜೆಂಟ್ನಲ್ಲಿ 15,000 ಮಂದಿ ಲೇ ಆಫ್ ಸಾಧ್ಯತೆ; ಫ್ರೆಷ್ವರ್ಕ್ಸ್ನಲ್ಲಿ ಶೇ. 11 ಮಂದಿಗೆ ಕಾದಿದೆ ಶಾಕ್
ಇಲ್ಲಿಯವರೆಗೆ ಬ್ಯಾಂಕುಗಳು ಸಾಲಗಾರರು ಸುಸ್ತಿ (Default) ಮಾಡಿದ 90 ದಿನಗಳ ನಂತರವಷ್ಟೇ ಆ ನಷ್ಟವನ್ನು ಭರಿಸಲು ಹಣವನ್ನು ಪಕ್ಕಕ್ಕೆ ಎತ್ತಿಡುತ್ತಿದ್ದವು (Incurred Loss Method). ಆದರೆ ಈಗ ಆರ್‌ಬಿಐ ‘ಎಕ್ಸ್‌ಪೆಕ್ಟೆಡ್ ಕ್ರೆಡಿಟ್ ಲಾಸ್’ (ECL) ಎಂಬ ಮುನ್ಸೂಚನಾ ಮಾದರಿಯನ್ನು ಕಡ್ಡಾಯಗೊಳಿಸಿದೆ. ಇದರ ಅಡಿಯಲ್ಲಿ, ಬ್ಯಾಂಕುಗಳು ಗಣಿತದ ಮಾದರಿಗಳನ್ನು (Mathematical model) ಬಳಸಿ ಗ್ರಾಹಕರು ಭವಿಷ್ಯದಲ್ಲಿ ಸಾಲ ಸುಸ್ತಿ ಮಾಡಬಹುದಾದ ಅಪಾಯವನ್ನು ಮುಂಚಿತವಾಗಿಯೇ ಊಹಿಸಿ, ಅದಕ್ಕೆ ತಕ್ಕಂತೆ ಹಣವನ್ನು ಕಾಯ್ದಿರಿಸಬೇಕಾಗುತ್ತದೆ (Provisioning).
ಲೋನ್ ಪ್ರಾವಿಷನಿಂಗ್ ನಿಯಮಗಳನ್ನು ಕಠಿಣಗೊಳಿಸಿದ್ದರೂ, ಸುರಕ್ಷಿತ ಸಾಲಗಳಿಗೆ ಆರ್‌ಬಿಐ ಸಲ್ಪ ಸಮಾಧಾನಕರ ನಿಯಮ ತಂದಿದೆ. ನಗದು (Cash), ಚಿನ್ನ (Gold) ಅಥವಾ ಸರ್ಕಾರಿ ಸೆಕ್ಯೂರಿಟಿಗಳಂತಹ ಬಲವಾದ ಮತ್ತು ಸುಲಭವಾಗಿ ನಗದೀಕರಿಸಬಹುದಾದ ಭದ್ರತೆಗಳನ್ನು (Collateral) ನೀಡಿ ಪಡೆದಿರುವ ಸಾಲಗಳ ಮೇಲೆ ಬ್ಯಾಂಕುಗಳು ಕಡಿಮೆ ಮೊತ್ತದ ಹಣವನ್ನು ಕಾಯ್ದಿರಿಸಿದರೆ ಸಾಕಾಗುತ್ತದೆ. ಇದರಿಂದಾಗಿ ಇಂತಹ ಸಾಲಗಳ ಮೇಲಿನ ಬ್ಯಾಂಕುಗಳ ವೆಚ್ಚ ಕಡಿಮೆಯಾಗಲಿದೆ.
ಒಮ್ಮೆ ಸಾಲಗಾರನ ಖಾತೆಯು NPA ಎಂದು ವರ್ಗೀಕರಿಸಲ್ಪಟ್ಟರೆ, ಅದನ್ನು ಮತ್ತೆ ಮೊದಲಿನಂತೆ ಸಾಮಾನ್ಯ ಅಥವಾ ‘ಸ್ಟ್ಯಾಂಡರ್ಡ್ ಅಸೆಟ್’ (Standard Asset) ಎಂದು ಪರಿಗಣಿಸಬೇಕಾದರೆ, ಸಾಲಗಾರನು ಆ ಬ್ಯಾಂಕಿನಲ್ಲಿ ತನಗಿರುವ ಎಲ್ಲಾ ಸಾಲದ ಖಾತೆಗಳ ಸಂಪೂರ್ಣ ಅಸಲು ಮತ್ತು ಬಡ್ಡಿಯ ಬಾಕಿ ಮೊತ್ತವನ್ನು (Entire Arrears) ಪೂರ್ತಿಯಾಗಿ ಪಾವತಿಸಬೇಕಾಗುತ್ತದೆ. ಭಾಗಶಃ ಪಾವತಿಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.
ಇದನ್ನೂ ಓದಿ: ಅನುವಾದಿನಿ ಎಐ ಮ್ಯಾಥ್ಜೋರೋ ಮ್ಯಾಜಿಕ್; ಕುಣಿಕುಣಿಯುತಾ ಕಲಿಯಿರಿ ಗಣಿತ; 22 ಭಾಷೆಗಳಲ್ಲಿ ನಲಿ-ಕಲಿ
ಬ್ಯಾಂಕುಗಳು ತಮಗೆ ಇಷ್ಟಬಂದಂತೆ ಅಥವಾ ಮ್ಯಾನುಯಲ್ ಆಗಿ ಸಾಲಗಳನ್ನು NPA ಎಂದು ಗುರುತಿಸುವುದನ್ನು ತಡೆಯಲು ಆರ್‌ಬಿಐ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಎಲ್ಲಾ ಬ್ಯಾಂಕುಗಳು ತಮ್ಮ ಐಟಿ ವ್ಯವಸ್ಥೆಯಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು (Automated System) ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದು ಸಾಲದ ಮರುಪಾವತಿ ತಪ್ಪಿದ ತಕ್ಷಣ ಯಾವುದೇ ಹಸ್ತಕ್ಷೇಪವಿಲ್ಲದೆ ರಿಸ್ಕ್ ಅನ್ನು ಪತ್ತೆ ಮಾಡುತ್ತದೆ.
ಹೊಸ ಸಾಲಗಳಿಗೆ ಈ ನಿಯಮಗಳು ಏಪ್ರಿಲ್ 1, 2027 ರಿಂದ ಅನ್ವಯವಾಗಲಿದ್ದು, ಬ್ಯಾಂಕುಗಳು ತಮ್ಮ ಹಳೆಯ ಸಾಲಗಳನ್ನು (Legacy Loans) ಈ ಹೊಸ ಬಡ್ಡಿ ಮತ್ತು ನಷ್ಟ ಲೆಕ್ಕಾಚಾರದ ಮಾದರಿಗೆ ಬದಲಾಯಿಸಲು ಮಾರ್ಚ್ 31, 2030 ರವರೆಗೆ ಕಾಲಾವಕಾಶ ನೀಡಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ