ಬ್ಯುಸಿನೆಸ್ ಎಂದರೆ ಲಾಭದ ಮಾರ್ಜಿನ್ ಭರ್ಜರಿಯಾಗಿರಬೇಕು ಎಂಬ ಅಭಿಪ್ರಾಯ ಇದೆ. ಇದನ್ನು ಸುಳ್ಳಾಗಿಸಿದವರು 21 ವರ್ಷದ ಅರ್ಜುನ್ ದೇಶಪಾಂಡೆ. ಈ ಯುವಕ ಸ್ಥಾಪಿಸಿದ ಜೆನೆರಿಕ್ ಆಧಾರ್ (Generic Aadhaar) ಎಂಬ ಕಂಪನಿಯ ಮಳಿಗೆಗಳಲ್ಲಿ ನೀವು ಶೇ. 90ರವರೆಗೂ ಡಿಸ್ಕೌಂಟ್ಗಳಲ್ಲಿ ಔಷಧಿ ಖರೀದಿಸಬಹುದು. ನೂರು ರೂ ಬೆಲೆಯ ಔಷಧಿ ನಿಮಗೆ ಕೇವಲ 10 ರೂ ಒಳಗೆ ಸಿಕ್ಕಿಬಿಡುತ್ತದೆ. ಕೇವಲ 16 ರ ವಯಸ್ಸಿನಲ್ಲಿ ಸ್ವಂತ ಕಂಪನಿಯ ಒಡೆಯನಾಗಿದ್ದ ಈತ ಈಗ 500 ಕೋಟಿ ರೂ ಮೌಲ್ಯದ ಜೆನರಿಕ್ ಆಧಾರ್ ಕಂಪನಿಯ ಸಿಇಒ ಆಗಿದ್ದಾರೆ. ದೇಶಾದ್ಯಂತ 2,000 ಫ್ರಾಂಚೈಸಿ ಸ್ಟೋರ್ಗಳ ಮೂಲಕ ಇವರು ಔಷಧ ಮಾರುತ್ತಾರೆ. ಈಗ ರತನ್ ಟಾಟಾ ಅವರ ಬೆಂಬಲವನ್ನೂ ಪಡೆದಿರುವ ಅರ್ಜುನ್ ದೇಶಪಾಂಡೆ ಉತ್ಸಾಹ ಇಮ್ಮಡಿಗೊಂಡಿದೆ.
ಭಾರತ ವಿವಿಧೆಡೆ 2,000 ರೂ ಜೆನೆರಿಕ್ ಆಧಾರ್ ಸ್ಟೋರ್ಗಳು ಸ್ಥಾಪನೆಯಾಗಿವೆ. ಬಾಂಗ್ಲಾದೇಶ, ಭೂತಾನ್, ಶ್ರೀಲಂಕಾ, ನೇಪಾಳ, ಯುಎಇ, ಮಯನ್ಮಾರ್, ಓಮನ್, ಕಾಂಬೋಡಿಯಾ, ವಿಯೆಟ್ನಾಂ ಮೊದಲಾದೆಡೆಯೂ ಜೆನರಿಕ್ ಆಧಾರ್ ಕಂಪನಿಯ ವ್ಯವಹಾರ ವಿಸ್ತರಿಸುವ ನಿಟ್ಟಿನಲ್ಲಿ ಅರ್ಜುನ್ ದೇಶಪಾಂಡೆ ಗಮನ ಹರಿಸುತ್ತಿದ್ದಾರೆ.
ಅರ್ಜುನ್ ದೇಶಪಾಂಡೆ ಅವರ ಜೆನೆರಿಕ್ ಆಧಾರ್ ಮಳಿಗೆಗಳಲ್ಲಿ ಔಷಧಗಳು ಬಹಳ ಕಡಿಮೆ ಬೆಲೆಗೆ ಸಿಗುತ್ತವೆ. ಶೇ. 80-90ರಷ್ಟು ರಿಯಾಯಿತಿ ದರದಲ್ಲಿ ಮಾರಲಾಗುತ್ತದೆ. ಕೆಲ ಔಷಧಗಳು ಇನ್ನೂ ಕಡಿಮೆ ಬೆಲೆಗೆ ಸಿಗುತ್ತವೆ. ಉದಾಹರಣೆಗೆ, ಡಯಾಬಿಟಿಸ್ಗೆ ನೀಡಲಾಗುವ ಗ್ಲಿಮಿಪಿರೈಡ್ ಎಂಬ ಔಷಧ ಮಾಮೂಲಿಯ ಬ್ರ್ಯಾಂಡ್ಗಳಲ್ಲಿ ಒಂದು ಸ್ಟ್ರಿಪ್ಗೆ 110 ರೂ ದರ ಇದೆ. ಇದನ್ನು ಜೆನರಿಕ್ ಆಧಾರ್ ಮಳಿಗೆಯಲ್ಲಿ ಕೇವಲ 5 ರೂಗೆ ಪಡೆಯಬಹುದು. ಇಷ್ಟು ಕಡಿಮೆ ಬೆಲೆಗೆ ಒಂದು ಔಷಧವನ್ನು ಮಾರಲು ಸಾಧ್ಯವಾ? ಕಳಪೆ ಗುಣಮಟ್ಟದ ಔಷಧವನ್ನು ಮಾರಲಾಗುತ್ತದಾ ಎಂಬ ಅನುಮಾನ ಬರಬಹುದು. ಆದರೆ, ಅರ್ಜುನ್ ದೇಶಪಾಂಡೆ ನೀಡುವ ಸಮಜಾಯಿಷಿ ಈ ಪ್ರಶ್ನೆಗಳಿಗೆ ಸಮಾಧಾನ ತರುತ್ತದೆ.
ಇದನ್ನೂ ಓದಿ: Byju’s: ಬೈಜೂಸ್ಗೆ ನಿಲ್ಲದ ಸಂಕಷ್ಟ, ಸಾಲಗಾರರ ಕಾಟ; ಬಡ್ಡಿಕಟ್ಟಲೂ ಕಷ್ಟ; ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಪರದಾಟ
ಮಾರುಕಟ್ಟೆಯಲ್ಲಿರುವ ಒಂದು ಬ್ರ್ಯಾಂಡೆಡ್ ಉತ್ಪನ್ನಕ್ಕೆ ನಿಗದಿ ಮಾಡಲಾಗಿರುವ ಎಂಆರ್ಪಿ ದರವು ಆ ಉತ್ಪನ್ನದ ನೈಜ ಮೌಲ್ಯ ಆಗಿರುವುದಿಲ್ಲ. ಆ ಉತ್ಪನ್ನದ ಮಾರ್ಕೆಟಿಂಗ್ ಮತ್ತು ಪ್ರಚಾರಕ್ಕೆ ಮಾಡಲಾಗುವ ವೆಚ್ಚವೇ ಬಹಳ ಹೆಚ್ಚಿರುತ್ತದೆ. ಇದೆಲ್ಲವನ್ನೂ ಸೇರಿ ಉತ್ಪನ್ನಕ್ಕೆ ಬೆಲೆ ನಿಗದಿ ಮಾಡಲಾಗುತ್ತದೆ. ಔಷಧ ತಯಾರಿಕೆಯ ಬಳಿಕ ಗ್ರಾಹಕರನ್ನು ತಲುಪುವುದರೊಳಗೆ ವಿವಿಧ ವೆಚ್ಚಗಳು ಒಂದು ಉತ್ಪನ್ನದ ಮೇಲೆ ಆಗುತ್ತದೆ. ಈ ಸರಣಿಯನ್ನು ಕತ್ತರಿಸಿ, ಉತ್ಪಾದಕರಿಂದ ಔಷಧ ನೇರವಾಗಿ ಗ್ರಾಹಕರನ್ನು ತಲುಪುವಂತಹ ಮಾಡೆಲ್ ಅನ್ನು ಅರ್ಜುನ್ ದೇಶಪಾಂಡೆ ಅನುಸರಿಸುತ್ತಿದ್ದಾರೆ. ಹೀಗಾಗಿ, ಅವರ ಜೆನರಿಕ್ ಆಧಾರ್ ಮಳಿಗೆಗಳಲ್ಲಿ ಬಹಳ ಕಡಿಮೆ ಬೆಲೆಗೆ ಜೆನೆರಿಕ್ ಔಷಧಗಳು ಸಿಗುತ್ತವೆ.
ಮಹಾರಾಷ್ಟ್ರ ರಾಜ್ಯದವರಾದ ಅರ್ಜುನ್ ದೇಶಪಾಂಡೆ 2002ರಲ್ಲಿ ಥಾಣೆ ನಗರದಲ್ಲಿ ಜನಿಸಿದವರು. ಇವರ ತಾಯಿ ಫಾರ್ಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಇವರ ತಂದೆ ಒಬ್ಬ ಬ್ಯುಸಿನೆಸ್ಮ್ಯಾನ್. ಇಬ್ಬರ ಜಾಣ್ಮೆ ಅರ್ಜುನ್ಗೆ ಸಿಕ್ಕಿದೆ. ಇದರ ಜೊತೆಗೆ ಸಾಮಾಜಿಕ ಕಾಳಜಿಯು ಅರ್ಜುನ್ ಅವರನ್ನು ಜೆನೆರಿಕ್ ಆಧಾರ್ ಕಂಪನಿ ಸ್ಥಾಪಿಸುವಂತೆ ಪ್ರೇರೇಪಿಸಿದೆ.
ಇದನ್ನೂ ಓದಿ: Pakistan: ಏಷ್ಯಾದಲ್ಲೇ ಅತಿಹೀನ ಹಣದುಬ್ಬರ; ಐಎಂಎಫ್ನಿಂದ ಸಾಲ ಮನವಿ ತಿರಸ್ಕಾರ; ಪಾಕಿಸ್ತಾನಕ್ಕೆ ಬಿಡದ ಗ್ರಹಚಾರ
ನಮ್ಮ ದೇಶವು ಔಷಧಗಳ ತಯಾರಿಕೆಯ ಅಡ್ಡೆಯಾಗಿದ್ದರೂ ಜನರು ಅಗತ್ಯ ಔಷಧಗಳಿಗೆ ಬಹಳ ಹಣ ವ್ಯಯಿಸುತ್ತಿದ್ದಾರಲ್ಲ ಎಂಬುದು ನಾನು 16ನೇ ವಯಸ್ಸಿನಲ್ಲಿದ್ದಾಗ ಮನಸಿಗೆ ನಾಟಿತು. ಔಷಧವು ಐಷಾರಾಮಿ ಅಲ್ಲ, ಅದೊಂದು ಮೂಲಭೂತ ಅವಶ್ಯಕತೆ ಇರುವ ವಸ್ತು ಎಂಬುದು ನನ್ನ ಭಾವನೆ. ಹೀಗಾಗಿ, ಆ ವಯಸ್ಸಿನಲ್ಲೇ ನಾನು ಕಡಿಮೆ ಬೆಲೆಗೆ ಔಷಧ ಮಾರುವ ಐಡಿಯಾ ಜಾರಿಗೆ ತಂದೆ ಎಂದು ಅರ್ಜುನ್ ದೇಶಪಾಂಡೆ ಹೇಳುತ್ತಾರೆ.
ಅರ್ಜುನ್ ದೇಶಪಾಂಡೆ ಅವರ ಸೇವೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೇ ಖುದ್ದಾಗಿ ಶ್ಲಾಘಿಸಿದ್ದಾರೆ. ಇವರ ಬ್ಯುಸಿನೆಸ್ ಮಾಡೆಲ್ ಕಂಡು ಸ್ವತಃ ರತನ್ ಟಾಟಾ ಅವರೇ ಸಂತುಷ್ಟರಾಗಿದ್ದಾರೆ. ಇವರ ವ್ಯವಹಾರ ವಿಸ್ತರಣೆಗೆ ಟಾಟಾ ಗ್ರೂಪ್ನಿಂದ ಹಣಕಾಸು ನೆರವು ಸಿಕ್ಕಿದೆ. ಸದ್ಯ ದೇಶಾದ್ಯಂತ 2,000 ಇರುವ ಔಷಧ ಮಳಿಗೆಗಳ ಸಂಖ್ಯೆಯನ್ನು ಶೇ. 50ರಷ್ಟು ಏರಿಸಲು ಗುರಿ ಇಟ್ಟಿದ್ದಾರೆ. ಇದೇ ಬ್ಯುಸಿನೆಸ್ ಮಾಡೆಲ್ನಲ್ಲಿ ಪಶುಗಳಿಗೆ ಕಡಿಮೆ ಬೆಲೆಗೆ ಔಷಧ ಒದಗಿಸುವ ಯೋಜನೆಯನ್ನೂ ಈ ಯುವಕ ಹಮ್ಮಿಕೊಂಡಿದ್ದಾರೆ. ಇತ್ತೀಚೆಗೆ ಆಂಧ್ರದಲ್ಲಿ ಒಂದು ಪಶುವೈದ್ಯಕೀಯ ಮಳಿಗೆಯನ್ನೂ ತೆರೆದು ಅಡಿ ಇಟ್ಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ