Illicit Relationship: ಮಹಿಳೆಯೊಂದಿಗೆ ಅನೈತಿಕ ಸಂಬಂಧ; ಎನ್ಬಿಸಿ ಯೂನಿವರ್ಸಲ್ ಸಂಸ್ಥೆಯಿಂದ ಸಿಇಒ ಹೊರಕ್ಕೆ
NBCUniversal CEO Jeff Shell Ousted: ವಿಶ್ವದ ಮಾಧ್ಯಮ ದೈತ್ಯ ಸಂಸ್ತೆ ಎನ್ಬಿಸಿ ಯೂನಿವರ್ಸಲ್ನ ಸಿಇಒ ಜೆಫ್ ಶೆಲ್ ಹೊರನಡೆದಿದ್ದಾರೆ. ಕಂಪನಿಯೊಳಗೆ ಮಹಿಳೆಯೊಬ್ಬಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡ ಆರೋಪ ಎದುರಾದ್ದರಿಂದ ಶೆಲ್ ನಿರ್ಗಮನಕ್ಕೆ ಕಾರಣ.
ನವದೆಹಲಿ: ಜಾಗತಿಕ ಮಾಧ್ಯಮ ದೈತ್ಯ ಸಂಸ್ಥೆ ಎನಿಸಿದ ಅಮೆರಿಕದ ಎನ್ಬಿಸಿ ಯೂನಿವರ್ಸಲ್ನಲ್ಲಿ (NBCUniversal) ಎದ್ದಿದ್ದ ಲೈಂಗಿಕ ಹಗರಣ ಇದೀಗ ಸಿಇಒ ತಲೆದಂಡದ ಹಂತಕ್ಕೆ ಮುಟ್ಟಿದೆ. ಮಹಿಳಾ ಉದ್ಯೋಗಿಯೊಂದಿಗೆ ಅನೈತಿಕ ಸಂಬಂಧ (Inappropriate Relationship With Woman) ಹೊಂದಿರುವ ಆರೋಪ ಎದುರಾದ ಹಿನ್ನೆಲೆಯಲ್ಲಿ ಎನ್ಬಿಸಿ ಯೂನಿವರ್ಸಲ್ ಕಂಪನಿಯ ಸಿಇಒ ಜೆಫ್ ಶೆಲ್ (Jeff Shell) ಹೊರನಡೆಯುತ್ತಿದ್ದಾರೆ. ಜೆಫ್ ಶೆಲ್ ಎನ್ಬಿಸಿ ಯೂನಿವರ್ಸಲ್ ಸಂಸ್ಥೆಯಿಂದಲೇ ನಿರ್ಗಮಿಸುತ್ತಿರುವ ಸಂಗತಿಯನ್ನು ಅದರ ಮಾಲಕ ಸಂಸ್ಥೆ ಕಾಮ್ಕ್ಯಾಸ್ಟ್ (Comcast) ತಿಳಿಸಿದೆ. ಜೆಫ್ ಶೆಲ್ ಕೂಡ ಈ ಸಂಸ್ಥೆಯಲ್ಲಿ ಇಂದು ತಮ್ಮದು ಕೊನೆಯ ದಿನ ಎಂದು ನಿನ್ನೆ ಏಪ್ರಿಲ್ 23ರಂದು ಹೇಳಿಕೆ ನೀಡಿದ್ದರು. ಎನ್ಬಿಸಿ ಯೂನಿವರ್ಸಲ್ನಲ್ಲಿ ಮಹಿಳೆಯೊಂದಿಗೆ ಜೆಫ್ ಶೆಲ್ ಅವರು ಅನೈತಿಕ ಸಂಬಂಧ ಹೊಂದಿರುವ ಸಂಗತಿ ಬಗ್ಗೆ ತನಿಖೆ ನಡೆದಿದೆ. ಈ ಹಿನ್ನೆಲೆಯಲ್ಲಿ ಶೆಲ್ ಅವರು ಎನ್ಬಿಸಿ ಯೂನಿವರ್ಸಲ್ನಿಂದ ಹೊರನಡೆಯಬೇಕಾಗಿದೆ ಎಂದು ವರದಿಗಳು ಹೇಳಿವೆ.
‘ಕಾಮ್ಕ್ಯಾಸ್ಟ್ ಮತ್ತು ಎನ್ಬಿಸಿ ಯೂನಿವರ್ಸಲ್ನಲ್ಲಿರುವ ನನ್ನ ಸಹೋದ್ಯೋಗಿಗಳ ವಿಶ್ವಾಸಕ್ಕೆ ಧಕ್ಕೆ ತಂದಿರುವುದಕ್ಕೆ ನಿಜಕ್ಕೂ ನನಗೆ ವಿಷಾದ ಇದೆ. ಈ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಬಹಳ ಪ್ರತಿಭಾನ್ವಿತರು. ಕಳೆದ 19 ವರ್ಷಗಳಿಂದ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದು ಜೆಫ್ ಸೆಲ್ ಭಾನುವಾರ ಭಾವನಾತ್ಮಕ ಸಂದೇಶ ನೀಡಿದ್ದಾರೆ.
ಜೆಫ್ ಶೆಲ್ ಅವರು ಎನ್ಬಿಸಿ ಯೂನಿವರ್ಸಲ್ನಲ್ಲಿ 2004ರಿಂದಲೂ ಇದ್ದರು. 2020ರಲ್ಲಿ ಈ ಕಂಪನಿಗೆ ಸಿಇಒ ಆಗಿದ್ದರು. ಎನ್ಬಿಸಿ ಯೂನಿವರ್ಸಲ್ನ ವೈವಿಧ್ಯಮಯ ವ್ಯವಹಾರಗಳನ್ನು ಅವರು ಸಿಇಒ ಆಗಿ ನಿಭಾಯಿಸಿದ್ದರು. ನ್ಯೂಸ್ ಮತ್ತು ಎಂಟರ್ಟೈನ್ಮೆಂಟ್ ಟಿವಿ ನೆಟ್ವರ್ಕ್, ಮೋಷನ್ ಪಿಕ್ಚರ್ ಕಂಪನಿ, ಸ್ಪೋರ್ಟ್ಸ್ ಪ್ರೊಡಕ್ಷನ್ ಆಪರೇಶನ್, ಟಿವಿ ಸ್ಟೇಷನ್ಸ್ ಗ್ರೂಪ್, ಥೀಮ್ ಪಾರ್ಕ್ಸ್, ಸ್ಟ್ರೀಮಿಂಗ್ ಸರ್ವಿಸ್, ಹೀಗೆ ಸಂಸ್ಥೆಯ ವಿವಿಧ ಉದ್ದಿಮೆಗಳನ್ನು ಅವರು ನಿಭಾಯಿಸಿದ್ದರು. ಎನ್ಬಿಸಿ ಯೂನಿವರ್ಸಲ್ಗೆ ಸಿಇಒ ಆಗುವ ಮುನ್ನ ಜೆಫ್ ಶೆಲ್ ಅವರು ಎನ್ಬಿಸಿ ಯೂನಿವರ್ಸಲ್ ಫಿಲಂ ಅಂಡ್ ಎಂಟರ್ಟೈನ್ಮೆಂಟ್ನ ಛೇರ್ಮನ್ ಆಗಿದ್ದರು.
ಜೆಫ್ ಶೆಲ್ ಹೊರಹೋಗುತ್ತಿರುವುದಕ್ಕೆ ಕಾಮ್ಕ್ಯಾಸ್ಟ್ ಪ್ರತಿಕ್ರಿಯೆ ಇದು:
ಎನ್ಬಿಸಿ ಯೂನಿವರ್ಸಲ್ನಿಂದ ಸಿಇಒ ಜೆಫ್ ಶೆಲ್ ನಿರ್ಗಮಿಸುತ್ತಿರುವ ವಿಷಯವನ್ನು ಕಾಮ್ಕ್ಯಾಸ್ಟ್ ನಿನ್ನೆ ಏಪ್ರಿಲ್ 23ರಂದು ಹೇಳಿಕೆ ನೀಡಿ ಖಚಿತಪಡಿಸಿತ್ತು. ಪರಸ್ಪರ ಸಮ್ಮತಿಯ ಮೇರೆಗೆ ಜೆಫ್ ಶೆಲ್ ಎನ್ಬಿಸಿ ತೊರೆಯುವ ನಿರ್ಧಾರ ಕೈಗೊಂಡಿದ್ದಾರೆ ಎಂದೂ ಕಾಮ್ಕ್ಯಾಸ್ಟ್ ಹೇಳಿದೆ. ಆದರೆ, ಎನ್ಬಿಸಿ ಯೂನಿವರ್ಸಲ್ ಸಂಸ್ಥೆಯಲ್ಲಿ ಸಿಇಒ ಆಗಿದ್ದ ಜೆಫ್ ಶೆಲ್ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದು ಗೊತ್ತಾಗಿಲ್ಲ. ಈ ಬಗ್ಗೆ ಕಾಮ್ಕ್ಯಾಸ್ಟ್ ಯಾವ ಸುಳಿವನ್ನೂ ನೀಡಿಲ್ಲ.
ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:06 pm, Mon, 24 April 23