ನವದೆಹಲಿ, ಜನವರಿ 6: ಭಾರತವು (India) ವಿಶ್ವದಲ್ಲೇ ಮೂರನೇ ಅತಿದೊಡ್ಡ ವಿಡಿಯೋ ಮಾರುಕಟ್ಟೆ ಹೊಂದಿರುವ ದೇಶ ಎಂಬುದು ಮೀಡಿಯಾ ಪಾರ್ಟನರ್ಸ್ ಏಷ್ಯಾ (MPA) ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ. ದೇಶದಲ್ಲಿ ವಿಡಿಯೋ ಮಾರುಕಟ್ಟೆಯಿಂದಲೇ ಬರೋಬ್ಬರಿ 13 ಶತಕೋಟಿ ಡಾಲರ್ ಆದಾಯ ಸಂಗ್ರಹವಾಗುತ್ತಿದೆ ಎಂದೂ ವರದಿ ತಿಳಿಸಿದೆ. ಏಷ್ಯಾ ಪೆಸಿಫಿಕ್ ವಿಡಿಯೋ ಆ್ಯಂಡ್ ಬ್ರಾಡ್ಬ್ಯಾಂಡ್ ರಿಪೋರ್ಟ್ 2024 ಪ್ರಕಾರ, ಜಗತ್ತಿನ ಎರಡು ಅತಿದೊಡ್ಡ ವಿಡಿಯೋ ಮಾರುಕಟ್ಟೆಗಳಿರುವ ದೇಶ ಚೀನಾ ಮತ್ತು ಜಪಾನ್ ಆಗಿವೆ. ಈ ಎರಡೂ ದೇಶಗಳಲ್ಲಿ ವಿಡಿಯೋಗಳಿಂದ ಸಂಗ್ರಹವಾಗುವ ಆದಾಯ ಕ್ರಮವಾಗಿ 64 ಶತಕೋಟಿ ಡಾಲರ್ ಮತ್ತು 32 ಶತಕೋಟಿ ಡಾಲರ್. ನಂತರದ ಸ್ಥಾನದಲ್ಲಿ ಭಾರತ ಇದೆ.
ಕೊರಿಯಾವು 12 ಶತಕೋಟಿ ಡಾಲರ್ ಆದಾಯದೊಂದಿಗೆ 4ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 9.5 ಶತಕೋಟಿ ಡಾಲರ್ ಆದಾಯದೊಂದಿಗೆ ಐದನೇ ಸ್ಥಾನದಲ್ಲಿದೆ. ತೈವಾನ್ ಮತ್ತು ಇಂಡೋನೇಷ್ಯಾ ತಲಾ 3 ಶತಕೋಟಿ ಡಾಲರ್ ಆದಾಯ ಹೊಂದಿವೆ.
ಏಷ್ಯಾ ಪೆಸಿಫಿಕ್ ವಿಡಿಯೋ ಉದ್ಯಮವು 2023ರಲ್ಲಿ ಶೇ 5.5ರಷ್ಟು ಬೆಳವಣಿಗೆ ಹೊಂದಿದ್ದು, ಒಟ್ಟು 145 ಶತಕೋಟಿ ಆದಾಯ ಗಳಿಸಿತ್ತು. ಆನ್ಲೈನ್ ವಿಡಿಯೋ ಮಾರಾಟವು ಶೇ 13ರ ಬೆಳವಣಿಗೆ ಕಂಡಿದ್ದು, ಟಿವಿ ವಿಡಿಯೋ ಆದಾಯದಲ್ಲಿ ಶೇ 1ರ ಬೆಳವಣಿಗೆ ದಾಖಲಾಗಿದೆ ಎಂದು ಎಂಪಿಎ ತಿಳಿಸಿದೆ.
14 ಮಾರುಕಟ್ಟೆಗಳ ಫ್ರೀ ಟಿವಿ, ಪೇ-ಟಿವಿ, ಎಸ್ವಿಒಡಿ, ಪ್ರೀಮಿಯಂ ಎವೊವಿಡಿ, ಯುಜಿಸಿ / ಸೋಷಿಯಲ್ ವಿಡಿಯೋ ಬಳಕೆದಾರರು, ಸಬ್ಸ್ಕ್ರೈಬ್ ಮಾಡಿರುವವರು, ಗ್ರಾಹಕರು ಮತ್ತು ಜಾಹೀರಾತು ವೆಚ್ಚವನ್ನು ಪರಿಗಣಿಸಿ ಲೆಕ್ಕಾಚಾರ ಹಾಕಲಾಗಿದೆ. ಇದರಲ್ಲಿ ಏಷ್ಯಾ ಪೆಸಿಫಿಕ್ ವಿಡಿಯೋ ಉದ್ಯಮವು 2023 ರಿಂದ 2028ರ ಅವಧಿಯಲ್ಲಿ ಶೇ 2.6ರ ಒಟ್ಟಾರೆ ಬೆಳವಣಿಗೆ ಕಾಣಲಿದ್ದು, 2028ರ ವೇಳೆಗೆ 165 ಶತಕೋಟಿ ಡಾಲರ್ ತಲುಪಲಿದೆ ಎಂದು ವರದಿ ತಿಳಿಸಿದೆ.
ಏಷ್ಯಾ ಪೆಸಿಫಿಕ್ ಆನ್ಲೈನ್ ವಿಡಿಯೋ ಉದ್ಯಮವು ಶೇ 6.7ರ ಬೆಳವಣಿಗೆ ದಾಖಲಿಸಿ 78.5 ಶತಕೋಟಿ ಡಾಲರ್ ತಲುಪುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ.
2028ರ ವೇಳೆಗೆ ವಿಡಿಯೋ ಉದ್ಯಮಕ್ಕೆ ಅತಿ ಹೆಚ್ಚಿನ ಕೊಡುಗೆ ನೀಡಬಲ್ಲ ದೇಶಗಳಾಗಿ ಚೀನಾ, ಜಪಾನ್, ಭಾರತ, ಕೊರಿಯಾ, ಆಸ್ಟ್ರೇಲಿಯಾ ಹಾಗೂ ಇಂಡೋನೇಷ್ಯಾ ಹೊರಹೊಮ್ಮಲಿವೆ. ಈ ದೇಶಗಳು ಏಷ್ಯಾ ಪೆಸಿಫಿಕ್ನ ಒಟ್ಟಾರೆ ವಿಡಿಯೋ ಉದ್ಯಮಕ್ಕೆ ಶೇ 90ರಷ್ಟು ಕೊಡುಗೆ ನೀಡಲಿವೆ ಎಂದು ಎಂಪಿಎ ವರದಿ ಉಲ್ಲೇಖಿಸಿದೆ.
ವರದಿಯ ಪ್ರಕಾರ ಅಮೆಜಾನ್ ಪ್ರೈಮ್ ವಿಡಿಯೋ, ಬೈಟ್ಡ್ಯಾನ್ಸ್ (ಟಿಕ್ಟಾಕ್ ಸೇರಿದಂತೆ), ಡಿಸ್ನಿ, ಗೂಗಲ್ ಒಡೆತನದ ಯೂಟ್ಯೂಬ್, ಐಕ್ಯುಐವೈಐ, ಮೆಟಾ (ವಿಡಿಯೋ), ನೆಟ್ಫ್ಲಿಕ್ಸ್ ಹಾಗೂ ಟೆನ್ಸೆಂಟ್ ಕಂಪನಿಗಳು ವಿಡಿಯೋ ಆದಾಯದಲ್ಲಿ ಶೇ 65ರ ಪಾಲು ಹೊಂದಿವೆ. ಜಿಯೋ ಸಿನಿಮಾ, ಝೀ-ಸೋನಿ ಕೂಡ ವಿಡಿಯೋ ಉದ್ಯಮಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ