ಸೆ. 22ರಿಂದ ಜಿಎಸ್​ಟಿ ಕಡಿತ; ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯೂ ಕಡಿಮೆ ಆಗುತ್ತಾ?

GST rate cup effect: 56ನೇ ಜಿಎಸ್​ಟಿ ಕೌನ್ಸಿಲ್ ಬಹುತೇಕ ಎಲ್ಲಾ ವಸ್ತುಗಳ ಮೇಲಿನ ಜಿಎಸ್​ಟಿಯನ್ನು ಕಡಿಮೆ ಮಾಡಿದೆ. ಔಷಧಗಳು ಹಾಗೂ ವೈದ್ಯಕೀಯ ಸಾಧನಗಳ ಮೇಲೆ ಶೇ. 18ರಷ್ಟಿದ್ದ ಜಿಎಸ್​ಟಿಯನ್ನು ಶೇ 5ಕ್ಕೆ ಇಳಿಸಲಾಗಿದೆ. ಸೆ. 22ರಿಂದ ಹೊಸ ಜಿಎಸ್​ಟಿ ಜಾರಿಗೆ ಬರುತ್ತದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯೂ ಇಳಿಯುತ್ತಾ?

ಸೆ. 22ರಿಂದ ಜಿಎಸ್​ಟಿ ಕಡಿತ; ಈಗಾಗಲೇ ಮಾರುಕಟ್ಟೆಯಲ್ಲಿರುವ ಔಷಧಗಳ ಬೆಲೆಯೂ ಕಡಿಮೆ ಆಗುತ್ತಾ?
ಔಷಧ

Updated on: Sep 16, 2025 | 7:03 PM

ನವದೆಹಲಿ, ಸೆಪ್ಟೆಂಬರ್ 16: ಸೆಪ್ಟೆಂಬರ್ 22ರಿಂದ ಹೊಸ ಜಿಎಸ್​ಟಿ ದರಗಳು (GST) ಚಾಲನೆಗೆ ಬರಲಿವೆ. ಹೆಚ್ಚಿನ ವಸ್ತುಗಳ ಮೇಲೆ ಜಿಎಸ್​ಟಿ ಕಡಿಮೆಗೊಳ್ಳಲಿದ್ದು, ಅದರ ಪರಿಣಾಮವಾಗಿ ಬೆಲೆಗಳೂ ತಗ್ಗಲಿವೆ. ಜಿಎಸ್​ಟಿ ದರ ಕಡಿತದ ಪರಿಣಾಮ ಜನಸಾಮಾನ್ಯರಿಗೂ ತಲುಪಬೇಕು ಎಂಬುದು ಸರ್ಕಾರದ ಆಶಯ. ಈಗಾಗಲೇ ಮಾರಾಟವಾಗದೇ ಇರುವ ಸರಕುಗಳಿಗೆ ಎಂಆರ್​ಪಿ ದರವನ್ನು ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿದೆ. ಈ ರೀತಿ ದರ ಪರಿಷ್ಕರಣೆಗೆ ಡಿಸೆಂಬರ್ 31ರವರೆಗೂ ಅವಕಾಶ ನೀಡಲಾಗಿದೆ.

ಇದೇ ವೇಳೆ, ಮಾರುಕಟ್ಟೆಯಲ್ಲಿ ಈಗಾಗಲೇ ಇರುವ ಔಷಧಗಳು ಹಾಗೂ ವೈದ್ಯಕೀಯ ಸಲಕರಣೆಗಳ ಬೆಲೆಗಳನ್ನು ಕಡಿಮೆ ಮಾಡಲು ಕ್ರಮ ತೆಗೆದುಕೊರ್ಳಳಲಾಗಿದೆ. ಈ ಔಷಧಗಳನ್ನು ಹಿಂಪಡೆದು ಹೊಸ ಲೇಬಲ್​ನೊಂದಿಗೆ ಮತ್ತೆ ಬಿಡುಗಡೆ ಮಾಡುವ ಅವಶ್ಯಕತೆ ಇಲ್ಲ ಎಂದೂ ಔಷಧ ಬೆಲೆ ಪ್ರಾಧಿಕಾರವು (ಎನ್​ಪಿಪಿಎ- ನ್ಯಾಷನಲ್ ಫಾರ್ಮಾಸ್ಯೂಟಿಕಲ್ ಪ್ರೈಸಿಂಗ್ ಅಥಾರಿಟಿ) ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಸೃಜನಶೀಲ ಮನಸ್ಸಿದ್ದರೆ ಸಾಕು..! ಕೇರಳದ ರಾಮಚಂದ್ರನ್ 17,000 ಕೋಟಿ ರೂ ಬ್ಯುಸಿನೆಸ್ ಸಾಮ್ರಾಜ್ಯ ಕಟ್ಟಿದ ಕಥೆ

ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಆಗಿರುವ ಉತ್ಪನ್ನಗಳನ್ನು ಹಿಂಪಡೆಯುವುದು, ಲೇಬಲ್ ಬದಲಿಸುವುದು ಇತ್ಯಾದಿ ಕೆಲಸ ಕಡ್ಡಾಯವೇನಿಲ್ಲ. ಆದರೆ, ಈ ಉತ್ಪನ್ನಗಳ ತಯಾರಕರು ಮತ್ತು ಮಾರ್ಕೆಟಿಂಗ್ ಕಂಪನಿಗಳು ರೀಟೇಲ್ ಮಟ್ಟದಲ್ಲಿ ಪರಿಷ್ಕೃತ ದರದಲ್ಲಿ ಮಾರಾಟ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಎನ್​ಪಿಪಿಎ ಹೇಳಿದೆ.

ಜಿಎಸ್​ಟಿ ಕೌನ್ಸಿಲ್ ಎಲ್ಲಾ ಔಷಧ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್​ಟಿಯನ್ನು ಶೇ. 18ರಿಂದ ಶೇ. 5ಕ್ಕೆ ಇಳಿಸಿದೆ. ಇದರಿಂದ ಔಷಧಗಳ ಬೆಲೆ ಕನಿಷ್ಠವೆಂದರೂ ಶೇ. 10ರಷ್ಟು ಇಳಿಯಬೇಕು. ಜಿಎಸ್​ಟಿ ದರ ಕಡಿತವು ಸೆಪ್ಟೆಂಬರ್ 22ರಿಂದಲೇ ಜಾರಿಯಾಗಬೇಕು. ಅದಕ್ಕೆ ಮುಂಚೆ ಮಾರುಕಟ್ಟೆ ಬಂದಿರುವ ವಸ್ತುಗಳಿಗೂ ಜಿಎಸ್​ಟಿ ಕಡಿತ ಅನ್ವಯ ಆಗುವುದರಿಂದ, ಅವುಗಳ ಬೆಲೆಯೂ ಕಡಿಮೆಗೊಳ್ಳಬೇಕು ಎನ್ನುವುದು ಸರ್ಕಾರದ ಇರಾದೆ.

ಇದನ್ನೂ ಓದಿ: ಜಿಎಸ್​ಟಿ ಕಡಿತದ ಎಫೆಕ್ಟ್; ಮದರ್ ಡೈರಿ ಹಾಲು ಬೆಲೆ 2 ರೂ, ತುಪ್ಪದ ಬೆಲೆ 30 ರೂ ಇಳಿಕೆ

ಎಲ್ಲಾ ಔಷಧ ತಯಾರಕರು ಮತ್ತು ಮಾರ್ಕೆಟಿಂಗ್ ಕಂಪನಿಗಳು ಹೊಸ ಜಿಎಸ್​ಟಿ ದರಕ್ಕೆ ಅನುಗುಣವಾಗಿ ಔಷಧಗಳ ಮೇಲಿನ ಗರಿಷ್ಠ ರೀಟೇಲ್ ದರ ಅಥವಾ ಎಂಆರ್​ಪಿಯನ್ನು ಪರಿಷ್ಕರಿಸಬೇಕು. ಡೀಲರ್ಸ್ ಮತ್ತು ರೀಟೇಲರ್ಸ್​ಗೆ ನೀಡುವ ಫಾರ್ಮ್ 5 ಮತ್ತು 6 ಮೂಲಕ ಪರಿಷ್ಕೃತ ದರಪಟ್ಟಿಯನ್ನು ಕಂಪನಿಗಳು ಒದಗಿಸಬೇಕು ಎಂದು ಎನ್​ಪಿಪಿಎ ಹೇಳಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ